Shubha Giranimane

ಒಂದನೇ ಮಹಾಯುದ್ಧ ಎರಡನೇ ಮಹಾಯುದ್ಧಗಳ ಆ ಭೀಕರೆತೆಯ ನೆರಳಿನ ಲವಲೇಶವೂ ನಮ್ಮಿಂದ ಅಳಿದು ಹೋಗಿಲ್ಲ. ಆಗಲೇ ಮತ್ತೊಮ್ಮೆ ಮೂರನೇ ಮಹಾಯುದ್ಧ ನಡೆಯಬಹುದೇ? ಎನ್ನುವ ಪ್ರಶ್ನೆ ಟಿವಿ ಮಾಧ್ಯಮಗಳಲ್ಲಿ ಹೇಳುತ್ತಿದ್ದಂತೆ ಕಿವಿಯಲ್ಲಿ ಕಾದ ಸೀಸ ಹೊಯ್ದ ಅನುಭವ ಆಗುವುದು. ಮೊದಲಿನಂತೆ ಕತ್ತಿ, ಬಂದೂಕಿನ ಯುದ್ಧ ಇದಲ್ಲ. ಈಗೇನಿದ್ದರೂ ಪರಮಾಣುವಿನ ಯುದ್ಧ. ಆ ಒಂದು ಬಿಂದು ಪರಮಾಣು ಈ ಭೂಮಿಯಲ್ಲಿ ಸ್ಪೋಟಗೊಂಡರೆ ಯಾವುದೋ ಒಂದು ಊರು, ಹಳ್ಳಿ, ದೇಶ ನಾಶವಾಗುವುದಿಲ್ಲ. ಇಡೀ ಭೂ ಮಂಡಲದ ನಾಶಕ್ಕೆ ನಾಂದಿ ಹಾಡಿಬಿಡುತ್ತದೆ.

ಪರಮಾಣು ಎಂದರೆ ಸೂಕ್ಷ್ಮದಲ್ಲಿ ಅತೀ ಸೂಕ್ಷ್ಮವಾದ ವಸ್ತು ಎಂದು ಪ್ರಾರ್ಥಮಿಕ ಶಾಲೆಯಲ್ಲಿಯೇ ಕಲಿತು ಅದರ ಪರಿಣಾಮಗಳನ್ನು ತಿಳಿದುಕೊಂಡಿದ್ದೇವೆ. ಅಂದಾಗ ಪರಮಾಣುವಿನ ಮಟ್ಟಕ್ಕೆ ನಾವು ಇಳಿದಾಗ ಅಲ್ಲಿಯ ಭಯಂಕರವಾದ ಗಾತ್ರ ರೂಪಗಳು ಕಣ್ಣೆದುರು ಬೆತ್ತಲಾಗಿ ಸ್ಪೋಟಿಸುತ್ತದೆ.

ಮಕ್ಕಳು ಗೀಚುವ ಸಾಮಾನ್ಯ ಪೆನ್ಸಿಲ್ ಮೊನೆಯಿಂದ ಒಂದು ಬಿಳಿ ಹಾಳೆಯ ಮೇಲೆ ಗುರುತಿಸಿದ ಪುಟ್ಟ ಬಿಂದುವು ಒಂದು ಮಿಲಿಯ ಪರಮಾಣುಗಳನ್ನು ತುಂಬಿಸಿದ ಮೇಲೂ ಜಾಗ ಮಿಗುತ್ತದೆ ಎಂದಾಗ ಆ ಪರಮಾಣುವಿನ ತಾಕತ್ತು ಅರಿಯಲು ಒಂದು ಕ್ಷಣ ನಮ್ಮ ಕಲ್ಪನೆಗೂ ನಿಲುಕದ್ದು ಅನ್ನಿಸುತ್ತದೆ ಅಲ್ಲವೆ. ಅಂಥಹ ಪರಮಾಣುವಿನ ಮಧ್ಯ ಒಂದು ಬೀಜ ಕೇಂದ್ರವಿದೆ. ಅದರಲ್ಲೂ ನ್ಯೂಟ್ರಾನು, ಪ್ರೋಟಾನು ಎನ್ನುವಂತ ಮತ್ತೂ ಸೂಕ್ಷ್ಮವಾದ ಕಣಗಳನ್ನು ಹೊಂದಿದೆ. ಈ ನ್ಯೂಟ್ರಾನು ಮತ್ತು ಪ್ರೋಟಾನುಗಳು ಪ್ರತೀ ಸೆಕೆಂಡಿಗೆ ನಲವತ್ತು ಸಾವಿರ ಮೈಲು ವೇಗದಲ್ಲಿ ಅಲ್ಲಿ ತಿರುಗುತ್ತವೆಯಂತೆ. ಹಾಗಾದರೆ ನಮ್ಮಂಥಹವರ ಊಹೆಗೆ ಅದರ ಗಾತ್ರ ಶಕ್ತಿ ಸಿಕ್ಕಬಹುದೆ.

RELATED ARTICLES  ವಿದ್ಯೆಇದ್ದು ಗರ್ವವಿಲ್ಲದಿದ್ದರೆ ಅದು ಶ್ರೇಷ್ಠ..

ನಮ್ಮ ಕಣ್ಣೆದುರು ತಿರುಗುವ ಪ್ಯಾನ್ ಕೂಡ ಸೆಕೆಂಡಿಗೆ ಆರುನೂರು ಮೈಲು ತಿರುಗುತ್ತದೆ ಅಂದಾಗ ಪರಮಾಣು ಒಳಗಿನ ನ್ಯೂಟ್ರಾನ್ ಮತ್ತು ಪ್ರೋಟಾನ್‍ಗಳ ವೇಗ ಮತ್ತೆಲ್ಲೂ ಸಿಗಲಿಕ್ಕಿಲ್ಲ. ಪ್ಯಾನು ತಿರುಗಿದಾಗ ಅದರ ರೆಕ್ಕೆಗಳು ಬಿಡಿಬಿಡಿಯಾಗಿ ಕಾಣಿಸುವುದಿಲ್ಲ. ಅವೆಲ್ಲವೂ ಜೋಡಿಸಿ ಅಖಂಡವಾಗಿರುವಂತೆ ಭಾಸವಾಗಿರುತ್ತದೆ. ತಿರುಗುವ ಪ್ಯಾನ್ ಕಳಚಿ ಬಿದ್ದರೆ ಅದರ ಪರಿಣಾಮ ಲೆಕ್ಕಕ್ಕೆ ಸಿಗುವುದು ಕಷ್ಟ. ಅಂದಾಗ ಈ ಪರಮಾಣುವಿನ ಬಿಂದುವಿನಲ್ಲೂ ಎಲ್ಲವೂ ಅಖಂಡವಾಗಿಯೇ ಭಾಸವಾಗುತ್ತದೆ. ಅದು ಸ್ಪೋಟಿಸಿದಾಗ ಅಲ್ಲಿ ಉಗುಳುವ ವಿಷದ ಜ್ವಾಲೆಯು ತನ್ನ ಅಸ್ತಿತ್ವದಲ್ಲಿ ಸಿಗುವ ಎಲ್ಲವನ್ನು ಸರ್ವನಾಶ ಮಾಡಿ ಬಿಡುತ್ತದೆ.

ಒಂದು ಜೀವಿಯ ಹುಟ್ಟು ಸಣ್ಣ ಕೆಲಸವೆನಲ್ಲ. ಹೆರುವ ಹೆಣ್ಣು ಪ್ರಸವದ ಸಮಯದ ನೋವು ಎಲ್ಲಿಯೂ ಬಿಚ್ಚಿಟ್ಟಿಲ್ಲ. ಕೋಟಿ ಕೋಟಿ ಜೀವ ರಾಶಿಗಳು ತನ್ನ ಸಂಕುಲವನ್ನು ಧರೆಗೆ ತಂದು, ಅದನ್ನು ಲಾಲಿಸಿ ಪೋಶಿಸಿ ತನ್ನ ಕೊಡುಗೆಯಾಗಿ ನೀಡುತ್ತದೆ. ಪುಟ್ಟ ಸೊಳ್ಳೆ ಇರಬಹುದು, ದೊಡ್ಡ ತಿಮಿಂಗಿಲ ಇರಬಹುದು, ಕ್ರೂರ ಮೃಗ ಇರಬಹುದು, ಬುದ್ಧಿವಂತ ಮನುಷ್ಯ ಇರಬಹುದು, ಹಾರುವ ಪಕ್ಷಿಯಿರಬಹುದು ಎಲ್ಲರಿಗೂ ಅವರವರ ಕುಲಗಳು ಅವಕ್ಕೆ ಹೆಚ್ಚು. ಆದರೆ ಈ ಕೋಟಿ ಜೀವಗಳನ್ನು ಒಂದೆ ಸಲಕ್ಕೆ ತನ್ನ ನಾಲಿಗೆ ಚಾಚಿ ತಿಂದು ಹಾಕುವ ಪರಮಾಣು ಎನ್ನುವ ಅಸ್ತ್ರದ ಯುದ್ಧವನ್ನು ನಡೆಸುವ ಅಧಿಕಾರ ಮನುಷ್ಯ ಎನ್ನುವ ಪ್ರಾಣಿಗೆ ಯಾರು ಕೊಟ್ಟರು?

RELATED ARTICLES  ಬದುಕಿಗೆ ಬಣ್ಣ ತುಂಬಿದವರು

ಹುಟ್ಟಿಸಲು ಬಾರದವನಿಗೆ ಕೊಲ್ಲಲು ಹಕ್ಕಿಲ್ಲ ಎನ್ನುವ ಮಾತಿದೆ. ಅಂದಾಗ ಪ್ರಪಂಚವನ್ನೇ ನಾಶ ಮಾಡುವ ಆ ಸೂಕ್ಷ್ಮವಾದ ಗಾತ್ರದಲ್ಲಿ ದೊಡ್ಡದಾದ ಪರಮಾಣು ಬಾಂಬ್ ಎನ್ನುವದನ್ನು ಸ್ಪೋಟಿಸಿ ಅದರ ಲೀಲಾವಿನೋದ ನೋಡುವ ಆಟ ಮಾನವ ಕುಲಕ್ಕೆ ಯಾಕೆ ಬೇಕು? ಭೂಮಿಯನ್ನೆ ನಾಶ ಮಾಡುವ ಅಂತಹ ಪರಮಾಣುವು ಒಂದಿಂಚೂ ಭೂಮಿಗಾಗಿ, ತನ್ನ ದೇಶ ಎನ್ನುವ ಅಹಂಗಾಗಿ, ತಾನೇ ಸರ್ವಾಧಿಕಾರಿಯಾಗುವುದಕ್ಕಾಗಿ, ಇನ್ಯಾರಿಗೋ ಬುದ್ಧಿ ಕಲಿಸುತ್ತೇನೆ ಎಂದು ಹೇಳುವವ ತಾನೇ ನಾಳೆ ಬದುಕುತ್ತೇನೆ ಎನ್ನುವ ನಂಬಿಕೆ ಇಲ್ಲದವನು ಸರ್ವನಾಶ ಮಾಡುತ್ತೇನೆ ಎನ್ನುತ್ತೇನೆ ಎನ್ನುವುದು ಹುಂಬತನವಲ್ಲವೇ!

ಯುದ್ಧ ಎನ್ನುವುದೇ ಸುಖವಲ್ಲ. ಅಂದಾಗ ಭೂಮಂಡಲ ನಾಶ ಮಾಡುವ ಈ ಮೂರನೇ ಮಹಾಯುದ್ಧ ಜನಸಾಮಾನ್ಯವಾಗಿ ಬದುಕುವ ಯಾವ ದೇಶದ ಮನುಷ್ಯನಿಗೂ ಬೇಕಾಗಿಲ್ಲ. ಇದ್ದು ಹೋಗುವ ಮೂರು ದಿನದಲ್ಲಿ ಅಧಿಕಾರ ಇದೆ ಎಂದು ತಪ್ಪು ನಿರ್ಧಾರ ತೆಗೆದುಕೊಂಡರೆ ಭವಿಷ್ಯದ ಹೊಣೆಯನ್ನು ಯಾರು ಹೊರುತ್ತಾರೆ? ಸರ್ವಾಧಿಕಾರಿ ಎಂದುಕೊಳ್ಳುವವನು ತಾನೊಬ್ಬನಿದ್ದು ಅದೇನನ್ನು ಸಾಧಿಸುತ್ತಾನೆ. ಯಾಕೋ ನಾಗಾಸಾಕಿ ಹಾಗು ಹಿರೋಶಿಮಾ ನೆನೆದಾಗ ಕರುಳು ಚುರುಕ್ ಎನ್ನುತ್ತದೆ. ಪರಮಾಣುವಿನ ಆಟದ ಮೂರನೇ ಮಹಾಯುದ್ಧವು ಜಗತ್ತಿನಲ್ಲಿ ಎಂದಿಗೂ ಸಂಭವಿಸದಿರಲಿ ಎನ್ನುವುದು ಪ್ರಾರ್ಥನೆ.