ಶುಭಾ ಗಿರಣಿಮನೆ
ಹರಿವ ನೀರು ಯಾರ ತಡೆ ಇಲ್ಲದೆ ಇದ್ದರೆ ಅದು ಹರಿಯುತ್ತಲೇ ಇರುತ್ತದೆ. ಹರಿಯ ನೀರಿಗೆ ಇರುವುದು ಒಂದೇ ಗುರಿ, ಸಾಗರವನ್ನು ಸೇರಬೇಕು. ಅಲ್ಲಿ ತನ್ನ ವಿಸ್ತಾರವನ್ನು ಹರಡಿ, ತನ್ನ ವಯ್ಯಾರವನ್ನು ತೋರುತ್ತ ತೆರೆಯಾಗಿ ಕುಣಿಯಬೇಕು ಎನ್ನುವ ಗುರಿ. ಒಂದು ಪುಟ್ಟ ಹನಿ ಕೂಡ ತಾನು ಹರಿದು ಹಳ್ಳ ಸೇರಿ ಹೊಳೆಯಾಗಿ ನದಿಯಾಗಿ ಸಾಗರ ಸೇರುವುದಕ್ಕಾಗಿ ಇಳಿಜಾರನ್ನು ಹುಡುಕುತ್ತದೆ. ನೀರನ ಗುಣವೆ ಇಳಿಮುಖವಾಗಿ ಹರಿಯುವುದು ಎನ್ನಬಹುದು. ಆದರೆ ಎಲ್ಲ ನೀರಿನ ಹನಿಗಳು ಸಾಗರಕ್ಕೆ ಸೇರಬೇಕು ಎಂದು ಇಳಿಯುವುದಿಲ್ಲ. ಕೆಲವು ಅವರವರ ಕಾರ್ಯಗಳತ್ತ ಸಾಗಿ ಹೋಗುತ್ತವೆ. ಕೆಲವು ಮಾತ್ರ ಸಾಗರ ಸೇರುತ್ತವೆ.
ಇಷ್ಟೆಲ್ಲ ಯಾಕೆ ಹೇಳುತ್ತಿದ್ದಾರೆ ಎನ್ನಿಸಬಹುದು. ನೀರು ಹೇಗೆ ಸಾಗರ ಸೇರಬೇಕು ಎಂದು ಗುರಿ ಹೊಂದಿ ಇಳಿಜಾರಿಗೆ ಜಾರುತ್ತದೆಯೋ ಹಾಗೆ ಮನುಷ್ಯ ಕೂಡ ಗುರಿಯನ್ನು ಹೊಂದಿದರೆ ಎಲ್ಲಿಯೂ ನಿಲ್ಲುವುದಿಲ್ಲ. ತನ್ನ ಗುರಿಯತ್ತ ಮುಖಮಾಡಿ ಏನೇ ಬಂದರೂ ಎದುರಿಸುತ್ತಾನೆ. ಮೊದಲು ಅವನಲ್ಲಿ ಒಂದು ಗುರಿ ಎನ್ನುವುದು ಇರಬೇಕು. ತಾನು ಎಲ್ಲಿಗೆ ಮುಟ್ಟಬೇಕು ಎನ್ನುವುದು ಗುರಿ ಇದ್ದಾಗ ಮಾತ್ರ. ಆ ಗುರಿ ಇಟ್ಟು ಕೊಂಡವನಿಗೆ ಯಾವುದೇ ರೀತಿಯ ಅಡೆತಡೆ ಬಂದರೂ ಕ್ಯಾರೆ ಅನ್ನುವುದಿಲ್ಲ.
ಗುರಿ ಎಂದರೆ ಹೇಗಿರುತ್ತದೆ ಗೊತ್ತಾ? ವಯಸ್ಸಾದ ಸನ್ಯಾಸಿ ಗುರುಗಳು ಒಬ್ಬರು ಒಂದು ಕಾಡಿನ ದೇವಸ್ಥಾನಕ್ಕೆ ಹೋಗುತ್ತಾರೆ. ಅವರ ಜೊತೆ ನಾಲ್ಕು ಶಿಷ್ಯರು ಇರುತ್ತಾರೆ. ಆ ಸನ್ಯಾಸಿಯವರು ಧ್ಯಾನಕ್ಕೆ ಕುಳಿತು ಕಣ್ಣು ಬಿಡುವಾಗ ಕತ್ತಲು ಆವರಿಸಿತ್ತು. ಆಗ ಇಬ್ಬರು ಶಿಷ್ಯರನ್ನು ಕರೆದು “ನೋಡಿ, ನನಗೆ ಈ ಕತ್ತಲಲ್ಲಿ ನಡೆಯಲು ಆಗುವುದಿಲ್ಲ. ಹಾಗಾಗಿ ನಾನು ನನ್ನ ಶಕ್ತಿಯಿಂದ ನಿಮಗೆ ಬೆಳಕನ್ನು ಮಾಡಿಕೊಡುತ್ತೇನೆ. ದೂರದಲ್ಲಿ ಇರುವ ಊರಿಗೆ ಹೋಗಿ ನಿಮಗೆ ಊಟ ಹಾಗು ನನಗೆ ಹಣ್ಣನ್ನು ತೆಗೆದುಕೊಂಡು ಬನ್ನಿ. ಆದರೆ ನೀವು ಹೋಗಿ ಬರುವವರೆಗೂ ದಾರಿಯ ಅಕ್ಕ ಪಕ್ಕ ನೋಡಬಾರದು ಎಂದು ಹೇಳುತ್ತಾರೆ. ಗುರುಗಳಿಗೆ ವಂದಿಸಿ ಆ ಇಬ್ಬರು ಶಿಷ್ಯರು ಊರಿಗೆ ತಲುಪಿ ಊಟ ಮತ್ತು ಹಣ್ಣನ್ನು ತೆಗೆದುಕೊಂಡು ವಾಪಸ್ ಬರುತ್ತಾರೆ. ಒಬ್ಬನಿಗೆ ತಾನು ಗುರುಗಳಿಗೆ ಊಟವನ್ನು ತೆಗೆದುಕೊಂಡು ಹೋಗುವುದು ಅವನ ಗುರಿಯಾಗಿತ್ತು. ಆದರೆ ಮತ್ತೊಬ್ಬನಿಗೆ ಗುರುಗಳು ರಸ್ತೆಯ ಅಕ್ಕಪಕ್ಕ ಯಾಕೆ ನೋಡಬಾರದು ಎಂದು ಹೇಳಿದ್ದಾರೆ ಎನ್ನುವ ಕತೂಹಲ ಮೂಡಿತು. ಆ ಕುತೂಹಲ ಎನ್ನುವುದು ತಾನು ಯಾಕೆ ನೋಡಬಾರದು ಎಂದು ಮನಸ್ಸು ಹಠಮಾಡಿತು. ಮುಕ್ಕಾಲು ದಾರಿ ವಾಪಸ್ ಬಂದಾಗಿದೆ ಒಮ್ಮೆ ನೋಡಿ ಬಿಡೋಣ ಎಂದು ಎಡಗಡೆ ತಿರುಗಿದನು. ಅಲ್ಲಿ ಭಯಂಕರವಾದ ಹುಲಿಯೊಂದು ಇವರ ಜೊತೆಗೆ ಬರುವುದು ಕಂಡು ಕಿರುಚಿಕೊಂಡು ಬಲಗಡೆ ತಿರುಗಿದನು ಅಲ್ಲಿ ಕಾಳ ಸರ್ಪವೊಂದು ಇವರ ಜೊತೆ ಬರುವುದು ಕಾಣಿಸಿ ಜ್ಞಾನ ತಪ್ಪಿ ಬಿದ್ದು ಬಿಟ್ಟನು. ಅವನನ್ನು ಎತ್ತಿಕೊಂಡು ಮತ್ತೊಬ್ಬನು ಗುರುಗಳ ಬಳಿ ಬಂದು ಮಲಗಿಸಿ ಊಟವನ್ನು ಪಕ್ಕಕೆ ಇಡುತ್ತಾನೆ. ಗುರುಗಳು ನೀರನ್ನು ಚುಮುಕಿಸಿ ಎಚ್ಚರಗೊಳಿಸಿದರು. ಎಚ್ಚರಗೊಂಡ ಶಿಷ್ಯನನ್ನು ಗುರುಗಳು ಏನಾಯಿತು ಎಂದು ಪ್ರಶ್ನಿಸಿದಾಗ ಆ ಶಿಷ್ಯ ತಾನು ಕಂಡ ಭಯಂಕರ ಹುಲಿ ಮತ್ತು ಕಾಳ ಸರ್ಪದ ವಿಷಯವನ್ನು ತಿಳಿಸಿದನು.
ಆಗ ಗುರುಗಳು; ನೀನು ನಿಶ್ಚಲವಾದ ಗುರಿಯನ್ನು ಹೊಂದಲಿಲ್ಲ. ಅವನಲ್ಲಿ ಗುರು ತೋರಿಸಿದ ಗುರಿ ಒಂದೇ ನೇರ ದಾರಿಯಲ್ಲಿ ನಡೆದು ಆಹಾರವನ್ನು ತರುವುದಾಗಿತ್ತು. ಅತ್ತ ಇತ್ತ ಗಮನ ಹರಿಸಿದರೆ ಗುರುಗಳಿಗೆ ಆಹಾರ ತರುವುದು ತಡವಾಗುವುದು ಅಲ್ಲದೆ ಎಚ್ಚರಿಕೆ ಮಾತುಗಳನ್ನು ಹೊರತಾಗಿ ಅತ್ತಿತ್ತ ನೋಡಿದರೆ ಸಮಯ ವ್ಯರ್ತವಾಗುತ್ತದೆ ಎನ್ನುವುದನ್ನು ಅರಿತು ತನ್ನ ಕೆಲಸದತ್ತ ಗಮನ ಹರಿಸಿದ. ಹಾಗೆಯೇ ಧೈರ್ಯವಾಗಿ ನಿಶ್ಚ¯ತೆಯಿಂದ ತನ್ನ ಗುರಿ ಮುಟ್ಟಿದ. ನೀನು ನಿನ್ನ ಗುರಿಯನ್ನು ಮರೆತುಬಿಟ್ಟೆ. ಅಲ್ಲಿ ಇಲ್ಲಿ ಏನಾಗಿರಬಹುದು? ಅವನು ದಾರಿಯ ಅಕ್ಕಪಕ್ಕ ನೋಡಿರಬಹುದೇ? ಒಮ್ಮೆ ನಾನು ನೋಡಿದರೆ ಏನಾಗುವುದು ಎನ್ನುವ ಹುಂಬತನ, ಜೊತೆಗೆ ನಿನ್ನ ಮನಸ್ಸನ್ನು ಗುರಿಯತ್ತ ಇಡದೆ ಅನ್ಯ ವಿಚಾರಗಳತ್ತ ಹರಿ ಬಿಟ್ಟೆ ಹಾಗಾಗಿ ನಿನಗೆ ಗುರಿ ತಲುಪಲಾಗದೇ ಮಧ್ಯದಲ್ಲಿ ಕುಸಿದು ಹೋದೆ. ನಿಜವಾಗಿ ಆ ಭಯಂಕರವಾದ ಹುಲಿ ಮತ್ತು ಕಾಳ ಸರ್ಪಗಳು ನನ್ನ ಜೊತೆ ಇದ್ದ ಈ ನಿಮ್ಮ ಸ್ನೇಹಿತರು. ನಾನು ಅವರನ್ನು ನಿಮ್ಮ ಕಾವಲಿಗಿರಲಿ ಎಂದು ನಾನೇ ಆ ರೂಪದಲ್ಲಿ ಕಳುಹಿಸಿದ್ದೆ. ನಿನ್ನ ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಳ್ಳದೆ ಅವರನ್ನು ನೋಡಿ ಹೆದರಿ ಅಲ್ಲಿಯೇ ನಿಂತು ಬಿಟ್ಟೆ.” ಎಂದು ಹೇಳುತ್ತಾರೆ.
ಅಂದರೆ ಮನುಷ್ಯನ ಮನಸ್ಸು, ಬುದ್ಧಿ ಎನ್ನುವುದು ತಮ್ಮ ಹಿಡಿತದಲ್ಲಿ ಇಟ್ಟುಕೊಂಡು ಗುರಿಯತ್ತ ಸಾಗುವುದು ಕೆಲವರಿಗೆ ಮಾತ್ರ ಸಾಧ್ಯ. ಹಾಗೆ ಸಾಧಿಸಿದವನು ಮಾತ್ರ ಅವನು ಮುಂದೊಂದು ದಿನ ತನ್ನ ಬಗ್ಗೆ ಹೆಮ್ಮೆ ಪಟ್ಟುಕೊಳ್ಳುವ ಕಾಲ ಒದಗುವುದು. ಆದರೆ ಗುರಿಯಲ್ಲಿ ಬರುವ ಅಡೆತಡೆಗಳಾದ ಕೀಳರಿಮೆ, ಅವಮಾನದ ಕಡೆ ಲಕ್ಷ, ಅಸೂಹೆ, ಇನ್ನೊಂದು ಮೋಹದಲ್ಲಿ ಸಿಲುಕಿಕೊಳ್ಳುವುದು ಹೀಗೆ ನಾನಾರೀತಿಯಲ್ಲಿ ಸಿಲುಕಿ ತಾನು ತಲುಪಬೇಕಾದ ಗುರಿಯ ಕೊನೆಯನ್ನು ತಲುಪದೇ ಇರುವುದು. ನೀರು ಹೇಗೆ ಸಿಕ್ಕ ಇಳಿಜಾರಿನಲ್ಲಿ ಸಾಗರ ಸೇರಲು ಹರಿಯುತ್ತಲೇ ಇರುತ್ತದೆಯೋ ಹಾಗೆ ಮನುಷ್ಯ ಕೂಡ ಸಿಕ್ಕ ಅವಕಾಶವನ್ನು ವ್ಯರ್ತಮಾಡದೆ ನೇರ ದಾರಿಯಲ್ಲಿ ನಡೆಯುತ್ತ ತನ್ನ ಗುರಿ ತಲುಪಿದಾಗ ಮಾತ್ರ ಸಾಧನೆ ಎನ್ನುವುದು ಅವನ ಹೆಸರಿಗೆ ಸೇರಿಕೊಳ್ಳುತ್ತದೆ.