ಬೀಜ-ವೃಕ್ಷದಂತೆ ಮಕ್ಕಳು ವಾತಾವರಣದಿಂದ ಹೀರಿಕೊಂಡು ಬೆಳೆಯುತ್ತಾರೆ. ಒಳ್ಳೆಯದನ್ನು ಹೀರಿಕೊಂಡರೆ ಪರಿಶುದ್ಧ ವಾತಾವರಣದಲ್ಲಿ ಬೆಳೆದರೆ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಹಾಗಾಗಿ ಮಗು ಬೆಳೆಯುವ ವಾತಾವರಣದ ಕೆಡುಕುಗಳನ್ನೆಲ್ಲಾ ತೆಗೆಯಬೇಕು. ಪಾಲಕರು ವ್ಯಸನಿಗಳಾಗಿದ್ದಲ್ಲಿ ಮಗುವಿನ ಭವಿಷ್ಯಕ್ಕಾಗಿ ವ್ಯಸನ ತ್ಯಜಿಸಬೇಕು. ನಾವು ಮಕ್ಕಳೆದುರು ತಪ್ಪು ಮಾಡಿದರೆ ಮುಗ್ಧ ಮಗು ಸಹಜವೆಂದು ಭಾವಿಸುತ್ತದೆ. ಆ ತಪ್ಪನ್ನು ಅದು ಕೂಡಾ ಮಾಡುತ್ತದೆ. ಹಾಗಾಗಿ ಬೆಳೆಯುವ ಮಗುವಿನ ಬಗ್ಗೆ ಜಾಗೃತೆ ಇರಲಿ.
ಮಗುವಿಗೆ ಪಾಪದಲೇಪವಿಲ್ಲ. ಪಾಪವಿಲ್ಲದೇ ಪಾಪುವಿಗೆ ಶಿಕ್ಷೆ ಏಕೆ? ಹಾಗಾಗಿ ಶಿಕ್ಷೆಯಿಂದ ಶಿಕ್ಷಣಬೇಡ. ಪ್ರೀತಿಯಿಂದ ಕಲಿಸಬೇಕಾದುದನ್ನು ಕಲಿಸಿ. ಮಕ್ಕಳಿಗೆ ಬಯ್ಯುವಾಗಲೂ ಕಾರಣ ನೀಡಿ ಬಯ್ಯಿರಿ. ಅವರ ತಪ್ಪು ಸರಿ ತಿಳಿಸಿ. ಅಂದಾಗ ಬಯ್ಗುಳದಿಂದಲೂ ಮಗುವಿನ ವ್ಯಕ್ತಿತ್ವ ಬೆಳೆಯಲು ಸಾಧ್ಯ. ಉದ್ದೇಶ ಒಳ್ಳೆಯದಿದ್ದರೆ ಬಯ್ಗುಳ ಮಂತ್ರವಾಗುತ್ತದೆ. ಉದ್ದೇಶ ಒಳ್ಳೆಯದಿಲ್ಲದಿದ್ದರೆ ಮಂತ್ರವೂ ಬಯ್ಗುಳವಾಗುತ್ತದೆ.
ಜೀವನಕ್ಕೆ ಬೇಕಾದುದನ್ನು ಕಲಿಸಿ, ಸಾಧನೆ ಮಾಡಲು ಬಾಲ್ಯಸೂಕ್ತಕಾಲ. ಬಾಲಕರ ಬಾಲ್ಯ ವ್ಯರ್ಥವಾಗದಂತೆ ಪ್ರೇರಣೆ ನೀಡಿ, ಮಕ್ಕಳ ಬದುಕಿಗೆ ಸೋಪಾನವಾಗುತ್ತದೆ.