ಅಡಿಪಾಯಕ್ಕೆ ಸಮಾನಾಂತರ ಆರ್ಥ ಕೊಡುವ ಬೇರೆ ಪದಗಳೆಂದರೆ ತಳಹದಿ, ತಳಪಾಯ, ಬುನಾದಿ ಪ್ರತಿಯೊಂದು ಕಟ್ಟಡ, ಸೇತುವೆ, ಮನೆ, ಭೂಮಿಮೇಲೆ ನಿರ್ಮಾಣ ಮಾಡುವ ಪ್ರತಿಯೊಂದಕ್ಕೂ ಅಡಿಪಾಯ ಬಹಳ ಮುಖ್ಯವಾದುದು. ಪ್ರತಿಯೊಂದು ಕೆಲಸಕ್ಕೂ, ಸಂಸ್ಥೆಗಳನ್ನು ನಡೆಸಲು, ಅಡಿಪಾಯ ಎಂಬಂತೆ ಕ್ರಿಯಾಯೋಜನೆ ರೂಪಿಸಬೇಕು. ಕ್ರಿಯಾಯೋಜನೆ ಸರಿ ಇದ್ದರೆ ಮಾಡುವ ಕಾರ್ಯ ಸರಿಯಾದ ರೀತಿಯಲ್ಲಿ ಪೂರ್ಣಗೊಳಿಸಬಹುದು.
ಅಡಿಪಾಯ ಸರಿ ಇದ್ದರೆ ಕಟ್ಟಡಗಳು ಬಹಳ ಕಾಲ ಬಾಳಿಕೆ ಬರುತ್ತವೆ. ಇಲ್ಲದಿದ್ದಲ್ಲಿ ಪೂರ್ಣ ಆಯುಷ್ಯ ಇರುವುದಿಲ್ಲ. ಅದೇರೀತಿ ಅಡಿಪಾಯದ ಅರ್ಥವನ್ನು ಮನುಷ್ಯನ ಜೀವನಕ್ಕೆ ಹೋಲಿಸಿದಾಗ, ಹುಟ್ಟಿದ ಮಗುವಿನ ಉಜ್ವಲ ಭವಿಷ್ಯಕ್ಕಾಗಿ ಭದ್ರವಾದ ಅಡಿಪಾಯ ಅಥವಾ ಬುನಾದಿಯನ್ನು ಹಾಕಬೇಕು. ಸರಿಯಾದ ಅಡಿಪಾಯ ಹಾಕದಿದ್ದರೆ ಸರಿಯಾದ ಅಡಿಪಾಯ ಇಲ್ಲದ ಕಟ್ಟಡವು ಕುಸಿಯುಂತೆ ಮಕ್ಕಳ ಭವಿಷ್ಯವೂ ಕುಸಿಯುತ್ತದೆ.
ಎಲ್ಲರೂ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಲು ಒಳ್ಳೆಯ ಶಾಲೆಗೆ ಸೇರಿಸಬೇಕೆಂದು ನಿರ್ಧರಿಸುತ್ತಾರೆ. ನಗರಗಳಲ್ಲಿ ಹೆಚ್ಚಿನ ಸಂಖ್ಯೆಯ ಖಾಸಗಿ ಶಾಲೆಗಳು ಇರುವುದರಿಂದ ಜನಗಳು ತಮ್ಮ ಮಕ್ಕಳನ್ನು ಅದರಲ್ಲಿ ಒಳ್ಳೆಯ ಶಾಲೆಗಳನ್ನು ನೋಡಿ ಅದಕ್ಕೆ ಸೇರಿಸುವುದುಂಟು. ಪ್ರತಿಷ್ಠಿತ ಶಾಲೆ ಎಂದು ತಿಳಿದ ತಕ್ಷಣ ಮಕ್ಕಳನ್ನು ಸೇರಿಸಲು ರಾತ್ರಿ ಇಡೀ ಶಾಲೆಯ ಮುಂದೆ ನಿಂತು ಅರ್ಜಿ ಪಡೆದು ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ ಎಂದು ಮಕ್ಕಳನ್ನು ಸೇರಿಸುವುದುಂಟು.
ಆದರೆ ಹಳ್ಳಿಗಳಲ್ಲಿ ಖಾಸಗಿ ಶಾಲೆಗಳು ಇರುವುದಿಲ್ಲ. ಸರ್ಕಾರಿ ಶಾಲೆಗೇ ಸೇರಿಸಬೇಕು. ಅದರಲ್ಲೂ ಕೆಲವು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲೇ ಓದಿ ಬಹಳ ಪ್ರಸಿದ್ದ ವ್ಯಕ್ತಿಗಳಾಗಿದ್ದಾರೆ, ಅಂದರೆ ಕಪ್ಪೆ ಚಿಪ್ಪಿನಲ್ಲಿ ಸ್ವಾತಿ ಮಳೆಯ ಹನಿಯು ಬಿದ್ದು ಮುತ್ತಾಗುವಂತೆ ಇವರೂ ಜೀವನದಲ್ಲಿ ಮೇಲೆ ಬಂದಿರುತ್ತಾರೆ.
ಕಟ್ಟಡ ಕಟ್ಟುವಾಗ ಯಾವ ರೀತಿ ಕಟ್ಟಡ ಕಟ್ಟಬೇಕೆಂದು ಮೊದಲೇ ನಿರ್ಧರಿಸಿ ಕಟ್ಟಡವನ್ನು ಕಟ್ಟಬೇಕು. ಎರಡು ಅಂತಸ್ತಿನ ಕಟ್ಟಡ ನಿರ್ಮಿಸಲು ಅಡಿಪಾಯ ಹಾಕಿ ಐದು ಅಂತಸ್ತಿನ ಕಟ್ಟಡ ನಿರ್ಮಿಸಿದರೆ ಕಟ್ಟಡ ಉಳಿಯುವುದಿಲ್ಲ. ಅದೇ ರೀತಿ ಮಕ್ಕಳಿಗೆ ಶಾಲೆಗಳನ್ನು ಆಯ್ಕೆ ಮಾಡಬೇಕು. ಯಾರೋ ಹೇಳಿದರು ಎಂದು ಯಾವುದೋ ಶಾಲೆಗೆ ಸೇರಿಸಿ, ನಂತರ ಪಶ್ಚಾತ್ತಾಪ ಪಡುವುದು ಸರಿಯಲ್ಲ. ಹಳ್ಳಿಗಳಲ್ಲಿ ಇರುವುದು ಒಂದೇ ಶಾಲೆ ವಿಧಿಯಿಲ್ಲದೆ ಅದಕ್ಕೆ ಸೇರಿಸಬೇಕು. ಸರ್ಕಾರಿ ಶಾಲೆಗೆ ಸೇರಿಸಿದರೆ ಭವಿಷ್ಯ ಉಜ್ವಲ ವಾಗುವುದಿಲ್ಲ ಎಂದು ಹೀಗಳೆಯಬಾರದು. ಮೊದಲಿಂದಲೂ ಸರ್ಕಾರಿ ಶಾಲೆಗಳೇ ಇದ್ದದ್ದು. ಹಿಂದಿನ ಮಹಾ ಪುರುಷರೆಲ್ಲರೂ ಸರ್ಕಾರಿ ಶಾಲೆಯಲ್ಲಿ ಕಲಿತು ದೊಡ್ಡವರಾಗಿದ್ದಾರೆ.
ನೆಲವೇ ಸರಿಯಿಲ್ಲದಿದ್ದರೆ ಅಡಿಪಾಯ ಹಾಕುವುದು ಬಹಳ ಕಷ್ಟ. ಅದೇರೀತಿ ತಂದೆ ತಾಯಿಯರೇ ಸರಿಯಿಲ್ಲದಿದ್ದರೆ ಮಕ್ಕಳ ಭವಿಷ್ಯಕ್ಕೆ ಸರಿಯಾದ ಅಡಿಪಾಯ ಹಾಕುವವರು ಯಾರು? ಅದಕ್ಕೆ ಮೊದಲು ತಂದೆ ತಾಯಂದಿರುಗಳು ಮಕ್ಕಳ ಭವಿಷ್ಯಕ್ಕಾಗಿ ತಾವುಗಳು ಸರಿಯಾದ ರೀತಿಯಲ್ಲಿ ಇದ್ದು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು.
ಸರಿಯಾದ ಅಡಿಪಾಯ ಹಾಕಿ ಕಟ್ಟುವ ರೀತಿ ಸರಿಯಾಗಿ ಇಲ್ಲದಿದ್ದರು ಕಟ್ಟಡಕ್ಕೆ ಅಪಾಯ ತಪ್ಪಿದ್ದಲ್ಲ. ಅದೇರೀತಿ ಮಕ್ಕಳನ್ನು ಒಳ್ಳೆಯ ಶಾಲೆಗೆ ಸೇರಿಸಿದ್ದರೂ ಸ್ನೇಹಿತರ ಸಹವಾಸದಿಂದ ಓದಿನಲ್ಲಿ ಕುಂಠಿತವಾಗಬಹುದು. ಅಥವಾ ಅನಿರೀಕ್ಷಿತ ಕಾರಣದಿಂದ ಅಂದರೆ ಅನಿರೀಕ್ಷಿತವಾಗಿ ಮಕ್ಕಳ ತಂದೆ ತಾಯಿಯರ ನಿಧನವಾಗುವುದರಿಂದಲೂ ಮಕ್ಕಳ ಉಜ್ವಲ ಭವಿಷ್ಯ ಅಲ್ಲೋಲ ಕಲ್ಲೋಲವಾಗುತ್ತದೆ.
ಒಂದು ವೇಳೆ ಅಡಿಪಾಯ ಸರಿಯಾಗಿದ್ದು, ಕಟ್ಟಡಕ್ಕೆ ಹಾಕುವ ಸಾಮಾಗ್ರಿಗಳು ಸರಿ ಇಲ್ಲದಿದ್ದರೆ ಅದರಿಂದಲೂ ಕಟ್ಟಡ ಕುಸಿಯಬಹುದು. ಮಕ್ಕಳಿಗೆ ಒಳ್ಳೆ ಶಾಲೆಗೆ ಸೇರಿಸಿ ಉಜ್ವಲಭವಿಷ್ಯಕ್ಕೆ ನಾಂದಿ ಹಾಡಿದ್ದರೂ, ಮಕ್ಕಳಿಗೆ ಸರಿಯಾದ ಪರಿಕರಗಳನ್ನು ನೀಡದೇ ಇದ್ದರೂ ತೊಂದರೆಯಾಗಬಹುದು.
ಸರಿಯಾದ ಅಡಿಪಾಯ ಹಾಕಿ ಕಟ್ಟಡವನ್ನೂ ನಿರ್ಮಿಸಿ ನಂತರದ ದಿನಗಳಲ್ಲಿ ಅಡಿಪಾಯದ ಪಕ್ಕದಲ್ಲಿ ಎಲ್ಲಿಂದಲೋ ನೀರು ಹರಿದು ಬಂದು ಅಡಿಪಾಯಕ್ಕೆ ತೊಂದರೆಯಾಗುವಂತೆ, ಮಕ್ಕಳು ಒಳ್ಳೆಯ ಶಾಲೆ ಸೇರಿದ್ದರೂ, ಮಕ್ಕಳಿಗೆ ಯಾವುದಾದರೂ ಒಳ ಖಾಯಿಲೆ ಬಂದು ಯಾರೂ ಗಮನಿಸದೆ ಮಕ್ಕಳ ಆರೋಗ್ಯಕ್ಕೆ ತೊಂದರೆಯಾಗಬಹುದು. ಆಗಾಗ್ಗೆ ಮಕ್ಕಳ ಆರೋಗ್ಯ ನೋಡುತ್ತಿರುವುದು ಒಳ್ಳೆಯದು.
ಕೆಲವರಿಗೆ ಕಟ್ಟಿದ ಸ್ವಂತ ಕಟ್ಟಡದಲ್ಲಿ ವಾಸಮಾಡಲು ಅದೃಷ್ಟ ಇರುವುದಿಲ್ಲ, ಅವರಿಗೆ ಯಾವುದಾದರೂ ಬೇರೆ ಊರಿಗೆ ವರ್ಗಾವಣೆ ಆಗಬಹುದು, ಮನೆಯೇ ದೊಡ್ಡದು ಆಗಿ ಅದರ ನಿರ್ವಹಣೆ ಕಷ್ಟವಾಗಬಹುದು, ಅಥವಾ ಬೇರೆ ಕಾರಣಗಳಿಂದ ಅವರು ಸ್ವಂತ ಮನೆಯನ್ನು ಬಾಡಿಗೆಗೆ ಕೊಟ್ಟು ಅದರಿಂದ ಬರುವ ಬಾಡಿಗೆ ಹಣದಿಂದ ಇವರು ಬೇರೆ ಬಾಡಿಗೆ ಮನೆಯಲ್ಲಿ ವಾಸಮಾಡಬಹುದು.
ಮಕ್ಕಳು ಸಹ ತಂದೆ ತಾಯಿ ಮಾತು ಕೇಳದೆ ಬೇರೆ ಯಾರನ್ನೋ ವಿವಾಹವಾಗಿ, ಹೆಂಡತಿಯ ಮಾತಿನಂತೆ ಹೆತ್ತವರನ್ನು ಕಡೆಗಣಿಸಿ, ಇವರು ಬೇರೆಯಾಗಿ ದೂರದಲ್ಲಿದ್ದು, ತಂದೆ ತಾಯಿಗೆ ಜೀವನ ನಿರ್ವಹಣೆಗಾಗಿ ಸ್ವಲ್ಪ ಹಣವನ್ನು ಕಳುಹಿಸಬಹುದು.
ಕಟ್ಟಡಕ್ಕೆ ಅನಿರೀಕ್ಷಿತವಾಗಿ ಸಿಡಿಲುಹೊಡೆದೋ, ಭೂಕಂಪಗಳಾಗಿ ಕಟ್ಟಿದ ಕಟ್ಟಡ ಉರುಳಬಹುದು, ಮಕ್ಕಳಿಗೆ ಅನಿರೀಕ್ಷಿತವಾಗಿ ಅಪಘಾತವಾಗಿ ಅಸುನೀಗಿ ಮಕ್ಕಳ ಭವಿಷ್ಯವೂ ನಶಿಸಬಹುದು. ಇದಕ್ಕೆ ತಕ್ಕಂತೆ ಮಕ್ಕಳಿಗೆ ವಾಹನದ ಬಗ್ಗೆ ಎಚ್ಚರಿಕೆ ನೀಡಿ ಅವರು ವಯಸ್ಕರಾಗಿ ಪ್ರಬುದ್ದರಾದಾಗ ಮಾತ್ರ ಅವರಿಗೆ ವಾಹನವನ್ನು ನೀಡದರೆ ಮಕ್ಕಳಿಗೆ ಆಗುವ ಅನಾಹುತವನ್ನು ತಪ್ಪಿಸಬಹುದು.
ತಂದೆ ತಾಯಿಯವರು ಮಕ್ಕಳ ಭವಿಷ್ಯ ರೂಪಿಸಲು ಎಷ್ಟು ಕಷ್ಟ ಪಡುತ್ತಾರೋ ಅದೇರೀತಿ ಶಾಲೆಯ ಉಪಾದ್ಯಾಯರುಗಳು ಮಕ್ಕಳಿಗೆ ಆಸಕ್ತಿಯಿಂದ ಪಾಠವನ್ನು ಹೇಳಿಕೊಡಬೇಕು. ಕಾಟಾಚಾರಕ್ಕೆ ಪಾಠ ಹೇಳಿದರೆ ಮಕ್ಕಳ ಪರೀಕ್ಷೆಗೆ ತೊಂದರೆಯಾಗುತ್ತದೆ. ಶಾಲೆಯ ಉಪಾದ್ಯಾಯರುಗಳು ಮಕ್ಕಳ ಜೀವನದ ಜೊತೆ ಆಟವಾಡಬಾರದು. ಆದೇ ರೀತಿಯಾದಲ್ಲಿ ಮಕ್ಕಳಿಗೆ ಪಾಠ ಅರ್ಥವಾಗದೆ, ಉಪಾದ್ಯಾಯರಲ್ಲಿ ಕೇಳಲು ಭಯವಾಗಿ ಪರೀಕ್ಷೆ ಹತ್ತಿರ ಬಂದಾಗ ಬಾಯಿ ಪಾಠ ಮಾಡಿಕೊಂಡು ಪರೀಕ್ಷೆಯಲ್ಲಿ ಬರೆದು ಉತ್ತೀರ್ಣರಾಗಬಹುದು, ಆದರೆ ತಿಳುವಳಿಕೆ ಬಂದಿರುವುದಿಲ್ಲ. ಕೆಲಸಕ್ಕೆ ಹೋದಾಗ ಅವರಿಗೆ ಸಾಮಾನ್ಯ ಜ್ಞಾನ ಇಲ್ಲದೆ ಕೆಲಸಕ್ಕೆ ತೊಂದರೆ ಯಾಗಬಹುದು. ವಿದ್ಯೆಯ ಜೊತೆಗೆ ಬುದ್ದಿಯೂ ಬೆಳೆಯುವಂತೆ ಜ್ಞಾನವೂ ವೃದ್ದಿಸುವಂತೆ ಮಾಡಬೇಕು. ಉಪಾದ್ಯಾಯರೂ ಕೂಡ ಮಕ್ಕಳ ಭವಿಷ್ಯಕ್ಕೆ ತಮ್ಮ ಅಮೂಲ್ಯವಾದ ಕಾಣಿಕೆಯನ್ನು ನೀಡಿದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಿ ಒಳ್ಳೆ ನಾಗರೀಕರಾಗಿ ಹೊರಹೊಮ್ಮಿ ಸಮಾಜಕ್ಕೆ ಒಳ್ಳೆಯ ಪ್ರಜೆಯಾಗಬಹುದು.
ಅಡಿಪಾಯ ಅಥವಾ ಬುನಾದಿ ಎಂಬ ಪದ ಎಲ್ಲಾ ಕ್ಷೇತ್ರದಲ್ಲಿಯೂ ಪರಿಚಿತವಾದ ಪದಗಳು. ಕ್ರಿಕೆಟ್‍ನಲ್ಲಿ ಮೊದಲನೇ ವಿಕೆಟ್ ಜೊತೆಯಾಟದಲ್ಲಿ ಶತಕದ ಜೊತೆಯಾಟ ಬಂದಾಗ, ಬೃಹತ್ ಸ್ಕೋರಿಗೆ ಮೊದಲನೇ ಜೊತೆಯಾಟವು ಒಳ್ಳೆ ಬುನಾದಿ ಹಾಕಿಕೊಟ್ಟರು ಎಂದು ಹೇಳುತ್ತಾರೆ. ಒಂದು ರಾಜಕೀಯ ಪಕ್ಷ ಜನ ಮನ್ನಣೆ ಹೊಂದಿ ಅಧಿಕಾರಕ್ಕೆ ಬಂದರೆ ಆಗಲೂ ಸಹ ರಾಜಕೀಯ ಪಕ್ಷ ಸ್ಥಾಪಿಸಿದವರು ಭದ್ರ ಬುನಾದಿ ಹಾಕಿದರು ಎಂಬ ನಾಡ್ಣುಡಿ ಬಳಕೆಯಲ್ಲಿದೆ.
ಪ್ರತಿಯೊಂದು ಕ್ಷೇತ್ರದಲ್ಲಿಯೂ ಈ ನಾಡ್ಣುಡಿ ಬಳಕೆಯಲ್ಲಿದ್ದು, ಸರಿಯಾದ ಅಡಿಪಾಯ ಇಲ್ಲದೆ ಯಾವ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ಹಿರಿಯರಾದವರು ಮಕ್ಕಳ ಚಲನವಲನಗಳ ಮೇಲೆ ಒಂದು ಕಣ್ಣನ್ನು ಇಟ್ಟಿರಬೇಕು. ಮಕ್ಕಳ ಸ್ನೇಹಿತರು ಅವರ ಪರಿಸರವೇನು? ಎಂಬ ಬಗ್ಗೆ ಆಗಾಗ್ಗೆ ಪರಿಶೀಲಿಸುತ್ತಿದ್ದರೆ ಮಕ್ಕಳನ್ನು ಒಂದು ಮಾದರಿ ಪ್ರಜೆಯನ್ನಾಗಿ ಮಾಡಿ ದೇಶಕ್ಕೆ ನೀಡಬಹುದು ಈಗಿನ ಕಾಲದಲ್ಲಿ ಮೊಬೈಲ್ ಮತ್ತು ಟಿವಿಗಳದ್ದೇ ರಾಜ್ಯಭಾರವಾಗಿದೆ. ಇದರಿಂದ ಆದಷ್ಟೂ ಮಕ್ಕಳನ್ನು ದೂರವಿಡಲು ಪ್ರಯತ್ನಿಸಬೇಕು. ಹಾಗಂತ ಮಕ್ಕಳಿಗೆ ಮನರಂಜನೆ ಬೇಡ ಎಂಬುದಲ್ಲ. ಟಿವಿ ಕಾರ್ಯಕ್ರಮದಲ್ಲಿ ಒಳ್ಳೆಯ ಕಾರ್ಯಕ್ರಮಗಳನ್ನು ನೋಡುವಂತೆ ಮಕ್ಕಳಿಗೆ ತಿಳಿಸಬೇಕು. ಮಕ್ಕಳೂ ಸಹ ಯಾವಾಗಲೂ ಟಿವಿ ಮೊಬೈಲ್‍ಗಳಲ್ಲಿಯೇ ಕಾಲ ಕಳೆಯು ವಂತಾಗಬಾರದು. ಅನೇಕ ಮಂದಿ ಮಕ್ಕಳು ಯಾವುದೋ ಗೇಮನ್ನು ಆಡಿ ತಮ್ಮ ಪ್ರಾಣವನ್ನೇ ಕಳೆದುಕೊಂಡಿರುವರೆಂದು ಕೇಳಿದ್ದೇವೆ. ಆದಷ್ಟೂ ಮಕ್ಕಳು ಇಂತಹ ಅಪಾಯದ ಆಟದಿಂದ ದೂರವಿದ್ದು, ತಮ್ಮ ಭವಿಷ್ಯವನ್ನು ರೂಪಿಸಲು ಅನುವಾಗುವಂತಹ ತಮ್ಮ ಜ್ಞಾನ ಬೆಳಗುವಂಥಹ ಕಾರ್ಯಕ್ರಮಗಳನ್ನು ನೋಡಿ ಅದರಿಂದ ಬುದ್ದಿವಂತರಾಗಿ ಮನೆಯವರಿಗೂ, ಓದುತ್ತಿರುವ ಶಾಲೆಗೂ, ದೇಶಕ್ಕೂ ಕೀರ್ತಿ ತರುವಂತಾದರೆ ಅದೇ ಹೆತ್ತವರು ಸಮಾಜಕ್ಕೆ ಅಥವಾ ದೇಶಕ್ಕೆ ನೀಡುವಂತಹ ಒಂದು ಅತ್ಯಮೂಲ್ಯ ಕೊಡುಗೆಯಾಗಿರುತ್ತದೆ.