muralidhar 2

ಬೇಲಿಯು ಪ್ರಾಣಿಗಳು ಬಂದು ಬೆಳೆ ತಿಂದು ನಾಶಮಾಡುವುದನ್ನು ತಡೆದು, ಮನುಷ್ಯರಿಗೆ ಬೆಳೆಗಳಿಗೆ ರಕ್ಷಣೆ ಒದಗಿಸುತ್ತದೆ. ಬೇಲಿಯನ್ನು ಎಲ್ಲಾ ತೋಟಗಳಿಗೆ ಹಾಗೂ ಹೊಲಗಳ ಸುತ್ತಲೂ ಹಾಕುತ್ತಾರೆ. ಹಾಗೂ ಯಾರೂ ಅತಿಕ್ರಮಣ ಪ್ರವೇಶ ಮಾಡಬಾರದೆಂದು ರಕ್ಷಾ ಕವಚದಂತೆ ಬೇಲಿಯನ್ನು ಹಾಕಿರುತ್ತಾರೆ. ಮನೆಯನ್ನು ಗುರ್ತಿಸಲು ಅಳತೆ ಮಾಡಿ ಕಾಂಪೌಂಡ್ ನಿರ್ಮಿಸಿರುತ್ತಾರೆ.

ಬೇಲಿ ಎಂಬುದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ, ನಾವು ಮಾಡಿಕೊಂಡಿರುವ ಕಟ್ಟುಪಾಡು ಆಗುತ್ತದೆ. ಮನುಷ್ಯನಿಂದ ಹಿಡಿದು ದೇಶದವರೆವಿಗೂ ವಿಸ್ತರಿಸಿದರೆ ಪ್ರಾದೇಶಿಕವಾಗಿ ಅವರುಗಳದ್ದೇ ಆದ ವಿಬಿನ್ನವಾದ ಅನೇಕ ಕಟ್ಟುಪಾಡುಗಳಿರುತ್ತವೆ. ದೇಶ, ರಾಜ್ಯ, ಜಿಲ್ಲೆ ತಾಲ್ಲೂಕು, ಊರುಗಳನ್ನು ಗುರ್ತಿಸಲು ಗಡಿರೇಖೆಗಳನ್ನು ಹಾಕಿರುತ್ತಾರೆ. ಸಮುದ್ರದಲ್ಲಿಯೂ ಗಡಿಯನ್ನು ಗುರ್ತಿಸಿರುತ್ತಾರೆ. ನಿಯಮ ಮೀರಿ ಬೇರೆ ದೇಶದವರು ನಮ್ಮ ದೇಶಕ್ಕೆ ಬಂದರೆ ಅಥವಾ ಈ ದೇಶದವರು ಬೇರೆ ದೇಶದ ಗಡಿಗೆ ಹೋದರೆ ಅಂಥವರನ್ನು ಬಂದಿಸುತ್ತಾರೆ.

ಒಬ್ಬ ವ್ಯಕ್ತಿ ತನಗೆ ಕಟ್ಟುಪಾಡು ವಿಧಿಸಿಕೊಂಡಲ್ಲಿ ಅದು ಶಿಸ್ತು ಆಗುತ್ತದೆ, ಸಮಾಜದಲ್ಲಿ ಅಳವಡಿಸಿಕೊಂಡಲ್ಲಿ ಅದು ಸಂಪ್ರದಾಯ ರೂಢಿ ಎಂದಾಗುತ್ತದೆ. ಒಂದು ದೇಶದ ಪ್ರಜೆಗಳನ್ನು ನಿಯಂತ್ರಿಸಲು ಹಲವಾರು ವಿಧದ ನಿಯಮಗಳು ಇರುತ್ತವೆ. ಜೀವನದ ಪ್ರತಿಯೊಂದು ಹೆಜ್ಜೆಗೂ ನೀತಿ ನಿಯಮಗಳನ್ನು ಸರ್ಕಾರವೇ ಮಾಡಿರುತ್ತದೆ. ಇದನ್ನು ಯಾರೂ ಪ್ರಶ್ನಿಸುವ ಹಾಗೂ ಧಿಕ್ಕರಿಸಿ ನಡೆಯುವ ಹಾಗಿಲ್ಲ. ದಿಕ್ಕರಿಸಿ ನಡೆದರೆ ನಿಯಮಗಳಲ್ಲಿ ನಮೂದಿಸಿರುವಂತೆ ನಿಯಮ ಮುರಿದ ವ್ಯಕ್ತಿಗೆ ಶಿಕ್ಷೆಯನ್ನು ವಿಧಿಸಲಾಗುವುದೆಂದು ಎಲ್ಲರಿಗೂ ತಿಳಿದ ವಿಷಯ. ಮನುಷ್ಯನಾದವನು ಹುಟ್ಟಿನಿಂದ ಸಾಯುವವರೆಗೆ ಕಟ್ಟುಪಾಡಿನ ಒಳಗೆ ಬಂದಿಯಾಗಿ ಜೀವನ ಸಾಗಿಸಬೇಕು.

ಕೋಟ್ಯಾಂತರ ಜನಗಳನ್ನು ನಿಯಂತ್ರಿಸಲು ಪ್ರತಿಯೊಂದು ನಡವಳಿಕೆಗೆ ವಿಧ-ವಿಧವಾದ ನೀತಿನಿಯಮಗಳು ಇರುತ್ತವೆ. ಆದಾಯ ತೆರಿಗೆ ಕಾನೂನು, ಸಿವಿಲ್ ಪ್ರಕ್ರಿಯಾ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ, ಮೋಟಾರು ವಾಹನಗಳ ಕಾನೂನು, ಕಂಪೆನಿಗಳ ಕಾನೂನು, ಲೇಬರ್ ಲಾ ಹೀಗೆ ಅನೇಕಾನೇಕ ಕಾನೂನುಗಳು ದೇಶದಲ್ಲಿ ಜಾರಿಯಲ್ಲಿವೆ. ಇವುಗಳೆಲ್ಲವೂ ಪ್ರಜೆಗಳಿಗಾಗಿಯೇ ದೇಶವು ವಿಧಿಸಿದ ಕಟ್ಟುಪಾಡುಗಳಾಗಿವೆ. ಪ್ರತಿಯೊಂದಕ್ಕೂ ಕಾನೂನು ಕಟ್ಟಲೆಗಳನ್ನು ಮಾಡಿರುವ ಮಹನೀಯರುಗಳ ಕಾರ್ಯ ಶ್ಲಾಘನೀಯ.

ಭಾರತದ ದೇಶವನ್ನು ನಡೆಸಲು ಒಂದು ಕಟ್ಟುಪಾಡನ್ನು ರಚಿಸಲಾಗಿದೆ. ಇದನ್ನು ಬಿಟ್ಟು ಬೇರೆಯಾಗಿ ದೇಶವನ್ನು ನಡೆಸುವಂತಿಲ್ಲ. ಇದರನ್ವಯವೇ ದೇಶದ ಆಡಳಿತವನ್ನು ನಡೆಸಬೇಕು. ಅದುವೇ ಭಾರತದ ಸಂವಿಧಾನ. ಎಲ್ಲರೂ ಒಂದೇ ಎಂದು ಸಾರುವಂತೆ ಸಂವಿಧಾನವನ್ನು ರಚಿಸಿರುವ ಭಾರತರತ್ನ ಡಾ|| ಬಿ.ಆರ್. ಅಂಬೇಡ್ಕರ್‍ರವರನ್ನು ದೇಶವು ಇವರನ್ನು ಗೌರವಿಸುತ್ತದೆ ಹಾಗೂ ಸದಾ ಸ್ಮರಿಸುತ್ತದೆ.
ಒಂದು ಕುಟುಂಬದ ಕಟ್ಟುಪಾಡು ಬೇರೆಯವರ ಕುಟುಂಬದ ಕಟ್ಟುಪಾಡಿಗೆ ಸ್ವಲ್ಪ ವ್ಯತ್ಯಾಸ ಇರಬಹುದು. ಪ್ರತಿಯೊಂದು ಜಾತಿಗೂ ಅವರದೇ ಆದ ಕಟ್ಟುಪಾಡುಗಳಿರುತ್ತವೆ. ಹಿಂದೂ ಧರ್ಮದಲ್ಲಿ ಜಾತಿ ಎಂಬ ಕಟ್ಟು ಪಾಡು ಇದ್ದು, ಇದು ಎಲ್ಲರನ್ನೂ ಬೇರೆ ಬೇರೆ ಎಂಬಂತೆ ಬೇದಭಾವದಿಂದ ನೋಡುತ್ತಾರೆ. ಈ ಜಾತಿ ಎಂಬ ಕಟ್ಟುಪಾಡು ಇಲ್ಲದಿದ್ದಲ್ಲಿ ದೇಶದ ಭವಿಷ್ಯವು ಇನ್ನೂ ಉಜ್ವಲ ವಾಗುತ್ತಿತ್ತು ಎನಿಸುತ್ತದೆ.

RELATED ARTICLES  ಕರಾವಳಿಯಲ್ಲಿ ಚಳಿಯೋ ಚಳಿ..! ಜನರಲ್ಲಿ ಸಾಂಕ್ರಾಮಿಕ ರೋಗದ ಭೀತಿ

ಒಬ್ಬ ಮನುಷ್ಯ ಕಟ್ಟುಪಾಡು ಮೀರಿದ ಎಂದರೆ ಬೇಲಿ ಹಾರಿದ ಎನ್ನುತ್ತಾರೆ. ಬೇಲಿ ಹಾರಿ ಅಥವಾ ನಿಯಮಗಳನ್ನು ಮೀರಿ ನಡೆದರೆ ಸಮಾಜದಲ್ಲಿ ಗೌರವ ಕಡಿಮೆಯಾಗುವುದರಲ್ಲಿ ಸಂಶಯವೇ ಇಲ್ಲ. ಅದಕ್ಕೆ ಜಾಗರೂಕರಾಗಿ ಒಳ್ಳೆಯ ರೀತಿಯಲ್ಲಿ ನಡೆಯಬೇಕು.
ಪ್ರತಿಯೊಂದು ದೇವಸ್ಥಾನದಲ್ಲಿ ಪೂಜೆಯನ್ನು ಮಾಡಲು ಒಂದು ನಿಯಮ ಇರುತ್ತದೆ. ದೇವರ ದರ್ಶನ ಮಾಡಲು ಗಂಡಸರು ಅಂಗಿಯನ್ನು ಧರಿಸಿ ದೇವರ ದರ್ಶನ ನಿಶಿದ್ದ ಎಂಬ ಕಟ್ಟು ಪಾಡು ಇರುತ್ತದೆ.

ಮನೆಯಲ್ಲಿದ್ದರೆ ಒಂದು ಕಟ್ಟು ಪಾಡು, ಮಕ್ಕಳು ಶಾಲೆಗೆ ಹೋದರೆ ಒಂದು ಕಟ್ಟುಪಾಡು, ದೊಡ್ಡವರು ಕೆಲಸಕ್ಕೆ ಹೋದರೆ ಅಲ್ಲಿಯದೇ ಆದ ಕಟ್ಟುಪಾಡನ್ನು ಪಾಲಿಸಬೇಕಾಗುತ್ತದೆ. ಕಛೇರಿಗೆ ಶಾಲೆಗೆ ವಿಳಂಬವಾಗಿ ಹೋಗುವಂತಿಲ್ಲ. ಇಂತಿಷ್ಟೇ ಗಂಟೆಯೊಳಗೆ ಶಾಲೆ ಕಛೇರಿಗೆ ಹಾಜರಾಗಬೇಕು ಇಲ್ಲದಿದ್ದಲ್ಲಿ ಆ ದಿವಸ ಗೈರುಹಾಜರಿ ಎಂದು ನಮೂದಿಸಲಾಗುತ್ತದೆ.

ಮನೆಯಲ್ಲಿ ತಂದೆ ತಾಯಂದಿರು ಮಕ್ಕಳಿಗೆ ಕೆಲವು ಕಟ್ಟುಪಾಡನ್ನು ವಿಧಿಸುತ್ತಾರೆ. ಬೆಳಿಗ್ಗೆ ಬೇಗ ಏಳಬೇಕು, ಎದ್ದು ಮುಖ ತೊಳೆದು ಕಾಫಿ ಕುಡಿದು ಸ್ನಾನ ಮಾಡಿ, ತಿಂಡಿ ತಿಂದು ನಂತರ ಶಾಲೆ ಕಛೇರಿಗೆ ಹೋಗಿ ಸಂಜೆ ಮನೆಗೆ ಬಂದ ನಂತರ ಕೈಕಾಲು ಮುಖ ತೊಳೆದು ಓದಬೇಕು ನಂತರ ಊಟ ಮಾಡಬೇಕು. ರಾತ್ರಿ ಬಹಳ ಹೊತ್ತಿನವರೆವಿಗೆ ಎದ್ದಿರಬಾರದು. ಬೇಗ ಮಲಗಿ ಬೇಗ ಏಳಬೇಕು ಎಂಬ ಕಟ್ಟುಪಾಡು ವಿಧಿಸಿರುತ್ತಾರೆ. ಆದರೆ ಇದು ಟಿ.ವಿ ಮೊಬೈಲ್, ಫೇಸ್ ಬುಕ್, ವಾಟ್ಸಪ್ ಯುಗ ಇದರಲ್ಲಿ ತಲ್ಲೀನರಾಗಿ ಯಾರೂ ಬೇಗ ಮಲಗುವುದೇ ಇಲ್ಲ. ಹೊತ್ತಾದ ನಂತರ ಮಲಗಿ ಸೂರ್ಯ ಹುಟ್ಟಿದ ನಂತರ ಏಳುವ ಅಭ್ಯಾಸವಾಗಿ ಬಿಟ್ಟಿದೆ.

RELATED ARTICLES  ಬೇಲಿಯಂತೆ ಕಟ್ಟು ಪಾಡಿನ ಜೀವನ: ಭಾಗ-1

ಒಂದು ಪ್ರದೇಶದಲ್ಲಿ ವಾಸಿಸುವ ಜನರಿಗೆ ಅವರುಗಳೇ ಆದ ಒಂದು ರೀತಿಯ ಕಟ್ಟುಪಾಡನ್ನು ಮಾಡಿಕೊಂಡಿರುತ್ತಾರೆ. ಒಂದು ಪ್ರದೇಶದಲ್ಲಿ ಇದ್ದಾಗ ಒಬ್ಬರಿಗೆ ತೊಂದರೆಯಾಗದಂತೆ ಜೀವನ ನಡೆಸಬೇಕು. ಕಸ ಕಡ್ಡಿಗಳನ್ನು ನಿರ್ದಿಷ್ಠ ಜಾಗದಲ್ಲೇ ಹಾಕಬೇಕು ಹೀಗೆ ಅನೇಕ ಕಟ್ಟುಪಾಡುಗಳನ್ನು ಅನುಸರಿಸುತ್ತಿ ರುತ್ತಾರೆ.
ಹೆಣ್ಣುಮಕ್ಕಳಿಗೆ ಒಂದು ರೀತಿಯ ಕಟ್ಟುಪಾಡು ಇರುತ್ತದೆ. ಹಿಂದೂ ಧರ್ಮದಲ್ಲಿ ಅವರುಗಳ ಆಚಾರ ವಿಚಾರಗಳಿಗೆ ಒಂದು ರೀತಿಯ ಕಟ್ಟುಪಾಡು, ಬಟ್ಟೆಗಳನ್ನು ಉಡುವ ತೊಡುವ ಬಗ್ಗೆ ಕಟ್ಟುಪಾಡನ್ನು ಮಾಡಿರುತ್ತಾರೆ. ಈಗ ಎಲ್ಲವೂ ಫ್ಯಾಷನ್ ಆಗಿದೆ. ಎಲ್ಲರೂ ಅವರವರದೇ ರೀತಿಯಲ್ಲಿ ಉಡುಗೆ ತೊಡುಗೆಗಳನ್ನು ಹಾಕುತ್ತಾರೆ. ಇವೆಲ್ಲವೂ ನಮಗೆ ನಾವೇ ಬೇಲಿ ಹಾಕಿಕೊಂಡಂತೆ ಇರುತ್ತದೆ.

ರಾಜಕೀಯ ಪಕ್ಷಗಳದ್ದೇ ಒಂದು ರೀತಿಯ ಕಟ್ಟುಪಾಡು, ಚುನಾವಣೆ ಪ್ರಕ್ರಿಯೆಗೆ ಒಂದು ರೀತಿಯ ಕಟ್ಟುಪಾಡು ವಿಧಿಸಲಾಗುತ್ತದೆ. ಇದನ್ನು ಉಲ್ಲಂಘಿಸಿದರೆ ಚುನಾವಣೆಯಲ್ಲಿ ಆಯ್ಕೆಯಾಗಿರುವುದನ್ನು ರದ್ದು ಗೊಳಿಸಬಹುದಾಗಿರುತ್ತದೆ.

ಇನ್ನು ಬಸ್ಸು, ರೈಲು, ಏರೋಪ್ಲೇನ್‍ಗಳಲ್ಲಿ ಸಂಚರಿಸುವಾಗ ಒಂದು ರೀತಿಯ ಕಟ್ಟುಪಾಡು ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲಿರಿಸಿರುವ ಸೀಟಿನಲ್ಲಿ ಕುಳಿತುಕೊಳ್ಳಬಾರದು, ಟಿಕೆಟ್ ಪಡೆಯಲೇ ಬೇಕು ಹೀಗೆ ಹಲವಾರು ನಿಯಮಗಳು ಇದನ್ನು ಉಲ್ಲಂಘಿಸಿದರೆ ಅದಕ್ಕೆ ತಕ್ಕಂತೆ ದಂಡ ವಿಧಿಸಲಾಗುತ್ತದೆ.
ಇದೇರೀತಿ ಮನೆಗಳಲ್ಲಿ ಹಬ್ಬ, ಮದುವೆ ಇತರೆ ಸಮಾರಂಭಗಳಲ್ಲಿ ಅವರದೇ ಆದ ನಿಯಮಗಳು ಇರುತ್ತದೆ. ಇದನ್ನು ಮೀರಿದರೆ ವ್ಯವಹಾರಿಕವಾಗಿ ಏನೂ ಆಗುವುದಿಲ್ಲ ಆದರೆ ಮಾನಸಿಕವಾಗಿ ಎಲ್ಲರಿಗೂ ಬೇಸರವಾಗುತ್ತದೆ.

ಹೀಗೆ ಮನುಷ್ಯನು ಕಟ್ಟುಪಾಡುಗಳೆಂಬ ಬೇಲಿಯನ್ನು ತನ್ನ ಸುತ್ತಲೂ ತಾನೇ ಕಟ್ಟಿಕೊಂಡು ಶಿಸ್ತುಬದ್ದ ಜೀವನವನ್ನು ನಡೆಸುತ್ತಾ ಇದ್ದಾನೆ.
ಇದೇರೀತಿ ದೇವರ ಸಾನಿಧ್ಯ ಪಡೆಯಲು ಅನೇಕ ರೀತಿಯ ಕಟ್ಟುಪಾಡು ಇರುತ್ತದೆ. ನಿಶ್ಚಲ ಭಕ್ತಿ, ಎಲ್ಲ ಪ್ರಾಣಿ ಮನುಷ್ಯರಲ್ಲಿ ಪ್ರೀತಿ ಹೊಂದಿರುವುದು, ಎಲ್ಲರನ್ನೂ ಸಮನಾಗಿ ಕಾಣುವುದು. ಬಡವರ ದೀನ ದಲಿತರ ಸೇವೆಯನ್ನು ಮಾಡುವುದು ದೇವರಿಗೆ ಪ್ರಿಯವಾದ ಸೇವೆ.

ಬಡವರಿಗೆ ಮಾಡುವ ಸೇವೆಯು ನೇರವಾಗಿ ದೇವರಿಗೆ ಮಾಡುವ ಸೇವೆಯಂತೆ ಅದನ್ನು ದೇವರು ನೇರವಾಗಿ ಸ್ವೀಕರಿಸುತ್ತಾನೆ.

ಎಷ್ಟೇ ದೊಡ್ಡ ವ್ಯಕ್ತಿಯಾದರೂ ಕಟ್ಟು ಪಾಡನ್ನು ಮೀರುವಂತಿಲ್ಲ. ಇದನ್ನು ಅನುಸರಿಸಿ ಶಿಸ್ತಿನಿಂದ ನಡೆದರೆ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗುತ್ತಾರೆ.