ಅಧಿಕಾರ ಬಂದರೆ ಅಲ್ಪನಿಗೂ ಕೊಡೆಹಿಡಿಯಬೇಕು ಎನ್ನುವ ಗಾದೆ ನಮಗೆ ಗೊತ್ತು. ಅಧಿಕಾರ ಎನ್ನುವುದು ತಾನು ಎತ್ತರದಲ್ಲಿ ಇದ್ದೇನೆ ಎನ್ನುವ ಭ್ರಮೆಯನ್ನು ಹುಟ್ಟಿಸುತ್ತದೆ. ಆ ಭ್ರಮೆಯಲ್ಲಿ ತನ್ನ ಕೆಳಗಿನವರ ಬಳಿ ಅಲ್ಲದೆ ಜನಸಾಮಾನ್ಯರ ಮೇಲು ಅಧಿಕಾರವನ್ನು ಚಲಾಯಿಸಲು ಪ್ರೇರಿಪಿಸುತ್ತದೆ. ಹಾಗೆ ತನ್ನ ಅಧಿಕಾರದಿಂದ ತನಗೆ ಸಂಬಂಧಿಸಿದ್ದೋ ಇಲ್ಲವೋ ಆದರೆ ಅದು ತನ್ನ ಅಧಿಕಾರ ಈ ರೀತಿಯದ್ದು ಎಂದು ತೋರಿಸಲು ಮುಂದಾಗುತ್ತಾರೆ. ಒಂದು ಶಾಲೆಯ ಸಹಾಯಕ ಸಿಬ್ಬಂದಿ ಮಕ್ಕಳೆದುರು ತಾನು ದೊಡ್ಡವನು ಎಂದು ಅಧಿಕಾರ ಚಲಾಯಿಸಿದರೆ, ಹೆಡ್ಮಾಸ್ಟರು ಸಹಶಿಕ್ಷಕರಲ್ಲಿ ಅದೇ ವರ್ತನೆ ನಡೆಸುವುದು ಕಾಣುತ್ತೇವೆ.
ಯಾವುದೇ ಕ್ಷೇತ್ರದಲ್ಲಿಯೇ ನೋಡಿದರೂ ಒಬ್ಬರ ಮೇಲೆ ಮತ್ತೊಬ್ಬರು ಅಧಿಕಾರ ಚಲಾಯಿಸುವುದು ಕಾಣಿಸುತ್ತದೆ. ಅದರಲ್ಲೂ ಉನ್ನತ ಹುದ್ದೆಯಲ್ಲಿ ಇದ್ದರಂತು ನಮ್ಮ ಮಾತು ನಡೆಸುವುದೇ ನಿಮ್ಮ ಕರ್ತವ್ಯ ಎನ್ನುವ ರೀತಿಯಲ್ಲಿ ನಡೆಯುತ್ತಿರುತ್ತದೆ. ಇದಕ್ಕಿಂತ ರಾಜಕೀಯ ಮಂದಿ ಮತ್ತಷ್ಟು ಬೇರೆಯಾಗಿಯೇ ಕಾಣಿಸಿಕೊಳ್ಳುತ್ತಾರೆ. ಅವರಿಗೆ ಏನೇ ಹೇಳಿದರೂ, ಅಥವಾ ಅವ್ಯವಹಾರ ಮಾಡಿದರೂ ಹಣದ ಬೆಂಬಲದಿಂದ ಕಾನೂನನ್ನು ಕೊಳ್ಳಬಹುದು ಎನ್ನುವುದು ಭಾರತದಲ್ಲಿ ಸಾಭಿತಾಗಿಬಿಟ್ಟಿದೆ ಎನ್ನುವಂತೆ ವರ್ತಿಸುತ್ತಿರುವುದು ಕಾಣುತ್ತೇವೆ.
ಒಬ್ಬ ಅರಣ್ಯ ಅಧಿಕಾರಿ ನಿಷ್ಠಾವಂತನಾಗಿದ್ದು ತನ್ನ ಪ್ರದೇಶದಲ್ಲಿ ಕಾನೂನಿನ ಪ್ರಕಾರವಾಗಿ ಅರಣ್ಯವನ್ನು ಸಂರಕ್ಷಿಸುವ ಜವಾಬ್ದಾರಿಯಂತೆ ನಡೆದುಕೊಳ್ಳುತ್ತಿರುತ್ತಾನೆ. ಅವನಿಗೆ ಒಂದು ಕರೆ ಬರುತ್ತದೆ. “ನನಗೆ ಒಂದು ನಾಲ್ಕು ತೇಗದ ಮರದ ದಿಮ್ಮಿ ಬೇಕು. ಒಂದು ವಾರದಲ್ಲಿ ಬ್ಲಾಕ್ ರೂಪದಲ್ಲಿ ತನ್ನವರು ಹೇಳಿದ ಸ್ಥಳಕ್ಕೆ ತಲಿಪಿಸಿ” ಎಂದು. ಪೋನಾಯಿಸಿದ ವ್ಯಕ್ತಿ ರಾಜಕೀಯದಲ್ಲಿ ಪ್ರಭಾವಿ ಹೊಂದಿದವನು. ಆ ಕ್ಷೇತ್ರಕ್ಕೆ ಏನೇ ಸರಕಾರದ ವತಿಯಿಂದ ಕೆಲಸ ಆಗಬೇಕೆಂದರೂ ರಾಜಕಾರಣಿಯನ್ನು ನೋಡಲೇ ಬೇಕು. ಹಾಗಿರುವಾಗ ತೇಗದ ನಾಲ್ಕು ದಿಮ್ಮಿಯನ್ನು ಕಳಿಸಬೇಕು. ಇದು ಅವನ ಅಧಿಕಾರದ ದ್ವನಿ. ಆದರೆ ಕಾನೂನಿನ ಪ್ರಕಾರ ಇದು ತಪ್ಪು. ಆ ತಪ್ಪು ಮಾಡಬಾರದು ಎನ್ನುವುದು ಅಲ್ಲಿಯ ವಲಯ ಅರಣ್ಯಧಿಕಾರಯ ಮನಸ್ಸು ಹೇಳುತ್ತದೆ. ಅದರಂತೆ ಉತ್ತರ ಕೊಡುತ್ತಾನೆ. ಆದರೆ ಆ ರಾಜಕೀಯ ವ್ಯಕ್ತಿ ಈ ಅರಣ್ಯ ಅಧಿಕಾರಿ ತಾನು ಹೇಳಿದ ಕೆಲಸ ಮಾಡಲಿಲ್ಲ ಎಂದು ಬೇರೆ ರೀತಿಯಲ್ಲಿ ತೊಂದರೆ ಕೊಡುವುದು. ಟ್ರಾನ್ಸಫರ್ ವಿಚಾರ ಬಂದಾಗ ಅಧಿಕ ಹಣ ಕೇಳುವುದು. ಪಕ್ಷದ ಕಾರ್ಯಕ್ರಮವಾದಾಗ ದುಡ್ಡು ಕೇಳುವುದು ಈ ರೀತಿಯದಾಗಿ ನಡೆಯುತ್ತದೆ. ಈ ಅರಣ್ಯ ಅಧಿಕಾರಿಗೆ ಬೇಸರ ಶುರುವಾಗುತ್ತದೆ. ಆಗ ತಾನು ನಾಲ್ಕು ಮರದ ದಿಮ್ಮಿ ಕೊಟ್ಟರೆ ಕಾಡೇನು ಬರಿದಾಗುತ್ತದೆಯೋ ಎನ್ನುವ ಯೋಚನೆ ಬಂದಿದ್ದೆ ತಡ ಆ ರಾಜಕೀಯ ವ್ಯಕ್ತಿಗಾಗಿ ಕಾಡಿನ ಮರ ನೆಲಕ್ಕುರುಳುತ್ತವೆ.
ಹೀಗೆ ಅಧಿಕಾರ ಎನ್ನುವುದು ತನಗಿಂತ ಕೆಳಗಿನವರಿಗೆ ಗತ್ತಿನಲ್ಲಿ ಹೇಳಿ ತಮಗೆ ಬೇಕಾದ ರೀತಿಯ ಕೆಲಸವನ್ನು ಪೂರೈಸಿಕೊಳ್ಳುತ್ತಾರೆ. ಇದು ಎಲ್ಲಿಯತನಕವಿದೆ ಎಂದರೆ ರಾಜ್ಯ ರಾಷ್ಟ್ರಮಟ್ಟದವರೆಗೂ ಹಬ್ಬಿದೆ. ಈ ರೀತಿಯಿಂದ ಭ್ರಷ್ಟಾಚಾರ ಹೆಚ್ಚುತ್ತಿದೆಯೆ ಹೊರತು ಕಡಿಮೆಯಾಗುತ್ತಿಲ್ಲ. ಅದರಲ್ಲೂ ಜನ ಸಾಮಾನ್ಯರ ಬಾಯಲ್ಲಿ ಯಾರನ್ನೇ ಕೇಳಿ ಈ ರಾಜಕೀಯ ಮಂದಿಯಿಂದಲೇ ಭ್ರಷ್ಟಾಚಾರ ಹೆಚ್ಚಾಗಿದೆ ಎನ್ನುವ ಮಾತು ಬರುತ್ತದೆ. ಕಣ್ಣಿಗೆ ರಾಚುವಂತೆ ಹಗರಣಗಳ ಸರಮಾಲೆ ಕೂಡ ದಿನ ಬೆಳಗಾದರೆ ಕಾಣಿಸುತ್ತಿದೆ.
ಒಂದು ಚುನಾವಣೆ ಬಂದರೆ ಒಂದು ಪಕ್ಷ ಲಕ್ಷಕೋಟಿಕೋಟಿ ದುಡ್ಡನ್ನು ಚೆಲ್ಲುತ್ತದೆ. ಪಕ್ಷ ಗೆಲ್ಲಿಸಲು ಒಂದು ಓಟಿಗಾಗಿ ದುಬಾರಿ ಉಡುಗೊರೆ, ಹಣ ಕೊಡುತ್ತದೆ ಎಂದರೆ ಆ ಹಣ ಎಲ್ಲಿಯದು? ನಸಾಮಾನ್ಯರಿಂದ ಲೂಟಿ ಹೊಡೆದಿರುವುದು, ಕಂಪನಿಗಳಿಂದ ಅಧಿಕಾರದಿಂತ ಕಿತ್ತುಕೊಂಡಿರುವುದು, ಸರಕಾರಿ ನೌಕರಿದಾರರು ಎನ್ನುವ ಕಾರಣಕ್ಕೆ ಅವರಿಂದ ಕೂಡ ಇಂತಿಷ್ಟು ಹಣ ನೀಡಬೇಕು ಎಂದು ಬೇಡಿಕೆ ಇಡುತ್ತಾರೆ.
ಇದೆಲ್ಲವೂ ನಡೆವುದು ಕೇವಲ ಅಧಿಕಾರ ಇರುವಾಗ ಮಾತ್ರ ಆ ಕೂರ್ಚಿಯಿಂದ ಕೆಳಗಿಳಿದರೆ ಅವರ ಹೆಸರು ಜನಸಾಮಾನ್ಯರಿಗೆ ನೆನಪಿರುವುದು ಕೂಡ ಕಷ್ಟವಾದೀತು. ಅಧಿಕಾರ ಇದೆ ಎಂದು ಸೊಕ್ಕು ತೋರಿಸಿ ಭ್ರಷ್ಟತೆಯ ಕೆಲಸಕ್ಕೆ ಕೈ ಹಾಕುವ ಬದಲು ಅಧಿಕಾರದ ಜೊತೆ ಒಂದಿಷ್ಟು ನಯ ವಿನಯ ಕೂಡ ರೂಢಿಸಿಕೊಂಡರೆ ಜನ ವಿಶ್ವಾಸದ ಹೊಂದುವುದರ ಜೊತೆ ಗೌರವವನ್ನು ಸಹ ನೀಡುತ್ತಾರೆ.