ಒಂದು ಅಂದಾಜಿನಂತೆ ಹಿಂದಿನ ಕಾಲದಲ್ಲಿ ಮನುಷ್ಯನ ಆಯಸ್ಸು, ನೂರು ವರ್ಷ ಇತ್ತು. ಅದು ಕ್ರಮೇಣ ಎಂಬತ್ತು ವರ್ಷವಾಗಿ, ಈಗ ಸುಮಾರು ಅರವತ್ತು ವರ್ಷ ಎಂದು ಅಂದಾಜಿಸಿರುತ್ತಾರೆ.
ಇದಕ್ಕೆ ಕಾರಣ ಏನು ಎಂದು ನೋಡಿದರೆ, ಈಗಿನ ಕಾಲದಲ್ಲಿನ ಆಹಾರ ಪದ್ದತಿ, ಒತ್ತಡದ ಯಾಂತ್ರಿಕ ಜೀವನ, ಕಂಡು ಕೇಳರಿಯದ ಖಾಯಿಲೆಗಳು, ಅನಿರೀಕ್ಷಿತ ಸಾವುಗಳು ಹೀಗೆ ಹಲವಾರು ಕಾರಣಗಳಿಂದ ಮನುಷ್ಯನ ಆಯಸ್ಸು ಇಷ್ಟೇ ಎಂದು ಹೇಳಲು ಬರುವುದಿಲ್ಲ, ಮನುಷ್ಯ ಬರುಬರುತ್ತಾ ಅಲ್ಪಾಯುಷ್ಯ ಜೀವಿಯಾಗುತ್ತಾ ಬಂದಿದ್ದಾನೆ ಎಂದರೆ ಅತಿಶಯೋಕ್ತಿಯಲ್ಲ.
ಮೊದಲಿಗೆ ಆಹಾರ ಪದ್ದತಿಗೆ ಬರುವುದಾದರೆ, ಹಿಂದಿನ ಕಾಲದಲ್ಲಿ ಹಿರಿಯರು ಮಾಡುತ್ತಿದ್ದ ವಿಧ ವಿಧವಾದ ಅಡುಗೆಗಳಲ್ಲಿ ಬೇಳೆ ಕಾಳುಗಳು, ಸೊಪ್ಪು, ವಿಟಮಿನ್ ಭರಿತ ಆಹಾರಗಳಿರುತ್ತಿದ್ದವು. ರಾಗಿ ರೊಟ್ಟಿ, ಮುದ್ದೆ, ಇದಕ್ಕೆ ತಕ್ಕಂತೆ ಹಸುವಿನ ತುಪ್ಪ, ವಿಧ ವಿಧವಾದ ತರಕಾರಿಗಳ ಪಲ್ಯಗಳು ಹೀಗೆ ಅನೇಕ ರೀತಿಯ ಆಹಾರವನ್ನು ತಯಾರಿಸಿ ತಿನ್ನುತ್ತಿದ್ದರು, ಅದರಂತೆ ಕೆಲಸವನ್ನು ಸಹ ಮಾಡುತ್ತಿದ್ದರು. ಇದಕ್ಕೆ ಒಂದು ಗಾದೆ ಇದೆ” ಹಿಟ್ಟಂ ತಿಂದಂ ಬೆಟ್ಟಂ ಕಿತ್ತಿಟ್ಟಂ” ಎಂದು ಅಂದರೆ ಮುದ್ದೆ ತಿಂದರೆ ಬೆಟ್ಟವನ್ನೂ ಸಹ ಕಿತ್ತಿಡಬಹುದಾದ ಶಕ್ತಿ ಬರುತ್ತದೆ ಎಂದು ನಮ್ಮ ಹಿರಿಯರು ಹೇಳುತ್ತಿದ್ದರು. ಅವರಿಗೆ ಅಷ್ಟಾಗಿ ಯಾವ ಖಾಯಿಲೆಯೂ ಬರುತ್ತಿರಲಿಲ್ಲ. ಬಂದರೂ ಇವರ ದೇಹದಲ್ಲಿದ್ದ ರೋಗ ನಿರೋಧಕ ಶಕ್ತಿ ಇವರನ್ನು ರಕ್ಷಿಸುತ್ತಿತ್ತು. ಇದರಿಂದ ಹಿಂದಿನವರು ಹೆಚ್ಚಿನ ಕಾಲ ಬದುಕಲು ನೆರವಾಗುತ್ತಿತ್ತು. ಆದರೆ ಈಗಿನ ಕಾಲದಲ್ಲಿ ಆಹಾರ ಪದ್ದತಿಯೇ ಬೇರೆಯಾಗಿದೆ ಅದರಲ್ಲೂ ಆಹಾರ ತಿನ್ನುವುದೂ ಸಹ ಸಾಕಷ್ಟು ಬದಲಾಗಿದೆ. ಈಗಿನ ಕಾಲದಲ್ಲಿ ಕೆಲವು ಸತ್ವವಿಲ್ಲದ ಆಹಾರದಲ್ಲಿ ಹೊಟ್ಟೆ ಮಾತ್ರ ತುಂಬುತ್ತದೆ. ನಮ್ಮ ಶರೀರಕ್ಕೆ ಬೇಕಾದ ವಿಟಮಿನ್‍ಗಳು ಸಿಗುವುದೇ ಇಲ್ಲ. ಎಲ್ಲವೂ ಆಧುನಿಕ ವೈಜ್ಞಾನಿಕ ಪದ್ದತಿಯಿಂದ ತಯಾರಾದ ಪದಾರ್ಥಗಳು, ತರಕಾರಿ, ಹಣ್ಣುಗಳು, ಬೆಳೆ ಜಾಸ್ತಿ ಬರಲಿ ಎಂದು ಆಧುನಿಕ ವೈಜ್ಞಾನಿಕ ಪದ್ದತಿಯಂತೆ ವ್ಯವಸಾಯ ಮಾಡುವುದು ಅನಿವಾರ್ಯವಾಗಿದೆ. ಏಕೆಂದರೆ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಬೆಳೆಯನ್ನು ಬೆಳೆಯಬೇಕಾಗಿರುವುದರಿಂದ, ಆಧುನಿಕ ವ್ಯವಸಾಯ ಒಂದು ವರವೆಂದೇ ಹೇಳಬಹುದು. ಆದರೆ ಒಂದು ಕೊಟ್ಟು ಇನ್ನೊಂದನ್ನು ಕಿತ್ತುಕೊಳ್ಳುವಂತೆ, ಆಹಾರವೇನೋ ಹೆಚ್ಚಿಗೆ ಬೆಳೆಯಬಹುದು ಆದರೆ ಅದರಲ್ಲಿ ಸತ್ವಾಂಶದ ಕೊರತೆ ಇರುವುದು ಎದ್ದು ಕಾಣುತ್ತದೆ.
ಆಹಾರದಲ್ಲೇ ಸತ್ವವಿಲ್ಲವೆಂಬುದು ಒಂದಾದರೆ ಅದನ್ನು ತಿನ್ನುವುದೇ ಬೇರೆ ರೀತಿಯದು. ಬೇಗ ಎದ್ದು ಕೆಲಸಕ್ಕೆ ಹೋಗುವವರು, ಮನೆಯಲ್ಲಿ ಬೆಳಗ್ಗೆ ಎಷ್ಟು ತಾನೇ ತಿನ್ನಲು ಸಾಧ್ಯ? ಆಫೀಸಿಗೆ ವೇಳೆ ಆಯಿತೆಂದು ಕೆಲವರು, ಬಸ್ಸು ಸಿಗುತ್ತದೋ ಇಲ್ಲವೋ ಎಂದು ಕೆಲವರು, ಸ್ವಂತ ವಾಹನ ಇದ್ದಲ್ಲಿ, ಹೋಗಬಹುದಾದರೂ ಟ್ರಾಫಿಕ್ ಕಿರಿ ಕಿರಿಯಿಂದ ತಪ್ಪಿಸಿಕೊಳ್ಳಲು ಬೇಗನೇ ಹೊರಡಲೇ ಬೇಕು, ಮಾಡಿರುವ ಅಡುಗೆಯಲ್ಲಿ ಅಲ್ಪ ಸ್ವಲ್ಪ ತಿಂದು ಅದನ್ನೇ ಮದ್ಯಾಹ್ನದ ಊಟಕ್ಕೆಂದು ಡಬ್ಬಿಗೆ ಸ್ವಲ್ಪ ಹಾಕಿಕೊಂಡು ಹೋಗಬೇಕಾದ ಪರಿಸ್ಥಿತಿ, ಅಷ್ಟು ಬೇಗನೆ ಎಲ್ಲಾ ಅಡುಗೆಯನ್ನು ಮಾಡಲು ಸಾಧ್ಯವೇ? ಏನು ಆಗಿರುವುದೋ ಅದನ್ನೇ ತಿಂದು ಅದನ್ನೇ ತೆಗೆದುಕೊಂಡು ಹೋಗುವುದು ರೂಢಿಯಾಗಿದೆ. ಇನ್ನು ರಜೆ ಬಂದರೆ, ಇನ್ನೊಂದು ರೀತಿಯಂತೆ ನಡೆವಳಿಕೆ ಇದೆ. ದಿನವೂ ಮನೆಯಲ್ಲಿ ಅಡುಗೆ ಮಾಡಿ, ಸಾಕಾಗಿ ಹೋಗಿದೆ, ವಾರಕ್ಕೊಮ್ಮೆಯಾದರೂ ಮನೆಯಲ್ಲಿ ಅಡುಗೆ ಮಾಡದೆ ಹೋಟೆಲ್ಲಿಗೆ ಹೋಗೋಣ ಎಂದು ತೀರ್ಮಾನಿಸುವವರೂ ಎಷ್ಟೋ ಮಂದಿ ಇದ್ದಾರೆ. ಇದರಿಂದ ದೇಹಕ್ಕೆ ಬೇಕಾಗುವಷ್ಟು ವಿಟಮಿನ್‍ಗಳು, ಸಿಗುವುದೇ ಇಲ್ಲ. ಇದರಿಂದ ರೋಗ ನಿರೋಧಕ ಶಕ್ತಿ ಬರುವುದಾದರೂ ಹೇಗೆ? ಇದರಿಂದ ಅನೇಕ ರೀತಿಯ ಖಾಯಿಲೆಗಳು ಬಂದು ಆಯಸ್ಸು ಮುಗಿಯುವ ಮುನ್ನ ಜೀವನ ಯಾತ್ರೆ ಮುಗಿಸುವವರು ಎಷ್ಟೋ ಮಂದಿ ಇದ್ದಾರೆ. ಇದರ ಜೊತೆಗೆ ಈಗಿನ ಕಾಲದಲ್ಲಿ ಮಕ್ಕಳು ಜಂಕ್ ಆಹಾರ ತಿಂದು ಸರಿಯಾಗಿ ಊಟ ಮಾಡುವುದೇ ಇಲ್ಲ. ಇದರಿಂದ ರೋಗ ನಿರೋಧಕ ಶಕ್ತಿ ಎಲ್ಲಿಂದ ಬರಬೇಕು? ಇದರ ಜೊತೆಗೆ ಕೆಲವರು ಮದ್ಯಪಾನ ತಂಬಾಕು ಸೇವನೆ ಇತ್ಯಾದಿಗಳ ದುಷ್ಚಟದಿಂದ ನೋಡುವುದಕ್ಕೆ ಮನುಷ್ಯನಾಗಿರುತ್ತಾನಷ್ಟೇ ಆದರೆ ಆರೋಗ್ಯವಂತನಾದ ಮನುಷ್ಯನು ಆಗಿರುವುದಿಲ್ಲ. ಮರದ ಒಳಗೆಲ್ಲಾ ಗೆದ್ದಲು ಹಿಡಿದು, ಮೇಲ್ನೋಟಕ್ಕೆ ಮರವು ಮಾತ್ರ ಬಹಳ ಚೆನ್ನಾಗಿ ಕಾಣುತ್ತಿರುತ್ತದೆ. ಆದರೆ ಗೆದ್ದಲು ಹಿಡಿದು ಯಾರಿಗೂ ತಿಳಿಯವುದಿಲ್ಲ. ಆ ಮರವು ಯಾವಾಗ ಬೇಕಾದರೂ ಬೀಳಬಹುದು. ನೋಡಿದವರು ಮರ ಎಷ್ಟು ಚೆನ್ನಾಗಿತ್ತು ಸ್ವಲ್ಪ ಜೋರಾಗಿ ಗಾಳಿ ಬೀಸಿದ್ದಕ್ಕೆ ಬಿದ್ದು ಹೋಯಿತು ಎನ್ನುತ್ತಾರೆ. ಮನುಷ್ಯನ ದೇಹದ ಸ್ಥಿತಿಯೂ ಇದೇ ರೀತಿ ಆಗಿದೆ. ಮನುಷ್ಯ ಹೊರಗೆ ನೋಡಲು ಬಹಳ ಚೆನ್ನಾಗಿರುತ್ತಾನೆ ಆದರೆ ಇವನ ದೇಹದೊಳಗೆ ಇರುವ ಖಾಯಿಲೆಗಳು ಗೊತ್ತಾಗುವುದೇ ಇಲ್ಲ. ಇದರಿಂದ ಒಂದು ಸಣ್ಣ ಖಾಯಿಲೆ ಬಂದರೂ ಮನುಷ್ಯ ಯಾವಾಗ ಬೇಕಾದರೂ ಸಾಯಬಹುದು. ನೋಡಿದವರಿಗೆ ಎಷ್ಟು ಚೆನ್ನಾಗಿದ್ದ ಒಂದು ಸಣ್ಣ ಜ್ವರ ಬಂದಿದ್ದಕ್ಕೆ ಸತ್ತು ಹೋದನಲ್ಲಾ ಎಂದು ಹೇಳುವ ಪ್ರಸಂಗಗಳು ಉಂಟು. ಒಳಗಿನ ಖಾಯಿಲೆ ಯಾರಿಗೂ ತಿಳಿಯವುದಿಲ್ಲ. ಗೆದ್ದಿಲು ಮರದ ಒಳಗೆ ತಿನ್ನುವ ರೀತಿ ಮನುಷ್ಯನ ದೇಹದ ಒಳಗೆ ಖಾಯಿಲೆ ಬಂದು ಯಾವಾಗ ಬೇಕಾದರೂ ಸಾಯಬಹುದು. ಕಟ್ಟು ನಿಟ್ಟಿನ ಆಹಾರ ಪದ್ದತಿ ಅನುಸರಿಸಿದರೆ ಹಾಗೂ ದುಷ್ಚಟಗಳಿಂದ ದೂರ ಇದ್ದರೆ ಮಾತ್ರ ಇದಕ್ಕೆಲ್ಲಾ ಪರಿಹಾರ ಸಿಗಬಹುದು.
ಒತ್ತಡದ ಯಾಂತ್ರಿಕ ಜೀವನದಿಂದ ಮನುಷ್ಯನು ಅರ್ಧ ಆಯಸ್ಸಿಗೆ ಹೊರಟು ಹೋಗುತ್ತಾನೆ. ಯಾವಾಗಲೂ ಟೆನ್ಷನ್ ಆದರೆ, ದೇಹಕ್ಕೆ ಆರಾಮ ಸಿಗುವುದಾದರೂ ಎಲ್ಲಿ? ಬೆಳಿಗ್ಗೆ ಬೇಗ ಹೋಗಬೇಕೆಂಬ ಆತುರ, ಕಛೇರಿಯಲ್ಲಿ ಕೆಲಸ ಆಗಲಿಲ್ಲವೆಂಬ ದುಗುಡ, ಕೆಲವು ಕಡೆ ನೀಡಿರುವ ನಿರ್ದಿಷ್ಟ ಕೆಲಸವನ್ನು ಪೂರ್ಣಗೊಳಿಸಬೇಕೆಂಬ ಷರತ್ತು, ಇದರಿಂದ ಒತ್ತಡಗಳು ಉಂಟಾಗಿ ಅನೇಕ ಖಾಯಿಲೆಗಳು ಬಂದು ಅರ್ಧ ಆಯಸ್ಸಿಗೆ ಹೋಗಲು ಕಾರಣವಾಗುತ್ತದೆ.
ಕಂಡು ಕೇಳರಿಯದ ಖಾಯಿಲೆಗಳು, ಕೆಲವು ಖಾಯಿಲೆಗಳು ನಮ್ಮ ಆಹಾರ ಪದ್ದತಿಯಿಂದ ಬಂದರೆ, ಇನ್ನೂ ಕೆಲವು ಖಾಯಿಲೆಗಳು ಹೊರಗಿನ ಕೀಟಗಳು ಸೊಳ್ಳೆಗಳಿಂದ ಬರುತ್ತವೆ. ಇಲ್ಲಿವರೆವಿಗೂ ಕಂಡು ಕೇಳರಿಯದ ಭಯಂಕರ ಖಾಯಿಲೆಗಳು, ಡೆಂಗ್ಯೂ, ಹಕ್ಕಿಜ್ವರ, ಹೆಚ್.1 ಎನ್ 1 ಹಂದಿ ಜ್ವರ ಹೀಗೆ ಅನೇಕ ರೀತಿಯ ಖಾಯಿಲೆಗಳಿಗೆ ಮನುಷ್ಯನು ತುತ್ತಾಗುತ್ತಿದಾನೆ. ವೈಜ್ಞಾನಿಕವಾಗಿ ಔಷದಿಗಳನ್ನು ಎಷ್ಟೇ ಕಂಡು ಹಿಡಿದರೂ ಅದಕ್ಕೆ ತಕ್ಕಂತೆ ಮಾನವನಿಗೆ ಸವಾಲಾದಂತೆ ಅನೇಕ ಖಾಯಿಲೆಗಳು ಹೊಸದಾಗಿ ಹುಟ್ಟಿಕೊಂಡಿವೆ. ಇದರಿಂದ ಮನುಷ್ಯ ಕೃಷನಾಗಿ, ಆಯಸ್ಸು ಮುಗಿಯುವ ಮೊದಲೇ ಹೊರಟು ಹೋಗುವ ಅಪಾಯ ಎದುರಾಗುತ್ತಿದೆ.
ನಗರಗಳ ಜೀವನಕ್ಕೆ ಬಂದರೆ, ಅತಿಯಾದ ವಾಹನಗಳು, ವಾಹನಗಳು ಉಗಳುವ ಹೊಗೆಯಿಂದ ಬರುವ ಖಾಯಿಲೆಗಳು, ಇದರಿಂದಲೂ ಮನುಷ್ಯನ ಆಯಸ್ಸು ಕಡಿಮೆಯಾದಂತೆ ಆಗಿದೆ. ಇನ್ನು ವಾಹನಗಳಲ್ಲಿ ಪ್ರಯಾಣ ಮಾಡುವುದು ಒಬ್ಬರು ತನ್ನ ಪಾಡಿಗೆ ಸರಿಯಾಗಿ ಹೋಗುತ್ತಿದ್ದರೂ ಸಹ ಬೇರೆಯವರು ಬಂದು ಅಪಘಾತ ಮಾಡುವುದು. ಇದರಿಂದ ಆರೋಗ್ಯವಾಗಿದ್ದರೂ ಬೇಗನೇ ಮೃತರಾಗುತ್ತಾರೆ. ವಾಹನ ಅಪಘಾತಗಳಿಂದಲೂ ಎಷ್ಟೋ ಜನರ ಜೀವವೇ ಹೋಗಿದೆ. ಹೋಗುತ್ತಲೂ ಇದೆ. ಇದರ ಜೊತೆಗೆ ತಮ್ಮದೇ ಆದ ನಿರ್ಲಕ್ಷತನ ಅತಿವೇಗವಾಗಿ ಹೋಗಬೇಕೆನ್ನುವ ಕೆಟ್ಟ ಗುಣ. ಸ್ವಲ್ಪ ತಾಳ್ಮೆಯಿಂದ ನಿಧಾನವಾಗಿ ಹೋದರೆ ಸುರಕ್ಷಿತವಾಗಿ ಮನೆಯನ್ನು ತಲುಪಬಹುದು. ವಾಹನಗಳಿಂದ ಸ್ವಲ್ಪ ಅಜಾಕರೂಕರಾದರೂ ಅಪಾಯ ಕಟ್ಟಿಟ್ಟ ಬುತ್ತಿ.
ಇದರ ಜೊತೆಗೆ ಜೀವನದಲ್ಲಿ ನಿರಾಸೆಯಾದರೆ, ಪ್ರೇಮ ವೈಫಲ್ಯವಾದರೆ, ಪರೀಕ್ಷೆಗಳಲ್ಲಿ ಅನುತ್ತೀರ್ಣರಾದರೆ, ಅಥವಾ ಜೀವನದಲ್ಲಿ ತಮ್ಮದೇ ಆದ ಸಮಸ್ಯೆ, ಹಣಕಾಸಿನ ಸಮಸ್ಯೆ ಇದರಿಂದ ತಮ್ಮ ಜೀವವನ್ನು ತಾವೇ ತೆಗೆದುಕೊಳ್ಳಲು ಆತ್ಮಹತ್ಯೆಯಂತ ಮಾರ್ಗಕ್ಕೆ ಮೊರೆಹೋಗುವುದು. ಮನುಷ್ಯನ ಜೀವ ಅತ್ಯಮೂಲ್ಯವಾದದ್ದು, ಇದನ್ನು ಹಾಳುಮಾಡಿಕೊಳ್ಳಬಾರದೆಂಬುದನ್ನು ಮರೆತು ಎದುರಿಸಲು ಧೈರ್ಯವಿಲ್ಲದೆ ಅಥವಾ ಬೆಂಬಲಿಗರು ಇಲ್ಲದೆ, ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುವವರು ಉಂಟು. ಇದರ ಜೊತೆಗೆ ದ್ವೇಷಕ್ಕಾಗಿ, ಆಸ್ತಿಗಾಗಿ, ಬೇರೆ ರೀತಿಯ ಸಣ್ಣ ಸಣ್ಣ ಕಾರಣಗಳಿಗೆ ಬೇರೆಯವರ ಜೀವದ ಬೆಲೆಯನ್ನೇ ಅರ್ಥ ಮಾಡಿಕೊಳ್ಳದೆ ಜೀವವನ್ನು ತೆಗೆಯುವುದು.
ಪ್ರಕೃತಿ ವಿಕೋಪಗಳಿಂದಲೂ ಎಷ್ಟೋ ಜನರ ಆಯುಷ್ಯ ಅರ್ಧದಲ್ಲೇ ಮುಗಿಯುತ್ತದೆ. ಚಂಡಮಾರುತ, ಭೂಕಂಪ, ಮಳೆ ಸಿಡಿಲು ಇನ್ನೂ ಹೀಗೆ ಅನೇಕ ಪೃಕೃತಿ ವಿಕೋಪದಿಂದ ಮನುಷ್ಯನ ಜೀವವು ಹೋಗುವ ಸಂಭವ ಉಂಟು. ಪ್ರಕೃತಿ ವಿಕೋಪ ಯಾವಾಗ ಬೇಕಾದರೂ ಸಂಭವಿಸಬಹುದು. ಇದಕ್ಕೆ ಕಾಲ ವೇಳೆ ಯಾವುದೂ ಇಲ್ಲ.
ಇದಕ್ಕೆಲ್ಲಾ ಹವಾಮಾನ ವೈಪರೀತ್ಯ. ಮನುಷ್ಯನ ದುಡುಕು ನಿರ್ಧಾರ, ಜೀವನ ನಡವಳಿಕೆ ಆಹಾರ ಸೇವನೆ, ದುಷ್ಚಟಗಳು ಇತ್ಯಾದಿಗಳೇ ಕಾರಣವಾಗಿದೆ. ತನ್ನ ಸ್ವಾರ್ಥಕ್ಕಾಗಿ ಕಾಡುಗಳಲ್ಲಿರುವ ಮರಗಳನ್ನು ಕಡಿದು, ಹಸಿರು ಕಾಡನ್ನು ಕಾಂಕ್ರೀಟ್ ಕಾಡು ಮಾಡಿದರೆ ಹವಾಮಾನ ಅಸಮತೋಲನ ಉಂಟಾಗಿ ಪ್ರಕೃತಿ ವಿಕೋಪಕ್ಕೆ ತಿರುಗಿ ಮನುಷ್ಯನ ಜೀವವನ್ನೇ ಬಲಿ ಪಡೆಯುತ್ತಿರುವ ಸನ್ನಿವೇಶಗಳು ಉಂಟಾಗುತ್ತಿದೆ.