Satwadhara News

Category: Food

  • ರುಚಿಕರವಾದ, ಗರಿಗರಿ ರವೆ ಪಕೋಡ..!!

    ರುಚಿಕರವಾದ, ಗರಿಗರಿ ರವೆ ಪಕೋಡ..!!

     ಕಡಲೆಹಿಟ್ಟನ್ನು ಬಳಸದೆ ಬಾಂಬೆ ರವೆಯನ್ನೋ ಅಥವಾ ಉಪ್ಪಿಟ್ಟಿಗೆ ಉಪಯೋಗಿಸುವ ಬಿಳಿ ಬಣ್ಣದ ರವೆಯನ್ನೋ ಬಳಸಿ ಕೆಲಬಗೆಯ ತರಕಾರಿಗಳನ್ನು ಸೇರಿಸಿ ಮಾಡುವ ಗರಿಗರಿಯಾದ ಪಕೋಡವಿದು. ಹಬ್ಬ-ಹರಿದಿನಗಳಂದು ಮದ್ಯಾಹ್ನದ ಊಟಕ್ಕೋ ಅಥವಾ ಸಂಜೆ ಕಾಫಿ/ಟೀ ಜೊತೆಗೋ ಸವಿಯಲು ಹೇಳಿ ಮಾಡಿಸಿದಂತಹಾ ತಿನಿಸಿದು. ಬನ್ನಿ ನೋಡೋಣ ಹೇಗೆ ಮಾಡುವುದೆಂದು.

    ಬೇಕಾಗುವ ಪದಾರ್ಥಗಳು:

    ಬಾಂಬೆ ರವೆ ಅಥವಾ ಉಪ್ಪಿಟ್ಟಿನ ಬಿಳಿ ರವೆ- 1 ಲೋಟ (ಮೀಡಿಯಂ ಅಳತೆ ಲೋಟ)

    ಮೊಸರು- ಮುಕ್ಕಾಲು ಲೋಟ

    ಸಣ್ಣಗೆ ಹೆಚ್ಚಿದ ದೊಡ್ಡ ಮೆಣಸಿನ ಕಾಯಿ(ಕ್ಯಾಪ್ಸಿಕಂ)- ಅರ್ಧ ಲೋಟ

    ಸಣ್ಣಗೆ ಹೆಚ್ಚಿದ ಎಲೆಕೋಸು/ಸಿಹಿ ಜೋಳದ ಕಾಳು- ಅರ್ಧ ಲೋಟ

    ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪು- 5-6 ಚಮಚ

    ಹಸಿಮೆಣಸಿನ ಕಾಯಿ- 2

    ಹಸಿಶುಂಠಿ- ಅರ್ಧ ಇಂಚು

    ಅಡಿಗೆ ಸೋಡ- ಕಾಲು ಚಮಚಕ್ಕೂ ಸ್ವಲ್ಪ ಕಡಿಮೆ

    ಎಣ್ಣೆ- ಪಕೋಡ ಕರಿಯಲು

    ಉಪ್ಪು- ರುಚಿಗೆ ತಕ್ಕಷ್ಟು

    ಮಾಡುವ ವಿಧಾನ:

    ಮೊದಲು ಒಂದು ಪಾತ್ರೆಗೆ ರವೆಯನ್ನು ಹಾಕಿ (ರವೆಯನ್ನು ಹುರಿಯುವ ಅಗತ್ಯವಿಲ್ಲ). ಅದಕ್ಕೆ ಮುಕ್ಕಾಲು ಲೋಟ ಮೊಸರು ಮತ್ತೆ ಕಾಲು ಲೋಟದಷ್ಟು ನೀರನ್ನು ಹಾಕಿ ಕಲಸಿಕೊಳ್ಳಿ. (ಬಾಂಬೆ ರವೆ(ಚಿರೋಟಿ ರವೆ) ಅಥವಾ ಬೆಂಗಳೂರು ರವೆ (ಉಪ್ಪಿಟ್ಟಿನ ಬಿಳಿ ರವೆ) ಯಾವುದೇ ಆದರೂ ರುಚಿಯಲ್ಲಿ ವ್ಯತ್ಯಾಸವಾಗದು.)

    ಈಗ ಅದಕ್ಕೆ ಸಣ್ಣಗೆ ಹೆಚ್ಚಿಟ್ಟ ದೊಡ್ಡ ಮೆಣಸಿನ ಕಾಯಿಯನ್ನೂ, ಕ್ಯಾಬೇಜ್ ನ್ನೂ ಹಾಕಿ. ( ಹೂಕೋಸು, ಸಿಹಿ ಜೋಳ, ಪಾಲಾಕ್ ಈ ಯಾವುದೇ ತರಕಾರಿಗಳನ್ನೂ ಸಹ ಬಳಸಬಹುದು)  ದೊಡ್ಡ  ಮೆಣಸಿನ ಕಾಯಿಯ ಜೊತೆಯಲ್ಲಿ ಸಿಹಿ ಜೋಳವನ್ನು ಉಪಯೋಗಿಸಬಹುದು.

    ಹಾಗೆಯೇ ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸಿನ ಕಾಯಿ, ಹಸಿ ಶುಂಠಿ, ಕೊತ್ತುಂಬರಿ ಸೊಪ್ಪನ್ನು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಸಿಕೊಳ್ಳಿ. ಬೇಕೆಂದಲ್ಲಿ 5-6 ಚಮಚದಷ್ಟು ನೀರನ್ನು ಸೇರಿಸಿಕೊಳ್ಳಿ. ಹಿಟ್ಟು ಸುಮಾರಾಗಿ ಗೋಳಿಬಜೆಯ ಅಥವಾ ಇಡ್ಲಿ ಹಿಟ್ಟಿನ ಹದವಿರಲಿ. ಐದು ನಿಮಿಷಗಳ ಕಾಲ ಈ ಹಿಟ್ಟಿನ ಮಿಶ್ರಣವು ಹಾಗೇ ಇರಲಿ.

    ನಂತರ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು ಎಣ್ಣೆ ಹಾಕಿ.

    ಹಿಟ್ಟಿನ ಮಿಶ್ರಣಕ್ಕೆ ಈಗ ಕಾಲು ಚಮಚಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಷ್ಟು ಅಡಿಗೆ ಸೋಡವನ್ನು ಹಾಕಿ. ಪಕೋಡವು ಉಬ್ಬಿ ಬರಲು ಮತ್ತು ಗರಿಗರಿಯಾಗಿರಲು ಅಡಿಗೆ ಸೋಡ ಹಾಕಬೇಕಾಗುತ್ತದೆ.

    ಪ್ಯಾನ್ ನಲ್ಲಿರುವ ಎಣ್ಣೆಯು ಚೆನ್ನಾಗಿ ಕಾದ ನಂತರ ಹಿಟ್ಟಿನ ಮಿಶ್ರಣವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಅದನ್ನು ಕಾದ ಎಣ್ಣೆಗೆ ಬಿಟ್ಟು ಒಂದೆರಡು ನಿಮಿಷದ ನಂತರ ಉರಿಯನ್ನು ಮದ್ಯಮಕ್ಕೆ ಮಾಡಿ. (ಮೀಡಿಯಂ ಫ್ಲೇಮ್).

    ಪಕೋಡದ ಎಲ್ಲಾ ಬದಿಯು ಹೊಂಬಣ್ಣ ಬಂದಾಗ ಅದನ್ನು ಈಚೆ ತೆಗೆಯಿರಿ. ರುಚಿಕರವಾದ, ಗರಿಗರಿ ರವೆ ಪಕೋಡ ಸವಿಯಲು ಸಿದ್ಧ. ಕೊತ್ತುಂಬರಿ ಸೊಪ್ಪಿನ ಚಟ್ನಿಯೊಂದಿಗೆ ಅಥವಾ ಟೊಮೊಟೊ ಸಾಸ್ ನೊಂದಿಗೆ ಸವಿಯಲು ಕೊಡಿ.

    ಟಿಪ್ಸ್:

    1. ಹಿಟ್ಟನ್ನು ಎಣ್ಣೆಗೆ ಬಿಡುವ ಮೊದಲಷ್ಟೇ ಅಡಿಗೆ ಸೋಡವನ್ನು ಹಾಕಬೇಕು. ಇಲ್ಲವಾದಲ್ಲಿ ಪಕೋಡವು ಎಣ್ಣೆಯನ್ನು ಹೀರಿಕೊಳ್ಳುತ್ತದೆ.

    2. ಮೇಲೆ ತಿಳಿಸಿದ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡಲ್ಲಿ ಸುಮಾರು ಮೂರು-ನಾಲ್ಕು ಜನರಿಗೆ ಆಗುವಷ್ಟು ಪಕೋಡಗಳು ತಯಾರಾಗುತ್ತದೆ.

  • ರುಚಿಯಾದ ಮಾವಿನ ಕಾಯಿ ತೊಕ್ಕು..!

    ರುಚಿಯಾದ ಮಾವಿನ ಕಾಯಿ ತೊಕ್ಕು..!

    ಮಾವಿನ ಕಾಯಿಯ ಕಾಲದಲ್ಲಿ ಮಾಡಬಹುದಾದ ಈ ತೊಕ್ಕು ತಿಂಗಳಾದರೂ ಫ್ರೀಜ್  ನಲ್ಲಿಟ್ಟರೆ ಕೆಡುವುದಿಲ್ಲ! ತೊಕ್ಕು ಮಾಡಿಟ್ಟರೆ, ಅನ್ನ ಮಾಡಿ ಬೇಕಾದಾಗ ಕಲೆಸಿಕೊಳ್ಳಬಹುದು!

    ಮಾಡುವ ವಿಧಾನ:-

    1 ತೋತಾಪುರಿ ಮಾವಿನ ಕಾಯಿ ತುರಿದಿಡಿ.

    1 ಟೀ ಚಮಚ ಮೆಂತ್ಯ, 1 ಟೀ ಚಮಚ ಸಾಸಿವೆ ಹುರಿದು ಪುಡಿ ಮಾಡಿ.

    15 ರಿಂದ 20 ಒಣಗಿದ ಮೆಣಸಿನಕಾಯಿ ಸ್ವಲ್ಪ ಎಣ್ಣೆ ಹಾಕಿ ಹುರಿದು ಪುಡಿ ಮಾಡಿಡಿ ( ಖಾರಾ ನಿಮ್ಮ ರುಚಿಗೆ ತಕ್ಕಷ್ಟು ಹಾಕಿ )

    ಬಿಸಿ 6 ಟೇಬಲ್ ಚಮಚ ಎಣ್ಣೆ ಹಾಕಿ, ( ಎಣ್ಣೆ ಸ್ವಲ್ಪ ಹೆಚ್ಚು ಬೇಕಾಗುತ್ತದೆ ) ಕಾದ ಮೇಲೆ ಒಗ್ಗರಣೆಗೆ ಸಾಸಿವೆ, ಕಡಲೇ ಬೇಳೆ, ಉದ್ದಿನ ಬೇಳೆ, ಕರಿಬೇವು, ಇಂಗು, ಅರಿಷಿಣ ಹಾಕಿ ಸ್ವಲ್ಪ ಹುರಿದು ನಂತರ ಮಾವಿನ ಕಾಯಿ ತುರಿ ಹಾಕಿ ಬಾಡಿಸಿ.

    ನಂತರ ಉಪ್ಪು, ಖಾರದ ಪುಡಿ, ಸಾಸಿವೆ ಮೆಂತ್ಯ ಪುಡಿ, ಚೂರು ಬೆಲ್ಲ ಹಾಕಿ ಚೆನ್ನಾಗಿ ಕಲೆಸಿ ಕಡಿಮೆ ಉರಿಯಲ್ಲಿ ಆಗಾಗ ಕಲೆಸುತ್ತಾ ಮೂರ್ನಾಲ್ಕು ನಿಮಿಷ ಬೇಯಿಸಿ ಸಂಪೂರ್ಣವಾಗಿ ತಣ್ಣಗಾದ ಮೇಲೆ ಫ್ರೀಜ್ ನಲ್ಲಿಡಿ.

    ಚಿತ್ರಾನ್ನ ಬೇಕಾದಾಗ ಅನ್ನ ಮಾಡಿ ನಿಮ್ಮ ರುಚಿಗೆ ತಕ್ಕಷ್ಟು ಗೊಜ್ಜು, ಕರಿದ ಕಡಲೇ ಬೀಜ ಹಾಕಿದರೆ ರುಚಿಯಾದ, ಬಾಯಲ್ಲಿ ನೀರೂರಿಸುವ ಮಾವಿನ ಕಾಯಿ ಚಿತ್ರಾನ್ನ ರೆಡಿ!

  • ಗರಿ ಗರಿಯಾದ ಕೋಡುಬಳೆ  ಮಾಡುವ ವಿಧಾನ..

    ಗರಿ ಗರಿಯಾದ ಕೋಡುಬಳೆ ಮಾಡುವ ವಿಧಾನ..


    ಬೇಕಾಗುವ ಪದಾರ್ಥಗಳು:

    ಚಿರೋಟಿ ರವೆ 1/4 ಕಪ್
    ಮೈದಾ ಹಿಟ್ಟು 1/4 ಕಪ್ ಗಿನ ಸ್ವಲ್ಪ ಕಮ್ಮಿ
    ಅಕ್ಕಿ ಹಿಟ್ಟು ಒಂದು ಕಪ್
    ಉಪ್ಪು ರುಚಿಗೆ ತಕ್ಕಷ್ಟು
    1  ಚಮಚ ಓಂ ಕಾಳು
    ಪುಡಿ ಇಂಗು ಅರ್ಧ ಚಮಚ
    ತೆಂಗಿನ ಕಾಯಿ ತುರಿ ಅರ್ಧ ಕಪ್
    ಬ್ಯಾಡಗಿ ಮೆಣಸಿನ ಕಾಯಿ  ಹತ್ತು

    ಮಾಡುವ ವಿಧಾನ:

    ತೆಂಗಿನಕಾಯಿ ಮತ್ತು ಮೆಣಸಿನಕಾಯಿಯನ್ನು ಹಾಕಿ ಹಾಗೇ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ ನಂತರ ಎರಡು ಚಮಚ ನೀರು ಹಾಕಿ ತರಿಯಾಗಿ ರುಬ್ಬಿ 
    (ರುಬ್ಬಿದ್ದು ಗಟ್ಟಿಯಾಗಿ ಇರಲಿ )

    ಒಲೆ ಮೇಲೆ ಬಾಣಲೆಯನ್ನು ಇಟ್ಟು ಅದಕ್ಕೆ ಮೈದಾ ಮತ್ತು ಚಿರೋಟಿ ರವೆಯನ್ನು ಹಾಕಿ ಸ್ವಲ್ಪ ಬೆಚ್ಚಗೆ ಹುರಿದುಕೊಳ್ಳಿ( ತುಂಬಾ ಹುರಿಯುವುದು ಬೇಡ )

    ಒಂದು ಪಾತ್ರೆಯಲ್ಲಿ ನಾವು ಬೆಚ್ಚಗೆ ಹುರಿದಿದ್ದ ಮೈದಾ ಮತ್ತು ಚಿರೋಟಿ ರವೆಯನ್ನು ಹಾಕಿ ಅದು ಬಿಸಿ ಇರುವಾಗಲೇ ಒಂದು ಚಮಚ  ಎಣ್ಣೆ ಹಾಕಿ ಕೈಯಲ್ಲಿ ಚೆನ್ನಾಗಿ ಕಲೆಸಿಕೊಳ್ಳಿ ಹತ್ತು ನಿಮಿಷ ಹಾಗೇ ಇರಲಿ  ನಂತರ ಅದಕ್ಕೆ  ಅಕ್ಕಿ ಹಿಟ್ಟನ್ನು  ಮತ್ತು  ರುಬ್ಬಿದ ಮಿಶ್ರಣ ,ಪುಡಿ ಇಂಗು ,ಉಪ್ಪು ಓಂ ಕಾಳು ಹಾಕಿ ಚೆನ್ನಾಗಿ ಕೈಯಲ್ಲಿ ಕಲಸಿಡಿ.

    ಅದಕ್ಕೆ ಈಗ ಐದು ಚಮಚ ಬಿಸಿ ಎಣ್ಣೆಯನ್ನು ಹಾಕಿ( ಚುರ್ ಅಂತ ಶಬ್ದ ಬರಬೇಕು ಬಿಸಿ ಇರುವುದರಿಂದ ಕೈಯಲ್ಲಿ ಮಿಕ್ಸ್ ಮಾಡಬೇಡಿ ) ಒಂದು ಚಮಚದಲ್ಲಿ ಆ ಹಿಟ್ಟನ್ನು ಹಾಗೇ ಚೆನ್ನಾಗಿ ಕಲಸಿ ಪಕ್ಕಕ್ಕಿಡಿ ಸ್ವಲ್ಪ ಸ್ವಲ್ಪವನ್ನು ನೀರಿನಲ್ಲಿ ಕಲೆಸಿಕೊಂಡು ಕೋಡುಬಳೆ ಒತ್ತಿ ಕಾದ ಎಣ್ಣೆಯಲ್ಲಿ  ಒಂದೊಂದಾಗಿ ತೆಗೆದು ಹಾಕಿ ಬಂಗಾರದ ಬಣ್ಣ ಬರುವವರೆಗೆ ಕರಿದು ಇಟ್ಟುಕೊಳ್ಳಿ . ರುಚಿಕರವಾದ ಕೋಡುಬಳೆ ಸವಿಯಲು ಸಿದ್ಧ .

  • ರುಚಿಯಾದ ಪಾಲಕ್ ಪನೀರ್ ಮಾಡುವುದು ಹೇಗೆ ಗೊತ್ತಾ?

    ರುಚಿಯಾದ ಪಾಲಕ್ ಪನೀರ್ ಮಾಡುವುದು ಹೇಗೆ ಗೊತ್ತಾ?

    ಬೇಕಾಗುವ ಸಾಮಗ್ರಿಗಳು

    • ಪಾಲಕ್ ಸೊಪ್ಪು – 1 ದೊಡ್ಡ ಕಟ್ಟು 
    • ಟೊಮೆಟೋ – 1 
    • ಈರುಳ್ಳಿ – 1, ಮೀಡಿಯಮ್ ಸೈಜಿನದು 
    • ತುರಿದ ಬೆಳ್ಳುಳ್ಳಿ – 1 ಟೀ ಸ್ಪೂನ್ 
    • ತುರಿದ ಶುಂಟಿ – 1 ಟೀ ಸ್ಪೂನ್ 
    • ಜೀರಿಗೆ – 1 ಟೀ ಸ್ಪೂನ್
    • ಕೊತ್ತಂಬರಿ ಪುಡಿ – 1 1/2 ಟೀ ಸ್ಪೂನ್ 
    • ಗರಮ್ ಮಸಾಲಾ ಪುಡಿ – 1/2 ಟೀ ಸ್ಪೂನ್ 
    • ಅಚ್ಚಮೆಣಸಿನಪುಡಿ – 1 1/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
    • ಉಪ್ಪು – ರುಚಿಗೆ ತಕ್ಕಷ್ಟು 
    • ನಿಂಬೆರಸ – 1 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು 
    • ಪನೀರ್ – 300 ಗ್ರಾಂ
    • ಎಣ್ಣೆ – 7 ಟೇಬಲ್ ಸ್ಪೂನ್ 
    • ನೀರು – 3 ಕಪ್ 

    ತಯಾರಿಸುವ ವಿಧಾನ:

    • ಟೊಮೆಟೋ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ತುರಿದುಕೊಳ್ಳಿ.
    • ಪಾಲಕ್ ಸೊಪ್ಪನ್ನು ಸ್ವಚ್ಛವಾಗಿ ತೊಳೆದುಕೊಂಡು 1 1/2 ಕಪ್ ಅಥವಾ ಅಗತ್ಯವಿರುವಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಸೊಪ್ಪು ಬೇಯಿಸಿದ ನೀರನ್ನು ಎತ್ತಿಟ್ಟುಕೊಂಡು, ಸೊಪ್ಪನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. 
    • ಪನೀರ್ ನ್ನು ಬೇಕಾದ ಸೈಜಿಗೆ ಕತ್ತರಿಸಿಕೊಂಡು ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹೊಂಬಣ್ಣಕ್ಕೆ ಬೇಯಿಸಿಕೊಳ್ಳಿ.
    • ಒಂದು ದಪ್ಪ ತಳದ ಬಾಣಲೆಯಲ್ಲಿ 5 – 6 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಬಿಸಿಮಾಡಿ ಜೀರಿಗೆ ಸೇರಿಸಿ ಒಗ್ಗರಣೆ ಮಾಡಿಕೊಂಡು ತುರಿದ ಶುಂಟಿ – ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವಂತೆ ಹುರಿಯಿರಿ. 
    • ಇದಕ್ಕೆ ತುರಿದ ಈರುಳ್ಳಿ ಸೇರಿಸಿ ನಸು ಕಂದುಬಣ್ಣ ಬರುವವರೆಗೆ ಹುರಿಯಿರಿ. 
    • ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೋ, 1/4 ಟೀ ಸ್ಪೂನ್ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಬೇಯಿಸಿ. 
    • ಇದನ್ನು ಆಗಾಗ್ಗೆ ಕೈಯಾಡಿಸುತ್ತಿದ್ದು, ಮಿಶ್ರಣ ಎಣ್ಣೆ ಬಿಡತೊಡಗಿದಾಗ ಪಾಲಕ್ ಪೇಸ್ಟ್ ಸೇರಿಸಿ. ಬೇಕಾದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ಪಾಲಕ್ ಸೊಪ್ಪು ಬೇಯಿಸಿದ ನೀರನ್ನೇ ಇಲ್ಲಿ ಬಳಸಬಹುದು. 
    • ಪಾಲಕ್ ಮಿಶ್ರಣಕ್ಕೆ ಕೊತ್ತಂಬರಿ ಪುಡಿ, ಗರಂ ಮಸಾಲಾ ಪುಡಿ ಹಾಗೂ ಅಚ್ಚಮೆಣಸಿನಪುಡಿ ಸೇರಿಸಿ ಕೈಯಾಡಿಸಿ 3 – 4 ನಿಮಿಷ ಕುದಿಸಿ ಇಳಿಸಿ.
    • ತಯಾರಾದ ಪಾಲಕ್ ಗ್ರೇವಿಗೆ ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಮಿಕ್ಸ್ ಮಾಡಿಕೊಂಡು ಪನೀರ್ ಪೀಸ್ ಗಳನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ. 
    • ಹಬೆಯಾಡುವ ಪಾಲಕ್ ಪನೀರ್ ನ್ನು ರೊಟ್ಟಿ, ಚಪಾತಿ ಅಥವಾ ಪೂರಿಯೊಡನೆ ಸರ್ವ್ ಮಾಡಿ. 

    ಟಿಪ್ಸ್

    • ಪನೀರ್ ತಯಾರಿಸುವಾಗ ಉಳಿಯುವ ನೀರನ್ನು ಚೆಲ್ಲದೆ ಇಟ್ಟರೆ ವಿವಿಧ ಗ್ರೇವಿಗಳಲ್ಲಿ ಬಳಸಲು ಚೆನ್ನಾಗಿರುತ್ತದೆ. ನಾನು ಇಲ್ಲಿ ಪನೀರ್ ತಯಾರಿಸಿದ ನೀರನ್ನೇ ಬಳಸಿದ್ದೇನೆ. 
    • ಅಚ್ಚಮೆಣಸಿನಪುಡಿಯ ಬದಲು ಹಸಿಮೆಣಸನ್ನು ಬೇಕಿದ್ದರೂ ಬಳಸಬಹುದು. ಹಸಿಮೆಣಸು ಬಳಸುವುದಾದರೆ ಶುಂಟಿ – ಬೆಳ್ಳುಳ್ಳಿ – ಹಸಿಮೆಣಸು ಇಷ್ಟನ್ನೂ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಂಡು ಬಳಸಿ

  • ಆರೋಗ್ಯಕರ ನುಗ್ಗೆಸೊಪ್ಪಿನ ಹುಡಿ ಪಲ್ಯ ಮಾಡುವ ವಿಧಾನ

    ಆರೋಗ್ಯಕರ ನುಗ್ಗೆಸೊಪ್ಪಿನ ಹುಡಿ ಪಲ್ಯ ಮಾಡುವ ವಿಧಾನ

    ಸಾಮಾನ್ಯವಾಗಿ ಹಳ್ಳಿಗಳ ಕಡೆ ಎಲ್ಲರ ಮನೆಯ ಹಿತ್ತಿಲಲ್ಲೂ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಾರೆ. ಅಡುಗೆಗೆ ಬೇಕಾಗುವ ಹೆಚ್ಚಿನ ಸೊಪ್ಪು – ತರಕಾರಿಗಳನ್ನು ಅವರೇ ಬೆಳೆಯುತ್ತಾರೆ. ನಾವೇ ಬೆಳೆದ ಸೊಪ್ಪು, ತರಕಾರಿಗಳು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಅವನ್ನು ತಿನ್ನುವುದರಲ್ಲಿ ಇರುವ ಖುಷಿಯೇ ಬೇರೆ!

    ನುಗ್ಗೆಸೊಪ್ಪು ಪೋಷಕಾಂಶಗಳ ಆಗರ. ಇದನ್ನು ತಿನ್ನುವುದರಿಂದ ಒಂದಲ್ಲ….ಎರಡಲ್ಲ ನೂರಾರು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಸುಮಾರು 300 ರೋಗಗಳನ್ನು ಕಡಿಮೆ ಮಾಡುವ ಔಷಧೀಯ ಗುಣವಿರುವ ನುಗ್ಗೆಸೊಪ್ಪು ಎಲ್ಲಾ ಕಾಲದಲ್ಲಿ ದೊರೆಯುವುದಾದರೂ ಮಳೆಗಾಲದಲ್ಲಿ ಸೊಂಪಾಗಿ ಬೆಳೆದಿರುತ್ತದೆ. 

    ನುಗ್ಗೆಸೊಪ್ಪಿನಲ್ಲಿ ಮೊಸರಿಗಿಂತ 2 ರಷ್ಟು ಜಾಸ್ತಿ ವಿಟಮಿನ್ ಸಿ, ಕಿತ್ತಳೆಗಿಂತ 7 ಪಟ್ಟು ಜಾಸ್ತಿ ವಿಟಮಿನ್ ಎ, ಕ್ಯಾರೆಟ್ಗಿಂತ 4 ರಷ್ಟು ಜಾಸ್ತಿ ಪೊಟ್ಯಾಶಿಯಂ, ಬಾಳೆಹಣ್ಣಿಗಿಂತ 3 ರಷ್ಟು ಹಾಗೂ ಹಾಲಿಗಿಂತ 4 ರಷ್ಟು ಜಾಸ್ತಿ ಕ್ಯಾಲ್ಸಿಯಂ ಇವೆ. ಈ ಎಲ್ಲಾ ಗುಣವಿರುವ ನುಗ್ಗೆಸೊಪ್ಪುನ್ನು ಪಲ್ಯ ಮಾಡಿ ತಿನ್ನಬಹುದು.  

      ಬೇಕಾಗುವ ಸಾಮಗ್ರಿಗಳು:

    • ನುಗ್ಗೆಸೊಪ್ಪು – 1 ದೊಡ್ಡ ಕಟ್ಟು
    • ಆಮ್ ಚೂರ್ ಪೌಡರ್ – 3/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
    • ಸಕ್ಕರೆ – 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
    • ಉಪ್ಪು – ರುಚಿಗೆ ತಕ್ಕಷ್ಟು


    ಮಸಾಲಾ ಪುಡಿಗೆ:

    • ಚಕ್ಕೆ – 1 ಇಂಚು
    • ಲವಂಗ – 3 ಅಥವಾ 4
    • ಒಣಮೆಣಸು – 7 (ಖಾರಕ್ಕೆ ತಕ್ಕಂತೆ)
    • ಕೊಬ್ಬರಿತುರಿ (ಅಥವಾ ತೆಂಗಿನತುರಿ) – 3/4 ಕಪ್
    • ಕಡಲೆಬೇಳೆ – 4 ಟೇಬಲ್ ಸ್ಪೂನ್
    • ಉದ್ದಿನಬೇಳೆ – 2 ಟೀ ಸ್ಪೂನ್
    • ಮೆಂತ್ಯ – 3/4 ಟೀ ಸ್ಪೂನ್
    • ಕೊತ್ತಂಬರಿ – 1 1/2 ಟೀ ಸ್ಪೂನ್
    • ಜೀರಿಗೆ – 3/4 ಟೀ ಸ್ಪೂನ್
    • ಸಾಸಿವೆ – 1/2 ಟೀ ಸ್ಪೂನ್
    • ಇಂಗು – ಚಿಟಿಕೆ
    • ಅರಿಶಿನ – 1/4 ಟೀ ಸ್ಪೂನ್
    • ಎಣ್ಣೆ – 1 1/2 ಟೀ ಸ್ಪೂನ್


    ಒಗ್ಗರಣೆಗೆ:

    • ಎಣ್ಣೆ – 3 ಟೇಬಲ್ ಸ್ಪೂನ್
    • ಉದ್ದಿನಬೇಳೆ – 1 ಟೀ ಸ್ಪೂನ್
    • ಸಾಸಿವೆ – 1 ಟೀ ಸ್ಪೂನ್
    • ಅರಿಶಿನ – ದೊಡ್ಡ ಚಿಟಿಕೆಯಷ್ಟು

    ತಯಾರಿಸುವ ವಿಧಾನ:

    • ನುಗ್ಗೆಸೊಪ್ಪನ್ನು ದಂಟಿನಿಂದ ಬೇರ್ಪಡಿಸಿಕೊಂಡು ನೀರಿನಲ್ಲಿ ಸ್ವಚ್ಚವಾಗಿ ತೊಳೆದುಕೊಳ್ಳಿ.
    • ಕೊಬ್ಬರಿತುರಿ ಹೊರತಾಗಿ ಮಸಾಲಾ ಪುಡಿಗೆ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನೂ ಎಣ್ಣೆಯಲ್ಲಿ ಹದವಾಗಿ ಹುರಿದುಕೊಂಡು ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿಕೊಳ್ಳಿ. ಕೊನೆಯಲ್ಲಿ ಕೊಬ್ಬರಿತುರಿ ಸೇರಿಸಿ ಒಂದು ಸುತ್ತು ತಿರುವಿ ತೆಗೆಯಿರಿ. ಈ ಪಲ್ಯಕ್ಕೆ ಮಸಾಲಾ ಪುಡಿ ಸ್ವಲ್ಪ ತರಿಯಾಗಿದ್ದರೆ ಚೆನ್ನಾಗಿರುತ್ತದೆ. 
    • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಚಿಟಿಕೆ ಅರಿಶಿನ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
    • ಇದಕ್ಕೆ ನುಗ್ಗೆಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ 8 – 10 ನಿಮಿಷ ಹುರಿಯಿರಿ. ಅಷ್ಟರಲ್ಲಿ ಸೊಪ್ಪು ಬೆಂದು ಮೆತ್ತಗಾಗಿರುತ್ತದೆ ಹಾಗೂ ಸೊಪ್ಪಿನ ಬಣ್ಣವೂ ಬದಲಾಗುತ್ತದೆ.
    • ಕೊನೆಯಲ್ಲಿ ಇದಕ್ಕೆ ಮಸಾಲಾ ಪುಡಿ, ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
    • ಪಲ್ಯದ ಮಿಶ್ರಣವನ್ನು ಚೆನ್ನಾಗಿ ಬಿಸಿಮಾಡಿ ಉರಿಯನ್ನು ಆಫ್ ಮಾಡಿ.
    • ಅನ್ನ ಹಾಗೂ ಚಪಾತಿಯೊಡನೆ ಸೈಡ್ ಡಿಶ್ ಆಗಿ ಹಾಕಿಕೊಳ್ಳಲು ಈ ಪಲ್ಯ ಚೆನ್ನಾಗಿರುತ್ತದೆ.

    ಟಿಪ್ಸ್:

    • ಈ ಪಲ್ಯಕ್ಕೆ ಈರುಳ್ಳಿ ಹಾಕಿದರೂ ಚೆನ್ನಾಗಿರುತ್ತದೆ. ಈರುಳ್ಳಿ ಸೇರಿಸುವುದಾದರೆ ಸಣ್ಣಗೆ ಹೆಚ್ಚಿಕೊಂಡು ಮಸಾಲಾ ಪುಡಿ ಸೇರಿಸುವ ಸಮಯದಲ್ಲಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಪಲ್ಯವನ್ನು ಬಿಸಿಮಾಡಿ ನಂತರ ಸರ್ವ್ ಮಾಡಿ. 
    • ಇದೇ ವಿಧಾನದಲ್ಲಿ ನುಗ್ಗೆಸೊಪ್ಪಿನ ಬದಲು ಕ್ಯಾಪ್ಸಿಕಂ / ಡೊಳ್ಳು ಮೆಣಸಿನಕಾಯಿ ಬಳಸಿಯೂ ಪಲ್ಯ ತಯಾರಿಸಬಹುದು.
    • ನಾನು ಈ ಪಲ್ಯಕ್ಕೆ ಕೊಬ್ಬರಿತುರಿ ಬಳಸಿದ್ದೇನೆ. ಇದರ ಬದಲು ತೆಂಗಿನತುರಿಯನ್ನು ಬೇಕಿದ್ದರೂ ಬಳಸಬಹುದು. 

  • ಆರೋಗ್ಯಕರ  ಪುದೀನಾ ರೈಸ್ ಮಾಡುವುದು ತುಂಬಾ ಸುಲಭ.

    ಆರೋಗ್ಯಕರ ಪುದೀನಾ ರೈಸ್ ಮಾಡುವುದು ತುಂಬಾ ಸುಲಭ.

    ಮನೆಗೆ ತರಕಾರಿ ಸೊಪ್ಪು ತರುವಾಗ ಪುದೀನಾ ಕೊತ್ತಂಬರಿಸೊಪ್ಪನ್ನು ತರುತ್ತೇವೆ. ಪುದೀನಾದಿಂದ ಚಟ್ನಿ ಇತ್ಯಾದಿಗಳನ್ನು ಮಾಡುತ್ತೇವೆ ಇದೇ ಪುದೀನಾದಿಂದ ಒಂದೊಳ್ಳೆ ರೈಸ್ ಬಾತ್ ಕೂಡ ಮಾಡಬಹುದು. ಕೆಲವೊಮ್ಮೆ ಬೆಳಿಗ್ಗಿನ ತಿಂಡಿ ಮಾಡುವುದಕ್ಕೆ ಏನೂ ಇಲ್ಲದಾಗ ಈ ಪುದೀನಾದಿಂದ ಒಂದೊಳ್ಳೆ ಉಪಹಾರವನ್ನು ತಯಾರಿಸಿ ಮನೆಮಂದಿಯೆಲ್ಲಾ ಸವಿಯಿರಿ. ಮನೆಯಲ್ಲಿ ನಿನ್ನೆ ಮಾಡಿದ ಅನ್ನ ಉಳಿದಿದ್ದರೆ, ದಿನಾ ಅದೇ ಚಿತ್ರಾನ್ನ, ಲೆಮನ್ ರೈಸ್ ಮಾಡಿ ತಿಂದು ಬೇಜಾರಾಗಿದ್ದರೆ ಈ ಪುದೀನಾ ರೈಸ್ ಅನ್ನು ಒಮ್ಮೆ ಮಾಡಿ ಸವಿಯಿರಿ. ಪುದೀನಾ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.

    ಬೇಕಾಗುವ ಸಾಮಗ್ರಿಗಳು:

    ಅಕ್ಕಿ – ಒಂದೂವರೆ ಕಪ್

    ಪುದೀನಾ ಸೊಪ್ಪು – 1 / 2 ಕಟ್ಟು 

    ಹಸಿಮೆಣಸು – 3 

    ಶುಂಠಿ – 1 ಇಂಚು 

    ಬೆಳ್ಳುಳ್ಳಿ 3 – 4 ಎಸಳು 

    ತೆಂಗಿನತುರಿ – 1 / 4 ಕಪ್

    ಏಲಕ್ಕಿ – 2 

    ಲವಂಗ – 4 

    ಚಕ್ಕೆ ನಾಲ್ಕೈದು ಚಿಕ್ಕ ಚೂರುಗಳು 

    ಈರುಳ್ಳಿ – ದೊಡ್ಡದಾದರೆ ಅರ್ಧ ಸಾಕು 

    ಆಲೂಗಡ್ಡೆ – ಅರ್ಧ 

    ನೀರು (ಅನ್ನ ಬೇಯಿಸಲು) – 3 ಲೋಟ

    ಎಣ್ಣೆ – 3 ಟೇಬಲ್ ಚಮಚ 

    ಅರ್ಧ ನಿಂಬೆಹಣ್ಣು

    ರುಚಿಗೆ ತಕ್ಕಷ್ಟು ಉಪ್ಪು

    ಮಾಡುವ ವಿಧಾನ:

    ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚಿಕ್ಕ ಹೋಳುಗಳಾಗಿ ಹೆಚ್ಚಿಕೊಂಡು, ಕಪ್ಪಾಗದಂತೆ ನೀರಿನಲ್ಲಿ ಮುಳುಗಿಸಿಟ್ಟಿರಿ.

    ಈರುಳ್ಳಿಯನ್ನು ತೆಳ್ಳಗೆ ಹೆಚ್ಚಿಕೊಳ್ಳಿ. ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಪುದೀನಾ, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.

    ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಸೇರಿಸಿ ಸ್ವಲ್ಪ ಹುರಿದುಕೊಂಡು, ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವತನಕ ಹುರಿಯಿರಿ. 

    ನಂತರ ಇದಕ್ಕೆ ರುಬ್ಬಿಕೊಂಡ ಪೇಸ್ಟ್ ಮತ್ತು ಹೆಚ್ಚಿದ ಆಲೂಗಡ್ಡೆ ಸೇರಿಸಿ ಹಸಿ ವಾಸನೆ ಹೋಗುವಂತೆ 3 – 4 ನಿಮಿಷ ಹುರಿಯಿರಿ.

    ಇದಕ್ಕೆ ತೊಳೆದ ಅಕ್ಕಿ ಸೇರಿಸಿ ಒಂದೆರಡು ನಿಮಿಷ ಹುರಿದು, ಬೇಯಿಸಲು ಬೇಕಾದಷ್ಟು ನೀರು ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ ಸೇರಿಸಿ, ಕುಕ್ಕರ್ ನಲ್ಲಿ ಹಾಕಿ ಬೇಯಿಸಿ. 

    ಪುದೀನಾ ರೈಸ್ ನ್ನು ನಿಮ್ಮಿಷ್ಟದ ರಾಯಿತಾ ಅಥವಾ ಬರೀ ಮೊಸರಿನೊಡನೆಯೂ ತಿನ್ನಬಹುದು.

    ಟಿಪ್ಸ್:

    • ಪುದೀನಾ ಸೊಪ್ಪನ್ನು ರುಬ್ಬುವಾಗ ಹೆಚ್ಚು ನೀರನ್ನು ಸೇರಿಸಿದ್ದರೆ, ಅನ್ನ ಬೇಯಿಸುವಾಗ ಸ್ವಲ್ಪ ಕಡಿಮೆ ನೀರು ಸೇರಿಸಿ. ನೀರು ಹೆಚ್ಚಾದರೆ ಅನ್ನ ಮುದ್ದೆಯಾಗಿಬಿಡುತ್ತದೆ. 
    • ಅಲಂಕಾರಕ್ಕೆ ಬೇಕಿದ್ದರೆ ಗೇರುಬೀಜದ ಚೂರುಗಳನ್ನು ಎಣ್ಣೆಯಲ್ಲಿ ಹುರಿದು ಪುದೀನಾ ರೈಸ್ ಗೆ ಸೇರಿಸಿ.

  • ರುಚಿಯಾದ ಗೋದಿ ತರಿ(ಕಡಿ) ಪಾಯಸ..

    ರುಚಿಯಾದ ಗೋದಿ ತರಿ(ಕಡಿ) ಪಾಯಸ..

    ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿಯಾದ, ಸುವಾಸಿತವಾದ, ಹೆಚ್ಚಾಗಿ ಭೋಜನದ ಬಳಿಕ ತಿನ್ನುವ ತಿನಿಸಾಗಿದೆ. ಇದು ಹೆಚ್ಚಾಗಿ ಹಬ್ಬ, ವಿಶೇಷ ದಿನದಂದು ತಯಾರಿಸುತ್ತಾರೆ. ಪಾಯಸ ತುಂಬಾ ಮುಖ್ಯ ತಿನಿಸಾಗಿದ್ದು, ಇದನ್ನು ಮಗುವಿನ ಅನ್ನಪ್ರಾಶನದಲ್ಲೂ ಬಳಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ. ಅದರಲ್ಲೂ ಈ ಗೋದಿ ತರಿ(ಕಡಿ) ಪಾಯಸ ತುಂಬಾ ರುಚಿಯಾದ ತಿನಿಸು.

    ಬೇಕಾಗುವ ಸಾಮಗ್ರಿಗಳು

    ಗೋದಿ ತರಿ 1 ಕಪ್
    ಬೆಲ್ಲ 1.5 ರಿಂದ 2 ಕಪ್
    ಹಾಲು 1 ಕಪ್
    ತುಪ್ಪ 1 ಚಮಚ
    ಗೋಡಂಬಿ,ದ್ರಾಕ್ಷಿ, ಪಿಸ್ತಾ ಸ್ವಲ್ಪ
    ಯಾಲಕ್ಕಿ ಸ್ವಲ್ಪ

    ಮಾಡುವ ವಿಧಾನ

    ಮೊದಲು ಗೋದಿ (ಕಡಿ) ತರಿಯನ್ನು ತುಪ್ಪ ಹಾಕಿ ಹುರಿದುಕೊಳ್ಳಿ ನಂತರ ಗೋದಿ ತರಿಯನ್ನು ಕುಕ್ಕರನಲ್ಲಿ ಬೇಯಿಸಿಕೊಳ್ಳಿ ಬೆಂದ ನಂತರ ಅದಕ್ಕೆ ಬೆಲ್ಲ ಹಾಗು ಹಾಲು ಹಾಕಿ ಕುದಿಸಿ ಆಮೇಲೆ ಇದಕ್ಕೆ ಏಲಕ್ಕಿ ಪುಡಿ,ಗೋಡಂಬಿ ದ್ರಾಕ್ಷಿ ಪಿಸ್ತಾ ತುಪ್ಪದಲ್ಲಿ ಹುರಿದು ಪಾಯಸಕ್ಕೆ ಹಾಕಿ ಕೈಯಾಡಿಸಿ. ಪಾಯಸ ಸವಿಯಲು ಸಿದ್ಧ .

  • ವೆಜಿಟೆಬಲ್ ಪಫ್ಸ್ ತಯಾರಿಸುವುದು ತುಂಬಾ ಸುಲಭ ನೀವು ಒಮ್ಮೆ ಮಾಡಿ ನೋಡಿ..!!

    ವೆಜಿಟೆಬಲ್ ಪಫ್ಸ್ ತಯಾರಿಸುವುದು ತುಂಬಾ ಸುಲಭ ನೀವು ಒಮ್ಮೆ ಮಾಡಿ ನೋಡಿ..!!

    ಚಿಕ್ಕವರಾಗಿದ್ದ ನಾವು ಮನೆಯಲ್ಲಿ ಬೇಕರಿ ತಿಂಡಿಗಳನ್ನು ತರುತ್ತಿದ್ದುದೇ ಅಪರೂಪವಾಗಿತ್ತು. ನಮಗೆ ಗೊತ್ತಿದ್ದ ಬೇಕರಿ ತಿನಿಸು ಎಂದರೆ ಬ್ರೆಡ್ ಒಂದೇ. ಮನೆಯಲ್ಲಿ ಓವನ್ ಇಲ್ಲದ ಕಾರಣ ಬೇಕರಿ ಖಾದ್ಯಗಳನ್ನು ಮನೆಯಲ್ಲಿ ತಯಾರಿಸುವ ಸಾಧ್ಯತೆಯೇ ಇರಲಿಲ್ಲ. ಕಾಲೇಜು ಜೀವನ ಶುರುವಾದಮೇಲೆ ಗೊತ್ತಾಗಿದ್ದು, ಪಫ್ಸ್ ಎಂಬ ಒಂದು ರುಚಿಕರವಾದ ತಿಂಡಿ ಬೇಕರಿಗಳಲ್ಲಿ ಸಿಗುತ್ತದೆ ಎಂದು! ಸಾಯಂಕಾಲದ ಹೊತ್ತು ಬೇಕರಿಗೆ ಹೋಗಿ ಬಿಸಿಬಿಸಿ ಪಫ್ಸ್ ತಿನ್ನುವ ಗಮ್ಮತ್ತೇ ಬೇರೆ.

    ಈಗ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಓವನ್ ಇದ್ದೇ ಇರುತ್ತದೆ. ಸುಪರ್ ಮಾರ್ಕೆಟ್ ಗೆ ಹೋಗಿ ಪಫ್ ಪೇಸ್ಟ್ರಿ ಶೀಟ್ ಗಳನ್ನು ತಂದು ಬೇಕೆಂದಾಗ ಆರಾಮಾಗಿ ಮನೆಯಲ್ಲೇ ಪಫ್ ಗಳನ್ನು ತಯಾರಿಸಿಕೊಳ್ಳಬಹುದು. ಸ್ಟಫಿಂಗ್ ಗೆ ಪಲ್ಯವೊಂದಿದ್ದರೆ ಸಾಕು, ಪಫ್ಸ್ ತಯಾರಿಸುವುದು ಬಹಳ ಸುಲಭ. ಸ್ಟಫಿಂಗ್ ಗೆ ಬೇರೆ ಬೇರೆ ಪಲ್ಯಗಳನ್ನು ಹಾಕಿ ಬಗೆಬಗೆಯ ಪಫ್ಸ್ ತಯಾರಿಸಬಹುದು.

    ಬೇಕಾಗುವ ಸಾಮಗ್ರಿಗಳು:

    • ಬದನೇಕಾಯಿ (ಚಿಕ್ಕದು) – 1
    • ಆಲೂಗಡ್ಡೆ / ಬಟಾಟೆ – 1 ಮೀಡಿಯಮ್ ಸೈಜಿನದು
    • ಕ್ಯಾಪ್ಸಿಕಂ – ಅರ್ಧ ಭಾಗ
    • ಬೀನ್ಸ್ – 4 ಅಥವಾ 5
    • ಹಸಿರು ಬಟಾಣಿ – 1/2 ಕಪ್ (* ಟಿಪ್ಸ್ ನೋಡಿ)
    • ಈರುಳ್ಳಿ – 1 ದೊಡ್ಡದು
    • ಉಪ್ಪು – ರುಚಿಗೆ ತಕ್ಕಷ್ಟು
    • ಆಮ್ ಚೂರ್ ಪೌಡರ್ – 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
    • ಅಚ್ಚಮೆಣಸಿನ ಪುಡಿ – 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
    • ಗರಮ್ ಮಸಾಲಾ ಪೌಡರ್ – 1/4 ಟೀ ಸ್ಪೂನ್
    • ಎಣ್ಣೆ – 3 ಟೇಬಲ್ ಸ್ಪೂನ್ (+ ಪಫ್ ಗೆ ಸವರಲು 2 ಟೇಬಲ್ ಸ್ಪೂನ್)
    • ಪಫ್ ಪೇಸ್ಟ್ರಿ ಶೀಟ್ – 1 1/2 (1 ಶೀಟ್ ನಿಂದ 4 ಪಫ್ಸ್ ತಯಾರಿಸಬಹುದು)

    ತಯಾರಿಸುವ ವಿಧಾನ:

    • ಆಲೂಗಡ್ಡೆಯನ್ನು ಮಧ್ಯೆ ಕತ್ತರಿಸಿ ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಇವಕ್ಕೆ ಮುಳುಗುವಷ್ಟು ನೀರು ಹಾಕಿ ಪ್ರೆಷರ್ ಕುಕ್ಕರ್ ನಲ್ಲಿ ಎರಡು ವಿಸಿಲ್ ಆಗುವವರೆಗೆ ಬೇಯಿಸಿ. ತಣ್ಣಗಾದ ನಂತರ ನೀರು ಬಸಿದು ಬಟಾಟೆಯ ಸಿಪ್ಪೆ ತೆಗೆದು ಮೀಡಿಯಂ ಅಳತೆಯ ಹೋಳುಗಳಾಗಿ ಹೆಚ್ಚಿಕೊಳ್ಳಿ.

    • ಬದನೇಕಾಯಿ, ಕ್ಯಾಪ್ಸಿಕಂ, ಬೀನ್ಸ್, ಈರುಳ್ಳಿ ಇಷ್ಟನ್ನೂ ಸಣ್ಣದಾಗಿ ಹೆಚ್ಚಿ, ಎಲ್ಲವನ್ನೂ ಪ್ರತ್ಯೇಕವಾಗಿ ಇಟ್ಟುಕೊಳ್ಳಿ.

    • ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬದನೆ ಮತ್ತು ಬೀನ್ಸ್ ಸೇರಿಸಿ ಮುಚ್ಚಳ ಮುಚ್ಚಿ ಸಣ್ಣ
    ಉರಿಯಲ್ಲಿ ಬೇಯಿಸಿ. ಬೇಯಿಸುವಾಗ ಬೇಕಿದ್ದರೆ ಸ್ವಲ್ಪವೇ ನೀರು ಸೇರಿಸಿ.

    • ಮಿಶ್ರಣ ಮುಕ್ಕಾಲುಭಾಗ ಬೆಂದಾಗ ಇದಕ್ಕೆ ಹಸಿರು ಬಟಾಣಿ, ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಕೈಯಾಡಿಸಿ.

    • ಒಂದು ನಿಮಿಷದ ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ 4 – 5 ನಿಮಿಷ ಬೇಯಿಸಿ.

    • ಪಲ್ಯದ ಮಿಶ್ರಣಕ್ಕೆ ಹೆಚ್ಚಿದ ಆಲೂಗಡ್ಡೆ ಸೇರಿಸಿ ಒಮ್ಮೆ ಕೈಯಾಡಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್,
    ಅಚ್ಚಮೆಣಸಿನಪುಡಿ, ಗರಂ ಮಸಾಲಾ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉರಿಯನ್ನು ಆಫ್ ಮಾಡಿ.

    • ಓವನ್ ನ್ನು 200°C ಗೆ ಪ್ರಿ-ಹೀಟ್ ಮಾಡಿಕೊಳ್ಳಿ.

    • ಪೇಸ್ಟ್ರಿ ಶೀಟ್ ಗಳನ್ನು ಬಳಸಲು 15 – 20 ನಿಮಿಷ ಮೊದಲೇ ಫ್ರೀಜರ್ ನಿಂದ ಹೊರಗೆ ತೆಗೆದಿಟ್ಟಿರಿ.

    • ಒಂದು ಪೇಸ್ಟ್ರಿ ಶೀಟ್ ನ್ನು ತೆಗೆದುಕೊಂಡು ಒಂದೇ ಅಳತೆಯ ನಾಲ್ಕು ಚೌಕಗಳಾಗಿ ಕತ್ತರಿಸಿ. ಅದರಲ್ಲಿ ಒಂದು ಭಾಗವನ್ನು ತೆಗೆದುಕೊಂಡು ಒಂದು ಸಮತಟ್ಟಾದ ಜಾಗದಲ್ಲಿ ಇಟ್ಟುಕೊಳ್ಳಿ. ಇದರಮೇಲೆ 2 ಅಥವಾ 2 1/2 ಟೇಬಲ್ ಸ್ಪೂನ್ ನಷ್ಟು ಪಲ್ಯದ ಮಿಶ್ರಣವನ್ನು ಹಾಕಿ. ಶೀಟ್ ನ ಅಂಚುಗಳಿಗೆ ನೀರು ಸವರಿಕೊಂಡು ಪಲ್ಯ ಒಳಗೆ ಬರುವಂತೆ ಶೀಟ್ ನ್ನು ಮಡಿಚಿ ಅಂಚುಗಳನ್ನು ಪ್ರೆಸ್ ಮಾಡಿ ಕೂಡಿಸಿ.

    • ಕತ್ತರಿಸಿದ ಎಲ್ಲ ಶೀಟ್ ಗಳಲ್ಲೂ ಇದೇ ರೀತಿ ಪಲ್ಯ ಹಾಕಿ ಮಡಿಚಿ ಅಂಚುಗಳನ್ನು ಬಿಡದಂತೆ ಜೋಡಿಸಿ.

    • ಬೇಕಿಂಗ್ ಟ್ರೇ ಗೆ ಅಲ್ಯೂಮಿನಿಯಂ ಫಾಯಿಲ್ ಅಥವಾ ಬೇಕಿಂಗ್ ಶೀಟ್ ಹಾಕಿ ಅದರಮೇಲೆ ಪಲ್ಯ ತುಂಬಿದ ಎಲ್ಲ ಪೇಸ್ಟ್ರಿ ಶೀಟ್ ಗಳನ್ನೂ ಜೋಡಿಸಿಕೊಳ್ಳಿ. ಪಫ್ಸ್ ಬೇಯುವಾಗ ಹಿಗ್ಗುವುದರಿಂದ ಸ್ವಲ್ಪ ಅಂತರ ಇಟ್ಟು ಜೋಡಿಸಿ.

    • ಜೋಡಿಸಿಟ್ಟ ಪಫ್ಸ್ ಗಳಿಗೆ ಎಣ್ಣೆ ಅಥವಾ ಬೆಣ್ಣೆ ಸವರಿ, ಪ್ರಿ-ಹೀಟ್ ಮಾಡಿದ ಓವನ್ ನಲ್ಲಿ 25 ನಿಮಿಷ ಅಥವಾ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ.

    • ಸಂಜೆಯ ಟೀ ಯೊಡನೆ ಬಿಸಿಬಿಸಿ ಪಫ್ಸ್ ತಿನ್ನಲು ಬಹಳ ಚೆನ್ನಾಗಿರುತ್ತದೆ.

  • ಅಕ್ಕಿ ರೊಟ್ಟಿ ಮಾಡುವ  ಸುಲಭ ವಿಧಾನ……..!!

    ಅಕ್ಕಿ ರೊಟ್ಟಿ ಮಾಡುವ ಸುಲಭ ವಿಧಾನ……..!!

    ಪ್ರತಿದಿನ ದೋಸೆ, ಇಡ್ಲಿ ಸೇರಿದಂತೆ ಅನೇಕ ತಿಂಡಿಗಳನ್ನು ಮಾಡಿ ಬೇಸರವಾಗಿರುತ್ತದೆ. ಮನೆಯಲ್ಲಿ ಏನಾದರು ಸ್ಟೆಷಲ್ ಆಗಿ ಹೊಸ ತಿಂಡಿ ಮಾಡು ಎಂದು ಕೇಳುತ್ತಿರುತ್ತಾರೆ. ಆದ್ದರಿಂದ ನಿಮಗಾಗಿ ಅಕ್ಕಿ ರೊಟ್ಟಿ ಮಾಡುವ ವಿಧಾನ ಇಲ್ಲಿದೆ ನೋಡಿ ಮಾಡಿ ಆನಂದಿಸಿ.

    ಬೇಕಾಗುವ ಸಾಮಾಗ್ರಿಗಳು:

    1. ಅಕ್ಕಿ ಹಿಟ್ಟು – 1 ಕಪ್
    2. ಕೊತ್ತಂಬರಿ ಸೊಪ್ಪು -ಸ್ವಲ್ಪ
    3. ಈರಳ್ಳಿ – 1
    4. ಎಣ್ಣೆ – ತಕ್ಕಷ್ಟು
    5. ಉಪ್ಪು – ರುಚಿಗೆ ತಕ್ಕಷ್ಟು
    6. ಹಸಿರು ಮೆಣಸಿನ ಕಾಯಿ – 3-4

    ಮಾಡುವ ವಿಧಾನ :-

    * ಮೊದಲು ಒಂದು ಬೌಲ್ ಗೆ ಅಕ್ಕಿ ಹಿಟ್ಟು, ಸಣ್ಣಗೆ ಕತ್ತರಿಸಿದ ಈರುಳ್ಳಿ, ಮೆಣಸಿನ ಕಾಯಿ ಮತ್ತು ಉಪ್ಪು ಹಾಕಿ ಕಲಿಸಿ.
    * ಸ್ವಲ್ಪ ಸ್ವಲ್ಪ ನೀರು ಹಾಕಿ ಚೆನ್ನಾಗಿ ಗಟ್ಟಿಯಾಗಿ ಕಲಿಸಿ.
    * ಬಳಿಕ ಅದಕ್ಕೆ ಸಣ್ಣಗೆ ಕಟ್ ಮಾಡಿರುವ ಕೊತ್ತಂಬರಿ ಸೊಪ್ಪು ಹಾಕಿ ಕಲಸಿ, ಉಂಡೆ ಮಾಡಿಕೊಳ್ಳಿ.
    * ನಂತರ ತವದ ಮೇಲೆ ಒಂದು ಚಮಚ ಎಣ್ಣೆ ಹಾಕಿ ಉಂಡೆಯನ್ನು ತವದ ತುಂಬಾ ಹರಡುವಂತೆ ತೆಳ್ಳಗೆ ಕೈಯಿಂದ ತಟ್ಟಿ.
    * ಬಳಿಕ ಸ್ಟವ್ ಆನ್ ಮಾಡಿ, ಮತ್ತೆ ರೊಟ್ಟಿಯ ಮೇಲೆ ಒಂದು ಚಮಚ ಎಣ್ಣೆ ಹಾಕಿ ಬೇಯಿಸಿ.
    * ಎರಡು ಬದಿ ಚೆನ್ನಾಗಿ ಬೇಯಿಸಿದರೆ, ಬಿಸಿ ಬಿಸಿ ಅಕ್ಕಿ ರೊಟ್ಟಿ ಸವಿಯಲು ಸಿದ್ಧ.

  • ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಪುಳಿಯೋಗರೆ ಗೊಜ್ಜು ..!!

    ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಪುಳಿಯೋಗರೆ ಗೊಜ್ಜು ..!!

    ಪುಳಿಯೋಗರೆ ಮಾಡುವುದರಲ್ಲಿ ನಾವೆಲ್ಲರೂ ನಿಸ್ಸೀಮರು. ಅಂಗಡಿಯಿಂದ ಎಂಟಿಆರ್, ಅಯ್ಯಂಗಾರ್ ಪುಳಿಯೋಗರೆ ಪೌಡರ್ ತಂದು ಒಗ್ಗರಣೆ ಹಾಕಿ ಮಿಕ್ಸ್ ಮಾಡಿ ಜಟ್ ಪಟ್ ಆಗಿ ಮಾಡಿ ಮುಗಿಸ್ತಿವಿ. ಆದ್ರೆ ಹೆಚ್ಚಿನವರಿಗೆ ಗೊತ್ತಿಲ್ಲ. ಪುಳಿಯೋಗರೆ ಗೊಜ್ಜು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಂತ.

    ಬೇಕಿರುವ ಸಾಮಗ್ರಿ:

    ಸಾಸಿವೆ – ½ ಚಮಚ, ಜೀರಿಗೆ – 1 ½ ಚಮಚ, ಮೆಂತ್ಯ – ½ ಚಮಚ, ಕಾಳು ಮೆಣಸು = 1 ಚಮಚ, ಇಂಗು – 5 ಚಿಟಿಕೆ, ಧನಿಯ – 5 ಚಮಚ, ಬ್ಯಾಡಗಿ ಮೆಣಸಿನ ಕಾಯಿ – 10 ಅಥವಾ 12 (ಖಾರಕ್ಕೆ ತಕ್ಕಂತೆ), ಅರಿಶಿನ – 2 ಚಮಚ, ಹುಣಿಸೆ ಹಣ್ಣು – ದೊಡ್ಡ ನಿಂಬೆ ಗಾತ್ರ, ಬಿಳಿ ಎಳ್ಳು – 100 ಗ್ರಾಂ., ಒಣ ಕೊಬ್ಬರಿ – 150 ಗ್ರಾಂ, ಬೆಲ್ಲ – ½ ಅಚ್ಚು, ಕಡಲೆ ಬೀಜ – 150 ಗ್ರಾಂ, ಕಡಲೇಕಾಯಿ ಎಣ್ಣೆ – 150 ಗ್ರಾಂ. ಉಪ್ಪು – 1 ½ ಹಿಡಿ

    ಒಗ್ಗರಣೆಗೆ :

    ಎಣ್ಣೆ – 4 ಚಮಚ, ಸಾಸಿವೆ – ½ ಚಮಚ, ಉದ್ದಿನ ಬೇಳೆ – 4 ಚಮಚ, ಕಡಲೆ ಬೇಳೆ – 4 ಚಮಚ, ಒಣ ಮೆಣಸಿನ ಕಾಯಿ 10 ಅಥವಾ 12 ತುಂಡುಗಳು, ಕರಿಬೇವಿನ ಸೊಪ್ಪು – 10 ಅಥವಾ 12 ಎಸಳುಗಳು.

    ತಯಾರಿಸುವ ವಿಧಾನ:

    ಒಂದು ಪುಟ್ಟ ಬೌಲಿನಲ್ಲಿ ಹುಣಿಸೆ ಹಣ್ಣನ್ನು ನೆನೆಯಲು ಇಡಿ. ಸಾಸಿವೆ, ಜೀರಿಗೆ, ಮೆಂತ್ಯ, ಕಾಳು ಮೆಣಸು, ಇಂಗು, ಧನಿಯ ಮಾತು ಬ್ಯಾಡಗಿ ಮೆಣಸಿನ ಕಾಯಿ ಎಲ್ಲವನ್ನೂ ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಎಣ್ಣೆಯನ್ನು ಹಾಕಿ ಸಾಧಾರಣ ಉರಿಯಲ್ಲಿ ಹುರಿದು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ. (ಈ ಪುಡಿಯಿಂದ ಸಾರನ್ನೂ ಮಾಡಬಹುದು.) ಎಳ್ಳು ಮತ್ತು ಒಣಕೊಬ್ಬರಿಯನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಕಡಲೆ ಬೀಜವನ್ನು ಬೇರೆಯಾಗಿ ಹುರಿದು ಇಟ್ಟುಕೊಳ್ಳಿ.
    ದಪ್ಪ ತಳದ ಬಾಣಲೆಗೆ ಉಪ್ಪು, ಬೆಲ್ಲ, ಅರಿಶಿನ, ಕರಿಬೇವಿನ ಸೊಪ್ಪು, ಹುಣಿಸೆ ರಸ ಮತ್ತು ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಸಿ..
    ನೀರಿನಂಶ ಮುಕ್ಕಾಲು ಭಾಗ ಇಂಗಿದ ನಂತರ ಅದಕ್ಕೆ ಸಾರಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ. ನಂತರ ಕೆಳಗಿಳಿಸಿ ಹುರಿದ ಕಡಲೆ ಬೀಜ, ಎಳ್ಳು ಮತ್ತು ಕೊಬ್ಬರಿ ಪುಡಿಯನ್ನು ಹಾಕಿ ಬೆರೆಸಿ. ಉದುರುದುರಾದ ಅನ್ನಕ್ಕೆ ಅಳತೆಗೆ ಬೇಕಾದಷ್ಟು ಗೊಜ್ಜನ್ನು ಹಾಕಿ ಕಲೆಸಿ. ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಹಾಕಿ ಪುನಃ ಕಲೆಸಿ. ರುಚಿಯಾದ ಪುಳಿಯೋಗರೆ ಸವಿಯಿರಿ.