Home Food ರುಚಿಕರವಾದ, ಗರಿಗರಿ ರವೆ ಪಕೋಡ..!!

ರುಚಿಕರವಾದ, ಗರಿಗರಿ ರವೆ ಪಕೋಡ..!!

 ಕಡಲೆಹಿಟ್ಟನ್ನು ಬಳಸದೆ ಬಾಂಬೆ ರವೆಯನ್ನೋ ಅಥವಾ ಉಪ್ಪಿಟ್ಟಿಗೆ ಉಪಯೋಗಿಸುವ ಬಿಳಿ ಬಣ್ಣದ ರವೆಯನ್ನೋ ಬಳಸಿ ಕೆಲಬಗೆಯ ತರಕಾರಿಗಳನ್ನು ಸೇರಿಸಿ ಮಾಡುವ ಗರಿಗರಿಯಾದ ಪಕೋಡವಿದು. ಹಬ್ಬ-ಹರಿದಿನಗಳಂದು ಮದ್ಯಾಹ್ನದ ಊಟಕ್ಕೋ ಅಥವಾ ಸಂಜೆ ಕಾಫಿ/ಟೀ ಜೊತೆಗೋ ಸವಿಯಲು ಹೇಳಿ ಮಾಡಿಸಿದಂತಹಾ ತಿನಿಸಿದು. ಬನ್ನಿ ನೋಡೋಣ ಹೇಗೆ ಮಾಡುವುದೆಂದು.

ಬೇಕಾಗುವ ಪದಾರ್ಥಗಳು:

ಬಾಂಬೆ ರವೆ ಅಥವಾ ಉಪ್ಪಿಟ್ಟಿನ ಬಿಳಿ ರವೆ- 1 ಲೋಟ (ಮೀಡಿಯಂ ಅಳತೆ ಲೋಟ)

ಮೊಸರು- ಮುಕ್ಕಾಲು ಲೋಟ

ಸಣ್ಣಗೆ ಹೆಚ್ಚಿದ ದೊಡ್ಡ ಮೆಣಸಿನ ಕಾಯಿ(ಕ್ಯಾಪ್ಸಿಕಂ)- ಅರ್ಧ ಲೋಟ

ಸಣ್ಣಗೆ ಹೆಚ್ಚಿದ ಎಲೆಕೋಸು/ಸಿಹಿ ಜೋಳದ ಕಾಳು- ಅರ್ಧ ಲೋಟ

ಸಣ್ಣಗೆ ಹೆಚ್ಚಿದ ಕೊತ್ತುಂಬರಿ ಸೊಪ್ಪು- 5-6 ಚಮಚ

ಹಸಿಮೆಣಸಿನ ಕಾಯಿ- 2

ಹಸಿಶುಂಠಿ- ಅರ್ಧ ಇಂಚು

ಅಡಿಗೆ ಸೋಡ- ಕಾಲು ಚಮಚಕ್ಕೂ ಸ್ವಲ್ಪ ಕಡಿಮೆ

ಎಣ್ಣೆ- ಪಕೋಡ ಕರಿಯಲು

ಉಪ್ಪು- ರುಚಿಗೆ ತಕ್ಕಷ್ಟು

ಮಾಡುವ ವಿಧಾನ:

ಮೊದಲು ಒಂದು ಪಾತ್ರೆಗೆ ರವೆಯನ್ನು ಹಾಕಿ (ರವೆಯನ್ನು ಹುರಿಯುವ ಅಗತ್ಯವಿಲ್ಲ). ಅದಕ್ಕೆ ಮುಕ್ಕಾಲು ಲೋಟ ಮೊಸರು ಮತ್ತೆ ಕಾಲು ಲೋಟದಷ್ಟು ನೀರನ್ನು ಹಾಕಿ ಕಲಸಿಕೊಳ್ಳಿ. (ಬಾಂಬೆ ರವೆ(ಚಿರೋಟಿ ರವೆ) ಅಥವಾ ಬೆಂಗಳೂರು ರವೆ (ಉಪ್ಪಿಟ್ಟಿನ ಬಿಳಿ ರವೆ) ಯಾವುದೇ ಆದರೂ ರುಚಿಯಲ್ಲಿ ವ್ಯತ್ಯಾಸವಾಗದು.)

ಈಗ ಅದಕ್ಕೆ ಸಣ್ಣಗೆ ಹೆಚ್ಚಿಟ್ಟ ದೊಡ್ಡ ಮೆಣಸಿನ ಕಾಯಿಯನ್ನೂ, ಕ್ಯಾಬೇಜ್ ನ್ನೂ ಹಾಕಿ. ( ಹೂಕೋಸು, ಸಿಹಿ ಜೋಳ, ಪಾಲಾಕ್ ಈ ಯಾವುದೇ ತರಕಾರಿಗಳನ್ನೂ ಸಹ ಬಳಸಬಹುದು)  ದೊಡ್ಡ  ಮೆಣಸಿನ ಕಾಯಿಯ ಜೊತೆಯಲ್ಲಿ ಸಿಹಿ ಜೋಳವನ್ನು ಉಪಯೋಗಿಸಬಹುದು.

ಹಾಗೆಯೇ ಸಣ್ಣಗೆ ಹೆಚ್ಚಿಟ್ಟ ಹಸಿಮೆಣಸಿನ ಕಾಯಿ, ಹಸಿ ಶುಂಠಿ, ಕೊತ್ತುಂಬರಿ ಸೊಪ್ಪನ್ನು, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ ಕಲಸಿಕೊಳ್ಳಿ. ಬೇಕೆಂದಲ್ಲಿ 5-6 ಚಮಚದಷ್ಟು ನೀರನ್ನು ಸೇರಿಸಿಕೊಳ್ಳಿ. ಹಿಟ್ಟು ಸುಮಾರಾಗಿ ಗೋಳಿಬಜೆಯ ಅಥವಾ ಇಡ್ಲಿ ಹಿಟ್ಟಿನ ಹದವಿರಲಿ. ಐದು ನಿಮಿಷಗಳ ಕಾಲ ಈ ಹಿಟ್ಟಿನ ಮಿಶ್ರಣವು ಹಾಗೇ ಇರಲಿ.

ನಂತರ ಸ್ಟವ್ ಹೊತ್ತಿಸಿ, ಫ್ರೈಯಿಂಗ್ ಪ್ಯಾನ್ ಇಟ್ಟು ಎಣ್ಣೆ ಹಾಕಿ.

ಹಿಟ್ಟಿನ ಮಿಶ್ರಣಕ್ಕೆ ಈಗ ಕಾಲು ಚಮಚಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಷ್ಟು ಅಡಿಗೆ ಸೋಡವನ್ನು ಹಾಕಿ. ಪಕೋಡವು ಉಬ್ಬಿ ಬರಲು ಮತ್ತು ಗರಿಗರಿಯಾಗಿರಲು ಅಡಿಗೆ ಸೋಡ ಹಾಕಬೇಕಾಗುತ್ತದೆ.

ಪ್ಯಾನ್ ನಲ್ಲಿರುವ ಎಣ್ಣೆಯು ಚೆನ್ನಾಗಿ ಕಾದ ನಂತರ ಹಿಟ್ಟಿನ ಮಿಶ್ರಣವನ್ನು ಒಂದು ಚಮಚದಲ್ಲಿ ತೆಗೆದುಕೊಂಡು ಅದನ್ನು ಕಾದ ಎಣ್ಣೆಗೆ ಬಿಟ್ಟು ಒಂದೆರಡು ನಿಮಿಷದ ನಂತರ ಉರಿಯನ್ನು ಮದ್ಯಮಕ್ಕೆ ಮಾಡಿ. (ಮೀಡಿಯಂ ಫ್ಲೇಮ್).

ಪಕೋಡದ ಎಲ್ಲಾ ಬದಿಯು ಹೊಂಬಣ್ಣ ಬಂದಾಗ ಅದನ್ನು ಈಚೆ ತೆಗೆಯಿರಿ. ರುಚಿಕರವಾದ, ಗರಿಗರಿ ರವೆ ಪಕೋಡ ಸವಿಯಲು ಸಿದ್ಧ. ಕೊತ್ತುಂಬರಿ ಸೊಪ್ಪಿನ ಚಟ್ನಿಯೊಂದಿಗೆ ಅಥವಾ ಟೊಮೊಟೊ ಸಾಸ್ ನೊಂದಿಗೆ ಸವಿಯಲು ಕೊಡಿ.

ಟಿಪ್ಸ್:

1. ಹಿಟ್ಟನ್ನು ಎಣ್ಣೆಗೆ ಬಿಡುವ ಮೊದಲಷ್ಟೇ ಅಡಿಗೆ ಸೋಡವನ್ನು ಹಾಕಬೇಕು. ಇಲ್ಲವಾದಲ್ಲಿ ಪಕೋಡವು ಎಣ್ಣೆಯನ್ನು ಹೀರಿಕೊಳ್ಳುತ್ತದೆ.

2. ಮೇಲೆ ತಿಳಿಸಿದ ಪ್ರಮಾಣದಲ್ಲಿ ಪದಾರ್ಥಗಳನ್ನು ತೆಗೆದುಕೊಂಡಲ್ಲಿ ಸುಮಾರು ಮೂರು-ನಾಲ್ಕು ಜನರಿಗೆ ಆಗುವಷ್ಟು ಪಕೋಡಗಳು ತಯಾರಾಗುತ್ತದೆ.