Home Food ವೆಜಿಟೆಬಲ್ ಪಫ್ಸ್ ತಯಾರಿಸುವುದು ತುಂಬಾ ಸುಲಭ ನೀವು ಒಮ್ಮೆ ಮಾಡಿ ನೋಡಿ..!!

ವೆಜಿಟೆಬಲ್ ಪಫ್ಸ್ ತಯಾರಿಸುವುದು ತುಂಬಾ ಸುಲಭ ನೀವು ಒಮ್ಮೆ ಮಾಡಿ ನೋಡಿ..!!

ಚಿಕ್ಕವರಾಗಿದ್ದ ನಾವು ಮನೆಯಲ್ಲಿ ಬೇಕರಿ ತಿಂಡಿಗಳನ್ನು ತರುತ್ತಿದ್ದುದೇ ಅಪರೂಪವಾಗಿತ್ತು. ನಮಗೆ ಗೊತ್ತಿದ್ದ ಬೇಕರಿ ತಿನಿಸು ಎಂದರೆ ಬ್ರೆಡ್ ಒಂದೇ. ಮನೆಯಲ್ಲಿ ಓವನ್ ಇಲ್ಲದ ಕಾರಣ ಬೇಕರಿ ಖಾದ್ಯಗಳನ್ನು ಮನೆಯಲ್ಲಿ ತಯಾರಿಸುವ ಸಾಧ್ಯತೆಯೇ ಇರಲಿಲ್ಲ. ಕಾಲೇಜು ಜೀವನ ಶುರುವಾದಮೇಲೆ ಗೊತ್ತಾಗಿದ್ದು, ಪಫ್ಸ್ ಎಂಬ ಒಂದು ರುಚಿಕರವಾದ ತಿಂಡಿ ಬೇಕರಿಗಳಲ್ಲಿ ಸಿಗುತ್ತದೆ ಎಂದು! ಸಾಯಂಕಾಲದ ಹೊತ್ತು ಬೇಕರಿಗೆ ಹೋಗಿ ಬಿಸಿಬಿಸಿ ಪಫ್ಸ್ ತಿನ್ನುವ ಗಮ್ಮತ್ತೇ ಬೇರೆ.

ಈಗ ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲೂ ಓವನ್ ಇದ್ದೇ ಇರುತ್ತದೆ. ಸುಪರ್ ಮಾರ್ಕೆಟ್ ಗೆ ಹೋಗಿ ಪಫ್ ಪೇಸ್ಟ್ರಿ ಶೀಟ್ ಗಳನ್ನು ತಂದು ಬೇಕೆಂದಾಗ ಆರಾಮಾಗಿ ಮನೆಯಲ್ಲೇ ಪಫ್ ಗಳನ್ನು ತಯಾರಿಸಿಕೊಳ್ಳಬಹುದು. ಸ್ಟಫಿಂಗ್ ಗೆ ಪಲ್ಯವೊಂದಿದ್ದರೆ ಸಾಕು, ಪಫ್ಸ್ ತಯಾರಿಸುವುದು ಬಹಳ ಸುಲಭ. ಸ್ಟಫಿಂಗ್ ಗೆ ಬೇರೆ ಬೇರೆ ಪಲ್ಯಗಳನ್ನು ಹಾಕಿ ಬಗೆಬಗೆಯ ಪಫ್ಸ್ ತಯಾರಿಸಬಹುದು.

ಬೇಕಾಗುವ ಸಾಮಗ್ರಿಗಳು:

• ಬದನೇಕಾಯಿ (ಚಿಕ್ಕದು) – 1
• ಆಲೂಗಡ್ಡೆ / ಬಟಾಟೆ – 1 ಮೀಡಿಯಮ್ ಸೈಜಿನದು
• ಕ್ಯಾಪ್ಸಿಕಂ – ಅರ್ಧ ಭಾಗ
• ಬೀನ್ಸ್ – 4 ಅಥವಾ 5
• ಹಸಿರು ಬಟಾಣಿ – 1/2 ಕಪ್ (* ಟಿಪ್ಸ್ ನೋಡಿ)
• ಈರುಳ್ಳಿ – 1 ದೊಡ್ಡದು
• ಉಪ್ಪು – ರುಚಿಗೆ ತಕ್ಕಷ್ಟು
• ಆಮ್ ಚೂರ್ ಪೌಡರ್ – 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
• ಅಚ್ಚಮೆಣಸಿನ ಪುಡಿ – 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
• ಗರಮ್ ಮಸಾಲಾ ಪೌಡರ್ – 1/4 ಟೀ ಸ್ಪೂನ್
• ಎಣ್ಣೆ – 3 ಟೇಬಲ್ ಸ್ಪೂನ್ (+ ಪಫ್ ಗೆ ಸವರಲು 2 ಟೇಬಲ್ ಸ್ಪೂನ್)
• ಪಫ್ ಪೇಸ್ಟ್ರಿ ಶೀಟ್ – 1 1/2 (1 ಶೀಟ್ ನಿಂದ 4 ಪಫ್ಸ್ ತಯಾರಿಸಬಹುದು)

ತಯಾರಿಸುವ ವಿಧಾನ:

• ಆಲೂಗಡ್ಡೆಯನ್ನು ಮಧ್ಯೆ ಕತ್ತರಿಸಿ ಎರಡು ಭಾಗಗಳನ್ನಾಗಿ ಮಾಡಿಕೊಳ್ಳಿ. ಇವಕ್ಕೆ ಮುಳುಗುವಷ್ಟು ನೀರು ಹಾಕಿ ಪ್ರೆಷರ್ ಕುಕ್ಕರ್ ನಲ್ಲಿ ಎರಡು ವಿಸಿಲ್ ಆಗುವವರೆಗೆ ಬೇಯಿಸಿ. ತಣ್ಣಗಾದ ನಂತರ ನೀರು ಬಸಿದು ಬಟಾಟೆಯ ಸಿಪ್ಪೆ ತೆಗೆದು ಮೀಡಿಯಂ ಅಳತೆಯ ಹೋಳುಗಳಾಗಿ ಹೆಚ್ಚಿಕೊಳ್ಳಿ.

• ಬದನೇಕಾಯಿ, ಕ್ಯಾಪ್ಸಿಕಂ, ಬೀನ್ಸ್, ಈರುಳ್ಳಿ ಇಷ್ಟನ್ನೂ ಸಣ್ಣದಾಗಿ ಹೆಚ್ಚಿ, ಎಲ್ಲವನ್ನೂ ಪ್ರತ್ಯೇಕವಾಗಿ ಇಟ್ಟುಕೊಳ್ಳಿ.

• ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿಕೊಳ್ಳಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬದನೆ ಮತ್ತು ಬೀನ್ಸ್ ಸೇರಿಸಿ ಮುಚ್ಚಳ ಮುಚ್ಚಿ ಸಣ್ಣ
ಉರಿಯಲ್ಲಿ ಬೇಯಿಸಿ. ಬೇಯಿಸುವಾಗ ಬೇಕಿದ್ದರೆ ಸ್ವಲ್ಪವೇ ನೀರು ಸೇರಿಸಿ.

• ಮಿಶ್ರಣ ಮುಕ್ಕಾಲುಭಾಗ ಬೆಂದಾಗ ಇದಕ್ಕೆ ಹಸಿರು ಬಟಾಣಿ, ಹೆಚ್ಚಿದ ಕ್ಯಾಪ್ಸಿಕಂ ಸೇರಿಸಿ ಕೈಯಾಡಿಸಿ.

• ಒಂದು ನಿಮಿಷದ ನಂತರ ಇದಕ್ಕೆ ಹೆಚ್ಚಿದ ಈರುಳ್ಳಿ ಸೇರಿಸಿ 4 – 5 ನಿಮಿಷ ಬೇಯಿಸಿ.

• ಪಲ್ಯದ ಮಿಶ್ರಣಕ್ಕೆ ಹೆಚ್ಚಿದ ಆಲೂಗಡ್ಡೆ ಸೇರಿಸಿ ಒಮ್ಮೆ ಕೈಯಾಡಿಸಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು, ಆಮ್ ಚೂರ್ ಪೌಡರ್,
ಅಚ್ಚಮೆಣಸಿನಪುಡಿ, ಗರಂ ಮಸಾಲಾ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಉರಿಯನ್ನು ಆಫ್ ಮಾಡಿ.

• ಓವನ್ ನ್ನು 200°C ಗೆ ಪ್ರಿ-ಹೀಟ್ ಮಾಡಿಕೊಳ್ಳಿ.

• ಪೇಸ್ಟ್ರಿ ಶೀಟ್ ಗಳನ್ನು ಬಳಸಲು 15 – 20 ನಿಮಿಷ ಮೊದಲೇ ಫ್ರೀಜರ್ ನಿಂದ ಹೊರಗೆ ತೆಗೆದಿಟ್ಟಿರಿ.

• ಒಂದು ಪೇಸ್ಟ್ರಿ ಶೀಟ್ ನ್ನು ತೆಗೆದುಕೊಂಡು ಒಂದೇ ಅಳತೆಯ ನಾಲ್ಕು ಚೌಕಗಳಾಗಿ ಕತ್ತರಿಸಿ. ಅದರಲ್ಲಿ ಒಂದು ಭಾಗವನ್ನು ತೆಗೆದುಕೊಂಡು ಒಂದು ಸಮತಟ್ಟಾದ ಜಾಗದಲ್ಲಿ ಇಟ್ಟುಕೊಳ್ಳಿ. ಇದರಮೇಲೆ 2 ಅಥವಾ 2 1/2 ಟೇಬಲ್ ಸ್ಪೂನ್ ನಷ್ಟು ಪಲ್ಯದ ಮಿಶ್ರಣವನ್ನು ಹಾಕಿ. ಶೀಟ್ ನ ಅಂಚುಗಳಿಗೆ ನೀರು ಸವರಿಕೊಂಡು ಪಲ್ಯ ಒಳಗೆ ಬರುವಂತೆ ಶೀಟ್ ನ್ನು ಮಡಿಚಿ ಅಂಚುಗಳನ್ನು ಪ್ರೆಸ್ ಮಾಡಿ ಕೂಡಿಸಿ.

• ಕತ್ತರಿಸಿದ ಎಲ್ಲ ಶೀಟ್ ಗಳಲ್ಲೂ ಇದೇ ರೀತಿ ಪಲ್ಯ ಹಾಕಿ ಮಡಿಚಿ ಅಂಚುಗಳನ್ನು ಬಿಡದಂತೆ ಜೋಡಿಸಿ.

• ಬೇಕಿಂಗ್ ಟ್ರೇ ಗೆ ಅಲ್ಯೂಮಿನಿಯಂ ಫಾಯಿಲ್ ಅಥವಾ ಬೇಕಿಂಗ್ ಶೀಟ್ ಹಾಕಿ ಅದರಮೇಲೆ ಪಲ್ಯ ತುಂಬಿದ ಎಲ್ಲ ಪೇಸ್ಟ್ರಿ ಶೀಟ್ ಗಳನ್ನೂ ಜೋಡಿಸಿಕೊಳ್ಳಿ. ಪಫ್ಸ್ ಬೇಯುವಾಗ ಹಿಗ್ಗುವುದರಿಂದ ಸ್ವಲ್ಪ ಅಂತರ ಇಟ್ಟು ಜೋಡಿಸಿ.

• ಜೋಡಿಸಿಟ್ಟ ಪಫ್ಸ್ ಗಳಿಗೆ ಎಣ್ಣೆ ಅಥವಾ ಬೆಣ್ಣೆ ಸವರಿ, ಪ್ರಿ-ಹೀಟ್ ಮಾಡಿದ ಓವನ್ ನಲ್ಲಿ 25 ನಿಮಿಷ ಅಥವಾ ಹೊಂಬಣ್ಣಕ್ಕೆ ಬರುವವರೆಗೆ ಬೇಯಿಸಿ.

• ಸಂಜೆಯ ಟೀ ಯೊಡನೆ ಬಿಸಿಬಿಸಿ ಪಫ್ಸ್ ತಿನ್ನಲು ಬಹಳ ಚೆನ್ನಾಗಿರುತ್ತದೆ.