ಅಂಕೋಲಾ : ನಾಡಿನ ಸಶಕ್ತ ಬರಹಗಾರ, ಚಿಂತಕ, ಕವಿ ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಅಂಬಾರ ಕೊಡ್ಲದವರಾಗಿರುವ ವಿಷ್ಣು ನಾಯ್ಕ ಅವರು ಶನಿವಾರ ರಾತ್ರಿ ನಿಧನರಾಗಿದ್ದಾರೆ.
ವಿಷ್ಣು ನಾಯ್ಕ ಅವರು ಎಂ.ಎ ಪದವೀಧರರಾಗಿದ್ದು, ದಿನಕರ ದೇಸಾಯಿ ಅವರ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು ನಿವೃತ್ತಿಯ ನಂತರದಲ್ಲಿ ಕೆನರಾ ವೆಲಫೆರ್ ಟ್ರಸ್ಟ್ ನ ಟ್ರಸ್ಟಿಗಳಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು. ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯ ಅಂಬಾರಕೊಡ್ಲದ ನಿರಕ್ಷರಿ ಬುದವಂತಿ ಮತ್ತು ನಾಗಪ್ಪ ನಾಯ್ಕ ದಂಪತಿಯ ಮಗನಾಗಿ ಹುಟ್ಟಿ ಅಕ್ಷರ ಪ್ರಪಂಚದಲ್ಲಿ ಮಿಂಚಿ ಮರೆಯಾದರು.
ಕಾವ್ಯ, ನಾಟಕ, ಕಥೆ, ಕಾದಂಬರಿ, ಜಾನಪದ, ವಿಮರ್ಶೆ , ಶಿಕ್ಷಣ, ಪತ್ರಿಕೋದ್ಯಮ, ರಂಗಭೂಮಿ, ಚಳುವಳಿ, ಪ್ರಕಾಶನ..ಹೀಗೆ ಅವರು ಮನುಷ್ಯತ್ವ ಸಾರಬಹುದಾದ, ಸಾಹಿತ್ಯಕ್ಕೆ ಪೂರಕವಾದ ಎಲ್ಲ ಅವಕಾಶವವನ್ನು ಬಳಸಿಕೊಂಡರು.
ವಿಷ್ಣು ಅವರ ಪತ್ನಿ ಕವಿತಾ ನಾಯ್ಕ ಐದು ವರ್ಷಗಳ ಹಿಂದೆ ನಿಧನರಾಗಿದ್ದರು. ಅವರಿಗೆ ಈರ್ವರು ಪುತ್ರಿಯರು, ಅಳಿಯಂದಿರು, ಸಹೋದರರು ಇದ್ದಾರೆ. ಅಂತ್ಯಕ್ರಿಯೆಯನ್ನು ಇಂದು (ರವಿವಾರ) ಮುಂಜಾನೆ 11.30 ಕ್ಕೆ ವಿಷ್ಣು ನಾಯ್ಕ ಅವರ ಹುಟ್ಟೂರು ಅಂಬಾರಕೊಡ್ಲದಲ್ಲಿ ನೆರವೇರಿಸಲಾಗುವುದು ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದು ಬಂದಿದೆ.
ಅಂಕೋಲಾ : ಚಲಿಸುತ್ತಿದ್ದ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಬೈಕ್ ಹಿಂಬದಿ ಕುಳಿತ್ತಿದ್ದ ಮಹಿಳೆ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿರುವ ಘಟನೆ ತಾಲೂಕಿನ ಬೆಳಸೆ ರಾ.ಹೆ 66 ಮೆಲ್ಸೆತುವೆ ಬಳಿ ನಡೆದಿದೆ.
ಕುಮಟಾ ತಾಲೂಕಿನ ಕಿಮಾನಿ ನಿವಾಸಿಯಾಗಿರುವ ಬಾಗಿ ಸುರೇಶ ಹರಿಕಂತ್ರ ಸ್ಥಳದಲ್ಲಿಯೇ ಮೃತಪಟ್ಟ ಮಹಿಳೆಯಾಗಿದ್ದಾರೆ. ಬೈಕ್ ಸವಾರ ದೇವೆಂದ್ರ ಜಟ್ಟಿ ಹರಿಕಂತ್ರರಿಗೆ ಗಂಭೀರವಾಗಿ ಗಾಯಗಳಾಗಿದೆ. ಇವರು ಕಿಮಾನಿಯಿಂದ ಅಂಕೋಲಾ ದೇವಸ್ಥಾನವೊಂದಕ್ಕೆ ಹೋಗುತ್ತಿರುವ ವೇಳೆ ಈ ಘಟನೆ ನಡೆದಿದೆ. ಸ್ಥಳಕ್ಕೆ ಅಂಕೋಲಾ ಪೊಲೀಸ್ ಠಾಣೆಯ ಪಿಎಸ್ಐ ಉದ್ದಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕಣ ದಾಖಲಿಸಿಕೊಂಡಿದ್ದಾರೆ.
ಅಂಕೋಲಾ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾರವಾರ ಇವರ ನಿರ್ದೇಶನದ ಮೇರೆಗೆ ಮಾರ್ಚ್ 9 ರಂದು ರಾಷ್ಟ್ರೀಯ ಲೋಕ್ ಅದಾಲತ್ ಕಾರ್ಯಕ್ರಮ ನಡೆಯಲಿದ್ದು ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಪ್ರಕರಣಗಳನ್ನು ಲೋಕ್ ಅದಾಲತ್ ನಲ್ಲಿ ಬಗೆಹರಿಸಿಕೊಳ್ಳಬಹುದಾಗಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಜೆ.ಎಂ.ಎಫ್. ಸಿ ಹಿರಿಯ ನ್ಯಾಯಾಧೀಶ ಮನೋಹರ. ಎಂ ಹೇಳಿದರು.
ತಾಲೂಕಿನ ಜೆ.ಎಂ.ಎಫ್. ಸಿ ನ್ಯಾಯಾಲಯದ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು ಬಹಳ ಕಾಲದಿಂದ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಲೋಕ ಅದಾಲತ್ ಉತ್ತಮ ವೇದಿಕೆಯಾಗಿದ್ದು ಇದರ ಪ್ರಯೋಜನ ಪಡೆಯುವ ಮೂಲಕ ಕಾರ್ಯಕ್ರಮದ ಉದ್ದೇಶವನ್ನು ಯಶಸ್ವಿಗೊಳಿಸಬೇಕಿದೆ ಎಂದರು.
ತಾಲೂಕಿನ ನ್ಯಾಯಾಲಯದಲ್ಲಿ ಹಣಕಾಸಿನ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ಪ್ರಕರಣಗಳು ಬಾಕಿಯಿದ್ದು ಹಣಕಾಸು ಸಂಸ್ಥೆಗಳು ಮತ್ತು ಸಾಲಗಾರರು ಇಬ್ಬರೂ ಪರಸ್ಪರ ಯಾರಿಗೂ ಹೊರೆ ಆಗದಂತೆ ಪ್ರಕರಣಗಳ ಇತ್ಯರ್ಥಕ್ಕೆ ಮನ ಮಾಡಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ ಬಾಕಿ ಇರುವ ಪ್ರಕರಣಗಳ ತ್ವರಿತ ಇತ್ಯರ್ಥದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ರಾಷ್ಟ್ರೀಯ ಲೋಕ ಅದಾಲತ್ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದ್ದು ಪ್ರಕರಣಗಳನ್ನು ರಾಜಿ ಸಂಧಾನ ಮಾಡಿಕೊಳ್ಳುವ ಮೂಲಕ ಸಮಯದ ಉಳಿತಾಯ, ಕೌಟುಂಬಿಕ ಮತ್ತು ಮಾನಸಿಕ ನೆಮ್ಮದಿ ಪಡೆಯಬಹುದು, ವಿವಿಧ ಸರ್ಕಾರಿ ಇಲಾಖೆಗಳು ಸಹ ಬಾಕಿ ಇರುವ ಪ್ರಕರಣಗಳನ್ನು ಮುಗಿಸಿಕೊಂಡರೆ ಸಾರ್ವಜನಿಕರ ಸೇವೆಗಾಗಿ ತಮ್ಮ ಸಮಯ ನೀಡಬಹುದಾಗಿದೆ ಎಂದರು. ಅಂಕೋಲಾ ನ್ಯಾಯಾಲಯದಲ್ಲಿ ಹಣಕಾಸು ಸಂಸ್ಥೆಗಳಿಗೆ ಸಂಬಂಧಿಸಿದಂತೆ ಸಾವಿರಕ್ಕೂ ಅಧಿಕ ಪ್ರಕರಣಗಳು ಬಾಕಿಯಿದ್ದು ರಾಜಿ ಮೂಲಕ ಇತ್ಯರ್ಥ ಲೋಕ್ ಅದಾಲತ್ ನಲ್ಲಿ ಅವಕಾಶವಿದೆ ಎಂದು ಅವರು ತಿಳಿಸಿದರು. ಹೆಚ್ಚುವರಿ ನ್ಯಾಯಾಧೀಶೆ ಅರ್ಪಿತಾ ಬೆಲ್ಲದ್, ಸಹಾಯಕ ಸರ್ಕಾರಿ ಅಭಿಯೋಜಕ ಗಿರೀಶ್ ಪಟಗಾರ, ಶಿಲ್ಪಾ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ವಿನೋದ ಶಾನಭಾಗ್ ತಹಶೀಲ್ಧಾರ ಬಿ.ಜಿ.ಕುಲಕರ್ಣಿ, ಪಿ.ಎಸ್. ಐ ಜಯಶ್ರೀ ಪ್ರಭಾಕರ್ ಸೇರಿದಂತೆ ಅರಣ್ಯ, ಅಬಕಾರಿ, ಪುರಸಭೆ, ಕಂದಾಯ ಇಲಾಖೆಗಳ ಅಧಿಕಾರಿಗಳು, ಹಣಕಾಸು ಸಂಸ್ಥೆ ಗಳ ವ್ಯವಸ್ಥಾಪಕರು, ವಕೀಲರ ಸಂಘದ ಪದಾಧಿಕಾರಿಗಳು, ಸದಸ್ಯರು, ನ್ಯಾಯಾಲಯದ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕುಮಟಾ : ಉತ್ತರ ಕನ್ನಡ ಜಿಲ್ಲೆಗೆ ಅಗತ್ಯವಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕುಮಟಾದಲ್ಲಿ ಆಗಬೇಕೆಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕುಮಟಾ ಶಾಸಕ ದಿನಕರ ಶೆಟ್ಟಿ ಒತ್ತಾಯಿಸಿದರು.
ಜಿಲ್ಲೆಯ ಕಾರವಾರ, ಶಿರಸಿ, ಯಲ್ಲಾಪುರ ಕ್ಷೇತ್ರದ ಶಾಸಕರುಗಳು ತಮ್ಮ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದರು. ಭೌಗೋಳಿಕವಾಗಿ ಜಿಲ್ಲೆಯನ್ನು ಎರಡು ವಿಭಾಗಗಳಲ್ಲಿ ವಿಗಂಡಿಸಿದರೆ ಘಟದ ಮೇಲ್ಭಾಗದಲ್ಲಿ ಹಾಗೂ ಕರಾವಳಿ ಭಾಗದಲ್ಲಿ ಹೀಗೆ ಎರಡೂ ಕಡೆ ಆಸ್ಪತ್ರೆಯ ಅಗತ್ಯ ಇದೆ ಎಂದು ಶಾಸಕ ಶಿವರಾಮ ಹೆಬ್ಬಾರ ಅಭಿಪ್ರಾಯ ಪಟ್ಟರು. ಶಾಸಕ ಸತೀಶ ಸೈಲ್ ಕಾರವಾರದಲ್ಲಿ ಸಿರ್ಬಡ್ ನೌಕಾನೆಲೆ,ಕೈಗಾ ಅಣುವಿದ್ಯುತ್ ಸ್ಥಾವರ ಇದೆ ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಕಾರವಾದ ಜನರಿಗೆ ಅನಾರೋಗ್ಯ ಉಂಟಾಗುತ್ತಿದೆ.
ಹೀಗಾಗಿ ಕಾರವಾರದಲ್ಲಿರುವ ಮೆಡಿಕಲ್ ಕಾಲೇಜನ್ನ ಮೊದಲು ಮೇಲ್ದರ್ಜೆ ಏರಿಸಬೇಕು. ನಂತರದಲ್ಲಿ ಜಿಲ್ಲೆಯ ಶಿರಸಿ ಅಥವಾ ಎಲ್ಲಿ ಬೇಕೋ ಅಲ್ಲಿ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಮಾಡುವಂತೆ ಸಲಹೆ ನೀಡಿದ್ದರು. ಇನ್ನೂ ಶಿರಸಿ ಶಾಸಕ ಭೀಮಣ್ಣ ನಾಯ್ಕ ಶಿರಸಿಯಲ್ಲಿ ಆಸ್ಪತ್ರೆ ಆದರೆ ಘಟ್ಟದ ಮೇಲ್ಭಾದಲ್ಲಿರುವ ಜನರಿಗೆ ಅನುಕೂಲವಾಗಲಿದೆ. ಎಲ್ಲವಾದ್ರೆ ನಮ್ಮ ಜನ ಸಹ ದೂರದ ಹುಬ್ಬಳ್ಳಿ ಇಲ್ಲ ಬೇರೆಕಡೆ ಹೋಗಬೇಕಾಗಿದೆ .
ಶಾಸಕ ದಿನಕರ ಶೆಟ್ಟಿ ಮಾತನಾಡಿ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಅಗತ್ಯವಿರುವ ಸ್ಥಳವನ್ನು ಗುರುತಿಸಲಾಗಿದೆ.ರಾಷ್ಟ್ರೀಯ ಹೆದ್ದಾರಿ , ರೈಲ್ವೆ ನಿಲ್ದಾಣ ಕೂಡ ಹತ್ತಿರದಲ್ಲೆ ಇದೆ. ಭೌಗೋಳಿಕವಾಗಿ ನಮ್ಮ ಜಿಲ್ಲೆಯ ಎಲ್ಲಾ ತಾಲೂಕುಗಳಿಗೆ ಕುಮಟಾ ಮಧ್ಯವರ್ತಿ ಸ್ಥಳ ವಾಗಿರುವುದರಿಂದ ಜಿಲ್ಲೆಯ ಹಿತ ದೃಷ್ಟಿಯಿಂದ ಒಳಿತಾಗಲಿದೆ. ಅಲ್ಲದೆ ಹೆಚ್ಚಿನ ಜನರಿಗೆ ಇದರಿಂದ ಪ್ರಯೋಜನವಾಗಲಿದೆ ಎಂದು ಒತ್ತಾಯಿಸಿದರು.
ಅಂಕೋಲಾ: ರಂದು ನಡೆಯಲಿರುವ ನಾಮಧಾರಿ ದಹಿಂಕಾಲ ಉತ್ಸವದ ನಿಮಿತ್ತ ಹಮ್ಮಿಕೊಂಡಿರುವ ಬೈಕ್ ರ್ಯಾಲಿ ಎಲ್ಲರ ಗಮನ ಸೆಳೆಯಿತು. ಪಟ್ಟಣದ ಶ್ರೀ ವೆಂಕಟರಮಣ ದೇವಸ್ಥಾನದಿಂದ ಆರಂಭಗೊಂಡ ಬೈಕ್ ರ್ಯಾಲಿ ಬಾಳೆಗುಳಿ, ಶಿರಕುಳಿ, ಅಂಬಾರ ಕೊಡ್ಡ, ತೆಂಕಣಕೇರಿ, ಬೊಬ್ರವಾಡಾ, ಬೇಳಬಂದರ, ಹನುಮಟ್ಟಾ, ವಂದಿಗೆ ಸೇರಿದಂತೆ ಹಲವೆಡೆ ಸಂಚರಿಸಿ ಸಂಚಲನ ಮೂಡಿಸಿತು. ಬೈಕ್ ರ್ಯಾಲಿಯಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಪ್ರಸಕ್ತ ವರ್ಷ ವಿಜೃಂಭಣೆಯಿಂದ ನಾಮಧಾರಿದಹಿಂಕಾಲ ಉತ್ಸವವನ್ನು ಹಮ್ಮಿಕೊಳ್ಳು ನಿರ್ಧರಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ನಾಮದಾರಿ ಸಮಾಜ ದಹಿಂಕಾಲ ಉತ್ಸವ ಸಮಿತಿ ಅಧ್ಯಕ್ಷ ಮಂಜುನಾಥ ನಾಯ್ಕ, ಕಾರ್ಯದರ್ಶಿ ನ್ಯಾಯವಾದಿ ವಿನಾಯಕ ನಾಯ್ಕ ಬೊಬ್ರವಾಡಾ, ಪ್ರಮುಖರಾದ ಎಂ.ಪಿ. ನಾಯ್ಕ, ನಾಗೇಶ ನಾಯ್ಕ, ಉಪೇಂದ್ರ ನಾಯ್ಕ, ಉಮೇಶ ನಾಯ್ಕ ಬೇಳಾ, ಗಣಪತಿ ನಾಯ್ಕ (ಸುಪರ್) ಜಯಪ್ರಕಾಶ ನಾಯ್ಕ, ಮಂಜುನಾಥ ನಾಯ್ಕ ಬೆಳಂಬಾರ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಅಂಕೋಲಾ: ತಾಲೂಕಿನ ರಾಮನಗುಳಿ ಹತ್ತಿರ ಕಾರು ಮತ್ತು ಟ್ಯಾಂಕರ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ವಿಜಯ ಶ್ರೀನಾಥ ಶೆಟ್ಟಿ, ಜಗದೀಶ ಶೆಟ್ಟಿ, ಅರುಣ ಶೆಟ್ಟಿ, ಮೇದಾ ಶೆಟ್ಟಿ ಎಂಬುವವರಿಗೆ ಗಾಯಗಳಾಗಿದೆ.
ಯಲ್ಲಾಪುರ ಮಾರ್ಗದಿಂದ ಅಂಕೋಲಾ ಕಡೆ ಬರುತ್ತಿದ್ದ ಟ್ಯಾಂಕರ್ ಚಾಲಕನ ನಿರ್ಲಕ್ಷ್ಯ ಚಾಲನೆಯಿಂದ ಉಡುಪಿಯಿಂದ ಪುಣಾಕ್ಕೆ ಹೋಗುವ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. ಈ ಅಪಘಾತ ನಡೆದ ತಕ್ಷಣ ಆ ಮಾರ್ಗದಲ್ಲಿ ಹೋಗುತ್ತಿದ್ದ ಸಾಮಾಜಿಕ ಕಾರ್ಯಕರ್ತ ಗಣಪತಿ ಮೂಲೆಮನೆ ಆಂಬ್ಯುಲೆನ್ಸ್ ಬರಲು ಕಾಯದೆ ತನ್ನ ಕಾರಿನಲ್ಲಿಯೇ ಗಾಯಾಳುಗಳನ್ನು ಅಂಕೋಲಾ ತಾಲೂಕಾಸ್ಪತ್ರೆಗೆ ಸಾಗಿಸಿ ಮಾನವಿಯತೆ ಮೆರೆದಿದ್ದಾರೆ.
ಗಾಯಾಳುಗಳಿಗೆ ಅಂಕೋಲಾ ತಾಲೂಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಉಡುಪಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಾಗಿದೆ.
ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಅನಂತ ಮೂರ್ತಿ ಹೆಗಡೆ ಯವರು ಹಲವಾರು ಸಾಮಾಜಿಕ ಕಾರ್ಯ, ಶಾಲೆಗಳಿಗೆ, ಬಸ್ ಸ್ಟ್ಯಾಂಡ್, ಅಸ್ಪತ್ರೆ ಗಳಿಗೆ ಶುದ್ಧ ಕುಡಿಯುವ ನೀರು ಘಟಕ, ಜಿಲ್ಲೆ ರಿಕ್ಷಾ ಚಾಲಕರಿಗೆ ಸಮವಸ್ತ್ರ ಪಾಸಿಂಗ್ ಯೋಜನೆ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ಮೆಡಿಕಲ್ ಕಾಲೇಜು ಸಲುವಾಗಿ ಹೋರಾಟ ದಿಂದ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆ ಮಾತಾಗಿರುವ ಅನಂತ ಮೂರ್ತಿ ಹೆಗಡೆ ಯವರು ಈಗ ಜಿಲ್ಲೆಯ ಕೊನೆ ಗೌಡರ ಸೇವೆ ಹೊಸ ಯೋಜನೆ ಪ್ರಾರಂಭಿಸು ತ್ತಿದ್ದಾರೆ
ಅಡಿಕೆಯು ಬೆಳೆ ನಮ್ಮ ಜಿಲ್ಲೆಯ ಜೀವನಾಡಿ, ಕೊನೆ ಗೌಡರು ಕೊನೆ ಕೊಯ್ಯುವಾಗ, ಮದ್ದನ್ನು ಸಿಂಪಡಿಸುವಾಗ, ಮರದಿಂದ ಬಿದ್ದು ಪ್ರಾಣಕಳೆದುಕೊಳ್ಳುತ್ತಿರುವ ಪ್ರಸಂಗಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಹಾಗಾಗಿ ಇಂಥಾ ಸೇವಕರ ರಕ್ಷಣೆಗೆ ನಿಲ್ಲುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಅನಾಹುತವನ್ನು ತಡೆಯುವುದು ಅಸಾಧ್ಯವಾದರೂ, ಅದರ ಪರಿಣಾಮವನ್ನು ಸಾಧ್ಯವದಷ್ಟು ಸಹ್ಯ ಮಾಡುವುದು ನನ್ನ ಉದ್ದೇಶವಾಗಿದೆ. ಅನಂತಮೂರ್ತಿ ಹೆಗಡೆ ಟ್ರಸ್ಟ್ ವತಿಯಿಂದ, “ಇಂಡಿಯನ್ ಪೋಸ್ಟ್ ಆಫೀಸ್” ನ ಯೋಜನೆಯಾದ “ಗ್ರೂಪ್ ಆಕ್ಸಿಡೆಂಟ್ ಗಾರ್ಡ್ ಪಾಲಿಸಿ”ಯನ್ನು ಎಲ್ಲ ಕೊನೆಗೌಡರಿಗೂ ಮಾಡಿಸುವ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿದ್ದೇನೆ. ಈ ಆಕ್ಸಿಡೆಂಟ್ ಗಾರ್ಡ್ ಪಾಲಿಸಿಯು, ಅಪಘಾತದಿಂದ ಮರಣ /ಶಾಶ್ವತ ಅಂಗವೈಕಲ್ಯ /ಭಾಗಶಃ ಅಂಗವೈಕಲ್ಯಕ್ಕೆ 10,00,000 ರೂಪಾಯಿಗಳ ಕವರೇಜ್ ಹೊಂದಿದೆ. ಮತ್ತು ಈ ಪಾಲಿಸಿಯಡಿಯಲ್ಲಿ ರೂ 60,000 ವರೆಗೆ ಒಳರೋಗಿ ವೆಚ್ಚ, ರೂ 30,000 ವರೆಗೆ ಹೊರರೋಗಿ ವೆಚ್ಚ, 10 ದಿನಗಳವರೆಗೆ ರೂ 1,000 ದೈನಂದಿನ ಆಸ್ಪತ್ರೆ ನಗದು ನೆರವು, ಮೃತರ 2 ಮಕ್ಕಳಿಗೆ 1 ಲಕ್ಷ ರೂಪಾಯಿ ಶೈಕ್ಷಣಿಕ ನೆರವು, ರೂ 25,000 ವರೆಗೆ ಕುಟುಂಬ ಸಾರಿಗೆ ಪ್ರಯೋಜನ ಮತ್ತು ರೂ 5000 ವರೆಗೆ ಅಂತಿಮ ಸಂಸ್ಕಾರದ ನೆರವಿನ ಸೌಲಭ್ಯವನ್ನು ಹೊಂದಿದೆ. ಜಿಲ್ಲೆಯಾದ್ಯಂತ ಎಲ್ಲ ಕೊನೆಗೌಡರಿಗೆ ಈ ಪಾಲಿಸಿಯನ್ನು ಮಾಡಿಸುವ ಸಂಕಲ್ಪ ಮಾಡಿದ್ದೇನೆ.
ನಮ್ಮ ಸಂಸ್ಥೆ, ಜಿಲ್ಲೆಯ ಎಲ್ಲ ಸಹಕಾರಿ ಸೇವಾ ಸಂಘ ಮತ್ತು ಪಂಚಾಯತಿಗಳಿಗೆ ತಲುಪಿ, ಸ್ಥಳೀಯ ಕೊನೆಗೌಡರ ವಿವರಗಳನ್ನು ಸಂಗ್ರಹಿಸಿ ಕೊಡುವಂತೆ ಮನವಿಯನ್ನು ಸಲ್ಲಿಸುತ್ತದೆ. ಜಿಲ್ಲೆಯ ಅಡಿಕೆ ತೋಟದ ಮಾಲೀಕರು, ನಿಮ್ಮ ಮನೆಗೆ ಬರುವ ಕೊನೆಗೌಡರಿಗೆ ಈ ಸೌಲಭ್ಯದ ವಿಚಾರವನ್ನು ತಿಳಿಸಿ, ಅವರ ವಿವರಗಳನ್ನು ಸ್ಥಳೀಯ ಪಂಚಾಯತಿ ಅಥವಾ ಸೇವಾಸಹಕಾರಿ ಸಂಘಕ್ಕೆ ತಲುಪಿಸಬೇಕಾಗಿ ನಿಮ್ಮಲ್ಲಿ ಮನವಿ ಮಾಡುತ್ತಿದ್ದೇನೆ. ನಂತರ ನಮ್ಮ ಸಂಸ್ಥೆಯ ಸಿಬ್ಬಂದಿ ಮತ್ತು ಪೋಸ್ಟ್ ಆಫೀಸ್ ಸಿಬ್ಬಂದಿಗಳು ಅಲ್ಲಿಗೆ ಬಂದು, ಸಂಗ್ರಹಿಸಿದ ವಿವರಗಳನ್ನು ಸ್ವೀಕರಿಸಿ, ಪಾಲಿಸಿಯನ್ನು ಮಾಡಿಸುತ್ತಾರೆ. ಪಾಲಿಸಿ ಬಾಂಡ್ ಬಂದ ನಂತರ, ಎಲ್ಲ ಕೊನೆಗೌಡರಿಗೆ, ಔತಣಕೂಟ ಏರ್ಪಡಿಸಿ, ಗೌರವಿಸಿ, ಪಾಲಿಸಿ ಬಾಂಡನ್ನು ಹಸ್ತಾಂತರಿಸುತ್ತೇವೆ. ಮತ್ತು, ದಶಕಗಳಿಂದ ಸೇವೆ ಸಲ್ಲಿಸಿರುವ, ಹಿರಿಯ ಕೊನೆಗೌಡರನ್ನು ಗುರುತಿಸಿ, ಅವರ ಜೀವಮಾನದ ಸಾಧನೆಗಾಗಿ, ಸನ್ಮಾನ ಕಾರ್ಯಕ್ರಮವನ್ನೂ ನಡೆಸಲಿದ್ದೇವೆ ಎಂದು ಅನಂತಮೂರ್ತಿ ಹೆಗಡೆಯವರು ಪ್ರಕಟಿಸಿದ್ದಾರೆ.
ಅಂಕೋಲಾ: ಅಂಕೋಲಾ ತಾಲೂಕಿನ ವಿಭೂತಿ ಜಲಪಾತದ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಿದ ಘಟನೆ ನಡೆದಿದೆ. ತಮಿಳುನಾಡು ಮೂಲದ ಮೊಹಮ್ಮದ್ ತಾಜುದ್ದೀನ್ (19) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದು, ಈತ ನೀರಿನಲ್ಲಿ ಈಜುತ್ತಿದ್ದ ವೇಳೆ ಮುಳುಗುವ ಹಂತದಲ್ಲಿದ್ದ ಸಮಯದಲ್ಲಿ ಲೈಫ್‌ಗಾರ್ಡ್ ಸಿಬ್ಬಂದಿ ವಿಜಯ ನಾಯ್ಕ ರಕ್ಷಣೆ ಮಾಡಿದ್ದಾರೆ.
65 ವಿದ್ಯಾರ್ಥಿಗಳ ತಂಡ ವಿಭೂತಿ ಜಲಪಾತಕ್ಕೆ ಪ್ರವಾಸಕ್ಕೆಂದು ಬಂದಿದ್ದರು. ದಾಂಡೇಲಿ ಪ್ರವಾಸ ಮುಗಿಸಿ ವಿಭೂತಿ ಫಾಲ್ಸ್‌ಗೆ ಬಂದಿದ್ದ ತಂಡಕ್ಕೆ ನೀರಿನಲ್ಲಿ ಇಳಿಯದಂತೆ ಮೊದಲೇ ಎಚ್ಚರಿಕೆ ನೀಡಿದ್ದರೂ ನೀರಿನಲ್ಲಿ ಇಳಿದ ಪರಿಣಾಮ ಈ ಘಟನೆ ನಡೆದಿದೆ.
ಕುಮಟಾ : ತಾಲೂಕಿನ ಹೆಗಡೆಯಲ್ಲಿ ಕಳೆದ ವಾರವಷ್ಟೇ ಚಿರತೆಯಿಂದ ಭಯದ ಗೂಡಿಗೆ ತಳ್ಳಲ್ಪಟ್ಟ ಜನರು, ಚಿರತೆ ಬೋನಿಗೆ ಬೀಳುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ಇದೀಗ ತಾಲೂಕಿನ ಮಿರ್ಜಾನ್, ಕೊಡ್ಕಣಿ, ಕಿಮಾನಿ, ಬರ್ಗಿ ಭಾಗದಲ್ಲಿ ಚಿರತೆ ಪ್ರತ್ಯಕ್ಷವಾಗಿ ಜನರ ಎದೆಯಲ್ಲಿ ನಡುಕ ಹುಟ್ಟಿಸಿದೆ. ಮುಸಂಜೆಗೇ ರಸ್ತೆಗೆ ಬರುವ ಚಿರತೆಗಳನ್ನು ಕಂಡು ಹಲವರು ಬೆಚ್ಚಿ ಸ್ಥಳದಿಂದ ಕಾಲುಕಿತ್ತಿರುವ ಘಟನೆಯೂ ನಡೆದಿದೆ.
ಮಿರ್ಜಾನಿನ ಕಿಮಾನಿ ಬೆಳಗಾರಣಿ ಬೆಟ್ಟ ಮತ್ತು ಕೋಡ್ಕಣಿಯಲ್ಲಿ ಸಂಚರಿಸುವ ರಸ್ತೆ ಅಂಚಿನಲ್ಲಿ ಐದಾರು ದಿನಗಳಿಂದ ಸಂಜೆ 7 ಗಂಟೆಯಿಂದ ರಸ್ತೆ ಬದಿಯಲ್ಲಿ ಚಿರತೆಗಳು ಕಾಣಿಸಿಕೊಳ್ಳುತ್ತಿದೆ. ಇದು 3-4 ವರ್ಷದ ಚಿರತೆ ಮರಿಗಳಾಗಿದೆ ಎಂದು ಪತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ. ಅದಲ್ಲದೆ ಅರಣ್ಯ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜನರು ಓಡಾಡುವ ಪ್ರದೇಶದಲ್ಲಿ ಚಿರತೆಗಳ ಓಡಾಟ ಹೆಚ್ಚಾಗಿದ್ದು, ಈ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಇದೀಗ ಕಿಮಾನಿಯ ಬೆಳಗಾರಣಿ ಅರಣ್ಯ ಪ್ರದೇಶದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಸಾಮಾಜಿಕ ಜಾಲತಾಣದಲ್ಲಿಯೂ ಸುದ್ದಿ ಹಬ್ಬುತ್ತಿದೆ. ಮಿರ್ಜಾನ್ ಮತ್ತು ಕಿಮಾನಿ ಸುತ್ತಮುತ್ತ 3 ವರ್ಷದ ಚಿರತೆ ಮರಿ ಜನರ ಕಣ್ಣಿಗೆ ಬಿದ್ದಿರುವ ಸುದ್ದಿ ಇದೀಗ ಅರಣ್ಯ ಅಧಿಕಾರಿಗಳ ಹಾಗೂ ಸ್ಥಳೀಯರ ನಿದ್ದೆಗೆಡಿಸಿದೆ. ಈ ಮಾರ್ಗದಲ್ಲಿ ಅನೇಕ ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಓಡಾಡುವ ಕಾರಣದಿಂದ ಅಪಾಯ ಎದುರಾಗಬಹುದು ಎಂಬ ಆತಂಕ ಮನೆ ಮಾಡಿದೆ.
ನಾನು ಈ ಮಾರ್ಗದಲ್ಲಿ ಓಡಾಡುವಾಗ ಚಿರತೆಯನ್ನು ಗಮನಿಸಿದ್ದೇನೆ. ವಾಹನದ ದೀಪಕ್ಕೆ ನಮ್ಮನ್ನೇ ಗುರಾಯಿಸುವ ಚಿರತೆ, ಯಾವಾಗ ಮೈ ಮೇಲೆ ಎರಗುತ್ತದೆಯೋ ಎಂದು ಒಮ್ಮೆ ಭಯಪಡುವ ಸ್ಥಿತಿ ನಿರ್ಮಾಣವಾಗುತ್ತದೆ. ಅರಣ್ಯ ಇಲಾಖೆಯವರೆಗೂ ಮಾಹಿತಿ ನೀಡಿದ್ದು ಈ ಬಗ್ಗೆ ಅವರು ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. – ರಾಘವೇಂದ್ರ ಪಟಗಾರ, ಸ್ಥಳೀಯ ನಿವಾಸಿ.
ಇತ್ತೀಚಿನ ದಿನದಲ್ಲಿ ದಿನಗಳಲ್ಲಿ ಚಿರತೆಗಳು ಕರಾವಳಿಯಲ್ಲಿ ಕಾಣಿಸಿಕೊಳ್ಳುತ್ತಿದೆ. ಸ್ಥಳೀಯರು ಅರಣ್ಯ ಇಲಾಖೆ ಸಿಬ್ಬಂದಿಗಳಿಗೆ ಮಾಹಿತಿ ನೀಡಿದ ಬಗ್ಗೆ ಪರಿಶೀಲಿಸುತ್ತೇನೆ. ಜನರಿಗೆ ಸಮಸ್ಯೆ ಆಗದಂತೆ ತಕ್ಷಣದಲ್ಲಿ ನಾವು ಕ್ರಮ ಕೈಗೊಳ್ಳುತ್ತೇವೆ. – ರವಿಶಂಕರ್, ಅರಣ್ಯ ಇಲಾಖೆ ಅಧಿಕಾರಿ.
ಕುಮಟಾ : ಅಂಕೋಲಾ ತಾಲೂಕಾ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟದಲ್ಲಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿದ್ಯಾರ್ಥಿ ಲಕ್ಷ್ಮೀಶ ಶಂಕರ ಹಳ್ಳೇರ ೫೦ ಮೀ ಓಟ ಪ್ರಥಮ ಸ್ಥಾನ ಮತ್ತು ಗುಂಡುಎಸೆತದಲ್ಲಿ ದ್ವಿತೀಯ ಸ್ಥಾನ. ವಿದ್ಯಾರ್ಥಿನಿ ದೇವಕಿ ಮಂಜುನಾಥ ಗೌಡ ಜಾವಲಿನ್ ಎಸೆತ ಮತ್ತು ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಯಿಂದ ಶಾಲೆಗೆ ಕೀರ್ತಿ ತಂದಿರುತ್ತಾರೆ. ವಿಜೇತ ವಿದ್ಯಾರ್ಥಿಗಳಿಗೆ ಹಾಗೂ ಮಾರ್ಗದರ್ಶನ ನೀಡಿದ ದೈಹಿಕ ಶಿಕ್ಷಕ ನಾಗರಾಜ ಜಿ. ನಾಯಕರವರಿಗೆ ಮಹಾತ್ಮಗಾಂಧಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಹೊನ್ನಪ್ಪ ಎನ್. ನಾಯಕ, ಉಪಾಧ್ಯಕ್ಷ ಶ್ರೀಕಾಂತ ನಾಯಕ, ಕಾರ್ಯದರ್ಶಿಗಳಾದ ಮೋಹನ ಬಿ. ಕೆರೆಮನೆ ಹಾಗೂ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷ ಶಾಂತಾ ಎನ್. ನಾಯಕ, ಮಾದನಗೇರಿಯ ಸುನೀಲ್ ಪೈ, ಆಶ್ರಯ ಪೌಂಡೇಶನ್ ರಾಜೀವ ಗಾಂವಕರ, ಶಾಲೆಯ ಮುಖ್ಯಾಧ್ಯಾಪಕ ರೋಹಿದಾಸ ಎಸ್ ಗಾಂವಕರ ಮತ್ತು ಶಿಕ್ಷಕವೃಂದದವರು ಮತ್ತು ಹಿರೇಗುತ್ತಿ ಸೊಸೈಟಿ ಅಧ್ಯಕ್ಷ ವಿನಾಯಕ (ಪಾಪು) ಮೋಹನ ನಾಯಕ ಮತ್ತು ಹಿರೇಗುತ್ತಿ ಬ್ರಹ್ಮ ಜಟಕ ಯುವಕ ಸಂಘದ ಅಧ್ಯಕ್ಷ ಸಣ್ಣಪ್ಪ ಮಾರುತಿ ನಾಯಕ ಹಾಗೂ ಸದಸ್ಯರು, ಹಾಗೂ ಊರಿನ ನಾಗರಿಕರು ಅಭಿನಂದನೆ ಸಲ್ಲಿಸಿ ಮುಂದಿನ ಹಂತಕ್ಕೆ ಶುಭ ಕೋರಿದ್ದಾರೆ.