Satwadhara News

Category: HONNAVAR

ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

  • ಹೊನ್ನಾವರದಲ್ಲಿ ತರಂಗ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಬೃಹತ್ ಶೋರೂಮ್ ಉದ್ಘಾಟನೆ

    ಹೊನ್ನಾವರದಲ್ಲಿ ತರಂಗ ಇಲೆಕ್ಟ್ರಾನಿಕ್ಸ್ ಮತ್ತು ಫರ್ನೀಚರ್ ಬೃಹತ್ ಶೋರೂಮ್ ಉದ್ಘಾಟನೆ

    ಗ್ರಾಹಕರಿಗೆ ಅನನ್ಯವಾದ ಸೇವೆಯಿಂದ ಎಲ್ಲೆಡೆ ವಿಶ್ವಾಸಮಾನ್ಯತೆ ಗಳಿಸಿರುವ ಜಿಲ್ಲೆಯ ಗ್ರಹೋಪಕರಣ ಹಾಗೂ ಪೀಠೋಪಕರಣಗಳ ಬೃಹತ್ ಮಳಿಗೆಯಾಗಿರುವ ಇಲ್ಲಿನ ತರಂಗ ಇಲೆಕ್ಟ್ರಾನಿಕ್ಸ ಹಾಗೂ ಫರ್ನಿಚರ್ ಸಂಸ್ಥೆಯ ಹೊನ್ನಾವರದ ಶಾಖಾ ಮಳಿಗೆಯು ನೂತನ ವಿಶಾಲ, ಸುಸಜ್ಜಿತ ಮಳಿಗೆಗೆ ಗುರುವಾರ ವಿಧ್ಯುಕ್ತವಾಗಿ ಸ್ಥಳಾಂತರಗೊಂಡಿತು.


    ಹೊನ್ನಾವರ ಪಟ್ಟಣದ ಬ್ಯಾಂಕ್‌ರಸ್ತೆಯ ವಿನಾಯಕ ಛೇಂಬರ್ಸ ಕಟ್ಟಡದಲ್ಲಿ ತರಂಗ ಇಲೆಕ್ಟ್ರಾನಿಕ್ಸ್ ಬೃಹತ್ ಶೋರೂಂ ಶುಭಾರಂಭಗೊಂಡಿದ್ದು, ಬೆಂಗಳೂರಿನಲ್ಲಿರುವ ನಿವೃತ್ತ ಇಂಜಿನಿಯರ್ ಕಾಮೇಶ್ವರ ಟಿ. ಭಟ್ಟ ತುಂಬ್ಲೇಮಠ ಕಾರ್ಯಕ್ರಮ ಉದ್ಘಾಟಿಸಿದರು.


    ಬಳಿಕ ಮಾತನಾಡಿ, ಇಷ್ಟು ವರ್ಷಗಳ ಕಾಲ ತರಂಗ ಇಲೆಕ್ಟ್ರಾನಿಕ್ಸ್ ಸಂಸ್ಥೆಯನ್ನು ಅತ್ಯಂತ ಉತ್ತಮವಾಗಿ ನಡೆಸಿಕೊಂಡು ಗ್ರಾಹಕರಿಗೆ ವಿಶ್ವಾಸಾರ್ಹ ಸೇವೆ ಒದಗಿಸಿದಂತೆಯೇ ಮುಂಬರುವ ದಿನಗಳಲ್ಲಿಯೂ ಅದೇ ರೀತಿಯ ಸೇವೆ ಸಲ್ಲಿಸುವಂತಾಗಲಿ. ಸಂಸ್ಥೆಯು ಇನ್ನಷ್ಟು ಬೆಳೆದು ಇನ್ನೂ ಹೆಚ್ಚಿನ ಮಳಿಗೆಗಳನ್ನು ತೆರೆಯುವಂತಾಗಲಿ ಎಂದು ಶುಭಹಾರೈಸಿದರು.


    ಮುಖ್ಯ ಅತಿಥಿ ಹೊನ್ನಾವರ ಎಂ.ಪಿ.ಇ ಸೊಸೈಟಿ ಅಧ್ಯಕ್ಷ ಕೃಷ್ಣಮೂರ್ತಿ ಭಟ್ ಶಿವಾನಿ ಮಾತನಾಡಿ, ಕಳೆದ ೨೫ ವರ್ಷಗಳಿಂದ ನಾನು ಸಹ ತರಂಗ ಇಲೆಕ್ಟ್ರಾನಿಕ್ಸನ ಸಂತೃಪ್ತ ಗ್ರಾಹಕನಾಗಿದ್ದು, ಈ ಸಂಸ್ಥೆಯ ಬಗ್ಗೆ ನನಗೆ ಅಪಾರವಾದ ಗೌರವವಿದೆ ಎಂದು ಸಂತಸ ವ್ಯಕ್ತಪಡಿಸಿದರು.
    ಸಂಸ್ಥೆಯ ಮುಖ್ಯಸ್ಥರಾದ ತುಂಬ್ಲೇಮಠ ಕುಟುಂಬದ ಶ್ರೀಕಾಂತ ಭಟ್ಟ ಮಾತನಾಡಿ, ತರಂಗ ಇಲೆಕ್ಟ್ರಾನಿಕ್ಸ ನ ಮಾತೃಸಂಸ್ಥೆ ದಿ.ಕೆ.ಟಿ.ಭಟ್ಟ ಪ್ರವರ್ತಿತ ಶ್ರೀ ಗಜಾನನ ರೇಡಿಯೋ ಮತ್ತು ಇಲೆಕ್ಟ್ರಿಕಲ್ಸ ೧೯೬೮ಪ್ರಾರಂಭವಾಗಿ ಅಸಂಖ್ಯ ಜನಮಣ್ಣನೆ ಗಳಿಸಿ ಬೆಳೆದಿತ್ತು. ನಂತರ ೧೯೮೮ ರಲ್ಲಿ ಕುಮಟಾದಲ್ಲಿ ಪ್ರಾರಂಭವಾದ ಹೊಸ ಹೆಸರಿನೊಂದಿಗೆ ನಮ್ಮ ತರಂಗ ಇಲೆಕ್ಟ್ರಾನಿಕ್ಸ ಸಂಸ್ಥೆಯು ಆರಂಭಗೊಂಡು ಕೆಲ ವರ್ಷಗಳಿಂದ ಶಿರಸಿ ಹಾಗೂ ಹೊನ್ನಾವರಗಳಲ್ಲೂ ಯಶಸ್ವಿಯಾಗಿ ವಿಸ್ತರಿಸಿದೆ. ಇದೀಗ ನಮ್ಮ ಹೊನ್ನಾವರದ ಮಳಿಗೆಯನ್ನು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ನೂತನ ಸುಸಜ್ಜಿತ ವಿಶಾಲ ಕಟ್ಟಡಕ್ಕೆ ಸ್ಥಳಾಂತರಿಸಿದ್ದೇವೆ. ಎಂದಿನಂತೆ ನಮ್ಮ ನೆಚ್ಚಿನ ಗ್ರಾಹಕರು ಮುಕ್ತವಾಗಿ ಬಂದು ತಮ್ಮ ಆಯ್ಕೆಗೆ ತಕ್ಕಂತೆ ಸಂತೃಪ್ತಿಯಿಂದ ವಿಶ್ವಾಸಪೂರ್ಣ ವ್ಯವಹಾರ ಅನನ್ಯವಾದ ಸೇವೆ ಪಡೆಯಬಹುದಾಗಿದೆ ಎಂದು ತಿಳಿಸಿದರು.


    ಅತಿಥಿಗಳಾಗಿ ಉದ್ಯಮಿ ಜಗದೀಶ ಟಿ. ಪೈ, ಉದ್ಯಮಿ ರಾಜೇಶ ವಿ. ಸಾಳೇಹಿತ್ತಲ, ಉದ್ಯಮಿ ಮಂಜುನಾಥ ಶೇಟ ಪಾಲ್ಗೊಂಡು ಶುಭ ಹಾರೈಸಿದರು. ತರಂಗ ಇಲೆಕ್ಟ್ರಾನಿಕ್ಸ ಮತ್ತು ಫರ್ನಿಚರ್‍ಸ ಸಂಸ್ಥೆಯ ಜಯಶ್ರೀ ಭಟ್ಟ, ವಸಂತ ಭಟ್ಟ, ಜಯಂತ ಭಟ್ಟ ಹಾಗೂ ಕುಟುಂಬದವರು, ಹಿತೈಶಿಗಳು, ಗ್ರಾಹಕರು, ಸಂಸ್ಥೆಯ ಸಿಬ್ಬಂದಿ ಉಪಸ್ಥಿತರಿದ್ದರು.

  • ಮೇ ೧೦ ರಂದು ಬಂಗಾರಮಕ್ಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ

    ಮೇ ೧೦ ರಂದು ಬಂಗಾರಮಕ್ಕಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಶಿಲಾನ್ಯಾಸ

    ಹೊನ್ನಾವರ : ತಾಲೂಕಿನ ಶ್ರೀ ಕ್ಷೇತ್ರ ಬಂಗಾರಮಕ್ಕಿ ಹಾಗೂ ಬೆಂಗಳೂರಿನ ಸುದೀಕ್ಷಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಹಯೋಗದ ಮಹಾತ್ವಾಕಾಂಕ್ಷೆಯ ಯೋಜನೆಯಾದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭವ್ಯ ಕಟ್ಟಡದ ಶಿಲಾನ್ಯಾಸ ಸಮಾರಂಭವನ್ನು ಮೇ ೧೦ ರಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ ಅಕ್ಷಯ ತೃತೀಯ ಶುಭ ದಿನದಂದು ಹಮ್ಮಿಕೊಳ್ಳಲಾಗಿದೆ.
    ಇತ್ತೀಚೆಗಷ್ಟೇ ಶ್ರೀಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿಗಳಾದ ಶ್ರೀ ಮಾರುತಿ ಗುರೂಜಿ ಮತ್ತು ಸುದೀಕ್ಷಾ ಹೆಲ್ತ್ ಕೇರ್ ಪ್ರೈವೇಟ್ ಲಿಮಿಟೆಡ್‌ನ ಸಿ.ಎಂ.ಡಿ. ಡಾ. ಸುಬ್ರಹ್ಮಣ್ಯಂ ಶರ್ಮ ಗೌರವರಂ ಅವರು ಕ್ಷೇತ್ರದಲ್ಲಿ ನಡೆದ ಮಲೆನಾಡ ಉತ್ಸವದ ಉದ್ಘಾಟನೆಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಗೆ ಉನ್ನತ ದರ್ಜೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲಾಗುವುದು ಎಂದು ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಎರಡು ಸಂಸ್ಥೆಗಳ ಸಹಯೋಗದೊಂದಿಗೆ ಜಂಟಿಯಾಗಿ ನಿರ್ಮಾಣವಾಗುತ್ತಿರುವ ಈ ಆಸ್ಪತ್ರೆ ಉತ್ತರ ಕನ್ನಡ ಜಿಲ್ಲೆಯ ಜನರ ಬಹು ವರ್ಷಗಳ ಕೂಗಿಗೆ ಮನ್ನಣೆ ನೀಡಿದಂತಾಗಿದೆ.

    ಅಂದು ಮುಂಜಾನೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಭವ್ಯ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದ್ದು, ಅನಂತರ ಮಧ್ಯಾಹ್ನ ೧೨.೩೦ಕ್ಕೆ ಕ್ಷೇತ್ರದ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಧರ್ಮಾಧಿಕಾರಿ ಶ್ರೀ ಮಾರುತಿ ಗುರೂಜಿಯವರ ದಿವ್ಯ ಸಾನಿಧ್ಯದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಶಿವಮೊಗ್ಗದ ಶ್ರೀ ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀ ಸ್ವಾಮಿ ವಿನಯಾನಂದ ಸರಸ್ವತಿಯವರು ದಿವ್ಯ ಉಪಸ್ಥಿತಿ ವಹಿಸುವರು.
    ಸುದೀಕ್ಷಾ ಗ್ರೂಪ್ ಆಪ್ ಕಂಪನಿಯ ಸಿ.ಎಂ.ಡಿ. ಡಾ. ಸುಬ್ರಹ್ಮಣ್ಯಂ ಶರ್ಮ ಗೌರವರಂ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಿವಮೊಗ್ಗದ ಸರ್ಜಿ ಆಸ್ಪತ್ರೆಗಳ ಸಮೂಹದ ಮುಖ್ಯಸ್ಥ ಡಾ. ಧನಂಜಯ ಸರ್ಜಿ, ಉ.ಕ. ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ವಿನೋದ ವಿ. ಅನ್ವೇಕರ, ಮಂಗಳೂರಿನ ಎಸ್. ಎಸ್. ಸೊಲ್ಯೂಷನ್‌ನ ಸನ್ನಿತ್ ಕೃಷ್ಣ ಶೇಟ್, ಅಖಿಲ ಭಾರತ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಗೋವಿಂದ ಕುಲಕರ್ಣಿ, ಹಿರಿಯ ಸಾಹಿತಿ ಮಹಾಬಲ ಮೂರ್ತಿ ಕೊಡ್ಲೆಕೆರೆ ಬೆಂಗಳೂರು, ಹಿರಿಯ ಪತ್ರಕರ್ತ ಬಿ. ಗಣಪತಿ ಬೆಂಗಳೂರು, ತಾಲೂಕು ವೈದ್ಯಾಧಿಕಾರಿ ಉಷಾ ಹಾಸ್ಯಗಾರ, ಕೊಲ್ಹಾಪುರದ ಮಾಸ್ಟರ್ ಮೈಂಡ್ಸ್ ಕಂಪನಿಯ ಕಟ್ಟಡ ವಿನ್ಯಾಸಕ ಮಹೇಶ ದೋಹಿಪಡೆ, ಸುದೀಕ್ಷ ಹೆಲ್ತ್ ಕೇರ್ ಪ್ರೆöÊವೇಟ್ ಲಿಮಿಟೆಡ್‌ನ ನಿರ್ದೇಶಕಿ ರಶ್ಮಿ ಕೆ.ವಿ., ಉತ್ತರ ಕನ್ನಡ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಯ ಕಾರ್ಯದರ್ಶಿ ಅರ್ಪಿತಾ ಮಾರುತಿ ಗುರೂಜಿ ಪಾಲ್ಗೊಳ್ಳಲಿದ್ದಾರೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

    ಯೋಜಿತ ಆಸ್ಪತ್ರೆಯು ಉನ್ನತ ದರ್ಜೆಯ ವೈದ್ಯಕೀಯ ಸೌಲಭ್ಯಗಳನ್ನು ಜಿಲ್ಲೆಯ ಜನತೆಗೆ ಒದಗಿಸಲಿದ್ದು, ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದೂರದ ಜಿಲ್ಲೆಗಳಿಗೆ ಪ್ರಯಾಣ ಸುವ ಪರಿಸ್ಥಿತಿ ತಪ್ಪಿಸಲಿದೆ. ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ವೈದ್ಯಕೀಯ ಸೇವೆಗಳನ್ನು ಜನತೆಗೆ ಒದಗಿಸಲು ಉನ್ನತ ತಂತ್ರಜ್ಞಾನ, ಉಪಕರಣಗಳು ಮತ್ತು ತಜ್ಞ ವೈದ್ಯರ ತಂಡವನ್ನು ಸಮರ್ಥವಾಗಿ ಸಜ್ಜುಗೊಳಿಸಲಾಗುವುದು. ಪ್ರಸ್ತುತ ಶಿಲಾನ್ಯಾಸ ಸಮಾರಂಭವು ಈ ಯೋಜನೆಯ ಮೊದಲ ಹಂತವಾಗಿದ್ದು, ಆಸ್ಪತ್ರೆಯ ನಿರ್ಮಾಣ ಕಾರ್ಯಗಳಿಗೆ ಚಾಲನೆ ನೀಡಲಿದೆ.

    ಆಸ್ಪತ್ರೆ ಕಟ್ಟಡದ ಶಿಲಾನ್ಯಾಸ ಸಮಾರಂಭದಲ್ಲಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಗೆ ಪ್ರೋತ್ಸಾಹಿಸಬೇಕೆಂದು ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ಮಾರುತಿ ಗುರೂಜಿ ಸಾರ್ವಜನಿಕರಲ್ಲಿ ಕೋರಿದ್ದಾರೆ.

  • ನಾಗಸಹಿತಳಾದ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತಿ ಹಾಗೂ ಶತಚಂಡಿಕಾ ಯಾಗ. 

    ನಾಗಸಹಿತಳಾದ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತಿ ಹಾಗೂ ಶತಚಂಡಿಕಾ ಯಾಗ. 

    ಹೊನ್ನಾವರ : ತಾಲೂಕಿನ ಹೊಸಾಕುಳಿ ಗ್ರಾಮದ ಶ್ರೀ ಲಕ್ಷ್ಮೀನಾರಾಯಣ ಮತ್ತು ಶ್ರೀ ಉಮಾಮಹೇಶ್ವರ ದೇವರ ಸನ್ನಿಧಿಯಲ್ಲಿ ಹಾಗೂ ಹೊಸಾಕುಳಿ ಗ್ರಾಮದ ಹಿರೇಮಕ್ಕಿಯಲ್ಲಿ ಅನಾದಿಯಿಂದ ನೆಲೆಸಿರುವ ನಾಗಸಹಿತಳಾದ ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ವಾರ್ಷಿಕ ವರ್ಧಂತಿ ಹಾಗೂ ಶತಚಂಡಿಕಾ ಯಾಗವನ್ನು ರಾಮಚಂದ್ರಾಪುರ ಮಠದ ಶ್ರೀಶ್ರೀಶ್ರೀ ರಾಘವೇಶ್ವರ ಭಾರತೀ ಶ್ರೀಗಳವರ ಮಾರ್ಗದರ್ಶನದಂತೆ ಚೈತ್ರ ಶುದ್ಧ ತ್ರಯೋದಶಿ ಎ.೨೧ ರಿಂದ ರವಿವಾರದಿಂದ ಚೈತ್ರ ಶುದ್ಧ ಪೂರ್ಣಿಮೆ ಎ.೨೩ ಮಂಗಳವಾರದ ಪರ್ಯಂತ ಹಮ್ಮಿಕೊಂಡಿದ್ದು,  ವೇ.ಮೂ.ಶ್ರೀ ಶಂಕರ ಗಣಪತಿ ಭಟ್ಟ, ತೋಟಿ ಗಾಣಗೇರಿ ಇವರ ಪ್ರಧಾನ ಆಚಾರ್ಯತ್ವದಲ್ಲಿ ಈ ಕಾರ್ಯಕ್ರಮಗಳು ನೆರವೇರಲಿವೆ. ಭಗವತ್ ಪ್ರೀತ್ಯರ್ಥವಾಗಿ, ಲೋಕಕಲ್ಯಾಣಾರ್ಥವಾಗಿ ನೆರವೇರಲಿರುವ ಈ ಕಾರ್ಯಕ್ರಮಕ್ಕೆ ಸಮಸ್ತ ಭಕ್ತಾದಿಗಳು ಸಕುಟುಂಬ ಸಪರಿವಾರದೊಂದಿಗೆ ಆಗಮಿಸಿ, ಶ್ರೀದೇವರ ಕೃಪಾಶೀರ್ವಾದಕ್ಕೆ ಭಾಜನರಾಗುವಂತೆ ಶ್ರೀ ದುರ್ಗಾಂಬಾ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

    ಶ್ರೀ ದೇವಿಯ ದಿವ್ಯ ಸನ್ನಿಧಿಯಲ್ಲಿ ದೇವತಾ ಪ್ರಾರ್ಥನೆ, ಶ್ರೀ ಗಣೇಶ ಪೂಜೆ, ನಾಂದಿ, ಮಾತೃಕಾ ಪೂಜೆ, ಕೌತುಕ ಪೂಜೆ, ಪುಣ್ಯಾಹ, ಪ್ರಧಾನ ಸಂಕಲ್ಪ, ಋತ್ವಿಕ್ ವರ್ಣನೆ. ಮಧುಪರ್ಕಪೂಜೆ. ಬ್ರಹ್ಮಕೂರ್ಚಹೋಮ, ಅಷ್ಟದ್ರವ್ಯಾತ್ಮಕ ಅಷ್ಟನಾರಿಕೇಳ ಗಣಹವನ, ಶ್ರೀ ದುರ್ಗಾಸಪ್ತಶತೀ ಪಾರಾಯಣ, ಮಹಾಮಂಗಳಾರತಿ, ಪ್ರಸಾದ ಭೋಜನಗಳು ರವಿವಾರ ಬೆಳಗ್ಗೆ ನಡೆದರೆ, ಸಂಜೆ ಶಾಂತಿಮಂತ್ರ ಪಠಣ, ವಿಷ್ಣು ಸಹಸ್ರನಾಮ ಪಠಣ. ನವಾಕ್ಷರೀ ಜಪ, ಕುಂಕುಮಾರ್ಚನೆ, ಮಂಗಳಾರತಿ ನಡೆಯಲಿದೆ.

    ಸೋಮವಾರ ಬೆಳಗ್ಗೆ, ಶಾಂತಿಮಂತ್ರ ಪಠಣ, ಶ್ರೀ ದುರ್ಗಾಸಪ್ತಶತೀ ಪಾರಾಯಣ, ಅಗ್ನಿಗ್ರಹಣ, ದುರ್ಗಾ ಹೋಮ, ಕಲಾವೃದ್ಧಿ ಹೋಮ, ಮಹಾಮಂಗಳಾರತಿ, ಪ್ರಸಾದ ಭೋಜನ. ಸಂಜೆ – ಯಾಗಶಾಲಾ ಪ್ರವೇಶ, ಕುಂಡ-ಮಂಟಪಸಂಸ್ಕಾರ, ಯೋಗಿನೀಬಲಿ, ರಾಜೋಪಚಾರ ಪೂಜೆ, ಮಂಗಳಾರತಿ ನಡೆಯಲಿದೆ.

    ಮಂಗಳವಾರ ಬೆಳಗ್ಗೆ, ನವಗ್ರಹಶಾಂತಿ, ಅನ್ನಸಂತರ್ಪಣೆ, ಆಶೀರ್ವಚನ. ಶತಚಂಡಿಕಾಯಾಗ, ಪೂರ್ಣಾಹುತಿ, ಮಹಾಪೂಜೆ, ಅನ್ನಸಾರ್ಪಣೆ ಆಶೀರ್ವಚನ ನಡೆಯಲಿದೆ. ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

  • ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ.

    ಉತ್ತರಕನ್ನಡದಲ್ಲಿ ತಂಪೆರೆದ ಮಳೆರಾಯ.

    ಕುಮಟಾ : ಜಿಲ್ಲೆಯ ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಜಿಲ್ಲೆಯ ಕುಮಟಾ, ಅಂಕೋಲಾ,‌ ಹೊನ್ನಾವರ ಸೇರಿದಂತೆ ಕರಾವಳಿಯ ತಾಲೂಕಿನ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಮಳೆ ಉಂಟಾಗಿದೆ. ಈ ಮೂಲಕ ಸುಡು ಬಿಸಿಲಿನಿಂದ ಪರಿತಪಿಸುತ್ತಿದ್ದ ಉತ್ತರಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆರಾಯ ತಂಪೆರೆದಿದ್ದಾನೆ.

    ಕಳೆದ ಎರಡು ದಿನಗಳಿಂದ ಭಾರೀ ಮೊಡಕವಿದ ವಾತಾವಣ ಇತ್ತು. ವಿಪರೀತವಾದ ಬಿಸಿಲಿನ ಧಗೆಗೆ ಕಂಗೆಟ್ಟಿದ್ದ ಜನತೆಗೆ ತಂಪಾಗಿಸಿದ ವರುಣ ತಂಪೆರೆದಿದೆ. ಕಳೆದೆರಡು ದಿನಗಳಿಂದ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಅಬ್ಬರಿಸಿತ್ತು. ಇಂದು ಬೆಳ್ಳಂಬೆಳಿಗ್ಗೆ ಕುಮಟಾ, ಅಂಕೋಲಾ ಭಾಗದಲ್ಲಿ ಮಳೆ ಸುರಿಯುತ್ತಿದ್ದು ತಂಪೆರೆದಿದೆ.

    ಇನ್ನೂ ಜಿಲ್ಲೆಯಲ್ಲಿ ಎಪ್ರಿಲ್ 22ರ ವರೆಗೆ ಮಳೆ ಸುರಿಯುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ ಭಾಗದಲ್ಲಿ ಕಳೆದೆರಡು ದಿನಗಳಿಂದ ಭಾರೀ ಮಳೆ ಉಂಟಾಗುತ್ತಿದೆ. ಇನ್ನೂ ಎರಡು ದಿನ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುವ ಬಗ್ಗೆ ಇಲಾಖೆ ಮಾಹಿತಿ ನೀಡಿದೆ.

  • ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ

    ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಘೋಷಣೆ


    ಹೊನ್ನಾವರ: ಉತ್ತರ ಕನ್ನಡ ಜಿಲ್ಲೆಗೊಂದು ಅತ್ಯುನ್ನತ ದರ್ಜೆಯ ಆಸ್ಪತ್ರೆ ಬೇಕು ಎಂಬ ಸ್ಥಳೀಯರ ಕೂಗಿ ಇಂದು ಇನ್ನೆಯದಲ್ಲ. ಇದೀಗ ಸಿಹಿ ಸುದ್ದಿ ಲಭ್ಯವಾಗಿದ್ದು ತಾಲೂಕಿನ ಗೇರಸೊಪ್ಪೆಯ ಬಂಗಾರಮಕ್ಕಿ ಶ್ರೀ ವೀರಾಂಜನೇಯ ಕ್ಷೇತ್ರದಿಂದ ಆಧುನಿಕ ತಂತ್ರಜ್ಞಾನದ ಎಲ್ಲ ಸೌಲಭ್ಯಗಳನ್ನೊಳಗೊಂಡ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ನೀಡಲಾಗುವುದು ಎಂದು ರಾಮನವಮಿಯಂದು ಘೋಷಿಸಲಾಗಿದೆ.
    ತಾಲೂಕಿನ ಗೇರಸೊಪ್ಪೆಯ ಶ್ರೀ ಬಂಗಾರಮಕ್ಕಿ ಕ್ಷೇತ್ರದ ಶ್ರೀ ವೀರಾಂಜನೇಯ ಸಭಾಭವನದಲ್ಲಿ ನಡೆದ ಸಂಸ್ಕೃತಿ ಕುಂಭ ಮಲೆನಾಡ ಉತ್ಸವ-೨೦೨೪ ರ ಉದ್ಘಾಟಿಸಿದ ಬೆಂಗಳೂರಿನ ಸುದೀಕ್ಷ ಗ್ರೂಪ್ ಆಫ್ ಕಂಪನಿಯ ಸಿಎಂಡಿ ಡಾ. ಸುಬ್ರಹ್ಮಣ್ಯಂ ಶರ್ಮ ಗೌರವರಂ, ಶ್ರೀ ಕ್ಷೇತ್ರ ಬಂಗಾರಮಕ್ಕಿ ಮತ್ತು ತಮ್ಮ ಕಂಪನಿಯ ಸಹಯೋಗದೊದಿಗೆ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಲಾಗುವುದು ಎಂದು ಪ್ರಕಟಿಸಿದರು.


    ‘ಉತ್ತರ ಕನ್ನಡ ಜಿಲ್ಲೆಯಲ್ಲಿ ಉನ್ನತ ದರ್ಜೆಯ ಆಸ್ಪತ್ರೆಯಿಲ್ಲದೇ ನೂರಾರು ಜೀವಗಳು ಆತಂಕದಿAದ ಇದ್ದು ಈ ತನಕ ಅದಕ್ಕೆ ಪರಿಹಾರ ರೂಪದ ಉತ್ತರ ಸಿಕ್ಕಿಲ್ಲ. ಜನರ ಕೂಗಿಗೆ ಬೆಲೆಯೇ ಇಲ್ಲವಾಗಿದೆ, ಜಿಲ್ಲೆಗೊಂದು ದಾರಿ ತೋರಿಸಿ’ ಎಂದು ಕ್ಷೇತ್ರದ ಶ್ರೀ ಮಾರುತಿ ಗುರೂಜಿ ಅವರು ತಮ್ಮ ಬಳಿ ನೋವಿನಿಂದ ಹೇಳಿಕೊಂಡರು. ಅವರ ನಿಷ್ಕಲ್ಮಶ ಧ್ವನಿಗೆ ಬೆಲೆ ಕೊಟ್ಟು ಉತ್ತರ ಕನ್ನಡ ಜಿಲ್ಲೆಗೆ ಈ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡಲಾಗುತ್ತಿದೆ. ಜನರ ಸಹಕಾರ ಕೊಟ್ಟು ಪ್ರಯೋಜನ ಪಡೆಯುವಂತಾಗಲಿ ಎಂದು ಆಶಿಸಿದರು.


    ಆಸ್ಪತ್ರೆ ಮಾತ್ರವಲ್ಲದೇ ಅತ್ಯತ್ತಮ ವ್ಯವಸ್ಥೆಯ ಇಂಜಿನಿಯರಿAಗ್ ಕಾಲೇಜನ್ನೂ ಕೂಡ ಇಲ್ಲಿ ಆರಂಭಿಸಲಾಗುವುದು. ಈ ಕಾಲೇಜು ದೇಶದ ಪ್ರತಿಷ್ಠಿತ ಕಾಲೇಜುಗಳೊಂದಿಗೆ ಸ್ಪರ್ಧೆ ಮಾಡುವ ಅರ್ಹತೆಯುಳ್ಳ ಗುಣಮಟ್ಟ ಹೊಂದಿರುತ್ತದೆ ಎಂದರು.
    ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬೆಂಗಳೂರಿನ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮೆಡಿಕಲ್ ಡೈರೆಕ್ಟರ್ ಡಾ.ಚೇತನ್ ಆರ್. ವೇದಿಕೆಯಲ್ಲಿ ಪ್ರಸ್ತಾಪಿತ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಯೋಜನೆಗೆ ತಮ್ಮ ಆಸ್ಪತ್ರೆಯಿಂದ ಎಲ್ಲ ಸಹಕಾರ ನೀಡಲಾಗುವುದು ಎಂದು ಹೇಳಿದರಲ್ಲದೇ, ಕ್ಷೇತ್ರದಿಂದ ಸಿಬಿಎಸ್‌ಸಿ ಪಠ್ಯಕ್ರಮದಡಿ ನಡೆಸುತ್ತಿರುವ ಪಿಯುಸಿ ದ್ವಿತೀಯ ವರ್ಷದಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ತಮ್ಮ ತಂದೆಯವರ ಹೆಸರಿನಲ್ಲಿ ಚಿನ್ನದ ಪದಕ ನೀಡಲಾಗುವುದು ಎಂದರು.


    ಇನ್ನೋರ್ವ ಮುಖ್ಯ ಅತಿಥಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಮಾತನಾಡಿ ಜಿಲ್ಲೆಗೆ ಉನ್ನತ ದರ್ಜೆಯ ಆಸ್ಪತ್ರೆ ಬೇಕೆಂದು ಜನ ಹಲವಾರು ವರ್ಷಗಳಿಂದ ಸರಕಾರಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಈ ಕೂಗಿಗೆ ರಾಜಕೀಯ ಬಣ್ಣ ಬಳಿದು ಚುನಾವಣಾ ಸಮಯದ ಸರಕನ್ನಾಗಿ ಕೆಲವರು ಮಾಡಿಕೊಂಡು ಆಸ್ಪತ್ರೆಯ ಕನಸು ಗಗನಕುಸುಮವಾಗಿಯೇ ಉಳಿದಿತ್ತು. ಇದೀಗ ಡಾ. ಸುಬ್ರಹ್ಮಣ್ಯಂ ಅವರು ಜಿಲ್ಲೆಗೊಂದು ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿಕೊಟ್ಟರೆ ಉತ್ತರ ಕನ್ನಡ ಜಿಲ್ಲೆ ಅವರಿಗೆ ಶರಣಾಗಿರುತ್ತದೆ ಎಂದರು.


    ವೇದಿಕೆಯಲ್ಲಿ ದಿವ್ಯಸಾನಿಧ್ಯ ವಹಿಸಿದ್ದ ಶ್ರೀ ಮಾರುತಿ ಗುರೂಜಿ ಅವರು ‘ಉತ್ತರ ಕಾಣದ ಜಿಲ್ಲೆ’ ಎಂದು ವಿಡಂಬನಾತ್ಮಕವಾಗಿ ಕರೆಯಲ್ಪಡುವ ಈ ಜಿಲ್ಲೆಗೆ ಅತಿ ಸನಿಹದಲ್ಲಿಯೇ ಸೂಪರ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮತ್ತು ಉತ್ತಮ ದರ್ಜೆಯ ಇಂಜಿನಿಯರಿAಗ್ ಕಾಲೇಜು ಬರುತ್ತಿರುವುದರ ಜೊತೆಗೆ ದಿವ್ಯಾಂಗರ ವಿಶ್ವ ವಿದ್ಯಾಲಯ ಕೂಡ ಕ್ಷೇತ್ರದ ವತಿಯಿಂದ ಆಗಲಿದೆ. ಇದು ದೇಶ ಮಾತ್ರವಲ್ಲ, ಜಾಗತಿಕವಾಗಿಯೂ ವಿಶಿಷ್ಟವಾಗಲಿದೆ ಎಂದರು.


    ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರದ ಆಡಳಿತಾಧಿಕಾರಿ ಎಂ.ಎನ್. ಮಂಜುನಾಥ್ ಬಂಗಾರಮಕ್ಕಿ ಕ್ಷೇತ್ರ ಯಾವತ್ತೂ ಜನಪರವಾಗಿ ಸ್ಪಂದಿಸುತ್ತದೆ. ಇದೀಗ ಡಾ. ಸುಬ್ರಹ್ಮಣ್ಯಂ ಶರ್ಮ ಅವರು ಕ್ಷೇತ್ರದ ಅಭಿಲಾಷೆಗೆ ಬೆನ್ನೆಲುಬಾದದ್ದು ಜಿಲ್ಲೆಯ ಅದೃಷ್ಟ. ಎಂದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಬಂಗಾರಮಕ್ಕಿಯ ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಯ ಕಾರ್ಯದರ್ಶಿ ಅರ್ಪಿತಾ ಮಾರುತಿ ಗುರೂಜಿ ಅವರು ಉಪಸ್ಥಿತರಿದ್ದರು. ಗಣಪತಿ ಹೆಗಡೆ ಸ್ವಾಗತಿಸಿದರು. ಶಿಕ್ಷಕ ದಯಾನಂದ ನಾಯ್ಕ ವಂದಿಸಿದರು. ಗೋಪಾಲಕೃಷ್ಣ ನಾಯ್ಕ ಮತ್ತು ಕವಿತಾ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.

  • ಮನೆಯ ಬಾಗಿಲಿಗೆ ಬಂದು ನಾಯಿ ಹೊತ್ತೊಯ್ದ ಚಿರತೆ.

    ಮನೆಯ ಬಾಗಿಲಿಗೆ ಬಂದು ನಾಯಿ ಹೊತ್ತೊಯ್ದ ಚಿರತೆ.

    ಹೊನ್ನಾವರ ತಾಲೂಕಿನ ಹಳದೀಪುರದ ಕುದಬೈಲ್ ನ ಪ್ರಾಥಮಿಕ ಶಾಲೆಯ ಪಕ್ಕದ ಮನೆಯ ಬಾಗಿಲಿಗೆ ಬಂದ ಚಿರತೆ ಅಲ್ಲಿದ್ದ ನಾಯಿಮರಿಯನ್ನು ಹೊತ್ತು ಹೋಗಿರುವ ಘಟನೆ ಮನೆಯವರು ಅಳವಡಿಸಿದ ಸಿ.ಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸೋಮವಾರ ನಡುರಾತ್ರಿ 12 ರ ಸುಮಾರಿಗೆ ಚಿರತೆ ಕುದಬೈಲ್ ನ ರಮೇಶ ನಾಯ್ಕ ಎಂಬುವವರ ಮನೆಯಂಗಳಕ್ಕೆ ಬಂದು, ಮಲಗಿದ್ದ ನಾಯಿ ಮರಿಯ ಮೇಲೆ ದಾಳಿ, ಕುತ್ತಿಗೆ ಹಿಡಿದುಕೊಂಡು ಓಡಿಹೋಗಿದೆ.

    ಈ ಭಾಗದಲ್ಲಿ ಸರಿಸುಮಾರು ಐವತ್ತಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದು, ಸುಮಾರು 300ಕ್ಕೂ ಅಧಿಕ ಜನರು ಸುತ್ತಲೂ ವಾಸಿಸುತ್ತಿದ್ದಾರೆ. ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಪ್ರದೇಶದಂತಿರುವ ಈ ಗ್ರಾಮದಲ್ಲಿ ಈ ಹಿಂದಿನಿಂದಲೂ ಚಿರತೆಗಳ ಓಡಾಟದ ಭಯ ಇದ್ದೇ ಇತ್ತು. ಮುಸಂಜೆಯ ಸಮಯದಲ್ಲಿಯೇ ಚಿರತೆಗಳು ಓಡಾಡುವುದನ್ನು ಅನೇಕರು ಗಮನಿಸಿದ್ದು ಅರಣ್ಯ ಇಲಾಖೆಗೂ ಮಾಹಿತಿ ನೀಡಿದ್ದರು. ಸಂಬಂಧಪಟ್ಟವರು ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಜನರು ಆಗ್ರಹಿಸಿದ್ದಾರೆ.

    ವಿಡಿಯೋ

  • ಗ್ಯಾಸ್ ಟ್ಯಾಂಕರ್ ಪಲ್ಟಿ, ಕೆಲಕಾಲ ಭಯದ ವಾತಾವರಣ.

    ಗ್ಯಾಸ್ ಟ್ಯಾಂಕರ್ ಪಲ್ಟಿ, ಕೆಲಕಾಲ ಭಯದ ವಾತಾವರಣ.

    ಹೊನ್ನಾವರ : ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಪಕ್ಕದ ಆಳದ ಹೊಂಡದಲ್ಲಿ ಗ್ಯಾಸ್ ತುಂಬಿದ ಟ್ಯಾಂಕರ್ ಬಿದ್ದು, ಗ್ಯಾಸ್ ಸೋರಿಕೆಯ ಪರಿಣಾಮ ಕೊಂಚ ಕಾಲ ಗೊಂದಲದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಘಟನೆಯಿಂದ ಮೂರು ವಿದ್ಯುತ್ ಕಂಬಗಳು ಮರಿದು ಬಿದ್ದಿದ್ದು, ವಿದ್ಯುತ್ ಕಡಿತ ಉಂಟಾಗಿದೆ. ಇದರಿಂದಾಗಿ ಹೊನ್ನಾವರ ಪಟ್ಟಣ ಕತ್ತಲು ಆವರಿಸಿಕೊಂಡಂತಾಗಿತ್ತು.

    ಅನಿಲ ಸೋರಿಕೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ ಸಂಚಾರ ಅಸ್ತವ್ಯಸ್ತ ವಾಯಿತು. ಮಂಗಳೂರಿನಿಂದ ಹುಬ್ಬಳ್ಳಿಯ ಕಡೆಗೆ ಹೋಗುತ್ತಿದ್ದ ಗ್ಯಾಸ್ ಟ್ಯಾಂಕರ್ ಇದು ಎನ್ನಲಾಗಿದೆ. ಹೊನ್ನಾವರದಿಂದ ಕುಮಟಾಕ್ಕೆ‌ ಹೋಗುವ ಕಾಮತ್ ಎಕ್ಸಿಕ್ಯೂಟ್ಯೂವ್ ಹೋಟೆಲ್ ಪಕ್ಕದಲ್ಲಿರುವ ಆಳದ ಹೊಂಡಕ್ಕೆ ಬಿದ್ದಿದು ಕಾಮತ್ ಎಕ್ಸಕ್ಯೂಟಿವ್ ಹತ್ತಿರ ಮನೆ ಮೇಲೆ ಬಿದ್ದು ಅವಾಂತರ ಸೃಷ್ಟಿಯಾಗಿತ್ತು.

    ಈ ಘಟನೆಗೆ ಐ ಆರ್ ಬಿ ಕಂಪನಿಯ ಅವೈಜ್ಞಾನಿಕ ಕಾಮಗಾರಿ ಕಾರಣ ಎಂದು ಹೇಳಲಾಗುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿ, ಯ್ಯಾವುದೆ ಆತಂಕ ಇಲ್ಲವೆಂದು ತಿಳಿಸಿದ ನಂತರ ಜನರು ನಿಟ್ಟುಸಿರು ಬಿಟ್ಟಿದ್ದಾರೆ.

  • ಅಕ್ರಮ ಮರಳು ಸಾಗಾಟ ತಡೆದ ಗ್ರಾಮಸ್ಥರು.

    ಅಕ್ರಮ ಮರಳು ಸಾಗಾಟ ತಡೆದ ಗ್ರಾಮಸ್ಥರು.

    ಹೊನ್ನಾವರ : ಸಮುದ್ರದ ಅಂಚಿನಲ್ಲಿ ಸಿಲಿಕಾನ್ ಸ್ಯಾಂಡ್ / ಸಮುದ್ರದ ಅಂಚಿನ ಮರಳು ಸಾಗಾಟ ನಡೆಸುವಾಗ ಸ್ಥಳೀಯರ ವಿರೋಧ ವ್ಯಕ್ತಪಡಿಸಿ, ವಾಹನ ತಡೆದು ಪ್ರತಿಭಟನೆ ನಡೆಸಿದ ಘಟನೆ ಶುಕ್ರವಾರ ರಾತ್ರಿ ತಾಲೂಕಿನ ಹಳದಿಪುರ ಗ್ರಾಮ ಪಂಚಾಯತ ವ್ಯಾಪ್ತಿಯ ಗೋಳಿಬೆಟ್ಟೆಯಲ್ಲಿ ನಡೆದಿದೆ.

    ಸಮುದ್ರದ ಅಂಚಿನಲ್ಲಿರುವ ಮರಳನ್ನು ಸಾಗಾಟ ಮಾಡಲು, ಐದು ಟಿಪ್ಪರ ವಾಹನ, ಒಂದು ಹಿಟಾಚಿ ಸಮೇತ ದೊಡ್ಡ ಮಟ್ಟದಲ್ಲಿ ಮರಳು ಸಾಗಾಟ ಮಾಡಲು ಸಂಬಂಧ ಪಟ್ಟವರು ಆಗಮಿಸಿ ಮರಳು ತುಂಬಿ ಸಾಗಾಟ ಮಾಡುವ ಪ್ರಯತ್ನದಲ್ಲಿದ್ದಾಗ ಸ್ಥಳೀಯ ಸಾರ್ವಜನಿಕರು ದಿಢೀರ್‌ ಪ್ರತಿಭಟನೆ ಮಾಡಿ ವಾಹನದ ಟೈಯರ್ ನ ಗಾಳಿ ತೆಗೆದು, ವಾಹನ ತಡೆದು ಮರಳು ಸಾಗಾಟಕ್ಕೆ ತಡೆ ಒಡ್ಡಿದ್ದಾರೆ. ಸಾರ್ವಜನಿಕರ ಬೃಹತ್ ಪ್ರತಿಭಟನೆಗೆ ಮರಳು ಸಾಗಾಟಕ್ಕೆ ಬಂದವರು ಸ್ಥಳದಿಂದ ಪಲಾಯನಗೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

    ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಆಗಮಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದ್ದರು. ಮರಳಿಗೆ ಸಂಬಂಧ ಪಟ್ಟವರು ಸ್ಥಳಕ್ಕೆ ಬರಬೇಕು ಎಂದು ಸ್ಥಳೀಯ ಜನರು ಪಟ್ಟು ಹಿಡಿದರು ಎನ್ನಲಾಗಿದೆ. ಬೆಳಿಗ್ಗೆ ತನಕವು ವಾಹನ ಸ್ಥಳದಲ್ಲೇ ತಡೆದು ನಿಲ್ಲಿಸಲಾಗಿತ್ತು. ಹಳದಿಪುರ, ಗೋಳಿಬೆಟ್ಟೆ ಸಮುದ್ರದ ಅಂಚಿನಿಂದ ಮರಳು ತುಂಬಿ ಅಲ್ಲಿಂದ ಕೋಣಕಾರ ಹತ್ತಿರ ಸಾಗಾಟ ಮಾಡಿ ಅಲ್ಲಿಂದ ಹೊರ ಜಿಲ್ಲೆಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನಲಾಗಿದೆ.

    ಮರಳು ಸಾಗಾಟಕ್ಕೆ ಹೊರ ಜಿಲ್ಲೆಯ ಹಲವು ಬಾರಿ ವಾಹನ ಸ್ಥಳಕ್ಕೆ ಬಂದು ಜಮಾವಣೆ ಆಗಿತ್ತು ಎನ್ನಲಾಗಿದೆ. ಅಕ್ರಮ ಮರಳು ದಂದೆ ನಡೆಯುವ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಭೂ ಮತ್ತು ಗಣಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಮರಳು ಸಾಗಾಟ ಮಾಡದಂತೆ ತಡೆಯಬೇಕು ಸಂಬಂಧ ಪಟ್ಟವರ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

  • ಪಾಪಣ್ಣ ವಿಜಯ- ಗುಣಸುಂದರಿ ಯಕ್ಷಗಾನ

    ಪಾಪಣ್ಣ ವಿಜಯ- ಗುಣಸುಂದರಿ ಯಕ್ಷಗಾನ

    ಹೊನ್ನಾವರ: ತಾಲೂಕಿನ ಸಾಸ್ಕೋಡ್ ಗ್ರಾಮದ ಬೊಂಡಕಾರ ದೇವಸ್ಥಾನದ ಬಯಲಿನಲ್ಲಿ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ ಪಾಪಣ್ಣ ವಿಜಯ- ಗುಣಸುಂದರಿ ಏಳನೇ ವರ್ಷದ ಯಕ್ಷಗಾನ ಬಯಲಾಟ ಮಾರ್ಚ್12 ರಂದು 8 ಗಂಟೆಗೆ ನಡೆಯಲಿದೆ. ಗೆಳೆಯರ ಬಳಗ ಗುಮ್ಮೆಕೇರಿ ಸಾಸ್ಕೋಡ್ ಇವರು ಯಕ್ಷಗಾನ ಆಯೋಜಿಸಿದ್ದು, ಭಾಗವತರಾಗಿ ರಾಮಕೃಷ್ಣ ಹೆಗಡೆ ಹಿಲ್ಲೂರು, ಗಣೇಶ ಯಾಜಿ ಇಡಗುಂಜಿ ಕಾಣಿಸಿಕೊಳ್ಳಲಿದ್ದಾರೆ. ಮದ್ದಳೆಯಲ್ಲಿ ನಾಗರಾಜ ಭಂಡಾರಿ ಹಿರೆಬೈಲ್, ಚಂಡೆಯಲ್ಲಿ ಗಜಾನನ ಸಾತುರು ಸಾತ್ ನೀಡಲಿದ್ದಾರೆ.

    ಮುಮ್ಮೇಳದಲ್ಲಿ ಅಶೋಕ ಭಟ್ ಸಿದ್ದಾಪುರ, ಗಣಪತಿ ಹೆಗಡೆ ತೋಟಿಮನೆ, ಅಶ್ವಿನಿ ಕೊಂಡದಕುಳಿ, ನಾಗಶ್ರೀ ಜಿ.ಎಸ್, ನಾಗೇಶ ಕುಳಿಮನೆ, ರಾಮ ಹೆಗಡೆ ಸಾಣ್ಮನೆ, ಸ್ತ್ರೀ ಪಾತ್ರದಲ್ಲಿ ನಾಗರಾಜ ಕುಂಕಿಪಾಲ, ರಕ್ಷಿತ್ ಕುಳಿಮನೆ, ಮಾರುತಿ ನಾಯ್ಕ ಬೈಲಗದ್ದೆ, ಹಾಸ್ಯ ಪಾತ್ರದಲ್ಲಿ ಶ್ರೀಧರ ಹೆಗಡೆ ಚಪ್ಪರಮನೆ, ಶ್ರೀಧರ ಭಟ್ ಕಾಸರಕೋಡ, ಬಾಲ ಕಲಾವಿದರಾದ ಸುಭಾಸ್, ಸಂದೀಪ, ವಿನಿತಾ, ದಿಶಾ ಕಲಾ ಪ್ರದರ್ಶನ ನೀಡಲಿದ್ದು, ಯಕ್ಷಗಾನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಲೆ ಹಾಗೂ ಕಲಾವಿದರನ್ನು ಪೊತ್ಸಾಹಿಸುವಂತೆ ಸಂಘಟಕರು ಮನವಿ ಮಾಡಿದ್ದಾರೆ.

  • ಹೊನ್ನಾವರ-ಮಲ್ಲಾಪುರ ರಸ್ತೆಯ ಹಾಳಾದ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಕಾಮಗಾರಿಗೆ ಅರೆಅಂಗಡಿಯಲ್ಲಿ ಗುದ್ದಲಿಪೂಜೆ

    ಹೊನ್ನಾವರ-ಮಲ್ಲಾಪುರ ರಸ್ತೆಯ ಹಾಳಾದ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಕಾಮಗಾರಿಗೆ ಅರೆಅಂಗಡಿಯಲ್ಲಿ ಗುದ್ದಲಿಪೂಜೆ

    ಕುಮಟಾ : ಶಾಸಕ ದಿನಕರ ಕೆ. ಶೆಟ್ಟಿ ಅವರು ಹೊನ್ನಾವರ-ಮಲ್ಲಾಪುರ ರಸ್ತೆಯ ಹಾಳಾದ ಆಯ್ದ ಭಾಗಗಳಲ್ಲಿ ಡಾಂಬರೀಕರಣ ಕಾಮಗಾರಿಗೆ ಅರೆಅಂಗಡಿಯಲ್ಲಿ ಗುದ್ದಲಿಪೂಜೆ ನೆರವೇರಿಸಿದರು. 2022-23ನೇ ಸಾಲಿನ 5054 ಯೋಜನೆಯಡಿಯಲ್ಲಿ, ಹೊನ್ನಾವರ-ಮಲ್ಲಾಪುರ ರಸ್ತೆಯ ಕಿ.ಮೀ. 8.50ರಿಂದ ಕಿ.ಮೀ. 10.80ರ ವರೆಗೆ ಹಾಗೂ ಕಿ.ಮೀ. 15.00 ದಿಂದ ಕಿ.ಮೀ. 18.70 ವರೆಗೆ ಹಾಳಾದ ಆಯ್ದ ಭಾಗಗಳಲ್ಲಿ ಡಾಂಬರೀಕಾರಣ ಮಾಡುವ 200.00 ಅಂದಾಜು ಮೊತ್ತದ ಕಾಮಗಾರಿ ಇದಾಗಿದೆ.

    ಭೂಮಿಪೂಜೆ ನೆರವೇರಿಸಿ ಮಾತನಾಡಿದ ಶಾಸಕರು ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮೂಲಭೂತ ಸೌಕಾರ್ಯಗಳ ಅಭಿವೃದ್ಧಿಗಾಗಿ ದಾಖಲೆಯ ಪ್ರಮಾಣದಲ್ಲಿ ಅನುದಾನವನ್ನು ಒದಗಿಸಲಾಗಿತ್ತು. ಹೊನ್ನಾವರ ತಾಲೂಕಿನ ಹಳ್ಳಿಗಳ ರಸ್ತೆಯ ಸುಧಾರಣೆಗಾಗಿ ವಿಶೇಷ ಕಾಳಜಿವಹಿಸಿದ್ದರಿಂದ ಇಂದು ಬಹುತೇಕ ಹಳ್ಳಿಗಳು ಅತ್ಯುತ್ತಮ ರಸ್ತೆಯನ್ನು ಹೊಂದಿವೆ. ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೆ ಏರಿಸಲು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಸಾಕಷ್ಟು ಅನುದಾನವನ್ನು ಒದಗಿಸಿದ್ದರು. ಇದರಿಂದ ಕುಮಟಾ-ಚಂದಾವರ, ಚಂದಾವರ-ಸಂತೆಗುಳಿ, ಚಂದಾವರ-ಅರೆಅಂಗಡಿ ರಸ್ತೆಯ ಬಹುತೇಕ ಭಾಗ ಪೂರ್ಣಗೊಂಡಿದೆ. ಉಳಿದ ಆಯ್ದ ಭಾಗಗಳ ಡಾಂಬರೀಕರಣಕ್ಕೆ ಹಿಂದಿನ ವರ್ಷ ಅನುದಾನ ಒದಗಿಸಿದ್ದೆ. ಟೆಂಡರ್ ಪ್ರಕ್ರಿಯೆ ಮುಗಿದಿತ್ತು ಆದರೆ ಚುನಾವಣೆ ಘೋಷಣೆ ಆಗಿದ್ದರಿಂದ ಕಾಮಗಾರಿ ಪ್ರಾರಂಭಿಸಲು ವಿಳಂಬವಾಯಿತು. ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಒಂದುವೇಳೆ ಕಾಮಗಾರಿ ಕಳಪೆಯಾಗಿ ಕಂಡುಬಂದರೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಹೇಳಿದರು.

    ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಸುಬ್ರಹ್ಮಣ್ಯ ಭಟ್, ಉಪಾಧ್ಯಕ್ಷ ನಾಗರಾಜ ಭಾಗವತ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಮ್. ಎಸ್. ನಾಯ್ಕ, ಗ್ರಾಮಪಂಚಾಯತ್ ಸದಸ್ಯರುಗಳಾದ ಗೋವಿಂದ ಗೌಡ, ಗಜಾನನ ಮಡಿವಾಳ, ರಜನಿ ನಾಯ್ಕ, ಭಾರತೀಯ ಜನತಾ ಪಾರ್ಟಿಯ ಸ್ಥಳೀಯ ಪ್ರಮುಖರಾದ ಜಿ. ಜಿ. ಭಟ್, ಆರ್. ಎಮ್. ಹೆಗಡೆ, ಎನ್. ಎಸ್. ಹೆಗಡೆ, ಎಮ್. ಎಸ್. ಹೆಗಡೆ ಹಾಗೂ ಇತರರು ಇದ್ದರು.