ಕುಮಟಾ : ಮೀನುಗಾರಿಕೆಗೆಂದು ತೆರಳಿದ ವೇಳೆ ಯುವಕನೋರ್ವ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಸಾವನ್ನಪ್ಪಿದ ಘಟನೆ ಕುಮಟಾದಲ್ಲಿ ನಡೆದಿದೆ. ಇಲ್ಲಿನ ಮಣಕಿ ಸಮೀಪ ಕಟ್ಟಿಗೆ ಮಿಲ್ ಸನಿಹದ ಅಘನಾಶಿನಿ ನದಿಯಲ್ಲಿ ಈ ದುರ್ಘಟನೆ ನಡೆದಿದ್ದು, ಪುನಿಯಾ ಭಂಡಾರಿ ಈ ದುರ್ಘಟನೆಯಲ್ಲಿ ಸಾವನ್ನಪ್ಪಿದ ಯುವಕನಾಗಿದ್ದಾನೆ. ಹೊಸಹಿತ್ತಲ ಬೇಲೆ ಸಮೀಪದಲ್ಲಿ ಅಘನಾಶಿನಿ ನದಿಯಲ್ಲಿ ಮೀನುಗಾರಿಗೆ ತೆರಳಿದ ಸಂದರ್ಭದಲ್ಲಿ ಕಾಲುಜಾರಿ ಬಿದ್ದಿದ್ದು ಈತ ಸಾವನ್ನಪ್ಪಿದ ಬಗ್ಗೆ ಪ್ರಕರಣ ದಾಖಲಾಗಿದೆ.
Category: KUMTA
ಉತ್ತರಕನ್ನಡದ ಕುಮಟಾ ತಾಲೂಕಿನಲ್ಲಿ ನಡೆದ ಕಾರ್ಯಕ್ರಮಗಳ ವರದಿ ಮತ್ತು ಇನ್ನಿತರ ಘಟನಾವಳಿಗಳ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.
-
ಸರಸ್ವತಿ ಪಿ.ಯು ಕಾಲೇಜಿನಲ್ಲಿ ಭಕ್ತಿ ಭಾವದಿಂದ ನೆರವೇರಿದ ಶಾರದಾ ಪೂಜೆ
ಕುಮಟಾ : ವಿಧಾತ್ರಿ ಅಕಾಡೆಮಿ ಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರ್ಕರ್ಸ್ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಶಾರದಾ ಪೂಜೆ ಯನ್ನು ಭಕ್ತಿ ಭಾವದಿಂದ ಆಚರಿಸಲಾಯಿತು. ನಾಡಿನಾದ್ಯಂತ ನವರಾತ್ರಿ ಹಬ್ಬದ ಸಂದರ್ಭದಲ್ಲಿ ವಿಜೃಂಭಣೆಯಿಂದ ಶಾರದಾ ಮಾತೆಯನ್ನು ಪೂಜಿಸಿ ಅವಳ ಕೃಪೆಗೆ ಪಾತ್ರರಾಗುವುದು ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ. ನವರಾತ್ರಿಯ ಏಳನೆಯ ದಿನವಾದ ಶನಿವಾರ ಸಪ್ತಮಿ ತಿಥಿಯಂದು ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಪದಾಧಿಕಾರಿಗಳು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಎಲ್ಲರೂ ಒಟ್ಟಾಗಿ ಸೇರಿ ಶಾರದಾ ಮಾತೆಯನ್ನು ಪೂಜಿಸಿ ವಿದ್ಯಾರ್ಥಿಗಳ ಹಾಗೂ ಸಂಸ್ಥೆಯ ಏಳಿಗೆಗೆ ತಾಯಿಯ ಆಶಿರ್ವಾದವನ್ನು ಪಡೆದುಕೊಂಡರು.
ಪ್ರಾಂಶುಪಾಲರಾದ ಶ್ರೀ. ಕಿರಣ ಭಟ್ಟ ರವರು ವೈದಿಕರಾದ ಶ್ರೀ. ನಾಗರಾಜ ಭಟ್ಟ ಕೂಜಳ್ಳಿ ಇವರ ಮಾರ್ಗದರ್ಶನದಲ್ಲಿ ತಾಯಿ ಶಾರದೆಯ ಪೂಜೆಯನ್ನು ನೆರವೇರಿಸಿದರು. ವಿದ್ಯಾರ್ಥಿನಿಯರು ಭಜನೆಗಳನ್ನು ಹಾಡಿದರು. ವಿದ್ಯಾರ್ಥಿಗಳು ಪಟಾಕಿ ಸಿಡಿಸಿ ಸಂತಸಪಟ್ಟರು. ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ಕೊಂಕಣ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರು, ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ. ಗುರುರಾಜ ಶೆಟ್ಟಿ, ಉಪಪ್ರಾಂಶುಪಾಲರಾದ ಶ್ರೀಮತಿ ಸುಜಾತಾ ಹೆಗಡೆ, ಉಪನ್ಯಾಸಕರುಗಳು, ಅಂಗಸಂಸ್ಥೆಯ ಮುಖ್ಯಸ್ಥರು, ಶಿಕ್ಷಕರು, ಸಿಬ್ಬಂದಿ ವರ್ಗದವರು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದು ತಾಯಿ ಶಾರದಾಂಬೆಯ ಕೃಪೆಗೆ ಪಾತ್ರರಾದರು.
-
‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಉದ್ಘಾಟನೆ.
ಕುಮಟಾ: ಕುಮಟಾದಲ್ಲಿ ನಿತ್ಯೋಪಯೋಗಿ ವಸ್ತುಗಳನ್ನು ಗ್ರಾಹಕರಿಗೆ ನೀಡುವ ಮೂಲಕ ಮನೆಮಾತಾದ ಉದಯ ಬಜಾರ್ ನ ಇನ್ನೊಂದು ಶಾಖೆ ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ (66)ರ ಕುಮಟಾ ಬಸ್ ಡಿಪೋ ಕ್ರಾಸ್ ಎದುರಿನಲ್ಲಿ ಸ್ಥಾಪಿತವಾದ ಸುಸಜ್ಜಿತ ಕಟ್ಟಡದಲ್ಲಿ ಇಂದು ಉದ್ಘಾಟನೆಗೊಂಡಿತು.
ನೂತನವಾಗಿ ನಿರ್ಮಾಣವಾಗಿರುವ `ಉದಯ ಸ್ಪೋರ್ಟ್ಸ್ ವರ್ಲ್ಡ’ ನೂತನ ಮಳಿಗೆಯನ್ನು ಕುಮಟಾ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ ನಾಯ್ಕ ಉದ್ಘಾಟಿಸಿ ಮಾತನಾಡಿದರು. ಉಡುಪಿಯ ಪ್ರಸಿದ್ಧ ಉದ್ಯಮಿ ರಮೇಶ ಬಂಗೇರ ಅವರ ಮಾಲೀಕತ್ವದಲ್ಲಿ ನೂತನ ಮಳಿಗೆ ಶುಭಾರಂಭಗೊಂಡಿದ್ದು, ಹಲವಾರು ವರ್ಷಗಳಿಂದ ಉದಯ್ ಬಜಾರ್ ಸಂಸ್ಥೆ ಕುಮಟಾ ಮತ್ರವಲ್ಲದೇ ಇಡೀ ಜಿಲ್ಲೆಯ ಜನರ ಪ್ರೀತಿ-ವಿಶ್ವಾಸವನ್ನು ಗಳಿಸಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯಾವುದೇ ಗೃಹ ಬಳಕೆಯ ವಸ್ತುಗಳನ್ನು ಖರೀದಿಸುವುದಿದ್ದರೆ ನಮಗೆ ಮೊದಲು ನೆನಪಾಗುವುದು ಉದಯ ಬಜಾರ್. ಇದೀಗ ಇನ್ನಷ್ಟು ಹೊಸತನದೊಂದಿಗೆ ನೂತನವಾಗಿ `ಸ್ಪೋರ್ಟ್ಸ ವರ್ಲ್ಡ್’ ಮಳಿಗೆ ಆರಂಭಿಸುವ ಮೂಲಕ ಹೊಸ ಹೆಜ್ಜೆ ಇರಿಸಿದೆ ಇದು ಯಶಸ್ಸು ಪಡೆಯಲಿ ಎಂದು ಅವರು ಶುಭ ಹಾರೈಸಿದರು.
ನಮ್ಮ ಇಲಾಖೆಯಲ್ಲಿ ವಲಯಮಟ್ಟ, ತಾಲೂಕಾಮಟ್ಟ, ಜಿಲ್ಲಾಮಟ್ಟ ಮತ್ತು ವಿಭಾಗಮಟ್ಟ ಹೀಗೆ ಹಲವಾರು ಕ್ರೀಡಾಕೂಟಗಳು ಪ್ರತೀ ವರ್ಷ ನಡೆಯುತ್ತವೆ. ಈ ಕ್ರೀಡಾಕೂಟಕ್ಕೆ ಬೇಕಾದ ಅಗತ್ಯ ಪರಿಕರಗಳು ಪೂರ್ಣಪ್ರಮಾಣದಲ್ಲಿ ಲಭ್ಯವಿರದ ಕಾರಣ ಹೊರ ಜಿಲ್ಲೆಗೆ ಹೋಗಿ ತರಬೇಕಾದ ಅನಿವಾರ್ಯತೆ ಇತ್ತು ಎಂದು ಅವರು ಅಭಿಪ್ರಾಯಪಟ್ಟರು.
ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಗ್ರೇಡ್-2 ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ಟ ಸೂರಿ ಮಾತನಾಡಿ, ಉದ್ಯಮಿ ರಮೇಶ ಬಂಗೇರ ಅವರ ಇಚ್ಛೆಯಂತೆ ಕುಮಟಾದಲ್ಲಿ `ಸ್ಪೋಟ್ರ್ಸ್ ವಲ್ರ್ಡ್’ ಮಳಿಗೆ ಆರಂಭಿಸುವ ಬಹುದಿನದ ಕನಸು ಇದೀಗ ಈಡೇರಿದೆ. ಜನತೆ ಉದಯ್ ಬಜಾರನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಂಡಿದ್ದಾರೆ. ಸಂಸ್ಥೆಯೂ ಸಹ ಜನರ ಮೇಲೆ ಅತ್ಯಂತ ಗೌರವದಿಂದ ಕಂಡಿದೆ. ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಸಾಮಗ್ರಿಗಳು ಕುಮಟಾ ಭಾಗದ ಜನರಿಗೆ ಕಡಿಮೆ ದರದಲ್ಲಿ ದೊರಕಬೇಕು ಎಂಬ ಕನಸನ್ನು ಬಂಗೇರ ಅವರು ಹೊತ್ತಿದ್ದರು. ಇದು ಕೇವಲ ಅವರೊಬ್ಬರ ಕನಸಾಗಿರಲಿಲ್ಲ, ಇದು ನಮ್ಮೆಲ್ಲರ ಕನಸಾಗಿತ್ತು. ಕ್ರೀಡಾ ಸಾಮಗ್ರಿಗಾಗಿ ವಿವಿಧ ಜಿಲ್ಲೆಯನ್ನು ಸುತ್ತುವ ಸ್ಥಿತಿ ಇತ್ತು. ಇಂದು ಬಂಗೇರ ಅವರ ಕಸಿನ ಜತೆ ನಮ್ಮ ಕನಸೂ ಈಡೇರಿದಂತಾಗಿದೆ. ಈ ಮಳಿಗೆ ನಮ್ಮದು ಎಂದು ಭಾವಿಸಿ, ಪ್ರೀತಿಯಿಂದ ಕಟ್ಟಿ ಬೆಳೆಸುವ ಜತೆಗೆ ಸಂಪೂರ್ಣ ಸಹಕಾರವನ್ನೂ ನೀಡುತ್ತೇವೆ ಎಂದರು.
ಸಿಪಿಐ ತಿಮ್ಮಪ್ಪ ನಾಯ್ಕ ಮಾತನಾಡಿ, ವೇಗವಾಗಿ ಬೆಳೆಯುತ್ತಿರುವ ಕುಮಟಾ ಪಟ್ಟಣಕ್ಕೆ ಸ್ಪೋಟ್ರ್ಸ್ ಮಳಿಗೆಯ ಅವಶ್ಯಕತೆ ತೀರಾ ಇತ್ತು. ಆ ಕನಸನ್ನು ಇಂದು ಉದಯ್ ಬಜಾರ್ ಮಾಲೀಕರಾದ ರಮೇಶ ಬಂಗೇರ ಅವರು ಈಡೇರಿಸಿದ್ದಾರೆ. ನವನಾವಿನ್ಯತೆಯ ಸೈಕಲ್‍ಗಳು, ಕ್ರೀಡಾ ಸಾಮಗ್ರಿಗಳು ಒಂದೇ ಸೂರಿನಡಿ ದೊರೆಯಲಿದೆ. ಸೈಕಲ್ ಸಂಚಾರ ದೇಹಕ್ಕೆ ಆರೋಗ್ಯಕರ ಎಂಬಂತೆ ಎಲ್ಲರೂ ಸೈಕಲ್ ಖರೀದಿಸಿ ಆರೋಗ್ಯ ವೃದ್ಧಿಸಿಕೊಳ್ಳಿ. `ಸ್ಪೋಟ್ರ್ಸ್ ವರ್ಲ್ಡ’ ಮಳಿಗೆ ಎಲ್ಲರ ಜೀವನಾಡಿಯಾಗಿ ಹೆಮ್ಮರವಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.
ಉದಯ ಗ್ರುಪ್ ನ ಜಿ.ಎಂ ಉಮೇಶ ಬಾದ್ಯಾ ಮಾತನಾಡಿ, 1979 ರಿಂದ ಈವರೆಗೆ ಉತ್ತರ ಕನ್ನಡ ಜಿಲ್ಲೆಯ ಜನತೆ ನೀಡಿದ ಸಹಕಾರಕ್ಕೆ ನಾನು ಚಿರಋಣಿಯಾಗಿದ್ದೇನೆ. ಈ ದಿನ ಪ್ರಾರಂಭಗೊಂಡ `ಸ್ಪೋಟ್ರ್ಸ್ ವರ್ಲ್ಡ’ ಮಳಿಗೆಯಲ್ಲಿ ದೈಹಿಕ ಆರೋಗ್ಯಕ್ಕೆ ಬೇಕಾದ ಎಲ್ಲ ಬಗೆಯ ಸಲಕರಣೆಗಳು ಲಭ್ಯವಿದ್ದು, ಜನತೆ ಇನ್ನೂ ಹೆಚ್ಚಿನ ಸಹಕಾರ ನೀಡಬೇಕು ಎಂದು ವಿನಂತಿಸಿದರು.
ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸ್ಮರಣಿಕೆ ಮತ್ತು ಮೆಡಲ್ಸ್ ಕೌಂಟರ್ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕರ್ನಾಟಕ ವಾಲಿಬಾಲ್ ತಂಡದ ಹಿರಿಯ ಆಟಗಾರ ಮಾರುತಿ ಜಿ. ನಾಯಕ ಕ್ರೀಡಾ ಸಾಮಗ್ರಿ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ಉದಯ ಬಜಾರ್ ಮಾಲೀಕ ರಮೇಶ ಬಂಗೇರ, ಕುಮಟಾ ಸರ್ಕಾರಿ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್ ಗಜು, ಮಣಿಪಾಲದ ಉದ್ಯಮಿ ರಾಬರ್ಟ್, ಕೆನರಾ ಬ್ಯಾಂಕ್ ಕುಮಟಾ ಶಾಖೆಯ ವ್ಯವಸ್ಥಾಪಕ ಅಲೋಕ ಕುಮಾರ್ ತಿವಾರಿ, ಉದ್ಯಮಿ ಶೈಲೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತೆ ಶೈಲಾ ಗುನಗಿ, ಉದಯ ಬಜಾರ್ ವ್ಯವಸ್ಥಾಪಕ ಫ್ರಾನ್ಸಿಸ್ ಇತರರು ಇದ್ದರು.
-
ಸಮುದ್ರಕ್ಕೆ ಇಳಿದ ಪ್ರವಾಸಿಗ ಸಾವು : ಕುಮಟಾದ ಬಾಡದಲ್ಲಿ ದುರ್ಘಟನೆ.
ಕುಮಟಾ : ಪ್ರವಾಸಕ್ಕೆಂದು ಬಂದು ಬಾಡದಲ್ಲಿ ಸಮುದ್ರಕ್ಕಿಳಿದಿದ್ದ ಪ್ರವಾಸಿಗ ನೀರಿನಲ್ಲಿ ಮುಳುಗಿ ಸಾವು ಕಂಡಿರುವ ಘಟನೆ ನಡೆದಿದೆ. ದಸರಾ ಹಬ್ಬದ ರಜೆಯ ಮಾಜಾಕ್ಕಾಗಿ ಹೊರ ಜಿಲ್ಲೆ ಹೊರ ರಾಜ್ಯಗಳಿಂದಲೂ ಪ್ರವಾಸಿಗರು ಆಗಮಿಸುತ್ತಿದ್ದು ಸಮುದ್ರದ ತಡದಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಈ ಸಂದರ್ಭದಲ್ಲಿ ಸಮುದ್ರಕ್ಕೆ ಇಳಿದ ವ್ಯಕ್ತಿ ಸಮುದ್ರದ ಸುಳಿಗೆ ಸಿಕ್ಕಿ ಸಾವು ಕಂಡಿದ್ದಾನೆ.
ಶಿವಮೊಗ್ಗ ಮೂಲದ ಪ್ರಶಾಂತ್ ಗುಪ್ತ ಸಮುದ್ರದಲ್ಲಿ ಮುಳಗಿ ಸಾವು ಕಂಡಿದ್ದು ಶಿವಮೊಗ್ಗ ದಿಂದ 11 ಜನರೊಂದಿಗೆ ಕುಮಟಾ ಕ್ಕೆ ಪ್ರವಾಸ ಬಂದಿದ್ದರು ಎನ್ನಲಾಗಿದೆ. ಈ ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
ಉದಯ ಸ್ಪೋರ್ಟ್ಸ್ ವರ್ಲ್ಡ್’ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ : ನೀವೂ ಜೊತೆಗಿದ್ದು ಬೆಂಬಲಿಸಲು ಸಂಸ್ಥಾಪಕರ ಮನವಿ.
ಕುಮಟಾ : ರಾಷ್ಟ್ರೀಯ ಹೆದ್ದಾರಿ ೬೬ ರ, ಪಟ್ಟಣದ ಬಸ್ ಡಿಪೋ ಕ್ರಾಸ್ ಎದುರಿನಲ್ಲಿ (ಶ್ರೀಧರ ಸ್ಕಾನ್ ಸೆಂಟರ್ ಪಕ್ಕದಲ್ಲಿ) ನೂತನವಾಗಿ ನಿರ್ಮಾಣವಾಗಿರುವ ‘ಉದಯ ಸ್ಪೋರ್ಟ್ಸ್ ವರ್ಲ್ಡ್’ ನೂತನ ಮಳಿಗೆಯ ಉದ್ಘಾಟನಾ ಸಮಾರಂಭ ಅ.೨೩ ಸೋಮವಾರ ಬೆಳಗ್ಗೆ ೧೦:೦೦ ಗಂಟೆಗೆ ನಡೆಯಲಿದೆ.
ಕುಮಟಾ ತಾಲೂಕಾ ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ ನಾಯ್ಕ ನೂತನ ಮಳಿಗೆ ಉದ್ಘಾಟನೆ ಮಾಡಲಿದ್ದಾರೆ. ರಾಜ್ಯ ಸರಕಾರಿ ಪ್ರಾಥಮಿಕ ಶಾಲಾ ಗ್ರೇಡ್ ೨ ದೈಹಿಕ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ರವೀಂದ್ರ ಭಟ್ಟ ಸೂರಿ ದೀಪ ಬೆಳಗಲಿದ್ದು, ಎ.ವಿ ಬಾಳಿಗಾ ವಾಣಿಜ್ಯ ವಿದ್ಯಾಲಯದ ಪ್ರಾಂಶುಪಾಲ ಎಸ್.ವಿ ಶೇಣ್ವಿ ಸೈಕಲ್ ಕೌಂಟರ್ ಉದ್ಘಾಟನೆ ಮಾಡುವರು. ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ ಸ್ಮರಣಿಕೆ ಮತ್ತು ಮೆಡಲ್ಸ್ ಕೌಂಟರ್ ಲೋಕಾರ್ಪಣೆ ಮಾಡಲಿದ್ದಾರೆ.
ಕರ್ನಾಟಕ ವಾಲಿಬಾಲ್ ತಂಡದ ಹಿರಿಯ ಆಟಗಾರ ಮಾರುತಿ ಜಿ. ನಾಯಕ ಕ್ರೀಡಾ ಸಾಮಗ್ರಿ ಮಳಿಗೆ ಉದ್ಘಾಟಿಸಲಿದ್ದು, ಕುಮಟಾ ಸರಕಾರಿ ಕಾಲೇಜಿನ ಪ್ರಾಂಶುಪಾಲ ಸತೀಶ ನಾಯ್ಕ, ರೋಟರಿ ಕ್ಲಬ್ ಅಧ್ಯಕ್ಷ ಎನ್.ಆರ್ ಗಜು, ಮಣಿಪಾಲದ ಉದ್ಯಮಿ ರಾಬರ್ಟ, ಪೊಲೀಸ್ ನಿರೀಕ್ಷಕ ತಿಮ್ಮಪ್ಪ ನಾಯ್ಕ, ಕೆನರಾ ಬ್ಯಾಂಕ್ ಕುಮಟಾ ಶಾಖೆಯ ವ್ಯವಸ್ಥಾಪಕ ಅಲೋಕ ಕುಮಾರ್ ತಿವಾರಿ, ಉದ್ಯಮಿ ಶೈಲೇಶ ನಾಯ್ಕ, ಸಾಮಾಜಿಕ ಕಾರ್ಯಕರ್ತೆ ಶೈಲಾ ಗುನಗಿ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಹಾಜರಿರುವರು.
ಕಾರ್ಯಕ್ರಮಕ್ಕೆ ಹಾಗೂ ಹೊಸ ಮಳೆಗೆಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಬೆಂಬಲ ನೀಡುವಂತೆ ಉದಯ ಸಂಸ್ಥೆಯ ರಮೇಶ್ ಎ. ಬಂಗೇರ ಹಾಗೂ ಕುಮಟಾ ಉದಯ ಬಜಾರ್ ವ್ಯವಸ್ಥಾಪಕ ಫ್ರಾನ್ಸಿಸ್ ವಿನಂತಿಸಿದ್ದಾರೆ.
-
ಎರಡು ಬಸ್ ಗಳ ನಡುವೆ ಮುಖಾಮುಖಿ ಡಿಕ್ಕಿ : ಬೆಳ್ಳಂಬೆಳಗ್ಗೆ ನಡೆದ ಘೋರ ದುರಂತ.
ಶಿರಸಿ : ಶಿರಸಿ ಹುಬ್ಬಳ್ಳಿ ರಸ್ತೆಯ ಇಸಳೂರಿನ ಬಳಿ ಭೀಕರ ಅಪಘಾತ ಸಂಭವಿಸಿದ್ದು ಹತ್ತಕ್ಕೂ ಹೆಚ್ಚು ಜನರಿಗೆ ಗಂಭೀರವಾಗಿ ಪೆಟ್ಟಾಗಿರುವ ಬಗ್ಗೆ ವರದಿಯಾಗಿದೆ. ಕೆ ಎಸ್ ಅರ್ ಟಿ ಸಿ ಬಸ್ ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಅಪಘಾತ ಸಂಭವಿಸಿದೆ.
ಎರಡೂ ಬಸ್ ನಲ್ಲಿದ್ದ ಹತ್ತಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಅಪಘಾತದ ರಭಸಕ್ಕೆ ಬಸ್ ಮುಂಬಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.
ಶಿರಸಿಯಿಂದ ಅಕ್ಕಿಹಾಲೂರಿಗೆ ಸಾಗುತ್ತಿದ್ಸ ಬಸ್ಸಿಗೆ ಖಾಸಗಿ ಬಸ್ ಡಿಕ್ಕಿ ಯಾಗಿದೆ. ತುರ್ತಾಗಿ ೧೦೮ ವಾಹನ ಹಾಗು ಹೈವೆ ಪೆಟ್ರೋಲ್ ವಾಹನದ ಮೂಲಕ ಗಾಯಾಳುಗಳಿಗೆ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಬೆಳಗ್ಗೆ 7 ಗಂಟೆ ಸರಿಸುಮಾರು ಸಂಭವಿಸಿದ ಈ ಘಟನೆಯಲ್ಲಿ ಬಸ್ ಒಳಗೆ ಸಿಲುಕಿದ್ದ ಚಾಲಕ ಅಪಘಾತದಿಂದ ಒಳಗೆ ಸಿಲುಕಿದ್ದು, ಆತನನ್ನು ಹೊರತೆಗೆಯಲು ಸಾರ್ವಜನಿಕರು ಹರಸಾಹಸ ಪಟ್ಟರು. ಪೊಲೀಸರು ಸ್ಥಳಕ್ಕೆ ಭೇಟಿನೀಡಿದ್ದು, ಹೆಚ್ಚಿನ ವಿವರ ತಿಳಿಯಬೇಕಿದೆ.
-
ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಮಟಾ ತಾಲೂಕಾ ಘಟಕದಿಂದ ನಿವೃತ್ತ ಸರ್ಕಾರಿ ನೌಕರರಿಗೆ ಸನ್ಮಾನ : ಪ್ರತಿಭಾ ಪುರಸ್ಕಾರ : ಸರಕಾರಿ ನೌಕರರ ಸಂಘದ ವಾರ್ಷಿಕ ಸಾಮಾನ್ಯ ಸಭೆ ಸಂಪನ್ನ.
ಕುಮಟಾ : ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ. ಸರ್ಕಾರಿ ನೌಕರರು ಪ್ರಜಾ ಸೇವಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮಹತ್ತರ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಸರ್ಕಾರಿ ನೌಕರರದ್ದಾಗಿದೆ, ಅಂತಹ ಕಾರ್ಯದಲ್ಲಿ ನಿರತರಾಗಿರುವ ನೌಕರರ ಕಾರ್ಯವು ಶ್ಲಾಘನೀಯ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು. ಅವರು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಮಟಾ ತಾಲೂಕು ಶಾಖೆಯವರು ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕುಮಟಾದ ಸರಕಾರಿ ನೌಕರರು ಕೇವಲ ನೌಕರಿಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ. ಎಲ್ಲಾ ಇಲಾಖೆಯ ಬಹುತೇಕರು ಸೇವೆಯ ರೀತಿಯಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿ ಸಮಾಜಕ್ಕೆ ಮಾದರಿ ಎನಿಸಿದ್ದಾರೆ. ಅವರೆಲ್ಲರ ಕಾರ್ಯವನ್ನು ಶ್ಲಾಘಿಸಬೇಕಾಗಿರುವುದು ನಮ್ಮ ಕರ್ತವ್ಯ. ಕೇವಲ ಸರಕಾರಿ ಸೇವೆಯಲ್ಲಿ ಇರುವಾಗ ಅಷ್ಟೇ ಅಲ್ಲದೇ ನಂತರದಲ್ಲಿಯೂ ಜನರು ನಿಮ್ಮನ್ನು ಸ್ಮರಿಸಿಕೊಳ್ಳುತ್ತಾರೆ. ಸದಾ ನಾವು ಸ್ಮರಣೆಯಲ್ಲಿರುವಂತೆ ಕೆಲಸ ಮಾಡಬೇಕು ಎನ್ನುವುದು ಪ್ರತಿಯೊಬ್ಬ ನೌಕರರ ಗುರಿಯಾಗಬೇಕು ಎಂದರು.
ಸರ್ಕಾರದ ಎಲ್ಲಾ ಯೋಜನೆಗಳು ಜನರನ್ನು ತಲುಪಲು ಸರ್ಕಾರಿ ನೌಕರರು ಒಂದು ದೊಡ್ಡ ದಾರಿಯಾಗಿದ್ದಾರೆ. ಅದು ಸರಿಯಾಗಿ ಕಾರ್ಯ ನಿರ್ವಹಿಸಿದರೆ ಎಲ್ಲ ಯೋಜನೆಗಳು ಪ್ರತಿಯೊಬ್ಬರನ್ನು ತಲುಪಲು ಸಹಾಯವಾಗುತ್ತದೆ. ಒಬ್ಬ ಸರ್ಕಾರಿ ನೌಕರ ತನ್ನ ಸೇವಾವಧಿಯಲ್ಲಿ ಉತ್ತಮ ಸೇವೆಸಲ್ಲಿಸಿದರೆ ಆತ ನಿವೃತ್ತಿಯಾದ ನಂತರವೂ ಜನರು ಆತನನ್ನು ಗೌರವಿಸಿತ್ತಾರೆ. ಇಂದು ಕುಮಟಾ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದೀರಿ. ಇದರಿಂದ ಎಲ್ಲ ಸರ್ಕಾರಿ ನೌಕರರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಭಟ್ಟ ಮಾತನಾಡಿ, ಸರಕಾರಿ ಆಡಳಿತ ಯಂತ್ರದಲ್ಲಿ ನೌಕರರು ಬಹುದೊಡ್ಡ ಪಾತ್ರ ನಿರ್ವಹಿಸುತ್ತಾರೆ. ನೌಕರರು ಒಮ್ಮತದಿಂದ ಕಾರ್ಯ ಬದ್ಧತೆಯಿಂದ ಮುಂದುವರಿಯಬೇಕು. ಕುಮಟಾ ತಾಲ್ಲೂಕಿನಲ್ಲಿ ಅಂತಹ ಬದ್ಧತೆಯ ನಿಷ್ಠಾವಂತ ನೌಕರರಿದ್ದು, ಹೀಗಾಗಿಯೇ ಎಲ್ಲ ಯೋಜನೆಗಳು ಸಮಾಜದ ಕಟ್ಟ ಕೊನೆಯ ವ್ಯಕ್ತಿಯವರೆಗೂ ತಲುಪುತ್ತಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಘುನಾಥ ಡಿ. ನಾಯ್ಕ ಮಾತನಾಡಿ, ನೂರಾರು ವರ್ಷಗಳ ಇತಿಹಾಸವಿರುವ ಸರ್ಕಾರಿ ನೌಕರರ ಸಂಘದ ಕುಮಟಾ ಘಟಕದ ಕಚೇರಿ ಕಟ್ಟಡವು ಶಿಥಿಲವಾಗಿರುವ ಈ ಸಂದರ್ಭದಲ್ಲಿಯೂ, ಅದನ್ನು ತೆರವುಗೊಳಿಸಬೇಕು ಎನ್ನುವ ತೆರೆಮರೆ ಯೋಚನೆ ಹಲವರು ಮಾಡುತ್ತಿದ್ದಾರೆ. ಆದರೆ ಕೈ ಬಿಟ್ಟು ನಮ್ಮ ಹಿಂದಿನವರು ಕಟ್ಟಿ ಬೆಳೆಸಿದ ಹಾಗೂ ಈವರೆಗೆ ಉಳಿಸಿದ ಕಟ್ಟಡವನ್ನು ನಮ್ಮ ಮುಂದಿನವರಿಗಾಗಿ ಉಳಿಸಬೇಕು ಎನ್ನುವ ಗಟ್ಟಿ ನಿರ್ಧಾರ ತೆಗೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ನಾನು ಪ್ರಯತ್ನ ಮಾಡುತ್ತೇನೆ ಎನ್ನುತ್ತಾ, ಅಧ್ಯಕ್ಷರಾಗಿ ಆಯ್ಕೆ ಮಾಡಿದ ಎಲ್ಲ ಸದಸ್ಯರಿಗೆ ಧನ್ಯವಾದ ಸಲ್ಲಿಸಿದರು. ಸರಕಾರಿಯ ಯಾವುದೇ ಇಲಾಖೆಯ, ಯಾವುದೇ ನೌಕರರಿಗೆ ತೊಂದರೆ ಆದರೂ ಸಂಘ ಜೊತೆಗೆ ಇರುತ್ತದೆ. ಸಮಸ್ಯೆಯನ್ನು ಲಿಖಿತ ರೂಪದಲ್ಲಿ ಗಮನಕ್ಕೆ ತಂದರೆ ನ್ಯಾಯತವಾಗಿ ಅದನ್ನು ಬಗೆಹರಿಸಲು ಪ್ರಯತ್ನ ಮಾಡುತ್ತೇವೆ ಎಂದು ಅವರು ಭರವಸೆಯಿತ್ತರು.
ಸಾಧಕ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಗುರುತಿಸಿ ಅಭಿನಂದಿಸಲಾಯಿತು. ಕುಮಟಾ ತಾಲೂಕಿನ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ಕಳೆದೊಂದು ವರ್ಷದಿಂದ ಈಚೆಗೆ ನಿವೃತ್ತರಾದ ಎಲ್ಲಾ ಸರಕಾರಿ ನೌಕರರನ್ನೂ ಗೌರವಿಸಲಾಯಿತು. ೩೩ ಇಲಾಖೆಯ ಸುಮಾರು ೫೦ ಕ್ಕೂ ಹೆಚ್ಚು ಜನ ನಿವೃತ್ತ ಸರಕಾರಿ ನೌಕರರನ್ನು ಸನ್ಮಾನಿಸಿ ಅವರ ಸಾರ್ಥಕ ಸೇವೆಯನ್ನು ಸ್ಮರಿಸಲಾಯಿತು.
ಕುಮಟಾ ತಾ. ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಆಚಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ ಪಾಂಡು ನಾಯ್ಕ, ಪಶು ವೈದ್ಯಾಧಿಕಾರಿ (ಆಡಳಿತ) ವಿ. ಕೆ. ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ, ಕುಮಟಾ ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವೀಂದ್ರ ಭಟ್ ಸೂರಿ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬೊಮ್ಮಯ್ಯ ನಾಯಕ, ಉಪಾಧ್ಯಕ್ಷರುಗಳಾದ ಎಮ್. ಎಮ್. ಹೆಗಡೆ, ಮಂಜುನಾಥ ನಾಯ್ಕ, ಭಾಗೀರಥಿ ನಾಯ್ಕ, ಖಜಾಂಚಿ ಮುಕುಂದ ಮಡಿವಾಳ ಹಾಗೂ ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ಎಲ್ಲ ಇಲಾಖಾ ನೌಕರರು ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಗುರು ಮಹಾಲೆ ಸ್ವಾಗತಿಸಿದರು. ಶಿಕ್ಷಕ ಮಂಜುನಾಥ ನಾಯ್ಕ ನಿರೂಪಿಸಿದರು. ರಾಜು ಶೇಟ್ ವಂದಿಸಿದರು.
-
ಕುಮಟಾದ ಅಳ್ವೇಕೋಡಿಯಲ್ಲಿ ಬಸ್ ಹಾಗೂ ಕಾರಿನ ನಡುವೆ ಭೀಕರ ಅಪಘಾತ : ಹತ್ತಕ್ಕೂ ಹೆಚ್ಚು ಜನರಿಗೆ ಪೆಟ್ಟು.
ಕುಮಟಾ : ಕಾರು ಮತ್ತು ಖಾಸಗಿ ಬಸ್ ನಡುವೆ ಬೀಕರ ಅಪಘಾತ ಸಂಭವಿಸಿ ಅಪಘಾತದಲ್ಲಿ ಹತ್ತಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ತಾಲೂಕಿನ ಅಳ್ವೆಕೋಡಿಯಲ್ಲಿ ನಡೆದಿದೆ. ಭೀಕರ ಅಪಘಾತ ಸಂಭವಿಸಿ, ಕೆಲಕಾಲ ಸುತ್ತಮುತ್ತಲ ಜನರು ಭಯಭೀತರಾಗುವ ಘಟನೆ ಇದಾಗಿತ್ತು.
ಹೈದರಾಬಾದ್ ಹಾಗೂ ಆಂಧ್ರ ಮೂಲದ ಹತ್ತಕ್ಕೂ ಹೆಚ್ಚು ಜನರು ಈ ದುರ್ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಬರಿಮಲೆ ಯಾತ್ರೆಗೆ ತೆರಳುತ್ತಿದ್ದ ಆಂಧ್ರ ಮೂಲದವರು ಕುಮಟಾ ಕಡೆಯಿಂದ ಹೊನ್ನಾವರ ಕಡೆಗೆ ಖಾಸಗಿ ಬಸ್ ಮೂಲಕ ಸಾಗುತ್ತಿದ್ದರು. ಹೊನ್ನಾವರ ಕಡೆಯಿಂದ ಕುಮಟಾ ಕಡೆಗೆ ಸಾಗುತ್ತಿದ್ದ ಕಾರು ಹಾಗೂ ಈ ಬಸ್ ನಡುವೆ ಮುಖಾಮುಖಿಯಾಗಿ ಡಿಕ್ಕಿಯಾಗಿದೆ. ಘಟನೆಯಿಂದ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು.
ಸ್ಥಳಕ್ಕೆ ಕುಮಟಾ ಪೊಲೀಸ್ರು ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸುಗಮಗೊಳಿಸಿದ್ದಾರೆ.
-
ಮನನೊಂದು ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಗೋಕರ್ಣ: ವೈಯ್ಯಕ್ತಿಕ ಸಮಸ್ಯೆಯಿಂದ ಮನನೊಂದು ಇಲ್ಲಿಯ ಸಣ್ಣಬಿಟ್ಟೂರಿನ ಮಾಲತಿ ಗಜಾನನ ಮಹಾಲೆ ಎನ್ನುವ ಮಹಿಳೆ ತಮ್ಮ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ
ಮಾಡಿಕೊಂಡಿದ್ದಾಳೆ. ವಿಷಯ ತಿಳಿಯುತ್ತಿದ್ದಂತೆ ಗೋಕರ್ಣ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡವಳ ಬಗ್ಗೆ ಮಾಹಿತಿ ಪಡೆದು, ಮೃತದೇಹವನ್ನು ಗೋಕರ್ಣದ ಪ್ರಾಥಮಿಕ ಆರೋಗ್ಯ ಕೇಂದ್ರ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ, ಈ ಬಗ್ಗೆ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. -
ಪಾವನಿ ನಾಯ್ಕ ರಾಜ್ಯಮಟ್ಟಕ್ಕೆ ಆಯ್ಕೆ.
ಕುಮಟಾ : ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಸಿವಿಎಸ್‌ಕೆ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಪಾವನಿ ಮೋಹನ ನಾಯ್ಕ ಇವಳು ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ಇವರು ಗದಗ ತಾಲೂಕಿನ ಬಸವೇಶ್ವರ ಶಾಲೆಯಲ್ಲಿ ಆಯೋಜಿಸಿದ್ದ ವಿಭಾಗಮಟ್ಟದ ಶಾಲಾ ಮಕ್ಕಳ ಆಟೋಟಗಳ ಸ್ಪರ್ಧೆ ೨೦೨೩-೨೪ ರ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿದ್ದಾಳೆ.
ವಿದ್ಯಾರ್ಥಿನಿಯ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕಿಯರು, ಶಿಕ್ಷಕ ವೃಂದ, ಹಾಗೂ ಪಾಲಕರು ಹರ್ಷ ವ್ಯಕ್ತಪಡಿಸಿ, ಮುಂದಿನ ಹಂತದ ಸ್ಪರ್ಧೆಗೆ ಶುಭ ಕೋರಿದ್ದಾರೆ.