ಕ್ಯಾಬೇಜ್‌ (ಎಲೆಕೋಸು) ನೀರುಳ್ಳಿ ದೋಸೆ
ಬೇಕಾಗುವ ಸಾಮಗ್ರಿ: ಅಕ್ಕಿ- 1 ಕಪ್‌, ಕ್ಯಾಬೇಜ್‌ ಚೂರು-1/2 ಕಪ್‌, ನೀರುಳ್ಳಿ ಚೂರು- 1/2 ಕಪ್‌, ಒಣ ಮೆಣಸಿನಕಾಯಿ 6-7, ರುಚಿಗೆ ಉಪ್ಪು , ಎಣ್ಣೆ- ದೋಸೆ ತೆಗೆಯಲು, ಹುಣಸೆಹಣ್ಣು ಗೋಲಿಗಾತ್ರ, ಕೊತ್ತಂಬರಿ-1 ಚಮಚ, ಕಾಯಿತುರಿ-1/2 ಕಪ್‌.

ತಯಾರಿಸುವ ವಿಧಾನ: ಅಕ್ಕಿಯನ್ನು ಎರಡು ಗಂಟೆ ನೀರಲ್ಲಿ ನೆನೆಸಿ ತೊಳೆದಿಡಿ. ಒಣಮೆಣಸು, ಹುಣಸೆಹಣ್ಣು , ಕೊತ್ತಂಬರಿ, ಕಾಯಿತುರಿ ಹಾಕಿ ರುಬ್ಬಿ ಅಕ್ಕಿ, ಉಪ್ಪು ಹಾಕಿ ಮತ್ತೆ ನಯವಾಗಿ ರುಬ್ಬಿ ಪಾತ್ರೆಗೆ ಹಾಕಿ ಕ್ಯಾಬೇಜ್‌ ಚೂರು, ನೀರುಳ್ಳಿ ಬೆರೆಸಿಡಿ. ದೋಸೆ ಕಾವಲಿಗೆ ಎಣ್ಣೆ ಹಾಕಿ ದೋಸೆ ಹಿಟ್ಟು ಹರಡಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಊಟದ ಹೊತ್ತಿಗೆ ಬಲು ರುಚಿ. ಸ್ವಲ್ಪ ಬೆಲ್ಲ ಹಾಕಿದ್ರೆ ಸಂಜೆ ಕಾಫಿಗೂ ಸ್ವಾದಿಷ್ಟವಾಗಿರುತ್ತದೆ.

ಬಾಳೆ ಬೊಂಬು (ತಿರುಳು) ದೋಸೆ
ಬೇಕಾಗುವ ಸಾಮಗ್ರಿ: ಅಕ್ಕಿಹಿಟ್ಟು- 1 ಕಪ್‌, ಒಣಮೆಣಸಿನ ಹುಡಿ- 2 ಚಮಚ, ಉಪ್ಪು ರುಚಿಗೆ, ಸಣ್ಣಗೆ ಹೆಚ್ಚಿದ ಬಾಳೆ ತಿರುಳು- 1/2 ಕಪ್‌, ದೋಸೆ ತೆಗೆಯಲು ಎಣ್ಣೆ , ಹುಣಸೆಹಣ್ಣು ಸ್ವಲ್ಪ.

ತಯಾರಿಸುವ ವಿಧಾನ: ಪಾತ್ರೆಯಲ್ಲಿ ಸ್ವಲ್ಪ ನೀರು ಹಾಕಿ ಉಪ್ಪು , ಮೆಣಸಿನ ಹುಡಿ, ಹುಣಸೆ ನೀರು, ಅಕ್ಕಿಹಿಟ್ಟು ಹಾಕಿ ಕಲಸಿ. ಇದಕ್ಕೆ ಸಣ್ಣಗೆ ಹೆಚ್ಚಿದ ಬಾಳೆ ದಿಂಡಿನ ಚೂರು ಹಾಕಿ ಕಲಸಿ ದೋಸೆ ಹಿಟ್ಟಿನ ಹದ ಮಾಡಿ. ದೋಸೆ ಕಾವಲಿ ಬಿಸಿ ಮಾಡಿ ಎಣ್ಣೆ ಸವರಿ ದೋಸೆ ಹರಡಿ ಎರಡೂ ಬದಿ ಕಾಯಿಸಿ ತೆಗೆಯಿರಿ. ಊಟದ ಹೊತ್ತಿಗೆ ಬಿಸಿ ಬಿಸಿ ದೋಸೆ ಸವಿಯಿರಿ.

RELATED ARTICLES  ರುಚಿಕರವಾದ ಆಲೂ ಮೆಂತೆ ಸೊಪ್ಪಿನ ಪಲ್ಯ.

ಮೆಂತ್ಯ ಸೊಪ್ಪಿನ ಸಜ್ಜಿಗೆ ರೊಟ್ಟಿ
ಬೇಕಾಗುವ ಸಾಮಗ್ರಿ: ಗೋಧಿ ರವೆ (ಸಜ್ಜಿಗೆ)- 1 ಕಪ್‌, ಗೋಧಿಹಿಟ್ಟು- 2 ಚಮಚ, ತೆಂಗಿನತುರಿ- 1/2 ಕಪ್‌, ಸಣ್ಣಗೆ ಹೆಚ್ಚಿನ ಮೆಂತ್ಯಸೊಪ್ಪು- 1/4 ಕಪ್‌, ಕೊತ್ತಂಬರಿ ಸೊಪ್ಪು ಸ್ವಲ್ಪ , ಮೆಣಸಿನಕಾಯಿ ಚೂರು, ಸಕ್ಕರೆ -2 ಚಮಚ, ಉಪ್ಪು ರುಚಿಗೆ, ರೊಟ್ಟಿ ತೆಗೆಯಲು ಎಣ್ಣೆ/ತುಪ್ಪ , ಹಸಿಶುಂಠಿ ಚೂರು ಸ್ವಲ್ಪ.

ತಯಾರಿಸುವ ವಿಧಾನ: ಪಾತ್ರೆಗೆ ಸ್ವಲ್ಪ ನೀರು ಹಾಕಿ ಉಪ್ಪು , ಸಕ್ಕರೆ, ಮೆಂತ್ಯ ಸೊಪ್ಪಿನ ಚೂರು, ಮೆಣಸಿನಕಾಯಿ, ಹಸಿಶುಂಠಿ ಚೂರು ಹಾಕಿ ಸೌಟಿನಿಂದ ಕದಡಿ ಗೋಧಿಹಿಟ್ಟು, ಗೋಧಿ ಸಜ್ಜಿಗೆ ಹಾಕಿ, ತೆಂಗಿನ ತುರಿ ಹಾಕಿ ಬೆರೆಸಿ. ಹಿಟ್ಟು ದಪ್ಪಗಾದರೆ ಸ್ವಲ್ಪ ನೀರು ಹಾಕಿ ದೋಸೆ ಹಿಟ್ಟಿನ ಹದಕ್ಕೆ ಕಲಸಿಡಿ. ದೋಸೆ ಕಾವಲಿ ಕಾದ ಮೇಲೆ ಎಣ್ಣೆ ಹಾಕಿ ಸಜ್ಜಿಗೆ ರೊಟ್ಟಿ ಹಿಟ್ಟು ಹರಡಿ ಮುಚ್ಚಿ ತೆಗೆದು ಎರಡೂ ಕಡೆ ಕಾಯಿಸಿ ತೆಗೆಯಿರಿ. ಯಾವುದೇ ಚಟ್ನಿಯ ಅಗತ್ಯವಿಲ್ಲದೆ ಬೆಣ್ಣೆ ಹಾಕಿ ಹಾಗೆಯೇ ಸವಿಯಬಹುದು.

RELATED ARTICLES  ಸಂಕ್ರಾಂತಿಗೆ ಸಿಹಿತಿಂಡಿ ಅತ್ತಿರಸ! ಮಾಡಿ ಸವಿಯೋಣ ಬನ್ನಿ

ಹರಿವೆ ಸೊಪ್ಪಿನ ಅಂಬಡೆ
ಬೇಕಾಗುವ ಸಾಮಗ್ರಿ: ಬೆಳ್ತಿಗೆ ಅಕ್ಕಿ- 1 ಕಪ್‌, ತೊಗರಿಬೇಳೆ-4 ಚಮಚ, ಒಣ ಮೆಣಸಿನ ಕಾಯಿ 6-7, ಸಣ್ಣಿಗೆ ಹೆಚ್ಚಿದ ಹರಿವೆ ಸೊಪ್ಪು- 2 ಕಪ್‌, ಹುಣಸೆಹಣ್ಣು ಸ್ವಲ್ಪ , ಉಪ್ಪು ರುಚಿಗೆ, ಕೊತ್ತಂಬರಿ- 1 ಚಮಚ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಅಕ್ಕಿ, ತೊಗರಿಬೇಳೆ ಒಟ್ಟಿಗೆ ಎರಡು ಗಂಟೆ ನೆನೆಸಿಡಿ. ಒಣಮೆಣಸಿನ ಕಾಯಿ, ಹುಣಸೆ ಹಣ್ಣು , ಉಪ್ಪು, ಕೊತ್ತಂಬರಿ ಹಾಕಿ ನಯವಾಗಿ ರುಬ್ಬಿ ತೆಗೆಯುವ ಮೊದಲು ಅಕ್ಕಿ-ತೊಗರಿಬೇಳೆ ಹಾಕಿ ಸ್ವಲ್ಪ ತರಿ ತರಿಯಾಗಿ ರುಬ್ಬಿ ಪಾತ್ರೆಗೆ ಹಾಕಿ. ಹೆಚ್ಚಿದ ಹರಿವೆ ಸೊಪ್ಪು ಹಾಕಿ ಚೆನ್ನಾಗಿ ಬೆರೆಸಿ ಚಿಕ್ಕ ಚಿಕ್ಕ ಉಂಡೆ ಮಾಡಿ ಎಣ್ಣೆ ಸವರಿದ ಎಲೆ ಇಲ್ಲವೆ ಪ್ಲೇಟ್‌ ಮೇಲೆ ಚಪ್ಪಟೆ ಮಾಡಿಡಿ. ಬಾಣಲೆಯಲ್ಲಿ ಎಣ್ಣೆ ಕಾದ ಮೇಲೆ 4-5 ಅಂಬಡೆ ಹಾಕಿ ಹದ ಉರಿಯಲ್ಲಿ ಎರಡೂ ಬದಿ ಕಾಯಿಸಿ ಟಿಶ್ಯೂ ಪೇಪರ್‌ ಮೇಲೆ ಹಾಕಿ. ರುಚಿಯಾದ ಆರೋಗ್ಯದಾಯಕ ಹರಿವೆಸೊಪ್ಪಿನ ಅಂಬಡೆ ತಯಾರು.