ಸೂರ್ಯ ಪುತ್ರ ಶನಿದೇವನಿಗೆ ಅಪರಿಮಿತವಾದ ಶಕ್ತಿಯು ಇದೆ. ನಾವು ಒಳ್ಳೆಯದು, ಕೆಟ್ಟದ್ದು ಅಥವಾ ಹೊಸದು ಎಂದು ಯಾವುದೇ ಆಲೋಚನೆಗಳನ್ನು ಮಾಡಿದರು, ಆ ಎಲ್ಲಾ ಆಲೋಚನೆಗಳು ನೇರವಾಗಿ ಶನಿದೇವನ ಬಳಿಗೆ ಹೋಗುತ್ತವೆ. ಇದಕ್ಕೆ ಕಾರಣ ಆತ ಹೊಂದಿರುವ ಅಪರಿಮಿತವಾದ ಶಕ್ತಿಯಲ್ಲದೆ ಮತ್ತೊಂದಲ್ಲ. ಇನ್ನು ಶನಿದೇವನ ಇತಿಹಾಸವು ವಿಭಿನ್ನವಾಗಿದೆ.
ಸೂರ್ಯ ದೇವನು ಸಂಧ್ಯಾ ದೇವಿಯನ್ನು (ದಕ್ಷ ಕನ್ಯೆ) ಮದುವೆಯಾಗಿದ್ದನು. ಸಂಧ್ಯಾ ದೇವಿಯು ಸೂರ್ಯನಿಂದ ಮೂರು ಮಕ್ಕಳನ್ನು ಪಡೆದಿದ್ದಳು. ಮೊದಲನೆಯ ಮಗು ವೈವಸತ್ವ ಮನುವಾದರೆ, ಎರಡನೆಯ ಮಗು ಯಮ ದೇವ ಮತ್ತು ಮೂರನೆಯ ಮಗುವೇ ಯಮುನಾ ದೇವಿಯಾದಳು. ಈಕೆ ತನ್ನ ಮೂರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಳು. ಆದರೆ ದಕ್ಷ ಕನ್ಯೆ ಸಂಧ್ಯಾಗೆ ಸೂರ್ಯನ ತೇಜಸ್ಸನ್ನು ತಾಳಲು ಆಗುತ್ತಿರಲಿಲ್ಲ. ಆದ್ದರಿಂದ ಆಕೆಯು ಸೂರ್ಯನನ್ನು ತ್ಯಜಿಸಿ, ತನ್ನ ತವರು ಮನೆಗೆ ಅಥವಾ ಎಲ್ಲಾದರು ಏಕಾಂಗಿಯಾಗಿ ದೂರ ಹೋಗಿ ತಪಸ್ಸು ಮಾಡಲು ಇಚ್ಛಿಸಿದಳು.
ಹೀಗೆ ತಪಸ್ಸಿಗೆ ಹೊರಟ ಸಂಧ್ಯಾಳು ತನ್ನ ಶಕ್ತಿಯಿಂದ ತನ್ನ ಪತಿಗಾಗಿ ತನ್ನ “ಛಾಯೆ”ಯನ್ನು ಸೃಷ್ಟಿಸಿದಳು. ಆ ಛಾಯೆಗೆ ಸುವರ್ಣ ಎಂದು ಹೆಸರಿಟ್ಟಳು. ಛಾಯೆಯ ಸೃಷ್ಟಿಯ ನಂತರ ಸಂಧ್ಯಾ ಆಕೆಗೆ ಹೇಳಿದಳು, ಇನ್ನು ಮುಂದೆ ನೀನೇ ನನ್ನ ಮೂವರು ಮಕ್ಕಳನ್ನು ಚೆನ್ನಾಗಿ ಲಾಲನೆ ಪಾಲನೆ ಮಾಡಬೇಕೆಂದು ಹೇಳಿದಳು. ಯಾವುದೇ ಸಮಸ್ಯೆ ಬಂದರೆ ತಾನು ತಕ್ಷಣ ಆಕೆಯ ಮುಂದೆ ಪ್ರತ್ಯಕ್ಷಳಾಗುವುದಾಗಿ ಹೇಳಿ ಸಂಧ್ಯಾ ಎಲ್ಲಾ ಜವಾಬ್ದಾರಿಗಳನ್ನು ಆಕೆಗೆ ವಹಿಸಿ, ತನ್ನ ಪೋಷಕರ ಮನೆಗೆ ಹೋದಳು. ಶನಿ ದೇವರ ಕೃಪೆಗೆ ಪಾತ್ರರಾಗಬೇಕಾದರೆ ಈ ವಿಧಾನಗಳನ್ನು ಅನುಸರಿಸಿ
ಹೀಗೆ ತನ್ನ ಪೋಷಕರ ಮನೆಗೆ ಹೋದ ಸಂಧ್ಯಾಳು ತನ್ನ ಪೋಷಕರಿಗೆ ನಡೆದ ಕಾರಣಗಳನ್ನು ವಿವರಿಸಿದಳು. ತನಗೆ ತನ್ನ ಗಂಡನ ತೇಜಸ್ಸನ್ನು ಭರಿಸಲು ಸಾಧ್ಯವಾಗುತ್ತಿರಲಿಲ್ಲ, ಹಾಗಾಗಿ ತಾನು ತನ್ನ ಗಂಡನಿಗೆ ಸಹ ಹೇಳದೆ ಮನೆ ಬಿಟ್ಟು ಬಂದು ಬಿಟ್ಟೆ ಎಂದು ಹೇಳಿದಳು.
ಎಲ್ಲವನ್ನು ಕೇಳಿಸಿಕೊಂಡ ಆಕೆಯ ತಂದೆ ಸಂಧ್ಯಾಳನ್ನು ಬೈದು, ಸೂರ್ಯ ದೇವನ ಬಳಿಗೆ ಮತ್ತೆ ವಾಪಸ್ ಹೋಗಲು ಹೇಳಿದನು. ಆಗ ಸಂಧ್ಯಾಗೆ ಚಿಂತೆ ಆರಂಭವಾಯಿತು. ಒಂದು ವೇಳೆ ತಾನು ಮತ್ತೆ ವಾಪಸ್ ಹೋದರೆ, ಛಾಯಾಗೆ ನೀಡಿದ ಜವಾಬ್ದಾರಿಗಳು ಏನಾಗುತ್ತವೆ? ಮತ್ತು ಆಕೆ ಎಲ್ಲಿಗೆ ಹೋಗುತ್ತಾಳೆ? ಎಂದು ಆಲೋಚಿಸಿ ಆಕೆ ಒಂದು ದಟ್ಟವಾದ ಅರಣ್ಯಕ್ಕೆ ಹೋಗಿ ಬಿಟ್ಟಳು.
ಆದರೆ ಆ ದಟ್ಟ ಕಾಡಿನಲ್ಲಿ ಸಂಧ್ಯಾಳು ತನ್ನ ಸುರಕ್ಷತೆಯ ವಿಷಯಕ್ಕೆ ಸಂಬಂಧಿಸಿದಂತೆ ಭಯಗ್ರಸ್ಥಳಾದಳು. ಇದಕ್ಕೆ ಕಾರಣ ಆಕೆಯ ಯೌವನ ಮತ್ತು ಅಪರಿಮಿತ ಸೌಂದರ್ಯವಾಗಿತ್ತು. ಇದಕ್ಕಾಗಿ ಆಕೆಯು ತನ್ನನ್ನು ತಾನು ಒಂದು ಕುದುರೆಯಾಗಿ ಮಾರ್ಪಾಡು ಮಾಡಿಕೊಂಡು ಯಾರ ಗುರುತಿಗೂ ಸಿಗದಂತೆ, ತಪಸ್ಸನ್ನು ಆಚರಿಸಲು ಶುರು ಮಾಡಿದಳು.
ಇನ್ನೊಂದೆಡೆ ಸೂರ್ಯ ದೇವನ ಜೊತೆಗೆ ಛಾಯಾಳು ಅನ್ಯೋನ್ಯವಾಗಿ ಜೀವನ ಸಾಗಿಸಲು ಶುರು ಮಾಡಿದ್ದಳು. ಇದರಿಂದ ಆಕೆ ಮೂರು ಜನ ಮಕ್ಕಳನ್ನು ಪಡೆದಳು. ಅವರಲ್ಲಿ ಮೊದಲನೆಯವನು ಮನು, ಎರಡನೆಯವನು ಶನಿ ದೇವ ಮತ್ತು ಮೂರನೆಯವಳು ಪುತ್ರಿಯಾದ ಭದ್ರೆ. ಸೂರ್ಯ ದೇವನು ಎಂದಿಗೂ ಯಾವುದಕ್ಕು ಸಂಶಯ ಪಡಲಿಲ್ಲ. ಸೂರ್ಯ ದೇವ ಮತ್ತು ಛಾಯಾ ಇಬ್ಬರು ಅನ್ಯೋನ್ಯತೆಯಿಂದ ಬಾಳ್ವೆ ಸಾಗಿಸಿದರು.