ಚಳಿಗಾಲದಲ್ಲಿ ಮನೆಯಲ್ಲಿ ರುಚಿಯಾದ ಕರಿದ ಖಾದ್ಯಗಳನ್ನು ಸವಿಯಬೇಕೆಂದು ಮನಸ್ಸಿಗೆ ಅನಿಸುತ್ತದೆ. ಅದರಲ್ಲೂ ಹೊರಗಿನ ಮಾರ್ಗ ಬದಿಯ ತಿಂಡಿಗಳು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಮನೆಯಲ್ಲಿಯೇ ಮಾಡಿ ಮನೆಮಂದಿಗೆಲ್ಲಾ ಮಾಡಿ ತಿನ್ನಿಸಿದರೆ ಖರ್ಚೂ ಕಡಿಮೆ, ಆರೋಗ್ಯಕ್ಕೂ ಒಳ್ಳೆಯದು.

ಮೂಲಂಗಿ ಪಕೋಡ
ಬೇಕಾಗುವ ಸಾಮಗ್ರಿ: 1 ಕಪ್‌ ಮೂಲಂಗಿ ತುರಿ, 1/2 ಕಪ್‌ ಮೊಸರು, 1 ಕಪ್‌ ತೆಂಗಿನ ತುರಿ, ಸಣ್ಣ ತುಂಡು ಶುಂಠಿ, 2 ಚಮಚ ಬೆಳ್ಳುಳ್ಳಿ ಚೂರು, 2 ಚಮಚ ಅಕ್ಕಿಹಿಟ್ಟು , 1 ಚಮಚ ಹಸಿಮೆಣಸು ಚೂರು, 2 ಚಮಚ ಕೊತ್ತಂಬರಿಸೊಪ್ಪು, 2 ಚಮಚ ಕರಿಬೇವಿನೆಲೆ ಚೂರು, ಚಿಟಿಕೆ ಅರಸಿನ, ರುಚಿಗೆ ತಕ್ಕಷ್ಟು ಉಪ್ಪು , ಕರಿಯಲು ಬೇಕಾದಷ್ಟು ಎಣ್ಣೆ.

ತಯಾರಿಸುವ ವಿಧಾನ: ಮೂಲಂಗಿ ತುರಿ, ತೆಂಗಿನ ತುರಿ, ಶುಂಠಿ ಚೂರು, ಬೆಳ್ಳುಳ್ಳಿ ಚೂರು, ಹಸಿಮೆಣಸು ಚೂರು, ಕೊತ್ತಂಬರಿಸೊಪ್ಪು , ಕರಿಬೇವಿನೆಲೆ ಚೂರು, ಅರಸಿನ, ಅಕ್ಕಿಹಿಟ್ಟು, ಉಪ್ಪು , ಮೊಸರು ಸೇರಿಸಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ. ಈಗ ಗರಂ ಗರಂ ಪಕೋಡ ಸವಿಯಲು ಸಿದ್ಧ.

ಕಾಯಿ ಪಪ್ಪಾಯಿ ಪಕೋಡ
ಬೇಕಾಗುವ ಸಾಮಗ್ರಿ: 1 ಕಪ್‌ ಬೀಜ-ಸಿಪ್ಪೆ ತೆಗೆದು ಸಣ್ಣಗೆ ತುಂಡು ಮಾಡಿದ ಪಪ್ಪಾಯಿ ತುಂಡು, 1/4 ಕಪ್‌ ಈರುಳ್ಳಿ ಚೂರು, 2 ಚಮಚ ಕೊತ್ತಂಬರಿಸೊಪ್ಪು, 2 ಚಮಚ ಕರಿಬೇವಿನ ಚೂರು, 1/2 ಚಮಚ ಜೀರಿಗೆ ಪುಡಿ, 1-2 ಹಸಿಮೆಣಸಿನ ಚೂರು, 1/2 ಚಮಚ ಕೆಂಪುಮೆಣಸಿನ ಪುಡಿ, ಚಿಟಿಕೆ ಅರಸಿನ, 1 ಕಪ್‌ ಕಡಲೆಹಿಟ್ಟು, ಕರಿಯಲು ಬೇಕಾದಷ್ಟು ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

RELATED ARTICLES  ನಾದಿದ ಚಪಾತಿ ಹಿಟ್ಟನ್ನು ವಾರದವರೆಗೆ ಫ್ರೆಶ್ ಆಗಿ ಇಡಬೇಕೆ? ಅದಕ್ಕೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್!

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ನೀರು ಹಾಕಿ ಸಣ್ಣಗೆ ಹೆಚ್ಚಿದ ಪಪ್ಪಾಯಿ ತುಂಡು ಹಾಕಿ ಹದವಾಗಿ ಬೇಯಿಸಿ. ನಂತರ ಒಂದು ಪಾತ್ರೆಗೆ ಈರುಳ್ಳಿ ಚೂರು, ಕರಿಬೇವಿನ ಚೂರು, ಹಸಿಮೆಣಸು ಚೂರು, ಜೀರಿಗೆ, ಕೊತ್ತಂಬರಿಸೊಪ್ಪಿನ ಚೂರು, ಅರಸಿನ ಪುಡಿ, ಉಪ್ಪು, ತಣ್ಣಗೆ ಆದ ಪಪ್ಪಾಯಿ ತುಂಡು, ಕಡಲೆಹಿಟ್ಟು ಹಾಕಿ ಪಕೋಡ ಹಿಟ್ಟಿನ ಹದಕ್ಕೆ ಕಲಸಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿ ಗರಿ ಪಕೋಡ ಸವಿಯಲು ಸಿದ್ಧ.

ಬೆಳ್ತಿಗೆ ಅನ್ನದ ಪಕೋಡ
ಬೇಕಾಗುವ ಸಾಮಗ್ರಿ: 1 ಕಪ್‌ ಬೆಳ್ತಗೆ ಅನ್ನ, 2 ಚಮಚ ಚಿರೋಟಿ ರವೆ, 1/4 ಕಪ್‌ ನುಗ್ಗೆಸೊಪ್ಪಿನ ಚೂರು, 2-3 ಚಮಚ ಕೊತ್ತಂಬರಿಸೊಪ್ಪು , 1 ಚಮಚ ಕೆಂಪುಮೆಣಸು ಪುಡಿ, 1/4 ಕಪ್‌ ಈರುಳ್ಳಿ ಚೂರು, ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ.

RELATED ARTICLES  ಆಲೂ ಕರಿ

ತಯಾರಿಸುವ ವಿಧಾನ: ಬೆಳ್ತಿಗೆ ಅನ್ನ ಸ್ವಲ್ಪ ಕೈಯಿಂದ ಮಸೆದು, ಚಿರೋಟಿ ರವೆ, ನುಗ್ಗೆಸೊಪ್ಪು, ಕೊತ್ತಂಬರಿಸೊಪ್ಪು, ಈರುಳ್ಳಿ ಚೂರು, ಕೆಂಪುಮೆಣಸು ಪುಡಿ, ಉಪ್ಪು ಸೇರಿಸಿ ಗಟ್ಟಿಗೆ ಪಕೋಡ ಹದಕ್ಕೆ ಕಲಸಿ. ನಂತರ ಕೈಯಿಂದ ಸ್ವಲ್ಪ ಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಗರಿ ಗರಿ ಪಕೋಡ ತಿನ್ನಲು ಸಿದ್ಧ. ಅನ್ನ ಉಳಿದರೆ ಈ ರೀತಿ ಮಾಡಿ ಸವಿಯಿರಿ.

ಸಿಹಿಕುಂಬಳ ಪಕೋಡ
ಬೇಕಾಗುವ ಸಾಮಗ್ರಿ: 1 ಕಪ್‌ ಬೀಜ-ಸಿಪ್ಪೆ ತೆಗೆದು ತುರಿದ ಸಿಹಿಕುಂಬಳ, 1 ಕಪ್‌ ಅಕ್ಕಿಹಿಟ್ಟು , 1 ಚಮಚ ಬೆಲ್ಲ, 2 ಚಮಚ ಸಪ್ಪೆ ಕೋವಾ, 1/4 ಕಪ್‌ ತೆಂಗಿನತುರಿ, ಉಪ್ಪು ರುಚಿಗೆ ತಕ್ಕಷ್ಟು , ಕರಿಯಲು ಬೇಕಾದಷ್ಟು ಎಣ್ಣೆ , 1/4 ಚಮಚ ಏಲಕ್ಕಿ ಪುಡಿ.

ತಯಾರಿಸುವ ವಿಧಾನ: ಸಿಹಿಕುಂಬಳ ತುರಿ, ಅಕ್ಕಿಹಿಟ್ಟು, ಬೆಲ್ಲ, ಕೋವಾ, ತೆಂಗಿನತುರಿ, ಉಪ್ಪು , ಏಲಕ್ಕಿ ಪುಡಿ ಎಲ್ಲಾ ಸೇರಿಸಿ ಗಟ್ಟಿಗೆ ಕಲಸಿ. ನಂತರ ಕೈಯಿಂದ ಸ್ವಲ್ಪಸ್ವಲ್ಪವೇ ತೆಗೆದು ಕಾದ ಎಣ್ಣೆಗೆ ಹಾಕಿ ಹದ ಉರಿಯಲ್ಲಿ ಕೆಂಪಗೆ ಕರಿದು ತೆಗೆಯಿರಿ. ಈಗ ಸಿಹಿಯಾದ ಪಕೋಡ ಸವಿಯಲು ಬಲು ರುಚಿ.