ಬೇಸಿಗೆ ಕಾಲ ಬಂತೆಂದರೆ ಸಾಕು ಜನರು ಕಂಗಾಲಾಗಿ ಹೋಗುತ್ತಾರೆ. ಇನ್ನು ಮಕ್ಕಳಿಗೆ ಬೇಸಿಗೆ ಬಂತೆಂದರಂತೂ ಪೋಷಕರ ಸ್ಥಿತಿ ಹೇಳತೀರದು. ಬೇಸಿಗೆ ಸೀಸನ್ ನಲ್ಲಿ ಬಿಸಿ ಗಾಳಿ, ಬೆವರು, ದಾಹದಿಂದ ಹೊರಬಂದು ತಣ್ಣನೆಯ ಹಾಗೂ ಪ್ರಶಾಂತವಾದ ಸ್ಥಳಗಳಲ್ಲಿ ಕೂಲ್ ಆಗಿ ಬೇಸಿಗೆ ರಜೆ ಕಳೆಯಲು ಬಯಸುವವರಿಗೆ ಸಾಕಷ್ಟು ಆಯ್ಕೆಗಳಿವೆ.
ಬೇಸಿಗೆ ರಜೆ ಹಿನ್ನಲೆಯಲ್ಲಿ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಬೇಕು, ಬೇಸಿಗೆ ರಜೆ ಕಳೆಯಬೇಕೆಂದು ಪ್ರತೀಯೊಬ್ಬರೂ ಬಯಸುತ್ತಾರೆ. ಆದರೆ, ತಾಣಗಳ ಆಯ್ಕೆಯಲ್ಲಿ ಕೆಲ ಗೊಂದಲಗಳು ಮೂಡುತ್ತವೆ. ಇಂತಹ ಗೊಂದಲಗಳನ್ನು ನಿವಾರಿಸಲು ಭಾರತದ ಸುಂದರವಾದ ಹಾಗೂ ಬೇಸಿಗೆಯ ಧಗೆಯನ್ನು ಮರೆಸುವಂತಹ ಕೆಲ ಸೂಪರ್ ಕೂಲ್ ತಾಣಗಳು ಈ ಕೆಳಗಿನಂತಿವೆ…

ಲಂಬಸಿಂಗಿ (ಆಂಧ್ರಪ್ರದೇಶ)
ದಕ್ಷಿಣ ಭಾರತದ ರಾಜ್ಯಗಳಲ್ಲೊಂದಾದ ಆಂಧ್ರಪ್ರದೇಶ ಪ್ರವಾಸೋದ್ಯಮದ ದೃಷ್ಟಿಯಿಂದ ಸಾಕಷ್ಟು ಮಹತ್ವ ಪಡೆದಿರುವ ರಾಜ್ಯವಾಗಿದೆ. ಸಾಮಾನ್ಯವಾಗಿ ಆಂಧ್ರಪ್ರದೇಶವು ಸಾಕಷ್ಟು ಉಷ್ಣತೆಯನ್ನು ಹೊಂದಿರುವ ರಾಜ್ಯವಾಗಿದೆ. ಆಂಧ್ರಪ್ರದೇಶವು ಮುಖ್ಯವಾಗಿ ಧಾರ್ನಿಕ ತಾಣಗಳಿಗೆ ಹೆಸರುವಾಸಿಯಾಗಿದ್ದರೂ ಇಲ್ಲಿನ ಸೃಷ್ಟಿಯ ಸೌಂದರ್ಯ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಆಂಧ್ರಪ್ರದೇಶದಲ್ಲಿ ಕೆಲವು ಅದ್ಭುತ ಎನ್ನಬಹುದಾದ ಅರಣ್ಯ ಪ್ರದೇಶಗಳಿದ್ದು, ಇವು ಸದಾ ನಿಸರ್ಗಪ್ರಿಯ ಪ್ರವಾಸಿಗರನ್ನು ಆಕರ್ಷಿಸುತ್ತದೆ.
ಆಂಧ್ರಪ್ರದೇಶದ ವಿಶಾಖಪಟ್ಟಣಂ ಜಿಲ್ಲೆಯ ಚಿಂತಪಲ್ಲಿ ಮಂಡಲ್ ನಲ್ಲಿ ಲಿಂಗಸಿಂಗಿ ಎಂಬ ಪುಟ್ಟ ಗ್ರಾಮವಿದೆ. ಈ ಲಂಬಸಿಂಗಿಯಲ್ಲಿ ಚಳಿಗಾಲ ಸಂದರ್ಭದಲ್ಲಿ ಸುಮಾರು ಸೊನ್ನೆ ಡಿಗ್ರಿಯಷ್ಟು ಉಷ್ಣಾಂಶವಿರುತ್ತದೆ. ಇಲ್ಲಿನ ವಾತಾವರಣ ದಟ್ಟ ಮಂಜಿನಿಂದ ಕೂಡಿರುತ್ತದೆ. ಸಾಕಷ್ಟು ತಂಪಾಗಿರುವ ಕಾರಣದಿಂದಲೇ ಇದನ್ನು ಆಂಧ್ರಪ್ರದೇಶ ಕಾಶ್ಮೀರವೆಂದೇ ಕರೆಯಲಾಗುತ್ತದೆ. ಬೇಸಿಗೆ ಸಂದರ್ಭದಲ್ಲಿಯೂ ಇಲ್ಲಿನ ವಾತಾವರಣ ತಂಪಾಗಿರಲಿದ್ದು, ಪ್ರವಾಸಿಗರು ಭೇಟಿ ನೀಡಲು ಇದು ಅತ್ಯಂತ ಅದ್ಭುತ ಸ್ಥಳವಾಗಿರಲಿದೆ.

RELATED ARTICLES  ಶ್ರೀರಾಮ ವಿದ್ಯಾ ಕೇಂದ್ರದ ಮಕ್ಕಳಿಗಾಗಿ ' ಅಕ್ಕಿ ಭಿಕ್ಷಾ ಅಭಿಯಾನ " ಕ್ಕೆ ಚಾಲನೆ

ವಯನಾಡ್ (ಕೇರಳ)
ಸಮುದ್ರ ಮಟ್ಟದಿಂದ ಬಹಳ ಎತ್ತರದ ಮನೋಹರ ಪಶ್ಚಿಮಘಟ್ಟಗಳ ಮೇಲೆ ಜೈವಿಕ ವೈವಿಧ್ಯತೆಯನ್ನೊಳಗೊಂಡು 2,132 ಚದರ ಕಿ.ಮೀ ಪ್ರದೇಶವನ್ನು ವ್ಯಾಪಿಸಿಕೊಂಡಿರುವ ವಯನಾಡು ತನ್ನ ಶುಬ್ರ ಪರಿಸರವನ್ನುಳಿಸಿಕೊಂಡಿರುವ ಕೇರಳ ರಾಜ್ಯದ ಕೆಲವೇ ಜಿಲ್ಲೆಗಳಲ್ಲಿ ಒಂದು. ವಯನಾಡ್ ಒಂದು ಕಿರು ಅದ್ಭುತವೆಂದೇ ಹೇಳಬಹುದು. ಈ ಅದ್ಬುತವನ್ನು ಕಣ್ತುಂಬಿಕೊಳ್ಳಲು ದೂರದ ಸ್ಥಳಗಳಿಂದ ಪ್ರವಾಸಿಗರು ಪ್ರತೀ ವರ್ಷ ಇಲ್ಲಿಗೆ ಆಗಮಿಸುತ್ತಿರುತ್ತಾರೆ.
ದೈನಂದಿನ ಜಂಜಾಟಗಳಿಂದ ನಾವು ಕಳೆದುಕೊಂಡಿರುವ ಶಾಂತಿ ಮತ್ತು ಆತ್ಮತೃಪ್ತಿಯನ್ನು ಗಳಿಸಲು ಇದು ಹೇಳಿ ಮಾಡಿಸಿದ ತಾಣವಾಗಿದೆ. ಇಲ್ಲಿ ದಟ್ಟವಾದ ಕಾಡುಗಳು, ಪರ್ವತಗಳು ಹಾಗೂ ಗುಹೆಗಳಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ.

ಕೋಟಗಿರಿ (ತಮಿಳುನಾಡು)
ತಮಿಳುನಾಡಿನ ನೀಲಗಿರಿ ಜಿಲ್ಲೆಗೆ ಸೇರಿದ ಕೋಟಗಿರಿ ದಟ್ಟವಾದ ಚಹಾ ತೋಟಗಳಿಂದ ಆವೃತ್ತವಾಗಿರುವ ಸುಂದರ ಊರಾಗಿದೆ. ಸಾಕಷ್ಟು ಮರಗಡಿಗಳನ್ನು ತುಂಬಿಕೊಂಡು ಹಸಿರಿನಿಂದ ಆವೃತವಾಗಿರುವ ಈ ಗಿರಿಧಾಮದಲ್ಲಿ ಸ್ವಚ್ಛ-ಸುಂದರ ಪರಿಸರ ಮೈತಳೆದಿದೆ.
ಪ್ರವಾಸಿಗರಿಗೆಂದೇ ಕೋಟಗಿರಿಯಲ್ಲಿ ತಮಿಳುನಾಡು ರಾಜ್ಯ ಸರ್ಕಾರ ಹಲವು ಸವಲತ್ತುಗಳನ್ನು ಒದಗಿಸಿದೆ. ಊಟಿ ಮುಖ್ಯಸ್ಥೆಯಲ್ಲಿ ಸಾಗುವಾಗ ಸಿಗುವ ಈ ಸುಂದರ ತಾಣ ನೀಲಗಿರಿ ಬೆಟ್ಟ ಸಾಲುಗಳಲ್ಲಿ ಒಂದಾಗಿದೆ. ಅತ್ಯಂತ ಹಳೆಯದಾದ ಗಿರಿಧೀಮಗಳಲ್ಲಿ ಕೋಟಗಿರಿಯೂ ಕೂಡ ಒಂದಾಗಿದೆ. ಇಲ್ಲಿ ಕೋಟ ಹೆಸರಿನ ಬುಡಕಟ್ಟು ಜನರು ವಾಸವಾಗಿದ್ದಾರೆ. ಅದರಿಂದಲೇ ಇದಕ್ಕೆ ಕೋಟಗಿರಿ ಎಂಬ ಹೆಸರು ಬಂದಿದೆ ಎಂದು ಹೇಳಲಾಗುತ್ತದೆ. ಸಮುದ್ರ ಮಟ್ಟದಿಂದ 1793 ಮೀಟರ್ ಎತ್ತರದಲ್ಲಿರುವುದರಿಂದ ಸಹಜವಾಗಿಯೇ ಕೋಟಗಿರಿಯಲ್ಲಿ ತಂಪಾದ ಹವೆಯಿದೆ.

RELATED ARTICLES  ಶ್ರೀ ಶ್ರೀ ರಾಮನಂದ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ನಡೆಯಿತು ಉಚಿತ ಶೈಕ್ಷಣಿಕ‌ ಪರಿಕರ‌ ವಿತರಣೆ.

ದೇವಿಕುಲಂ (ಕೇರಳ)
ದೇವಿಕುಲಂ ಇರುವುದು ದೇವರ ನಾಡು ಎಂದು ಕರೆಯಲಾಗುವ ಕೇರಳ ರಾಜ್ಯದಲ್ಲಿ. ಸೀತಾ ದೇವಿ ಕೆರೆಯನ್ನು ಸಾಮಾನ್ಯವಾಗಿ ದೇವಿಕುಲಂ ಕೆರೆ ಎಂದು ಕರೆಯಲಾಗುತ್ತದೆ. ಇಲ್ಲಿರುವ ನಿಸರ್ಗದ ಸೌಂದರ್ಯ ಜನರನ್ನು ಹೆಚ್ಚು ಆಕರ್ಶಿಸುತ್ತದೆ. ದಟ್ಟ ಅರಣ್ಯಗಳು, ಹಸಿರು, ಹುಲ್ಲಿನ ಹಾಸು, ತಂಪಾದ ವಾತಾವರಣ ಮತ್ತು ಸ್ವಚ್ಛ ನೀರಿನ ವಾತಾವರಣ ಇಲ್ಲಿದ್ದು, ದೇವಿಕುಲಂ ಪ್ರವಾಸಿಗರಿಗೆ ಸ್ವರ್ಗವೆಂದೇ ಹೇಳಬಹುದು. ಇಲ್ಲಿನ ನಿಸರ್ಗ ಸೌಂದರ್ಯವನ್ನು ಸವಿದವರಿಗೆ ದೇವಿಕುಲಂ ಸ್ವರ್ಗವೇ ಧರೆಗಿಳಿದು ಬಂದಂತೆ ಭಾಸವಾಗುತ್ತದೆ. ದೇವಿಕುಲಂಗೆ ಹೋಗಲು ಉತ್ತಮವಾದ ಕಾಲವೆಂದರೆ ಬೇಸಿಗೆ. ಸಮುದ್ರ ಮಟ್ಟದಿಂದ ಸುಮಾರು 1800 ಮೀ ಎತ್ತರದಲ್ಲಿ ದೇವಿಕುಲಂ ಇರುವುದರಿಂದ ಇಲ್ಲಿನ ವಾತಾವರಣ ಸದಾ ತಂಪಾಗಿರುತ್ತದೆ.