ಬೆಂಗಳೂರು: ಭ್ರಷ್ಟಾಚಾರ, ಲೈಂಗಿಕ ಕಿರುಕುಳದ ಆರೋಪಗಳಿಗೆ ಗುರಿಯಾಗಿದ್ದವರನ್ನು ವಿಧಾನಸಭಾ ಚುನಾವಣೆಯಲ್ಲಿ ಕಣಕ್ಕಿಳಿಸಬೇಕೋ–ಬೇಡವೋ ಎಂಬ ಕುರಿತು ಕೊನೆಗಳಿಗೆಯಲ್ಲಿ ತೀರ್ಮಾನ ಕೈಗೊಳ್ಳಲು ಬಿಜೆಪಿ ವರಿಷ್ಠರು ಚಿಂತನೆ ನಡೆಸಿದ್ದಾರೆ.

ಮೊದಲ ಪಟ್ಟಿಯಲ್ಲಿ 72 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದೆ. 2–3 ದಿನಗಳಲ್ಲಿ ಇನ್ನೂ 40ರಿಂದ 50 ಕ್ಷೇತ್ರಗಳ ಅಭ್ಯರ್ಥಿ ಪಟ್ಟಿಪ್ರಕಟವಾಗಲಿದೆ.

‘ಕಳಂಕ’ ಎದುರಿಸಿದವರಿಗೆ ಟಿಕೆಟ್‌ ನೀಡಿದರೆ, ಮಾಧ್ಯಮಗಳು ಹಾಗೂ ವಿರೋಧ ಪಕ್ಷದ ನಾಯಕರು ಅದನ್ನೇ ದೊಡ್ಡದು ಮಾಡುವ ಸಾಧ್ಯತೆ ಇದೆ. ಇದನ್ನು ತಪ್ಪಿಸಲು ನಾಮಪತ್ರ ಸಲ್ಲಿಕೆಗೆ ಒಂದೆರಡು ದಿನ ಇರುವಾಗ (ಏ.24) ಅಂತಿಮ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಭ್ರಷ್ಟಾಚಾರದ ಆರೋಪ ಹೊತ್ತು ಜೈಲು ವಾಸ ಅನುಭವಿಸಿದ್ದ ಕಟ್ಟಾ ಸುಬ್ರಹ್ಮಣ್ಯನಾಯ್ಡು (ಶಿವಾಜಿನಗರ), ಕೃಷ್ಣಯ್ಯ ಶೆಟ್ಟಿ( ಮಾಲೂರು), ಲೈಂಗಿಕ ಹಗರಣದ ಆರೋಪ ಹೊತ್ತಿದ್ದ ಹರತಾಳು ಹಾಲಪ್ಪ (ಸಾಗರ), ಎಂ.ಪಿ. ರೇಣುಕಾಚಾರ್ಯ(ಹೊನ್ನಾಳಿ), ಕೆ.ರಘುಪತಿ ಭಟ್ (ಉಡುಪಿ) ಅವರು ಬಿಜೆಪಿಯ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.

ಬಿಜೆಪಿ 2ನೇ ಪಟ್ಟಿ ನಂತರ ಕಾಂಗ್ರೆಸ್‌ ಪಟ್ಟಿ

ನವದೆಹಲಿ: ರಾಜ್ಯ ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಗಾಗಿ ಕಾಂಗ್ರೆಸ್‌ನ ಚುನಾವಣಾ ಪರಿಶೀಲನಾ ಸಮಿತಿಯ ಕಸರತ್ತು ಮಂಗಳವಾರವೂ ಮುಂದುವರಿದಿದ್ದು, ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ನಂತರವೇ ಪಕ್ಷದ ಮೊದಲ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ.

ಮಧ್ಯಾಹ್ನದಿಂದ ಇಲ್ಲಿ ಮೂರು ಹಂತಗಳ ಸಭೆ ನಡೆಸಿದ ಸಮಿತಿಯು, ವಿವಿಧ ಆಯಾಮಗಳ ಕುರಿತು ರಾಜ್ಯ ಮುಖಂಡರಿಂದ ಮಾಹಿತಿ ಸಂಗ್ರಹಿಸಿತು.

140 ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಮೊದಲ ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಆದರೆ, ಅನೇಕ ಕ್ಷೇತ್ರಗಳಲ್ಲಿ ಆಕಾಂಕ್ಷಿಗಳು ಅಧಿಕ ಸಂಖ್ಯೆಯಲ್ಲಿ ಇರುವುದರಿಂದ ಸಂಭವನೀಯ ಬಂಡಾಯಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಲು ಕಾರ್ಯತಂತ್ರ ರೂಪಿಸಲಾಗಿದ್ದು, ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆ ಆಗುವವರೆಗೆ ಕಾದು ನೋಡುವ ತಂತ್ರ ಅನುಸರಿಸಲು ಸಮಿತಿಯ ಅಧ್ಯಕ್ಷ ಮಧುಸೂದನ ಮಿಸ್ತ್ರಿ ಅವರಿಗೆ ರಾಜ್ಯ ಮುಖಂಡರು ಸಲಹೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ಖಚಿತಪಡಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ರಾತ್ರಿ ಬೆಂಗಳೂರಿಗೆ ವಾಪಸ್‌ ತೆರಳಿದ್ದು, ಬುಧವಾರ ಹಾಗೂ ಗುರುವಾರವೂ ಚುನಾವಣಾ ಪರಿಶೀಲನಾ ಸಮಿತಿಯ ಸಭೆ ಮುಂದುವರಿಯಲಿದೆ. ಜಿ.ಪರಮೇಶ್ವರ್‌ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

13ರಂದು ಸಿಇಸಿ ಸಭೆ: ಇದೇ 13ರಂದು ಪಕ್ಷದ ಕೇಂದ್ರ ಚುನಾವಣಾ ಸಮಿತಿ (ಸಿಇಸಿ) ಸಭೆ ನಡೆಯಲಿದ್ದು, 14ರಂದು ಮೊದಲ ಪಟ್ಟಿಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಂದ ಅನುಮೋದನೆ ದೊರೆಯಲಿದೆ. ಅಷ್ಟರೊಳಗೆ ಬಿಜೆಪಿಯ ಎರಡನೇ ಪಟ್ಟಿ ಹೊರಬಿದ್ದಿದ್ದರೆ ಮಾತ್ರ ಕಾಂಗ್ರೆಸ್‌ನ ಮೊದಲ ಪಟ್ಟಿ ಬಿಡುಗಡೆ ಆಗಲಿದೆ ಎಂದು ತಿಳಿದುಬಂದಿದೆ