muralidhar 2

ಪಟ್ಟಣದ ಜೀವನ ಒಂದಾದರೆ ಹಳ್ಳಿಗಳಲ್ಲಿಯ ಜೀವನ ವೈಖರಿಯೇ ಬೇರೆಯದ್ದಾಗಿರುತ್ತದೆ. ಹಳ್ಳಿಗಳಲಿ,್ಲ ವಾಸಿಸುವ ಜನಗಳದ್ದು ಪಟ್ಟಣದಲ್ಲಿ ವಾಸಿಸುವ ಜನಗಳಷ್ಟು ದೊಡ್ಡ ಸಮಸ್ಯೆಗಳು ಇಲ್ಲದಿದ್ದರೂ ಸಣ್ಣ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಆಗದೆ ಪಶ್ಚಾತ್ತಾಪ ಪಡುವವರು ಇದ್ದಾರೆ. ಪಟ್ಟಣಗಳಲ್ಲಿ ಕೆಲಸದ ಒತ್ತಡ ಯಾಂತ್ರೀಕೃತ ಜೀವನದಿಂದ ಬೇರೊಬ್ಬರ ಕಷ್ಟಗಳನ್ನು ಕೇಳುವುದಕ್ಕೆ ಆಗುವುದಿಲ್ಲ ಎಂದು ಭಾವಿಸಿದರೆ ಹಳ್ಳಿಗಳಲ್ಲಿನ ವಾತಾವರಣವೇ ಬೇರೆಯದ್ದೇ ಆಗಿರುತ್ತದೆ.

ಹಳ್ಳಿಗಳಲ್ಲಿ ಅಣ್ಣ ತಮ್ಮಂದಿರುಗಳು ಮೊದಲು ಒಟ್ಟಾಗಿ ವಾಸಿಸುತ್ತಿದ್ದು, ಕ್ರಮೇಣವಾಗಿ ಯಾವುದಾದರೂ ಕಾರಣದಿಂದ ಬೇರೆ ಸಂಸಾರ ನಡೆಸುತ್ತಿರುವುದು ಸಾಮಾನ್ಯ ಸಂಗತಿಯಾಗಿದೆ. ಬೇರೆ ಸಂಸಾರ ಮಾಡಿದ್ದರೂ ಪ್ರೀತಿ ವಿಶ್ವಾಸವಿದ್ದಲ್ಲಿ ಎಲ್ಲರಲ್ಲೂ ಅನ್ಯೋನ್ಯತೆ ಉಂಟಾಗಿ ಒಬ್ಬರ ಕಷ್ಟದಲ್ಲಿ ಇನ್ನೊಬ್ಬರು ಭಾಗಿಯಾಗಿ ಜೀವನ ನಡೆಸಿಕೊಂಡು ಹೋಗುವುದು ಕಷ್ಟವೇನಲ್ಲ. ಆದರೆ ಆಸ್ತಿ ವಿಚಾರದಲ್ಲಿ ಅಥವಾ ಬೇರೆ ಯಾವುದಾದರೂ ವಿಚಾರದಲ್ಲಿ ವೈಮನಸ್ಸು ಉಂಟಾಗಿ, ಅದು ವೈಯುಕ್ತಿಕ ದ್ವೇಷಕ್ಕೆ ತಿರುಗಿ ಅಸೂಯೆ ಮನೆ ಮಾಡಿರುವ ಸನ್ನಿವೇಶಗಳಲ್ಲಿ ಒಬ್ಬರ ಕಷ್ಟವನ್ನು ಇನ್ನೊಬ್ಬರು ಅರಿಯದಂತೆ ಆಗಿರುತ್ತದೆ.
ಮೊದಲಿನಿಂದಲೂ ಕಂಡಿರುವ ನೋಡಿರುವ ಪರಿಚಯಸ್ಥರೇ ಇರುವುದರಿಂದ ಯಾರಲ್ಲಿ ಏನು ಹೇಳಿದರೆ ಏನಾಗುವುದೋ ಎಂಬ ಚಿಂತೆ ಕಾಡುತ್ತದೆ. ಏಕೆಂದರೆ ಮೊದಲಿನಿಂದಲೂ ಅವರ ಗುಣಗಳನ್ನು ನೋಡಿದ್ದು, ಏನಾದರೂ ಹೇಳಿದರೆ ತಮ್ಮ ಮುಂದೆ ಪಶ್ಚಾತ್ತಾಪವನ್ನು ಹೇಳುವ ನಾಟಕವಾಡಿ ಬೇರೆಯವರ ಮುಂದೆ ಆಡಿಕೊಂಡರೆ ಎಂಬ ಭಯ ಇರುತ್ತದೆ. ಸಮಸ್ಯೆಗೆ ಪರಿಹಾರ ಹೇಳುವ ಬದಲು ನಗೆಪಾಟಲಿಗೆ ಈಡಾದರೆ ಎಂಬ ಆತಂಕವೂ ಇದ್ದು, ಯಾರಿಗೂ ಹೇಳಲು ಮನಸ್ಸು ಮಾಡಿರುವುದಿಲ್ಲ.

ಆದರೂ ಕಷ್ಟವನ್ನು ಕೇಳಿ ಪರಿಹಾರ ನೀಡಲು ಶಕ್ತರಾಗಿದ್ದರೆ ಅವರ ಮುಂದೆ ಕಷ್ಟವನ್ನು ಹೇಳಬಹುದು, ಇಲ್ಲದಿದ್ದರೆ ಸಮಸ್ಯೆಯನ್ನು ಹೇಳಿ ಎನೂ ಪ್ರಯೋಜನ ಇಲ್ಲ ಎಂದು ನಿರ್ಧರಿಸಿ, ತಾವೊಬ್ಬರೇ ಅನುಭವಿಸುತ್ತಾ ಇರುತ್ತಾರೆ. ಆದರೂ ಪಟ್ಟಣದಲ್ಲಿರುವಂತೆ ಹಳ್ಳಿಗಳಲ್ಲಿ ಕಷ್ಟವನ್ನು ಕೇಳದೆ ನಿರಾಕರಿಸುವ ಜನಗಳು ಸಿಗದೇ ಇರುವುದು ಅಪರೂಪ ಎನ್ನಬಹುದು. ಒಂದೇ ಹಳ್ಳಿಯವರು ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದಾರೆ, ಅವರ ಕಷ್ಟವನ್ನು ಕೇಳಿ ಕೈಲಾದರೆ ಸಹಾಯ ಮಾಡೋಣ ಎಂಬ ಮನೋಭಾವ ಇರುತ್ತದೆ.
ಕಷ್ಟಗಳನ್ನು ಕೇಳಿ ಪರಿಹಾರ ಸೂಚಿಸಲು ಮನಸ್ಸಿದ್ದು, ಅದರಲ್ಲೂ ಕೆಲವರ ಚಿತಾವಣೆಯಿಂದ ಸಮಸ್ಯೆ ಬಗೆಹರಿಸಲು ಬಂದವರಿಗೆ ತೊಂದರೆ ಉಂಟು ಮಾಡುವ ಸನ್ನಿವೇಶ ಉಂಟಾಗಬಹುದು. ಈ ಕಾರಣಗಳಿಂದ ಒಬ್ಬರ ಕಷ್ಟವನ್ನು ಆಲಿಸಲು ಬೇರೆಯವರು ಪ್ರಯತ್ನಪಟ್ಟರೆ ಅದಕ್ಕೇನಾದರೂ ತಂತ್ರ ಹೂಡಿ ಕಷ್ಟಗಳನ್ನು ಕೇಳಿದರೂ ಪರಿಹಾರ ಸಿಗದಂತೆ ಮಾಡಬಹುದು. ಇದರಿಂದ ದ್ವೇಷವು ಮುಂದುವರೆಯುವ ಸಾಧ್ಯತೆ ಇರುತ್ತದೆ.

RELATED ARTICLES  ಅಂಕೋಲಾ ಸೀಮೆಯ ಯಕ್ಷಗಾನದ ದೈತ್ಯ ಪ್ರತಿಭೆ ವಂದಿಗೆ ವಿಠೋಬ ನಾಯಕ!

ತಮ್ಮವರೆಂದು ಸಹಾಯಕ್ಕೆ ಬಂದರೆ ಅಹಂಕಾರ ಮತ್ತು ದ್ವೇಷದಿಂದ ಹಾಗೂ ಕೆಟ್ಟ ಸ್ವಾಭಿಮಾನದಿಂದ ಸಹಾಯ ಪಡೆಯಲು ನಿರಾಕರಿಸಿ ತಾವೇ ಕಷ್ಟಕ್ಕೆ ಸಿಲುಕಿರುವ ಅದೆಷ್ಟೋ ನಿದರ್ಶನಗಳು ಇವೆ. ದ್ವೇಷವಿದ್ದೂ ಸಹಾಯವನ್ನು ಪಡೆದರೆ ಸ್ವಲ್ಪವಾದರೂ ದ್ವೇಷ ಕಡಿಮೆಯಾಗಿ ಇಬ್ಬರ ಕುಟುಂಬಗಳಲ್ಲಿ ಅನ್ಯೋನ್ಯತೆ ಉಂಟಾಗಬಹುದು. ಆದರೆ ಉದಾರ ಮನಸ್ಸಿನಿಂದ ಸ್ವೀಕರಿಸುವವರು ಇರಬೇಕು. ಆಗಲೇ ದ್ವೇಷಕ್ಕೆ ಕೊನೆ ಹಾಡಬಹುದು. ದ್ವೇಷವು ನಿನ್ನೆ ಮೊನ್ನೆಯದಲ್ಲಿ ಅವರ ತಾತನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಅದನ್ನೇ ಮುಂದುವರೆಸಿ ಕೊಂಡು ಹೋಗುವ ಮನಸ್ಥಿತಿ ಇರಬಾರದು. ದ್ವೇಷಿಸುವವರು ಇಬ್ಬರ ಕುಟುಂಬದಲ್ಲಿ ಮರಣಹೊಂದಿದ್ದು, ಹೊಸ ಪೀಳಿಗೆಗಳು ಹುಟ್ಟಿರುವುದರಿಂದ ದ್ವೇಷಕ್ಕೆ ಇತಿಶ್ರೀ ಹಾಡಿ, ಅವರಲ್ಲಿ ಪ್ರೀತಿ ವಿಶ್ವಾಸ ಮೂಡಿದ್ದಲ್ಲಿ ದ್ವೇಷವನ್ನು ಬದಿಗೊತ್ತಿ ಈರ್ವರ ಕುಟುಂಬಗಳು ಅನ್ಯೋನ್ಯವಾಗಿ ಬದುಕುವಂತೆ ನೋಡಿಕೊಳ್ಳಬಹುದು. ತಾತ ಅಥವಾ ಮುತ್ತಾತ ಮಾಡಿದ ಯಾವುದೋ ತಪ್ಪಿಗೆ ಮೊಮ್ಮಗನಿಗೆ ಶಿಕ್ಷೆಯನ್ನು ನೀಡುವಂತಹ ಮನಸ್ಥಿತಿ ಇದ್ದರೆ ಸಮಸ್ಯೆ ಬಗೆಹರಿಯವುದಿಲ್ಲ.

ಮನುಷ್ಯನಿಗೆ ಯಾವುದೇ ಕಷ್ಟ ಬಂದರೂ ಯಾರಿಗೂ ಹೇಳಿಕೊಳ್ಳದಂತಹ ಪರಿಸ್ಥಿತಿ ಉಂಟಾಗಿ ರುವಂತೆ ಆಗಿದೆ. ಏನಾದರೂ ಬರಲಿ ಎಂದು ಕೆಲವರು ದೇವರಲ್ಲಿ ನಂಬಿಕೆ ಇಟ್ಟು ದೇವರೇ ಎಲ್ಲಾ ಕಷ್ಟವನ್ನು ಪರಿಹರಿಸುತ್ತಾನೆಂದು ಸ್ವಲ್ಪ ಧೈರ್ಯ ತೆಗೆದುಕೊಂಡು ಬದುಕು ಸಾಗಿಸುತ್ತಿರುವ ಅನೇಕ ಮಂದಿ ಇದ್ದಾರೆ. ತಮ್ಮ ಕಷ್ಟಕ್ಕೆ ಆದಷ್ಟೂ ತಾವೇ ಪರಿಹಾರ ಕಂಡುಕೊಂಡು ಧೈರ್ಯದಿಂದ ಬದುಕುತ್ತಿರುವವರು ಅನೇಕ ಮಂದಿ ಇರಬಹುದು.

ಆದರೆ ಮನುಷ್ಯನಾಗಿ ಹುಟ್ಟಿದ ಮೇಲೆ ಬೇರೆಯವರ ಕಷ್ಟಗಳನ್ನು ಹೇಳಿದರೂ, ಅದನ್ನು ಪರಿಹರಿಸಲು ಶಕ್ಯವಾಗಿದ್ದರೂ, ಅದಕ್ಕೆ ಸ್ಪಂದಿಸದೆ ತನ್ನ ಮನೆಯ ಯೋಗಕ್ಷೇಮ ಮಾತ್ರ ನೋಡಿ ಕೊಂಡು ಹೋಗುವುದು ಮನುಷ್ಯತ್ವದ ಗುಣ ಲಕ್ಷಣವಲ್ಲ. ಸಾದ್ಯವಾದಷ್ಟೂ ಒಬ್ಬರ ಕಷ್ಟಕ್ಕೆ ನೆರವಾಗುವುದು ಮಾನವ ಧರ್ಮವಾಗಿದೆ. ಎಲ್ಲ ಕಷ್ಟವನ್ನು ಕೇಳುತ್ತಾರೆ ಆದರೆ ಹಣಕಾಸಿನ ವಿಚಾರ ಬಂದಲ್ಲಿ ಮಾತ್ರ ಹಿಂಜರಿಯುವುದುಂಟು. ಇದು ಸ್ವಾಭಾವಿಕವಾದ ಮನಸ್ಥಿತಿಯಾಗಿದೆ. ಎಲ್ಲರೂ ಕೋಟ್ಯಾದೀಶ್ವರರೇನೂ ಅಲ್ಲ. ಬರುವ ಸಂಬಳದಿಂದ ಎರಡು ಹೊತ್ತು ಊಟ ಮಾಡಿಕೊಂಡು ಗೌರವದಿಂದ ಜೀವನ ಸಾಗಿಸಿಕೊಂಡು ಹೋದರೆ ಸಾಕೆನ್ನುವವರೇ ಜಾಸ್ತಿ ಇರುವಾಗ, ಬೇರೆಯವರಿಗೆ ಹಣಕಾಸಿನ ನೆರವನ್ನು ನೀಡುವುದು ಕಷ್ಟಸಾಧ್ಯ. ಬರುವ ಸಂಬಳದಲ್ಲಿ ಮಕ್ಕಳ ಭವಿಷ್ಯಕ್ಕಾಗಿ ಅಥವಾ ಮನೆಯನ್ನು ಕಟ್ಟಬೇಕೆಂಬ ಹಂಬಲದಿಂದ ಅಲ್ಪ ಸ್ವಲ್ಪ ಉಳಿತಾಯ ಮಾಡಿಕೊಂಡು ಬಂದಿದ್ದು, ಅದರಲ್ಲಿ ಬೇರೆಯವರಿಗೆ ನೀಡಿದರೆ ವಾಪಸ್ ಬರದೇ ಇದ್ದರೆ ಎಂಬ ಅತಂಕವೂ ಇರುತ್ತದೆ. ಅಥವಾ ಹಣವಂತರಾಗಿದ್ದರೂ ಸಹ ಅವರಿಂದ ಸಹಾಯ ಪಡೆದ ರೀತಿಯಲ್ಲಿಯೇ ಹಣವನ್ನು ವಾಪಸ್ ನೀಡಿದರೆ ಇಬ್ಬರ ಕಷ್ಟಗಳು ಪರಿಹಾರ ವಾಗಬಹುದು. ಕೊಟ್ಟ ತಕ್ಷಣ ಉಪಯೋಗಿಸಿಕೊಂಡು ವಾಪಸ್ ನೀಡಲು ಹಿಂಜರಿದರೆ ದೇವರೂ ಒಪ್ಪಲಾರ. ಮನುಷ್ಯ ಎಂದರೆ ಒಂದೇ ರೀತಿ ಕಷ್ಟ ಬರುತ್ತದೆ ಮುಂದೆ ಬರುವುದಿಲ್ಲ ಎನ್ನುವುದಕ್ಕೆ ಬರುವುದಿಲ್ಲ. ಅಕಸ್ಮಾತ್ ಬೇರೆ ಹಣದ ಅವಶ್ಯಕತೆ ಬಂದಾಗ, ಬೇರೆಯವರನ್ನು ಕೇಳಿದರೆ ಅವರಿಂದ ಸಹಾಯ ದೊರೆಯದಂತೆ ಆಗುತ್ತದೆ. ಕೊಟ್ಟ ಹಣ ವಾಪಸ್ ಹಿಂದಿರುಗಿಸುವುದಿಲ್ಲ ಎಂದು ಯಾರೂ ಹಣದ ಸಹಾಯ ಮಾಡುವುದೇ ಇಲ್ಲ. ಇದರಿಂದ ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವ ಸಂಭವ ಇರುತ್ತದೆ. ಪಡೆದ ಹಣವನ್ನು ತಕ್ಷಣ ವಾಪಸ್ ನೀಡಿದರೆ ಮುಂದೆಯೂ ಇವರ ಕಷ್ಟಕ್ಕೆ ಸ್ಪಂದಿಸುವವರು ಅನೇಕ ಮಂದಿ ದೊರೆಯುತ್ತಾರೆ. ಇಲ್ಲದಿದ್ದಲ್ಲಿ ಅವಿಶ್ವಾಸ ಮೂಡಿ ಸ್ನೇಹವೂ ಹೋಗುತ್ತದೆ. ಮಾತಿಗೆ ತಪ್ಪಿದವನು ಕೊಟ್ಟ ಹಣವನ್ನು ಕೊಡದಂತ ಮೋಸಗಾರ ಎಂಬ ಹಣೆಪಟ್ಟಿ ಶಾಶ್ವತವಾಗಿ ಉಳಿಯುತ್ತದೆ. ಕೆಲವೊಮ್ಮೆ ಬೇರೆಯವರ ಕಷ್ಟಕ್ಕೆಂದು ಹಣವನ್ನು ಸಾಲವಾಗಿ ನೀಡಿ ಸಹಾಯ ಮಾಡಿದ್ದರೆ ಆ ಹಣವನ್ನು ಹಿಂದಿರುಗಿಸಲು ಚೆಕ್ ನೀಡಿದ್ದಲ್ಲಿ, ಬ್ಯಾಂಕಿನಲ್ಲಿ ಹಣವಿಲ್ಲದೆ ಚೆಕ್ ಬೌನ್ಸ್ ಆಗಿ, ಕೋರ್ಟಿಗೆ ಅಲೆಯುವ ಪರಿಸ್ಥಿತಿ ಉಂಟಾಗುತ್ತದೆ. ಇದರಿಂದ ಹಣವನ್ನು ಕೊಡಲು ಹಿಂಜರಿಯಬಹುದು.

RELATED ARTICLES  "ಸ್ಥಿತಪ್ರಜ್ಞ ಶ್ರೀರಾಮ" (‘ಶ್ರೀಧರಾಮೃತ ವಚನಮಾಲೆ’).

ಮನುಷ್ಯನಿಗೆ ಎಷ್ಟೇ ಕಷ್ಟವಿದ್ದು, ಸಮಯದ ಕೊರತೆ ಇದ್ದರೂ ಸಹ ಅದನ್ನು ಬದಿಗಿಟ್ಟು ಬೇರೆಯವರ ಕಷ್ಟವನ್ನು ಕೇಳಿ ಅವರೊಂದಿಗೆ ಸ್ಪಂದಿಸಿ ಸಾದ್ಯವಾದಲ್ಲಿ ನೆರವಾದರೆ ಮಾನವತೆಗೆ ಬೆಲೆ ಕೊಟ್ಟಂತೆ ಆಗುತ್ತದೆ. ಇವರ ಜೊತೆಗೆ ನಾನೇಕೆ ಕಷ್ಟದಲ್ಲಿ ಸಿಲುಕಿಕೊಳ್ಳಬೇಕು? ನನ್ನ ಕಷ್ಟವೇ ನನಗೆ ಇರುವಾಗ ಬೇರೊಬ್ಬರ ಕಷ್ಟದಲ್ಲಿ ಭಾಗಿಯಾಗುವುದಾದರೂ ಹೇಗೆ ಎಂಬ ಮನೋಭಾವ ಬಂದರೆ ಮಾನವರಾಗಿ ಹುಟ್ಟಿ ಪ್ರಯೋಜನವೇ ಇಲ್ಲದಂತೆ ಆಗುತ್ತದೆ. ಯಾರೂ ಶಾಶ್ವತವಲ್ಲ. ಇರುವಷ್ಟು ದಿನ ಕೋರಿ ಬಂದ ಜನಗಳ ಕಷ್ಟಗಳಿಗೆ ನೆರವಾಗುವಂತಿದ್ದರೆ ಮಾತ್ರ ದೇವರು ಮೆಚ್ಚುತ್ತಾನೆ. ಇಲ್ಲದಿದ್ದಲ್ಲಿ ಮನುಷ್ಯತ್ವಕ್ಕೆ ಬೆಲೆಯೇ ಇರುವುದಿಲ್ಲ ಎನಿಸುತ್ತದೆಯಲ್ಲವೇ?