ರೆಸ್ಟೋರೆಂಟ್ ಗಳಲ್ಲಿ ರೊಟ್ಟಿ ಜೊತೆ ಪಾಲಾಕ್ ಪನ್ನೀರ್ ತಿನ್ನಲು ಇಷ್ಟಪಡುತ್ತೇವೆ. ರುಚಿ ಮತ್ತು ಆರೋಗ್ಯಕರವಾದ ಈ ಖಾದ್ಯಯನ್ನು ತಯಾರಿಸಲು ವಿಶೇಷ ಸಾಮಾಗ್ರಿಗಳು ಬೇಕಾಗಿಲ್ಲ. ಮನೆಯಲ್ಲಿಯೆ ಇರುವ ವಸ್ತುಗಳನ್ನು ಬಳಸಿ ಪಾಲಾಕ್ ಪನ್ನೀರ್ ಮಾಡುವ ಸುಲಭ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* 500 ಗ್ರಾಂ ಪಾಲಾಕ್ ಸೊಪ್ಪು
* 4 ಚಮಚ ಒಣಗಿದ ಮೆಂತೆ ಸೊಪ್ಪು
* 1 ಕಪ್ ಕೊತ್ತಂಬರಿ ಸೊಪ್ಪು (ಕತ್ತರಿಸಿದ್ದು)
* 1 ಹಸಿ ಮೆಣಸು
* 1 ಚಮಚ ಸಕ್ಕರೆ
* 2 ಚಮಚ ಕಡಲೆ ಹಿಟ್ಟು
* 250 ಗ್ರಾಂ ಪನ್ನೀರ್ (ಚಿಕ್ಕ ತುಂಡುಗಳಾಗಿ ಕತ್ತರಿಸಿದ್ದು)
* ಚಕ್ಕೆ 1/2 ಇಂಚಿನ (ಉದ್ದದ)
* ಏಲಕ್ಕಿ 2
* 3-4 ಬೆಳ್ಳುಳ್ಳಿ ಎಸಳು
* ಈರುಳ್ಳಿ 2 (ಪೇಸ್ಟ್ ಮಾಡಿದ್ದು)
* 1/2 ಕಪ್ ಕೆನೆ ಅಥವಾ ಗಟ್ಟಿಯಾದ ಹಾಲು
* ರುಚಿಗೆ ತಕ್ಕ ಉಪ್ಪು
ಒಗ್ಗರಣೆಗೆ:
* 1 ಚಮಚ ತುಪ್ಪ
* 1 ಚಮಚದಷ್ಟು ಚಿಕ್ಕ ತುಂಡುಗಳಾಗಿ ಕತ್ತರಿಸಿದ ಶುಂಠಿ
* 1/2 ಚಮಚ ಕೆಂಪು ಮೆಣಸಿನ ಪುಡಿ
ತಯಾರಿಸುವ ವಿಧಾನ:
1. ಪಾಲಕ್ ಸೊಪ್ಪು, ಮೆಂತೆ ಸೊಪ್ಪು ಮತ್ತು ಕೊತ್ತಂಬರಿ ಸೊಪ್ಪು, ಹಸಿಮೆನಸಿನ ಕಾಯಿ, ಸಕ್ಕರೆ ಹಾಕಿ ಒಂದು ಕಪ್ ನೀರು ಹಾಕಿ ಬೇಯಿಸಬೇಕು, ಪಾಲಾಕ್ ಸೊಪ್ಪು ಮೃದುವಾಗುವವರೆಗೆ ಬೇಯಿಸಬೇಕು. ಈ ಸೊಪ್ಪಿನ ನೀರನ್ನು ಬಸಿದು ಸೊಪ್ಪನ್ನು ಮಿಕ್ಸಿಯಲ್ಲಿ ಹಾಕಿ ಅರೆಯಬೇಕು.
2. ಈ ಸೊಪ್ಪಿನ ಮಿಶ್ರಣಕ್ಕೆ ಕಡಲೆ ಹಿಟ್ಟನ್ನು ಸೇರಿಸಬೇಕು.
3. ಚಕ್ಕೆ ಮತ್ತು ಏಲಕ್ಕಿಯನ್ನು ಪುಡಿ ಮಾಡಿ ಬದಿಯಲ್ಲಿ ಇಡಬೇಕು.
4. 5 ಚಮಚ ಎಣ್ಣೆಯನ್ನು ಹಾಕಿ ಅದು ಬಿಸಿಯಾದಾಗ ಈರುಳ್ಳಿ ಪೇಸ್ಟ್ ಹಾಕಿ ಕಂದು ಬಣ್ಣ ಬರುವವರೆಗೆ ಕಾಯಿಸಬೇಕು.
5. ಚಕ್ಕೆ, ಏಲಕ್ಕಿ ಮತ್ತು ಬೆಳ್ಳುಳ್ಳಿಯನ್ನು ಪೇಸ್ಟ್ ರೀತಿ ಮಾಡಿ ಸೇರಿಸಬೇಕು.
6. ಈಗ ಕಡಲೆ ಹಿಟ್ಟು ಮಿಶ್ರಿತ ಸೊಪ್ಪಿನ ಮಿಶ್ರಣವನ್ನು ಸೇರಿಸಬೇಕು.
7. ಈಗ ಹಾಲು ಅಥವಾ ಕ್ರೀಮ್ ಅನ್ನು ಮಿಶ್ರ ಮಾಡಬೇಕು.
8. ಪನ್ನೀರ್ ತುಂಡುಗಳನ್ನು ಸೇರಿಸಬೇಕು.
9. ರುಚಿಗೆ ತಕ್ಕ ಉಪ್ಪು ಸೇರಿಸಿ ಸ್ವಲ್ಪ ಹೊತ್ತು ಕುದಿಸಬೇಕು. ನಂತರ ಅದನ್ನು ದೊಡ್ಡ ಬಟ್ಟಲಿನಲ್ಲಿ ಸುರಿದು ಇಡಬೇಕು.
ಈಗ ಬಾಣಲೆಯನ್ನು ಇಟ್ಟು ತುಪ್ಪು ಹಾಕಿ ಅದು ಬಿಸಿಯಾದಾಗ ಕತ್ತರಿಸಿದ ಶುಂಠಿಯನ್ನು ಸೇರಿಸಬೇಕು. ಶುಂಠಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ಮೆಣಸಿನ ಪುಡಿ ಸೇರಿಸಿ 2 ನಿಮಿಷ ಕಾಯಿಸಿ ಅದನ್ನು ತಯಾರಾದ ಮಿಶ್ರಣಕ್ಕೆ ಜೊತೆ ಬೆರೆಸಬೇಕು. ಹೀಗೆ ಮಾಡಿದರೆ ರುಚಿಕರವಾದ ಪಾಲಾಕ್ ಪನ್ನೀರ್ ಖಾದ್ಯ ರೆಡಿ.