ರವೆ, ಹಾಲು, ಸಕ್ಕರೆ ತುಪ್ಪಗಳ ಸಂಯೋಗದಲ್ಲಿ ತಯಾರಿಸುವ ಈ ಸಿಹಿ ತಿಂಡಿಯನ್ನು ಹಬ್ಬಗಳ ಸಂದರ್ಭದಲ್ಲಿ ಅಥವಾ ಹೆಚ್ಚು ಸಮಯವಿಲ್ಲದ ವೇಳೆಯಲ್ಲಿ ಸುಲಭವಾಗಿ ತಯಾರಿಸಬಹುದು. ಗಂಜಿಯಂತೆ ಹೋಲುವ ಈ ಸಿಹಿ ಖಾದ್ಯ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಇಷ್ಟವಾಗುವುದು. ಅಲ್ಲದೆ ಸುಲಭವಾಗಿ ಜೀರ್ಣವಾಗುವುದು. ಇದನ್ನು ಕೆಲವು ಸ್ಥಳಗಳಿಗೆ ತಕ್ಕಂತೆ ವಿವಿಧ ಹೆಸರುಗಳಿಂದ ಕರೆಯುತ್ತಾರೆ. ರವೆ ಪಾಯಸ, ಸೂಜಿ ರವೆ ಪಾಯಸ, ಗೋಧಿರವೆ ಪಾಯಸ ಹೀಗೆ ವಿವಿಧ ಬಗೆಯಲ್ಲಿ ಹೆಸರಿಸುತ್ತಾರೆ.
ಬಹಳ ಸುಲಭ ಹಾಗೂ ಸರಳ ವಿಧಾನದಲ್ಲಿ ತಯಾರಿಸಬಹುದಾದ ಈ ಪಾಯಸವನ್ನು ನೀವು ಹಬ್ಬದ ಸಂದರ್ಭದಲ್ಲಿ ತಯಾರಿಸಬೇಕು ಎನ್ನುವ ಹವಣಿಕೆಯಲ್ಲಿದ್ದರೆ ಈ ಮುಂದೆ ನೀಡಿರುವ ವಿಡಿಯೋ ಹಾಗೂ ಹಂತ ಹಂತವಾದ ಚಿತ್ರ ವಿವರಣೆಯಲ್ಲಿ ವಿವರಿಸಲಾಗಿದೆ.
ತಯಾರಿಸುವ ವಿಧಾನ:
1. ಒಂದು ಪಾತ್ರೆಯಲ್ಲಿ ತುಪ್ಪವನ್ನು ಸೇರಿಸಿ, ಬಿಸಿ ಮಾಡಿ.
2. ಇಡಿಯಾಗಿರುವ ಗೋಡಂಬಿಯನ್ನು ಸೇರಿಸಿ, ಹೊಂಬಣ್ಣಕ್ಕೆ ಬರುವ ವರೆಗೆ ಹುರಿಯಿರಿ.
3. ನಂತರ ಒಂದು ಕಪ್‍ಗೆ ವರ್ಗಾಯಿಸಿ.
4. ಒಣ ದ್ರಾಕ್ಷಿಯನ್ನು ಸೇರಿಸಿ, ಹೊಂಬಣ್ಣಕ್ಕೆ ಬರುವವರೆಗೆ ಹುರಿಯಿರಿ. ನಂತರ ಒಂದು ಕಪ್‍ಗೆ ವರ್ಗಾಯಿಸಿ.
5. ಅದೇ ಪಾತ್ರೆಯಲ್ಲಿ ರವೆಯನ್ನು ಸೇರಿಸಿ, ಹುರಿಯಿರಿ.
6. ರವೆ ಉತ್ತಮ ಪರಿಮಳದೊಂದಿಗೆ ಹೊಂಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ.
7. ನಂತರ ಒಂದೆಡೆ ಆರಲು ಇಡಿ.
8. ಇನ್ನೊಂದು ಪಾತ್ರೆಯಲ್ಲಿ ಅರ್ಧ ಕಪ್ ಹಾಲು ಮತ್ತು ನೀರನ್ನು ಸೇರಿಸಿ ಕುದಿಯಲು ಬಿಡಿ.
9. ಒಮ್ಮೆ ಕುದಿಯಲು ಪ್ರಾರಂಭಿಸಿದ ನಂತರ ಹುರಿದ ರವೆಯನ್ನು ಸೇರಿಸಿ.
10. ಒಮ್ಮೆ ಚೆನ್ನಾಗಿ ತಿರುವಿ, ಬಳಿಕ ಒಂದು ಕಪ್ ಹಾಲನ್ನು ಸೇರಿಸಿ.
11. ಮಿಶ್ರಣ ಗಂಟಾಗದಂತೆ ನಿರಂತರವಾಗಿ ತಿರುವುತ್ತಲೇ ಇರಿ.
12. ಸಕ್ಕರೆಯನ್ನು ಸೇರಿಸಿ, ಚೆನ್ನಾಗಿ ಮಿಶ್ರಗೊಳಿಸಿ.
13. ಉರಿಯನ್ನು ಆರಿಸಿ, ಹುರಿದುಕೊಂಡ ಒಣ ಹಣ್ಣುಗಳನ್ನು ಸೇರಿಸಿ.
14. ಬಿಸಿ ಇರುವಾಗಲೇ ಸವಿಯಲು ನೀಡಿ.