ನಮಸ್ತೆ.ಮಲೆನಾಡಿನಲ್ಲಿ ,ಮಳೆಗಾಲದಲ್ಲಿ ತಪ್ಪದೇ ತಿನ್ನುವ ರೆಸಿಪಿಗಳಲ್ಲಿ ಇದು ಒಂದು.ಉಳಿದಂತೆ ಪತ್ರೊಡೆ ಯಾವಾಗ ಬೇಕಿದ್ದರೂ ಮಾಡಬಹುದು ಆದರೆ ಮರಕೆಸು ಮಳೆಗಾಲದಲ್ಲಿ ಮಾತ್ರ ದೊರೆಯುವುದರಿಂದ ಹಾಗೂ ಅದರದ್ದೇ ಒಂದು ವಿಶಿಷ್ಟ ರುಚಿ ಇರುವುದರಿಂದ ಅದಕ್ಕೆ ಒಂದು ವಿಶೇಷವಾದ ಮಹತ್ವ ಇದೆ.ಈ ಮರಕೆಸು ಮಳೆ ಶುರುವಾದ ನಂತರ ಮರಗಳ ಮೇಲೆ ಅಥವಾ ಮರದ ಬುಡಗಳ ಕೆಳಗೆ ಬೆಳೆಯುತ್ತದೆ.ಮರವನ್ನು ಆಶ್ರಯಿಸಿ ಬೆಳೆಯುವುದರಿಂದ ಇದಕ್ಕೆ ಈ ಹೆಸರು.ಪತ್ರೊಡೆಯನ್ನು ಹಲವರು ಹಲವಾರು ರೀತಿಯಲ್ಲಿ ಮಾಡುತ್ತಾರೆ.ಇದೂ ಒಂದು ವಿಧಾನ.
ಬೇಕಾಗುವ ಸಾಮಗ್ರಿಗಳು.
ಮರಕೆಸುವಿನ ಎಲೆ- ಚಿಕ್ಕದಾದರೆ 20 ದೊಡ್ಡದಾದರೆ 10.
ಅಕ್ಕಿ-1 ಪಾವು
ಧನಿಯಾ- 2 ಟೇಬಲ್ ಚಮಚ
ಜೀರಿಗೆ- 1 ಟೀ ಚಮಚ
ಮೆಂತ್ಯ- 1 ಟೀ ಚಮಚ
ಸಾಸಿವೆ- 1 ಟೀ ಚಮಚ
ಉದ್ದಿನಬೇಳೆ-1ಟೀ ಚಮಚ
ಕಡಲೆಬೇಳೆ-1 ಟೀ ಚಮಚ
ಒಣಮೆಣಸಿನಕಾಯಿ-10 (ನಿಮ್ಮ ಖಾರಕ್ಕೆ ತಕ್ಕಷ್ಟು)
ಹುಣಸೆಹಣ್ಣು- ನಿಂಬೆಹಣ್ಣಿನ ಗಾತ್ರ
ಬೆಲ್ಲ-ಗೋಲಿ ಗಾತ್ರ
ತೆಂಗಿನ ತುರಿ ಸ್ವಲ್ಪ
ಒಗ್ಗರಣೆಗೆ- ಎಣ್ಣೆ,ಸಾಸಿವೆ,ಉದ್ದಿನಬೇಳೆ,ಹೆಚ್ಚಿದ ಈರುಳ್ಳಿಒಂದು ಶೇಂಗಾ,ಕರಿಬೇವು,ಒಣಮೆಣಸಿನಕಾಯಿ ಒಂದೆರಡು ತುಂಡು.
ಮಾಡುವ ವಿಧಾನ.
ಮೊದಲಿಗೆ ಬಾಣಲೆಗೆ ಅಕ್ಕಿಯನ್ನು ಹಾಕಿ ಸ್ವಲ್ಪ ಕೆಂಪಗೆ ಹುರಿದು 1ಗಂಟೆ ನೆನೆಸಿಡಿ.
ಅದೇ ಬಾಣಲೆಗೆ ಧನಿಯಾ,ಜೀರಿಗೆ,ಸಾಸಿವೆ,ಮೆಂತ್ಯ,ಒಣಮೆಣಸಿನಕಾಯಿ,ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ.ಇದನ್ನು ನೆನಸಿದ ಅಕ್ಕಿ ಜೊತೆ ಹಾಕಿ,ಜೊತೆಗೆ ಹುಣಸೆಹಣ್ಣು, ಬೆಲ್ಲ,ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ರುಬ್ಬಿಕೊಳ್ಳಿ.
ಮರಕೆಸುವಿನ ಸೊಪ್ಪನ್ನು ಚೆನ್ನಾಗಿ ತೊಳೆದು,ಒರೆಸಿ ಸಣ್ಣದಾಗಿ ಹೆಚ್ಚಿಕೊಳ್ಳಿ.ಈ ಸೊಪ್ಪನ್ನು ರುಬ್ಬಿದ ಅಕ್ಕಿ ಮಿಶ್ರಣಕ್ಕೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.ಕಡುಬಿನ ಹದಕ್ಕೆ ಉಂಡೆ ಕಟ್ಟಿ ಇಡ್ಲಿ ಪಾತ್ರೆಯಲ್ಲಿ ಇಟ್ಟು ಬೇಯಿಸಿಕೊಳ್ಳಿ.ನಾವು ಪಾತ್ರೆಗೆ ಒಂದು ಬಟ್ಟೆ ಹಾಕಿ ಅದರ ಮೇಲೆ ಉಂಡೆಗಳನ್ನು ಇಟ್ಟು ಬೇಯಿಸುತ್ತವೆ.ಹೀಗೆ ಮಾಡುವುದರಿಂದ ತಳಕ್ಕೆ ಹಿಟ್ಟು ಹಿಡಿಯುವುದಿಲ್ಲ.
ಬೇಯಿಸಿದ ಉಂಡೆಗಳು ತಣ್ಣಗಾದ ಮೇಲೆ ಚೆನ್ನಾಗಿ ಪುಡಿ ಮಾಡಿಡಿ.ಒಂದು ದಪ್ಪ ತಳದ ಬಾಣಲೆಗೆ ಎಣ್ಣೆ ಹಾಕಿ ಸಾಸಿವೆ,ಜೀರಿಗೆ,ಶೇಂಗಾ,ಉದ್ದಿನಬೇಳೆ,ಒಣಮೆಣಸು, ಕರಿಬೇವು ಹಾಕಿ ಸಿಡಿಸಿ,ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ.ಈಗ ಪುಡಿ ಮಾಡಿದ ಪತ್ರೊಡೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ,ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ 20 ನಿಮಿಷ ಬೇಯಿಸಿ.ಮಧ್ಯ,ಮಧ್ಯ ಕೈಯಾಡಿಸುತ್ತಿರಿ.ಕೊನೆಯಲ್ಲಿ ತೆಂಗಿನ ತುರಿ ಉದುರಿಸಿ.ಚೆನ್ನಾಗಿ ಹುರಿದಷ್ಟು ಉದುರುದುರಾಗಿ ಬರುತ್ತದೆ.ರುಚಿಕರ ಮರಕೆಸುವಿನ ಪತ್ರೊಡೆ ರೆಡಿ.ಬೆಣ್ಣೆ ಹಾಕಿಕೊಂಡು ಸವಿಯಿರಿ.ಪತ್ರೊಡೆ ಉಷ್ಣ ಇರುವುದರಿಂದ ಬೆಣ್ಣೆ ಹಾಕಿಕೊಂಡು ತಿನ್ನುತ್ತಾರೆ.