ಸಾಮಾನ್ಯವಾಗಿ ಮನೆಯಲ್ಲಿ ಪಲಾವ್ ತಯಾರಿಸುವಾಗ ಹೆಚ್ಚಾಗಿ ಮಿಶ್ರ ತರಕಾರಿ ಹಾಕಿದ ಪಲಾವ್ ತಯಾರಿಸುತ್ತೇವೆ. ಬೇರೆ ವಿಧಾನದಲ್ಲಿ ಪಲಾವ್ ತಯಾರಿಸುವ ಗೊಡವೆಗೆ ಹೋಗುವುದಿಲ್ಲ. ಆದರೆ ಮಿಶ್ರ ತರಕಾರಿ ಪಲಾವ್ ಮಾಡುವುದಕ್ಕಿಂತ ಸುಲಭವಾಗಿ ಮತ್ತು ರುಚಿಕರವಾಗಿ ಪನ್ನೀರ್ ಪಲಾವ್ ಮಾಡಬಹುದಾಗಿದೆ. ಈ ಪನ್ನೀರ್ ಪಲಾವ್ ಅನ್ನು ಸುಲಭವಾಗಿ ಮಾಡಬಹುದಾಗಿದೆ.

ಬೇಕಾಗುವ ಸಾಮಾಗ್ರಿಗಳು:

*ಬಾಸುಮತಿಅಕ್ಕಿ-2ಕಪ್
* ಚಕ್ಕೆ 2
* ಏಲಕ್ಕಿ 1
* ಬೆಳ್ಳುಳ್ಳಿ ಎಸಳು 2-4
* ಕಾಳುಮೆಣಸು 5-6
* ಈರುಳ್ಳಿ 1
* ಶುಂಠಿ ಪೇಸ್ಟ್ 2 ಚಮಚ
* ಹಸಿಮೆಣಸಿನ ಕಾಯಿ ಪೇಸ್ಟ್ ಒಂದೂವರೆ ಚಮಚ
* ಎಣ್ಣೆ
* ಪನ್ನೀರ್ 2 ಕಪ್
* ಟೊಮೆಟೊ 3
* ರುಚಿಗೆ ತಕ್ಕ ಉಪ್ಪು
* ಸ್ವಲ್ಪ ಕೊತ್ತಂಬರಿ ಸೊಪ್ಪು

RELATED ARTICLES  ಬಿಸಿಬಿಸಿ ಗೋಳಿ ಬಜೆ ಸವಿಯಿರಿ!

ತಯಾರಿಸುವ ವಿಧಾನ :

1. 2 ಕಪ್ ಅಕ್ಕಿಗೆ 4 ಕಪ್ ನೀರು ಹಾಕಿ ಬೇಯಿಸಬೇಕು. ನಂತರ ಬೆಂದ ಅನ್ನವನ್ನು ಒಂದು ಪಾತ್ರೆಯಲ್ಲಿ ಹಾಕಿಡಬೇಕು.

2. ನಂತರ ಸ್ವಲ್ಪ ದೊಡ್ಡ ಪಾತ್ರೆಯನ್ನು ತೆಗೆದು ಅದರಲ್ಲಿ 2-3 ಚಮಚ ಅಡುಗೆ ಎಣ್ಣೆ ಹಾಕಿ , ಎಣ್ಣೆ ಬಿಸಿ ಮಾಡಬೇಕು. ನಂತರ ಚಕ್ಕೆ, ಏಲಕ್ಕಿ, ಬೆಳ್ಳುಳ್ಳಿ ಎಸಳು, ಸ್ವಲ್ಪ ಕಾಳು ಮೆಣಸಿನ ಪುಡಿ ಹಾಕಿ ಸ್ವಲ್ಪ ಹೊತ್ತು ಹುರಿಯಬೇಕು. ನಂತರ ಕತ್ತರಿಸಿದ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಹರಿಯಬೇಕು.

3.ನಂತರ ಟೊಮೆಟೊ ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಸೌಟ್ ನಿಂದ ಆಡಿಸಿ, ಶುಂಠಿ ಪೇಸ್ಟ್, ಹಸಿ ಮೆಣಸಿನ ಕಾಯಿ ಪೇಸ್ಟ್ ಮತ್ತು ರುಚಿಗೆ ತಕ್ಕ ಉಪ್ಪು ಹಾಕಿ 1 ನಿಮಿಷ ಕಾಲ ಬಿಸಿ ಮಾಡಬೇಕು.

RELATED ARTICLES  ಪತ್ರೊಡೆ ತಯಾರಿಸೋದು ಹೇಗೆ?,ನೀವೂ ಮಾಡಬೇಕೇ? ತಿಳಿಯೋಣ ಬನ್ನಿ ...!!

4. ಈಗ ಉರಿಯನ್ನು ಕಡಿಮೆ ಮಾಡಿ ಪನ್ನೀರ್ ಹಾಕಿ ಸ್ವಲ್ಪ ಹೊತ್ತು ಬಿಸಿ ಮಾಡಬೇಕು.

5. ನಂತರ ಬೇಯಿಸಿದ ಅನ್ನವನ್ನು ಈ ಮಿಶ್ರಣದಲ್ಲಿ ಹಾಕಿ 2-3 ನಿಮಿಷ ಸೌಟ್ ನಿಂದ ಆಡಿಸುತ್ತಾ ಬಿಸಿಮಾಡಬೇಕು. ನಂತರ ಪಾತ್ರೆಯನ್ನು ಉರಿಯಿಂದ ತೆಗೆದು ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಪನ್ನೀರ್ ಪಲಾವ್ ರೆಡಿ.