ಬೇಸನ್ ಲಡ್ಡು ಮಾಡುವ ವಿಧಾನ ಹೆಚ್ಚಿನವರಿಗೆ ಗೊತ್ತಿರುತ್ತದೆ. ಆದರೆ ಲಡ್ಡುವನ್ನು ಒಂದೇ ರುಚಿಯಲ್ಲಿ ತಿನ್ನುವ ಬದಲು ಸ್ವಲ್ಪ ವಿಭಿನ್ನ ಬಗೆಯಲ್ಲಿ, ರುಚಿಕರವಾದ ಲಡ್ಡು ತಿನ್ನ ಬಯಸುವುದಾದರೆ ಬೀಟ್‌ರೂಟ್ ಲಡ್ಡು ತಯಾರಿಸಿಬಹುದು. ಈ ಲಡ್ಡು ಅನ್ನು ಸುಲಭವಾಗಿ ತಯಾರಿಸಬಹುದಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ತುರಿದ ಬೀಟ್‌ರೂಟ್ – 2 ಬಟ್ಟಲು
* ತುರಿದ ಒಣ ಕೊಬ್ಬರಿ – 1 ಬಟ್ಟಲು
* ಸಕ್ಕರೆ -1 ಬಟ್ಟಲು
* ತುಪ್ಪ 2-3 ಚಮಚ
* ಏಲಕ್ಕಿ ಪುಡಿ -1/4 ಚಮಚ
* ಬಾದಾಮಿ 10-15
* ದ್ರಾಕ್ಷಿ ಗೋಡಂಬಿ 20-25
ತಯಾರಿಸುವ ವಿಧಾನ:
ಬಾಣಲೆಯಲ್ಲಿ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಏಲಕ್ಕಿಯನ್ನು ಪುಡಿ ಮಾಡಿ ಸೇರಿಸಬೇಕು. ನಂತರ ತುರಿದ ಬೀಟ್‌ರೂಟ್ ಹಾಕಿ 5-8 ನಿಮಿಷ ಸಣ್ಣನೆಯ ಉರಿಯಲ್ಲಿ ಹುರಿಯಬೇಕು. ನಂತರ ಅದಕ್ಕೆ ಸಕ್ಕರೆ, ತುರಿದ ಕೊಬ್ಬರಿಯನ್ನು ಹಾಕಬೇಕು. ಸಕ್ಕರೆ ಕರಗಿ ಮಿಶ್ರಣ ಗಟ್ಟಿಯಾಗುವವರೆಗೆ ಮಿಶ್ರಣವನ್ನು ತಿರುಗಿಸುತ್ತಾ ಇರಬೇಕು. ಮಿಶ್ರಣ ತಳ ಹಿಡಿಯಲು ಬಿಡಬೇಡಿ. ಮಿಶ್ರಣವು ಉಂಡೆ ಕಟ್ಟುವ ಹದಕ್ಕೆ ಬಂದ ನಂತರ ಅದನ್ನು ಬೇರೊಂದು ತಟ್ಟೆಗೆ ಸುರಿಯಬೇಕು. ನಂತರ ಈ ಮಿಶ್ರಣ ಬಿಸಿಯಾಗಿರುವಾಗಲೇ ಪುಡಿ ಮಾಡಿದ ಬಾದಾಮಿ ಮತ್ತು ಒಣದ್ರಾಕ್ಷಿ ಹಾಕಿ ಮಿಶ್ರ ಮಾಡಿ, ಕೈಗಳಿಗೆ ಸ್ವಲ್ಪ ತುಪ್ಪ ಸವರಿ ಲಡ್ಡು ರೀತಿ ಉಂಡೆ ಕಟ್ಟಿದರೆ ಬೀಟ್‌ರೂಟ್ ಲಡ್ಡು ರೆಡಿ.
ಸಲಹೆ: ಇದನ್ನೇ ಮಿಶ್ರಣ ಬಿಸಿಯಾಗಿರುವಾಗ ತುಪ್ಪ ಸವರಿದ ಪಾತ್ರೆಗೆ ಹಾಕಿ ಮೇಲೆ ಗೋಡಂಬಿ, ದ್ರಾಕ್ಷಿ ಹಾಕಿ ತಣ್ಣಗಾದ ಮೇಲೆ ಚೌಕಾರಾದಲ್ಲಿ ಕತ್ತರಿಸಿದರೆ ಬೀಟ್‌ರೂಟ್ ಚಾಕಲೇಟ್ ಮಾಡಬಹುದು. ಇದನ್ನು ಮಾಡಿ ಒಂದು ವಾರದವರೆಗೆ ಇಡಬಹುದಾಗಿದೆ.