Home Article ನವಿಲುಗರಿಯ ಮಹತ್ವ ಮತ್ತದರ ಹಿಂದಿನ ಕಥೆ

ನವಿಲುಗರಿಯ ಮಹತ್ವ ಮತ್ತದರ ಹಿಂದಿನ ಕಥೆ

 11 2
      ಹಿಂದೂ ಧರ್ಮದಲ್ಲಿ ನವಿಲುಗರಿಗೆ ಪವಿತ್ರವಾದ ಸ್ಥಾನಮಾನಗಳಿವೆ. ಭಗವಾನ್ ಶ್ರೀಕೃಷ್ಣ ಕೂಡ ನವಿಲುಗರಿಯನ್ನು ತನ್ನ ಕಿರೀಟದಲ್ಲಿ ಧರಿಸುವುದರ ಮೂಲಕ ನವಿಲುಗರಿಗೆ ಪ್ರಾಶಸ್ಥ್ಯ ಕೊಟ್ಟಿದ್ದಾರೆ. ಶಿವ-ಪಾರ್ವತಿಯ ಅಂಶವಾದ ಸುಬ್ರಮಣ್ಯನ ವಾಹನ ನವಿಲಾಗಿದೆ, ಜೊತೆಗೆ ಶಕ್ತಿ ಸ್ವರೂಪಿಣಿಯಾದ ದೇವಿ ಕೌಮಾರಿಯೂ ಕೂಡ ನವಿಲನ್ನು ತನ್ನ ವಾಹನವನ್ನಾಗಿಸಿಕೊಂಡಿದ್ದಾಳೆ.ನವಿಲುಗರಿಗಳ ಬಗ್ಗೆ ಅನೇಕ ಪುರಾಣ ಕಥೆಗಳ ಇತಿಹಾಸವಿದೆ..
       ತ್ರೇತಾಯುಗದಲ್ಲಿ ಸೀತಾಮಾತೆಗಾಗಿ ನಡೆಯುವ ಯುದ್ಧದಲ್ಲಿ ರಾಮನ ಪರವಾಗಿ ವಿಷ್ಣು, ಇಂದ್ರಾದಿ ಮೊದಲಾದ ದೇವತೆಗಳು ಯುದ್ಧಮಾಡಿದರೆ, ರಾವಣನ ಪರವಾಗಿ ಅಸುರರು ಯುದ್ಧಗೈಯುತ್ತಾರೆ. ಇಂದ್ರ ಮತ್ತು ರಾವಣನ ನಡುವೆ ಘನಘೋರ ಯುದ್ಧವೇರ್ಪಟ್ಟಾಗ, ನವಿಲುಗಳು ತಮ್ಮ ಗರಿಬಿಚ್ಚಿ ಇಂದ್ರನನ್ನು ರಾವಣನಿಂದ ರಕ್ಷಿಸುತ್ತಾ,ಯುದ್ಧವನ್ನು ಮುಂದುವರೆಸಲು ಇಂದ್ರದೇವನಿಗೆ ಸಹಾಯ ಮಾಡುತ್ತದೆ. ಇದರಿಂದ ಸಂತುಷ್ಟನಾದ ಇಂದ್ರದೇವ ನವಿಲುಗಳಿಗೆ ಅವುಗಳ ಅಲೌಕಿಕ ಸೌಂದರ್ಯವನ್ನು ಹೊಂದುವಂತೆಯೂ,ಆ ಗರಿಗಳು ಔಷಧೀಯ ಗುಣ ಹೊಂದುವಂತೆಯೂ ವರವನ್ನಿತ್ತು ಹರಸುತ್ತಾನೆ. ಅದಕ್ಕೂ ಮುಂಚೆ ನವಿಲುಗಳ ಗರಿಯು ಅಷ್ಟೇನೂ ಸುಂದರವಾಗಿಯೂ,ಆಕರ್ಷಿಣೀಯವಾಗಿಯೂ ಇರಲಿಲ್ಲ. ಉಳಿದೆಲ್ಲಾ ಪಕ್ಷಿಗಳಿಗಿರುವಂತೆ ಸರ್ವೇ ಸಾಮಾನ್ಯವಾಗಿತ್ತು. ಆದರೆ ಭಗವಾನ್ ಇಂದ್ರರ ವರಪ್ರಭಾವದಿಂದ ನವಿಲುಗರಿಗಳು ಅಷ್ಟು ಮನಮೋಹಕವಾಗಿದೆ ಎಂದು ಹೇಳಲಾಗುತ್ತದೆ.
      ಹಿಂದೆ ಸೀತಾಮಾತೆಗಾಗಿ ಪರಿತಪಿಸುತ್ತಾ ಎಲ್ಲೆಂದರಲ್ಲಿ ಹುಡುಕುತ್ತಿದ್ದ ಶ್ರೀರಾಮನಿಗೆ ಕಲ್ಲು ಮುಳ್ಳುಗಳ ಪರಿವೆಯೂ ಇರಲಿಲ್ಲ.ಇದರಿಂದ ಅವನ ಕೋಮಲ ಪಾದಗಳು ಕಷ್ಟವನ್ನು ಅನುಭವಿಸುತ್ತಿದ್ದವು. ಅದನ್ನು ನೋಡಿದ ನವಿಲುಗಳ ರಾಜ ತನ್ನ ಸಮೂಹವನ್ನು ಕರೆದು ರಾಮನು ನಡೆದಾಡುವ ಜಾಗವನ್ನೆಲ್ಲಾ ಚೊಕ್ಕಗೊಳಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿತು.ತಮ್ಮ ರಾಜನ ಆಶಯದಂತೆ ನವಿಲು ಹಿಂಡುಗಳು ರಾಮನು ಓಡಾಡಬಲ್ಲ ಜಾಗವನ್ನೆಲ್ಲಾ ತಮ್ಮ ಕೊಕ್ಕಿನಿಂದ ಕುಕ್ಕಿ ತೆಗೆದು,ಕಾಲಿನಿಂದ ಕೆರೆದು,ಕಲ್ಲು ಮುಳ್ಳುಗಳಿಲ್ಲದಂತೆ ಶುದ್ಧಗೊಳಿಸುತ್ತಾರೆ. ಇದನ್ನು ಗಮನಿಸಿದ ಶ್ರೀರಾಮ ಅವುಗಳ ಸ್ವಾರ್ಥವಿಲ್ಲದ ಸೇವೆಗೆ ಅತ್ಯಂತ ತೃಪ್ತನಾಗಿ ಮುಂದಿನ ಜನ್ಮದಲ್ಲಿ ನಿಮ್ಮ ಗರಿಯನ್ನು ಧರಿಸುತ್ತೆನೆಂಬ ವರ ನೀಡುತ್ತಾನೆ. ಇದೇ ಕಾರಣಕ್ಕಾಗಿ ಮುಂದಿನ ಅವತಾರದಲ್ಲಿ ಶ್ರೀಕೃಷ್ಣನಾಗಿ ಜನಿಸುವ ರಾಮನು ತನ್ನ ಮಾತನ್ನು ಉಳಿಸಿಕೊಂಡು ನವಿಲುಗರಿಯನ್ನು ತನ್ನ ಕಿರೀಟದಲ್ಲಿ ಧರಿಸುತ್ತಾನೆಂದೂ ಹೇಳುತ್ತಾರೆ.
     ಒಮ್ಮೆ ಯಮುನಾ ತೀರದಲ್ಲಿ ಬಲರಾಮ ಗೋಪ-ಗೋಪಿಕೆಯರನ್ನೊಳಗೊಂಡ ಬಾಲಕೃಷ್ಣನು ದನಕರುಗಳನ್ನು ಮೇಯಿಸುತ್ತಾ ಆಲದ ಮರದಡಿ ಕುಳಿತಿರುತ್ತಾನೆ. ಸ್ವಲ್ಪ ಸಮಯದ ನಂತರ ಕೃಷ್ಣ ತನ್ನ ಸೊಂಟದಲ್ಲಿ ಪವಡಿಸಿದ್ದ ಕೊಳಲು ತೆಗೆದು,ಮುದ್ದು ತಾವರೆಯಂತೆ ನಸುಗೆಂಪಾಗಿದ್ದ ತನ್ನ ಪುಟ್ಟ ತುಟಿಯ ಮೇಲಿಟ್ಟು, ಚಿಗುರೆಲೆಯಂತೆ ಎಳಸಾಗಿದ್ದ ತನ್ನ ಪುಟ್ಟ-ಪುಟ್ಟ ಬೆರಳುಗಳಲ್ಲಿ ಕೊಳಲನ್ನು ನುಡಿಸತೊಡಗುತ್ತಾನೆ. ಗೋಪ-ಗೋಪಿಕೆಯರೆಲ್ಲಾ ಮೈಮರೆತು ಕುಣಿಯುತಿರೆ, ಎಳೆಗರುಗಳು ಬಾಲವನ್ನೆತ್ತಿ ಚಂಗನೇ ಜಿಗಿದಾಡುತ್ತಾ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಿದ್ದರೆ, ಹೂವು ತನ್ನ ಮಕರಂದವನ್ನು ಸ್ರವಿಸಿ ಉನ್ಮಾದಕ್ಕೊಳಗಾದರೆ,ಝೇಂಕಾರಗೈಯುವ ದುಂಬಿಗಳೆಲ್ಲಾ ಹೂವಿನ ಮೇಲೆ ಮೆಲ್ಲಗೆರಗಿರುತ್ತದೆ ಹೀಗೆ ಇಡೀ ಪ್ರಕೃತಿಯೇ ಮುರುಳಿಗಾನದ ಮೋಡಿಗೊಳಗಾಗಿ ತನ್ಮಯತೆಯಿಂದ ತೂಗುತ್ತಿರುತ್ತದೆ. ಇಂತಹ ಅದ್ಭುತಗಾನವ ಕೇಳಿ ಎಲ್ಲಿಯೋ ಇದ್ದ ನವಿಲುಗಳೆಲ್ಲಾ ಕೃಷ್ಣನ ಸುತ್ತುವರೆದು, ಅತ್ಯಂತ ಸಂತೋಷದಿಂದ ಮೈಮರೆತು ನರ್ತಿಸುತ್ತಿರುತ್ತವೆ. ಕೆಲಸಮಯದ ನಂತರ ಗಾನನಿಲ್ಲಿಸಿದ ಕೃಷ್ಣ ಕೂಡ ನವಿಲುಗಳ ಹಿಂಡಿನ ಜೊತೆ ಗೋಪಿಕೆಯರ ಜೊತೆಗೂಡಿ ನರ್ತಿಸತೊಡಗುತ್ತಾನೆ. ಇಡೀ ಪ್ರಕೃತಿಯೇ ಈ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತವೆ. ಇದರಿಂದ ಹರ್ಷಿತನಾದ ನವಿಲುಗಳ ರಾಜ ತಮ್ಮ ಗುಂಪಿನಲ್ಲೇ ಅತ್ಯಂತ ಸುಂದರವಾದ       ನವಿಲುಗರಿಯೊಂದನ್ನು ಉದುರಿಸಿಕೊಟ್ಟು,ನಮ್ಮ ಪ್ರೀತಿಯ ಕಾಣಿಕೆಯೆನ್ನುತ್ತಾನೆ. ಅವುಗಳ ಪ್ರೀತಿಗೆ,ಭಕ್ತಿಗೆ ಮಾರುಹೋದ ಕೃಷ್ಣ ಅದನ್ನು ತನ್ನ ತಲೆಯಲ್ಲಿ ಧರಿಸುತ್ತಾನೆ ಎಂದೂ ಹೇಳಲಾಗಿದೆ.
        ಹೀಗೆ ಹಿ೦ದೂ ಪುರಾಣಗಳಲ್ಲಿ ನವಿಲು ಅತ್ಯ೦ತ ಮ೦ಗಳಕರವಾದ ಪಕ್ಷಿಯೆಂದು ಪರಿಗಣಿಸಲ್ಪಟ್ಟಿದೆ. ಜೊತೆಗೆ ನವಿಲು ಭಾರತ ದೇಶದ ರಾಷ್ಟ್ರೀಯ ಪಕ್ಷಿಯೆಂಬ ಹೆಮ್ಮೆಯೂ ಇದರದ್ದು. ಅನೇಕರು ತಮ್ಮ ಮನೆಯಲ್ಲಿ ನವಿಗರಿಗಳನ್ನು ಇಟ್ಟುಕೊಳ್ಳುವುದರಿಂದ ಆ ಮನೆಗೆ ಸಂಪತ್ತು,ಧನಕನಕ,ಅದೃಷ್ಟ ಬರುತ್ತದೆ,ಅದರಿಂದ ಅಭ್ಯುದಯವಾಗುತ್ತದೆಯೆಂದು ನಂಬಲಾಗಿದೆ.ಮನೆಯ ಮುಖ್ಯದ್ವಾರದಲ್ಲಿ ನವಿಲುಗರಿಯನ್ನಿಟ್ಟರೆ ದುಷ್ಟಶಕ್ತಿಗಳು,ಋಣಾತ್ಮಕ ಶಕ್ತಿಗಳು ಮನೆಯೊಳಗೆ ಪ್ರವೇಶಿಸುವುದಿಲ್ಲ, ಜೊತೆಗೆ ನವಿಲಗರಿಯ ಚಿತ್ರವುಳ್ಳ ಪಟವನ್ನು ಶಯನಗೃಹದಲ್ಲಿರಿಸಿದರೆ ದಂಪತಿಗಳ ನಡುವೆ ಅನ್ಯೋನ್ಯತೆಯುಂಟಾಗಿ ಅವರ ಪ್ರೇಮ ಸಂಬಂಧಗಳು ಗಟ್ಟಿಗೊಳ್ಳುತ್ತದೆ ಎಂದೂ ಹೇಳುತ್ತಾರೆ. ನವಿಲುಗರಿನ್ನು ಹಲವೆಡೆ ದೇಹದಿಂದ ವಿಷವನ್ನು ತೆಗೆಯುವ ಸಲುವಾಗಿ ಕೂಡ ಉಪಯೋಗಿಸುತ್ತಾರೆ ಎನ್ನಲಾಗಿದೆ.