ನಮ್ಮ ಕರ್ನಾಟಕದಲ್ಲಿ ತುಂಬಾ ಪ್ರಸಿಧ್ದವಾದ ಆಹಾರವಾಗಿದೆ. ಇದು ಮೊದಲು ತಯಾರಿಸುವಾಗ ಸ್ವಲ್ಪ ಕಷ್ಟ ಎನಿಸಬಹುದು, ಒಮ್ಮೆ ಕೆಟ್ಟು ಹೋದರು ಪರವಾಗಿಲ್ಲ, ಪ್ರಯತ್ನಪಡಿ, ಆಮೇಲೆ ಸರಿಯಾಗಿ ಬರುತ್ತದೆ, ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಹಿಟ್ಟನ್ನು ಹಾಕಿ ಹದವಾಗಿ ಬೇಯಿಸಿಕೊಂಡು ನಂತರ ಉಂಡೆಮಾಡಿಕೊಳ್ಳಿ, ಇದನ್ನು ಸೊಪ್ಪಿನ ಬಸ್ಸಾರು, ಬೇಳೆಸಾರು, ಮಸಾಲೆ ಸಾರಿನೊಂದಿಗೆ ಪುಟ್ಟ ಪುಟ್ಟ ಉಂಡೆ ಮಾಡಿಕೊಂಡು ಸವಿಯಿರಿ. ರಾಗಿಯಲ್ಲಿ ಕಬ್ಬಿಣದ ಅಂಶ ಜಾಸ್ತಿ ಇರುತ್ತದೆ,
ಆಗಾಗಿ ಇದನ್ನು ಪ್ರತಿನಿತ್ಯವೂ ಸೇವಿಸುವುದರಿಂದ ಬಹಳ ಒಳ್ಳೆಯದು. ಶಕ್ತಿಯುತವಾದ ಆಹಾರ ಇದು. ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತು ಪ್ರತೀತಿಯಲ್ಲಿದೆ.
ಈ ರಾಗಿಮುದ್ದೆಯು ಮೊಳಕೆಕಾಳುಗಳ ಮಸಾಲೆ ಸಾರು, ಬಸ್ಸಾರುಗಳೊಂದಿಗೆ ತುಂಬಾ ರುಚಿಯಾಗಿರುತ್ತದೆ, ಇದು ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಆಹಾರ, ಇಂಥ ಸ್ವಾದಿಷ್ಟವಾದ ಆಹಾರವು ನಮ್ಮ ಕರ್ನಾಟಕದ್ದು ಎಂದು ಹೇಳಲು ಹೆಮ್ಮೆಯಾಗುತ್ತದೆ, ಇದರಿಂದ ಅನೇಕ ಖಾಯಿಲೆಗಳು ಗುಣಮುಖವಾಗುತ್ತದೆ. ಆದ್ದರಿಂದ ಪ್ರತಿನಿತ್ಯವು ರಾಗಿಯನ್ನು ಬಳಸುವುದು ಒಳ್ಳೆಯದು.
ಬೇಕಾಗಿರುವ ಸಾಮಗ್ರಿಗಳು:
1 ಲೋಟ ರಾಗಿ ಹಿಟ್ಟು 2 ಲೋಟ ನೀರು
ವಿಧಾನ:
ಒಂದು ಪಾತ್ರೆಗೆ ನೀರನ್ನು ಹಾಕಿ ಕುದಿಯಲು ಬಿಡಿ, ನೀರು ಚೆನ್ನಾಗಿ ಕುದಿಯುವಾಗ ರಾಗಿಹಿಟ್ಟನ್ನು ಹಾಕಿ, 10ನಿಮಿಷ ಹಾಗೆ ಕುದಿಯಲು ಇಡಬೇಕು, ಅದನ್ನು ತಿರುಗಿಸಬಾರದು, ಹಿಟ್ಟು ಹೇಗೆ ಹಾಕಿರುತ್ತಿರೋ ಹಾಗೆ ಕುದಿಯಬೇಕು. 10 ಅಥವ 15 ನಿಮಿಷದ ನಂತರ ಒಂದು ಕೋಲು ಅಥವಾ ಒಂದು ಸೌಟನ್ನು ತೆಗೆದುಕೊಂಡು ಮಧ್ಯಭಾಗದಿಂದ ಆ ಹಿಟ್ಟನ್ನು ಒಡೆದುಕೊಂಡು ಹಾಗೆ ಮೆಲ್ಲಗೆ ಗಂಟುಗಳು ಬರದಂತೆ ಚೆನ್ನಾಗಿ ಗೊಟಾಯಿಸಿಕೊಂಡು ತಿರುಗಿಸಬೇಕು. ಮಧ್ಯೆ ಸ್ವಲ್ಪ ನೀರು ಸೇರಿಸಿಕೊಳ್ಳಿ ಬೇಕೆನಿಸಿದರೆ, ಸ್ವಲ್ಪ ತೆಳು ಆದರೆ ಹಿಟ್ಟು ಸೇರಿಸಿ, ಗಟ್ಟಿಯಾದರೆ ನೀರು ಸೇರಿಸಿಕೊಂಡು ಗಂಟಿಲ್ಲದಂತೆ ತಿರುಗಿಸಿ, ನಂತರ ಒಲೆಯ ಮೇಲಿಂದ ಇಳಿಸಿಕೊಂಡು ಹಿಟ್ಟು ಬಿಸಿಯಿರುವಾಗಲೆ ಅದನ್ನು ಕಟ್ಟಬೇಕು.ಕೈಯನ್ನು ನೀರು ಅಥವ ತುಪ್ಪದಲ್ಲಿ ಅದ್ದಿಕೊಂಡು ಚೆನ್ನಾಗಿ ನಾದಿಕೊಂಡು ನಿಮಗೆ ಬೇಕಾದ ಅಳತೆಯಲ್ಲಿ ಉಂಡೆಯನ್ನು ಕಟ್ಟಿದರೆ ಶಕ್ತಿಯುತವಾದ ರಾಗಿಮುದ್ದೆ ತಯಾರಾಗುತ್ತದೆ.