ಪತ್ರೊಡೆಯನ್ನು ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ಜಾಸ್ತಿಯಾಗಿ ತಯಾರಿಸುತ್ತಾರೆ. ಮರದ ಕೆಸ ಅಥವಾ ಹಿತ್ತಲಿನ ತೋಟ ಗದ್ದೆ ಬಯಲಿನ ಮರದಲ್ಲಿ ಬೆಳದ ಸೊಪ್ಪನ್ನು ಕಟಾವು ಮಾಡಿ ತಯಾರಿಸುತ್ತಾರೆ. ಈ ತಿಂಡಿ ಕೆಲವರಿಗೆ ಇಷ್ಟವಾದರೆ, ಇನ್ನು ಕೆಲವರು ಈ ತಿಂಡಿಯಿಂದ ದೂರವಿರುತ್ತಾರೆ. ನಾವು ಇವತ್ತು ಪತ್ರೊಡೆ ಹೇಗೆ ತಯಾರಿಸೋದು ಎಂದು ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು : –
ಕೆಸುವಿನ ಎಲೆ – 10
ಬೆಳ್ತಿಗೆ ಅಕ್ಕಿ – 1 ಲೋಟ
ತೆಂಗಿನಕಾಯಿ ತುರಿ – 1 ಕಪ್
ಒಣಮೆಣಸು – 4
ಉದ್ದಿನ ಬೇಳೆ – 2 ಚಮಚ
ಕೊತ್ತಂಬರಿ – 2 ಚಮಚ
ಮೆಂತೆ – 1 ಚಮಚ
ಹುಣಿಸೆ ಹುಳಿ – ನೆಲ್ಲಿಕಾಯಿ ಗಾತ್ರದಷ್ಟು
ಬೆಲ್ಲ – ಲಿಂಬೆಹಣ್ಣು ಗಾತ್ರದಷ್ಟು
ಇಂಗು – ಹುಣಿಸೆಬೀಜ ಗಾತ್ರದಷ್ಟು
ಮಾಡುವ ವಿಧಾನ : –
ಕೆಸುವಿನ ಎಲೆಯನ್ನು ಚೆನ್ನಾಗಿ ತೊಳೆದು ನಾರನ್ನು ತೆಗೆಯಿರಿ. ಅಕ್ಕಿಯನ್ನು 2 ಗಂಟೆಗಳ ಕಾಲ ನೀರಿನಲ್ಲಿ ನೆನೆಹಾಕಿ ನಂತರ ಒಣಮೆಣಸು, ಉದ್ದಿನಬೇಳೆ, ಕೊತ್ತಂಬರಿ ಮತ್ತು ಮೆಂತೆಗಳನ್ನು ಬೇರೆ ಬೇರೆಯಾಗಿ ಎಣ್ಣೆಯಲ್ಲಿ ಹುರಿದು ನೆನೆಸಿದ ಅಕ್ಕಿಯೊಂದಿಗೆ ಹಾಕಿ. ಇದಕ್ಕೆ ತೆಂಗಿನ ಕಾಯಿ, ಉಪ್ಪು, ಹುಳಿ, ಬೆಲ್ಲ ಮತ್ತು ಇಂಗು ಸೇರಿಸಿ ಮಿಕ್ಸಿಯಲ್ಲಿ ಹಾಕಿ ರುಬ್ಬಿ. ಇಡ್ಲಿ ಹಿಟ್ಟಿನ ಹದದಷ್ಟು ದಪ್ಪಗಿರಲಿ. ಈಗ ನಾರು ತೆಗೆದಿರಿಸಿದ ಕೆಸುವಿನ ಒಂದೊಂದೇ ಎಲೆಗೆ ಈ ಹಿಟ್ಟನ್ನು ಸವರಿ ಇನ್ನೊಂದು ಎಲೆಯನ್ನು ಅದರ ಮೇಲಿರಿಸಿ ಪುನಃ ಹಿಟ್ಟು ಸವರಿ ಚಾಪೆ ಮಡಿಚುವ ರೀತಿಯಲ್ಲಿ ಮಡಿಚಿರಿ. ಹೀಗೆ ಸುತ್ತಿಟ್ಟ ಪತ್ರೋಡೆಗಳನ್ನು ಇಡ್ಲಿ ಪಾತ್ರೆಯಲ್ಲಿ ನೀರು ಹಾಕಿ ಇಡ್ಲಿ ಬೇಯಿಸಿದಂತೆ ಹಬೆಯಲ್ಲಿ 1/2 ಗಂಟೆಗಳ ಕಾಲ ಬೇಯಿಸಿ. ಈಗ ಬಿಸಿ ಬಿಸಿ ಪತ್ರೋಡೆ ಕೊಬ್ಬರಿ ಎಣ್ಣೆಯೊಂದಿಗೆ ಸವಿಯಲು ಕೊಡಿ.
ಪತ್ರೋಡೆ ಹೀಟ್ಟು ರುಬ್ಬುವಾಗ 1 ಈರುಳ್ಳಿ ಹಾಕಿದರೆ ಘಮಘಮವೆನ್ನುವ ಪರಿಮಳದೊಂದಿಗೆ ಪತ್ರೋಡೆಯು ಇನ್ನೂ ರುಚಿಯಾಗುತ್ತದೆ. ಇಡಿಹೆಸರು ಕಾಳನ್ನು ನೆನೆಸಿ ಅಕ್ಕಿಯೊಂದಿಗೆ ಹಾಕಬಹುದು.