ಇನ್ನೇನು ಚಳಿಗಾಲ ಆರಂಭವಾಗುತ್ತಲಿದೆ. ಪರಿಸರದಲ್ಲಿ ಒಣಗಾಳಿಯು ಬೀಸುತ್ತಿರುತ್ತದೆ. ಚರ್ಮ ಒಡೆಯುತ್ತದೆ. ತುಪ್ಪದಲ್ಲಿ ತಯಾರಿಸಿದ ಹಲ್ವ ಇನ್ನಿತರ ಜಿಡ್ಡಿನಂಶವಿರುವ ಸಿಹಿ ತಿನಿಸುಗಳು ಕೂಡ ಈ ಋತುವಿನಲ್ಲಿ ಅಗತ್ಯವೆನಿಸುತ್ತದೆ.

ನೀರಿನಂಶವು ಹೇರಳವಾಗಿರುವ ಬೂದುಗುಂಬಳ ಕಾಯಿಯಲ್ಲಿ ಪಾಸ್ಪರಸ್, ಕ್ಯಾಲ್ಸಿಯಂ, ಐರನ್, ಥಯಾಮಿನ್ ಮುಂತಾದ ಮಿನರಲ್ಸ್ ಅಂಶಗಳಿದ್ದು ಡಯಾಬಿಟಿಕ್ ವ್ಯಕ್ತಿಗಳಿಗೆ ಈ ತರಕಾರಿಯು ಒಂದು ವರವೆನ್ನಬಹುದು. ತಂಪುಗುಣವನ್ನು ಹೊಂದಿರುವ ಈ ತರಕಾರಿಯು ದೇಹದಲ್ಲಿನ ಅಸಿಡಿಟಿಯನ್ನು ಕಡಿಮೆ ಮಾಡುವುದಲ್ಲದೆ, ಬೊಜ್ಜು, ಹೊಟ್ಟೆ ನೋವು, ಮೂಲವ್ಯಾದಿ, ಕಾಲು ನೋವು ಮುಂತಾದ ರೋಗಗಳಿಗೂ ಉತ್ತಮ ತರಕಾರಿಯೆನಿಸಿದೆ.

ಸರಿ ಹಾಗಾದರೆ, ಬೂದುಗುಂಬಳದಿಂದ ತಯಾರಿಸುವ ಹಲ್ವವನ್ನು ಹೇಗೆ ಮಾಡುವುದೆಂದು ನೋಡೋಣ

ಬೇಕಾಗುವ ಪದಾರ್ಥಗಳು:

RELATED ARTICLES  ಒಮ್ಮೆ ಜೋಳದ ರೊಟ್ಟಿ ಮಾಡಿ ನೋಡಿ!

ಬೂದುಗುಂಬಳಕಾಯಿ ತುರಿ- 1 ಬಟ್ಟಲು
ಸಕ್ಕರೆ- ಕಾಲು ಬಟ್ಟಲು
ತುಪ್ಪ- ಅರ್ಧ ಲೋಟ
ಗೋಡಂಬಿ, ದ್ರಾಕ್ಷಿ- ಸ್ವಲ್ಪ
ಖೋವ- ಸ್ವಲ್ಪ (ಬೇಕಿದ್ದಲ್ಲಿ)

ಮಾಡುವ ವಿಧಾನ:

ಬೂದುಗುಂಬಳದ ಮೇಲಿನ ಸಿಪ್ಪೆಯನ್ನು ತೆಗೆದು, ಒಳಭಾಗದ ತಿರುಳು ಮತ್ತು ಬೀಜವನ್ನು ಹೊರತುಪಡಿಸಿ ತುರಿಯಲು ಅನುಕೂಲವಾಗುವಂತೆ ಉದ್ದುದ್ದನೆ ಹೆಚ್ಚಿಕೊಳ್ಳಿ. (ಆರೋಗ್ಯಕರ ತಿರುಳಿನಿಂದ ಸಾಸಿವೆಯನ್ನು ಮಾಡಬಹುದು ಅಥವಾ ದೋಸೆಹಿಟ್ಟು ರುಬ್ಬುವಾಗ ಜೊತೆಯಲ್ಲಿ ಸೇರಿಸಬಹುದು).
ನಂತರ ಅದನ್ನು ತುರಿದುಕೊಳ್ಳಿ. ಅದರಲ್ಲಿನ ನೀರಿನಂಶದೊಂದಿಗೆ ತುರಿದ ಭಾಗವನ್ನು ದಪ್ಪ ತಳದ ಬಾಣಲೆಗೆ ಹಾಕಿ, ಸ್ಟವ್ ಹೊತ್ತಿಸಿ ಇಡಿ. ಅದರ ನೀರೆಲ್ಲಾ ಹೋಗಿ, ತುರಿಯು ಬೆಂದಾಗ ಒಂದು ಬಟ್ಟಲು ತುರಿಗೆ ಕಾಲು ಬಟ್ಟಲು ಸಕ್ಕರೆಯಂತೆ ಅಳೆದು ಹಾಕಿ. ಪ್ರಾರಂಭದಲ್ಲಿ ಕೈಮಗುಚುವ ಅಗತ್ಯವಿಲ್ಲ.
ಸಕ್ಕರೆಯ ನೀರಿನಂಶವೂ ಹೋಗಿ ಗಟ್ಟಿಯಾಗುತ್ತಾ ಬಂದಾಗ ಉರಿಯನ್ನು ಸ್ವಲ್ಪ ಸಣ್ಣಗೆ ಮಾಡಿ, ಅಳೆದಿಟ್ಟ ತುಪ್ಪವನ್ನು ಆಗಾಗ ಸ್ವಲ್ಪ ಸ್ವಲ್ಪವೇ ಹಾಕುತ್ತಿರಿ. ಚೆನ್ನಾಗಿ ಗಟ್ಟಿಯಾಗುತ್ತಾ ಬರುತ್ತಿರುವಾಗ ಬಿಡದೆ ಕೈ ಮಗುಚಿ, ಪೂರ್ತಿ ತುಪ್ಪವನ್ನು ಹಾಕಿ. (ಕೊನೆಯಲ್ಲಿ ಬೇಕೆಂದರೆ ಸ್ವಲ್ಪ ಖೋವವನ್ನು ಹಾಕಿ).
ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಿ. ಸ್ವಾದಿಷ್ಟವಾದ, ಆರೋಗ್ಯಯುಕ್ತ ಬೂದುಗುಂಬಳದ ಹಲ್ವ ಸವಿಯಲು ಸಿದ್ಧ. ಬೌಲ್ ಗೆ ಹಾಕಿ ಸರ್ವ್ ಮಾಡಿ.

RELATED ARTICLES  ಅತ್ಯುತ್ತಮ ರುಚಿ ಹಾಗೂ ವೈವಿದ್ಯಮಯ ತಿನಿಸು ಕಾರ್ನ್ ಪರೋಟ!

ಹಲ್ವದಲ್ಲಿ ನೀರಿನಂಶವು ಸ್ವಲ್ಪವೂ ಇರದೆ, ತುಂಬಾ ಗಟ್ಟಿಯಾಗಿದ್ದಲ್ಲಿ ಫ್ರಿಜ್ ನ ಹೊರತಾಗಿ ಒಂದು ವಾರದವರೆಗೂ ಕೆಡದೆ ಇರುತ್ತದೆ.