ಪುಳಿಯೋಗರೆ ಮಾಡುವುದರಲ್ಲಿ ನಾವೆಲ್ಲರೂ ನಿಸ್ಸೀಮರು. ಅಂಗಡಿಯಿಂದ ಎಂಟಿಆರ್, ಅಯ್ಯಂಗಾರ್ ಪುಳಿಯೋಗರೆ ಪೌಡರ್ ತಂದು ಒಗ್ಗರಣೆ ಹಾಕಿ ಮಿಕ್ಸ್ ಮಾಡಿ ಜಟ್ ಪಟ್ ಆಗಿ ಮಾಡಿ ಮುಗಿಸ್ತಿವಿ. ಆದ್ರೆ ಹೆಚ್ಚಿನವರಿಗೆ ಗೊತ್ತಿಲ್ಲ. ಪುಳಿಯೋಗರೆ ಗೊಜ್ಜು ಮನೆಯಲ್ಲಿ ಸುಲಭವಾಗಿ ತಯಾರಿಸಬಹುದು ಅಂತ.
ಬೇಕಿರುವ ಸಾಮಗ್ರಿ:
ಸಾಸಿವೆ – ½ ಚಮಚ, ಜೀರಿಗೆ – 1 ½ ಚಮಚ, ಮೆಂತ್ಯ – ½ ಚಮಚ, ಕಾಳು ಮೆಣಸು = 1 ಚಮಚ, ಇಂಗು – 5 ಚಿಟಿಕೆ, ಧನಿಯ – 5 ಚಮಚ, ಬ್ಯಾಡಗಿ ಮೆಣಸಿನ ಕಾಯಿ – 10 ಅಥವಾ 12 (ಖಾರಕ್ಕೆ ತಕ್ಕಂತೆ), ಅರಿಶಿನ – 2 ಚಮಚ, ಹುಣಿಸೆ ಹಣ್ಣು – ದೊಡ್ಡ ನಿಂಬೆ ಗಾತ್ರ, ಬಿಳಿ ಎಳ್ಳು – 100 ಗ್ರಾಂ., ಒಣ ಕೊಬ್ಬರಿ – 150 ಗ್ರಾಂ, ಬೆಲ್ಲ – ½ ಅಚ್ಚು, ಕಡಲೆ ಬೀಜ – 150 ಗ್ರಾಂ, ಕಡಲೇಕಾಯಿ ಎಣ್ಣೆ – 150 ಗ್ರಾಂ. ಉಪ್ಪು – 1 ½ ಹಿಡಿ
ಒಗ್ಗರಣೆಗೆ :
ಎಣ್ಣೆ – 4 ಚಮಚ, ಸಾಸಿವೆ – ½ ಚಮಚ, ಉದ್ದಿನ ಬೇಳೆ – 4 ಚಮಚ, ಕಡಲೆ ಬೇಳೆ – 4 ಚಮಚ, ಒಣ ಮೆಣಸಿನ ಕಾಯಿ 10 ಅಥವಾ 12 ತುಂಡುಗಳು, ಕರಿಬೇವಿನ ಸೊಪ್ಪು – 10 ಅಥವಾ 12 ಎಸಳುಗಳು.
ತಯಾರಿಸುವ ವಿಧಾನ:
ಒಂದು ಪುಟ್ಟ ಬೌಲಿನಲ್ಲಿ ಹುಣಿಸೆ ಹಣ್ಣನ್ನು ನೆನೆಯಲು ಇಡಿ. ಸಾಸಿವೆ, ಜೀರಿಗೆ, ಮೆಂತ್ಯ, ಕಾಳು ಮೆಣಸು, ಇಂಗು, ಧನಿಯ ಮಾತು ಬ್ಯಾಡಗಿ ಮೆಣಸಿನ ಕಾಯಿ ಎಲ್ಲವನ್ನೂ ಒಂದು ಬಾಣಲೆಯಲ್ಲಿ ಹಾಕಿ ಸ್ವಲ್ಪ ಎಣ್ಣೆಯನ್ನು ಹಾಕಿ ಸಾಧಾರಣ ಉರಿಯಲ್ಲಿ ಹುರಿದು ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿಮಾಡಿಟ್ಟುಕೊಳ್ಳಿ. (ಈ ಪುಡಿಯಿಂದ ಸಾರನ್ನೂ ಮಾಡಬಹುದು.) ಎಳ್ಳು ಮತ್ತು ಒಣಕೊಬ್ಬರಿಯನ್ನು ಬೇರೆ ಬೇರೆಯಾಗಿ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಕಡಲೆ ಬೀಜವನ್ನು ಬೇರೆಯಾಗಿ ಹುರಿದು ಇಟ್ಟುಕೊಳ್ಳಿ.
ದಪ್ಪ ತಳದ ಬಾಣಲೆಗೆ ಉಪ್ಪು, ಬೆಲ್ಲ, ಅರಿಶಿನ, ಕರಿಬೇವಿನ ಸೊಪ್ಪು, ಹುಣಿಸೆ ರಸ ಮತ್ತು ಎಣ್ಣೆಯನ್ನು ಹಾಕಿ ಚೆನ್ನಾಗಿ ಕುದಿಸಿ..
ನೀರಿನಂಶ ಮುಕ್ಕಾಲು ಭಾಗ ಇಂಗಿದ ನಂತರ ಅದಕ್ಕೆ ಸಾರಿನ ಪುಡಿ ಹಾಕಿ ಚೆನ್ನಾಗಿ ಕಲೆಸಿ. ನಂತರ ಕೆಳಗಿಳಿಸಿ ಹುರಿದ ಕಡಲೆ ಬೀಜ, ಎಳ್ಳು ಮತ್ತು ಕೊಬ್ಬರಿ ಪುಡಿಯನ್ನು ಹಾಕಿ ಬೆರೆಸಿ. ಉದುರುದುರಾದ ಅನ್ನಕ್ಕೆ ಅಳತೆಗೆ ಬೇಕಾದಷ್ಟು ಗೊಜ್ಜನ್ನು ಹಾಕಿ ಕಲೆಸಿ. ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಹಾಕಿ ಪುನಃ ಕಲೆಸಿ. ರುಚಿಯಾದ ಪುಳಿಯೋಗರೆ ಸವಿಯಿರಿ.