ಮನೆಗೆ ತರಕಾರಿ ಸೊಪ್ಪು ತರುವಾಗ ಪುದೀನಾ ಕೊತ್ತಂಬರಿಸೊಪ್ಪನ್ನು ತರುತ್ತೇವೆ. ಪುದೀನಾದಿಂದ ಚಟ್ನಿ ಇತ್ಯಾದಿಗಳನ್ನು ಮಾಡುತ್ತೇವೆ ಇದೇ ಪುದೀನಾದಿಂದ ಒಂದೊಳ್ಳೆ ರೈಸ್ ಬಾತ್ ಕೂಡ ಮಾಡಬಹುದು. ಕೆಲವೊಮ್ಮೆ ಬೆಳಿಗ್ಗಿನ ತಿಂಡಿ ಮಾಡುವುದಕ್ಕೆ ಏನೂ ಇಲ್ಲದಾಗ ಈ ಪುದೀನಾದಿಂದ ಒಂದೊಳ್ಳೆ ಉಪಹಾರವನ್ನು ತಯಾರಿಸಿ ಮನೆಮಂದಿಯೆಲ್ಲಾ ಸವಿಯಿರಿ. ಮನೆಯಲ್ಲಿ ನಿನ್ನೆ ಮಾಡಿದ ಅನ್ನ ಉಳಿದಿದ್ದರೆ, ದಿನಾ ಅದೇ ಚಿತ್ರಾನ್ನ, ಲೆಮನ್ ರೈಸ್ ಮಾಡಿ ತಿಂದು ಬೇಜಾರಾಗಿದ್ದರೆ ಈ ಪುದೀನಾ ರೈಸ್ ಅನ್ನು ಒಮ್ಮೆ ಮಾಡಿ ಸವಿಯಿರಿ. ಪುದೀನಾ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು.
ಬೇಕಾಗುವ ಸಾಮಗ್ರಿಗಳು:
ಅಕ್ಕಿ – ಒಂದೂವರೆ ಕಪ್
ಪುದೀನಾ ಸೊಪ್ಪು – 1 / 2 ಕಟ್ಟು
ಹಸಿಮೆಣಸು – 3
ಶುಂಠಿ – 1 ಇಂಚು
ಬೆಳ್ಳುಳ್ಳಿ 3 – 4 ಎಸಳು
ತೆಂಗಿನತುರಿ – 1 / 4 ಕಪ್
ಏಲಕ್ಕಿ – 2
ಲವಂಗ – 4
ಚಕ್ಕೆ ನಾಲ್ಕೈದು ಚಿಕ್ಕ ಚೂರುಗಳು
ಈರುಳ್ಳಿ – ದೊಡ್ಡದಾದರೆ ಅರ್ಧ ಸಾಕು
ಆಲೂಗಡ್ಡೆ – ಅರ್ಧ
ನೀರು (ಅನ್ನ ಬೇಯಿಸಲು) – 3 ಲೋಟ
ಎಣ್ಣೆ – 3 ಟೇಬಲ್ ಚಮಚ
ಅರ್ಧ ನಿಂಬೆಹಣ್ಣು
ರುಚಿಗೆ ತಕ್ಕಷ್ಟು ಉಪ್ಪು
ಮಾಡುವ ವಿಧಾನ:
ಆಲೂಗಡ್ಡೆಯನ್ನು ಸಿಪ್ಪೆ ತೆಗೆದು ಚಿಕ್ಕ ಹೋಳುಗಳಾಗಿ ಹೆಚ್ಚಿಕೊಂಡು, ಕಪ್ಪಾಗದಂತೆ ನೀರಿನಲ್ಲಿ ಮುಳುಗಿಸಿಟ್ಟಿರಿ.
ಈರುಳ್ಳಿಯನ್ನು ತೆಳ್ಳಗೆ ಹೆಚ್ಚಿಕೊಳ್ಳಿ. ತೆಂಗಿನತುರಿ, ಶುಂಠಿ, ಬೆಳ್ಳುಳ್ಳಿ, ಪುದೀನಾ, ಹಸಿಮೆಣಸು ಇಷ್ಟನ್ನೂ ಸ್ವಲ್ಪ ನೀರು ಸೇರಿಸಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಕಾಯಿಸಿಕೊಂಡು ಅದಕ್ಕೆ ಚಕ್ಕೆ, ಲವಂಗ, ಏಲಕ್ಕಿ ಸೇರಿಸಿ ಸ್ವಲ್ಪ ಹುರಿದುಕೊಂಡು, ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವತನಕ ಹುರಿಯಿರಿ.
ನಂತರ ಇದಕ್ಕೆ ರುಬ್ಬಿಕೊಂಡ ಪೇಸ್ಟ್ ಮತ್ತು ಹೆಚ್ಚಿದ ಆಲೂಗಡ್ಡೆ ಸೇರಿಸಿ ಹಸಿ ವಾಸನೆ ಹೋಗುವಂತೆ 3 – 4 ನಿಮಿಷ ಹುರಿಯಿರಿ.
ಇದಕ್ಕೆ ತೊಳೆದ ಅಕ್ಕಿ ಸೇರಿಸಿ ಒಂದೆರಡು ನಿಮಿಷ ಹುರಿದು, ಬೇಯಿಸಲು ಬೇಕಾದಷ್ಟು ನೀರು ರುಚಿಗೆ ತಕ್ಕಷ್ಟು ಉಪ್ಪು, ನಿಂಬೆರಸ ಸೇರಿಸಿ, ಕುಕ್ಕರ್ ನಲ್ಲಿ ಹಾಕಿ ಬೇಯಿಸಿ.
ಪುದೀನಾ ರೈಸ್ ನ್ನು ನಿಮ್ಮಿಷ್ಟದ ರಾಯಿತಾ ಅಥವಾ ಬರೀ ಮೊಸರಿನೊಡನೆಯೂ ತಿನ್ನಬಹುದು.
ಟಿಪ್ಸ್:
- ಪುದೀನಾ ಸೊಪ್ಪನ್ನು ರುಬ್ಬುವಾಗ ಹೆಚ್ಚು ನೀರನ್ನು ಸೇರಿಸಿದ್ದರೆ, ಅನ್ನ ಬೇಯಿಸುವಾಗ ಸ್ವಲ್ಪ ಕಡಿಮೆ ನೀರು ಸೇರಿಸಿ. ನೀರು ಹೆಚ್ಚಾದರೆ ಅನ್ನ ಮುದ್ದೆಯಾಗಿಬಿಡುತ್ತದೆ.
- ಅಲಂಕಾರಕ್ಕೆ ಬೇಕಿದ್ದರೆ ಗೇರುಬೀಜದ ಚೂರುಗಳನ್ನು ಎಣ್ಣೆಯಲ್ಲಿ ಹುರಿದು ಪುದೀನಾ ರೈಸ್ ಗೆ ಸೇರಿಸಿ.