ಸಾಮಾನ್ಯವಾಗಿ ಹಳ್ಳಿಗಳ ಕಡೆ ಎಲ್ಲರ ಮನೆಯ ಹಿತ್ತಿಲಲ್ಲೂ ವಿವಿಧ ತರಕಾರಿ, ಹಣ್ಣುಗಳನ್ನು ಬೆಳೆಯುತ್ತಾರೆ. ಅಡುಗೆಗೆ ಬೇಕಾಗುವ ಹೆಚ್ಚಿನ ಸೊಪ್ಪು – ತರಕಾರಿಗಳನ್ನು ಅವರೇ ಬೆಳೆಯುತ್ತಾರೆ. ನಾವೇ ಬೆಳೆದ ಸೊಪ್ಪು, ತರಕಾರಿಗಳು ಆರೋಗ್ಯಕ್ಕೂ ಒಳ್ಳೆಯದು ಹಾಗೂ ಅವನ್ನು ತಿನ್ನುವುದರಲ್ಲಿ ಇರುವ ಖುಷಿಯೇ ಬೇರೆ!
ನುಗ್ಗೆಸೊಪ್ಪು ಪೋಷಕಾಂಶಗಳ ಆಗರ. ಇದನ್ನು ತಿನ್ನುವುದರಿಂದ ಒಂದಲ್ಲ….ಎರಡಲ್ಲ ನೂರಾರು ಆರೋಗ್ಯಕರ ಲಾಭಗಳನ್ನು ಪಡೆಯಬಹುದು. ಸುಮಾರು 300 ರೋಗಗಳನ್ನು ಕಡಿಮೆ ಮಾಡುವ ಔಷಧೀಯ ಗುಣವಿರುವ ನುಗ್ಗೆಸೊಪ್ಪು ಎಲ್ಲಾ ಕಾಲದಲ್ಲಿ ದೊರೆಯುವುದಾದರೂ ಮಳೆಗಾಲದಲ್ಲಿ ಸೊಂಪಾಗಿ ಬೆಳೆದಿರುತ್ತದೆ.
ನುಗ್ಗೆಸೊಪ್ಪಿನಲ್ಲಿ ಮೊಸರಿಗಿಂತ 2 ರಷ್ಟು ಜಾಸ್ತಿ ವಿಟಮಿನ್ ಸಿ, ಕಿತ್ತಳೆಗಿಂತ 7 ಪಟ್ಟು ಜಾಸ್ತಿ ವಿಟಮಿನ್ ಎ, ಕ್ಯಾರೆಟ್ಗಿಂತ 4 ರಷ್ಟು ಜಾಸ್ತಿ ಪೊಟ್ಯಾಶಿಯಂ, ಬಾಳೆಹಣ್ಣಿಗಿಂತ 3 ರಷ್ಟು ಹಾಗೂ ಹಾಲಿಗಿಂತ 4 ರಷ್ಟು ಜಾಸ್ತಿ ಕ್ಯಾಲ್ಸಿಯಂ ಇವೆ. ಈ ಎಲ್ಲಾ ಗುಣವಿರುವ ನುಗ್ಗೆಸೊಪ್ಪುನ್ನು ಪಲ್ಯ ಮಾಡಿ ತಿನ್ನಬಹುದು.
ಬೇಕಾಗುವ ಸಾಮಗ್ರಿಗಳು:
- ನುಗ್ಗೆಸೊಪ್ಪು – 1 ದೊಡ್ಡ ಕಟ್ಟು
- ಆಮ್ ಚೂರ್ ಪೌಡರ್ – 3/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಸಕ್ಕರೆ – 1 1/2 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಉಪ್ಪು – ರುಚಿಗೆ ತಕ್ಕಷ್ಟು
– ಮಸಾಲಾ ಪುಡಿಗೆ:
- ಚಕ್ಕೆ – 1 ಇಂಚು
- ಲವಂಗ – 3 ಅಥವಾ 4
- ಒಣಮೆಣಸು – 7 (ಖಾರಕ್ಕೆ ತಕ್ಕಂತೆ)
- ಕೊಬ್ಬರಿತುರಿ (ಅಥವಾ ತೆಂಗಿನತುರಿ) – 3/4 ಕಪ್
- ಕಡಲೆಬೇಳೆ – 4 ಟೇಬಲ್ ಸ್ಪೂನ್
- ಉದ್ದಿನಬೇಳೆ – 2 ಟೀ ಸ್ಪೂನ್
- ಮೆಂತ್ಯ – 3/4 ಟೀ ಸ್ಪೂನ್
- ಕೊತ್ತಂಬರಿ – 1 1/2 ಟೀ ಸ್ಪೂನ್
- ಜೀರಿಗೆ – 3/4 ಟೀ ಸ್ಪೂನ್
- ಸಾಸಿವೆ – 1/2 ಟೀ ಸ್ಪೂನ್
- ಇಂಗು – ಚಿಟಿಕೆ
- ಅರಿಶಿನ – 1/4 ಟೀ ಸ್ಪೂನ್
- ಎಣ್ಣೆ – 1 1/2 ಟೀ ಸ್ಪೂನ್
– ಒಗ್ಗರಣೆಗೆ:
- ಎಣ್ಣೆ – 3 ಟೇಬಲ್ ಸ್ಪೂನ್
- ಉದ್ದಿನಬೇಳೆ – 1 ಟೀ ಸ್ಪೂನ್
- ಸಾಸಿವೆ – 1 ಟೀ ಸ್ಪೂನ್
- ಅರಿಶಿನ – ದೊಡ್ಡ ಚಿಟಿಕೆಯಷ್ಟು
ತಯಾರಿಸುವ ವಿಧಾನ:
- ನುಗ್ಗೆಸೊಪ್ಪನ್ನು ದಂಟಿನಿಂದ ಬೇರ್ಪಡಿಸಿಕೊಂಡು ನೀರಿನಲ್ಲಿ ಸ್ವಚ್ಚವಾಗಿ ತೊಳೆದುಕೊಳ್ಳಿ.
- ಕೊಬ್ಬರಿತುರಿ ಹೊರತಾಗಿ ಮಸಾಲಾ ಪುಡಿಗೆ ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನೂ ಎಣ್ಣೆಯಲ್ಲಿ ಹದವಾಗಿ ಹುರಿದುಕೊಂಡು ಮಿಕ್ಸಿಯಲ್ಲಿ ತರಿಯಾಗಿ ಪುಡಿಮಾಡಿಕೊಳ್ಳಿ. ಕೊನೆಯಲ್ಲಿ ಕೊಬ್ಬರಿತುರಿ ಸೇರಿಸಿ ಒಂದು ಸುತ್ತು ತಿರುವಿ ತೆಗೆಯಿರಿ. ಈ ಪಲ್ಯಕ್ಕೆ ಮಸಾಲಾ ಪುಡಿ ಸ್ವಲ್ಪ ತರಿಯಾಗಿದ್ದರೆ ಚೆನ್ನಾಗಿರುತ್ತದೆ.
- ಒಂದು ದಪ್ಪ ತಳದ ಬಾಣಲೆಯಲ್ಲಿ ಎಣ್ಣೆ ಕಾಯಿಸಿ 3 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಹಾಕಿ ಉದ್ದಿನಬೇಳೆ, ಸಾಸಿವೆ, ಚಿಟಿಕೆ ಅರಿಶಿನ ಹಾಕಿ ಒಗ್ಗರಣೆ ಮಾಡಿಕೊಳ್ಳಿ.
- ಇದಕ್ಕೆ ನುಗ್ಗೆಸೊಪ್ಪನ್ನು ಸೇರಿಸಿ ಸಣ್ಣ ಉರಿಯಲ್ಲಿ 8 – 10 ನಿಮಿಷ ಹುರಿಯಿರಿ. ಅಷ್ಟರಲ್ಲಿ ಸೊಪ್ಪು ಬೆಂದು ಮೆತ್ತಗಾಗಿರುತ್ತದೆ ಹಾಗೂ ಸೊಪ್ಪಿನ ಬಣ್ಣವೂ ಬದಲಾಗುತ್ತದೆ.
- ಕೊನೆಯಲ್ಲಿ ಇದಕ್ಕೆ ಮಸಾಲಾ ಪುಡಿ, ಉಪ್ಪು, ಸಕ್ಕರೆ, ಆಮ್ ಚೂರ್ ಪೌಡರ್ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ.
- ಪಲ್ಯದ ಮಿಶ್ರಣವನ್ನು ಚೆನ್ನಾಗಿ ಬಿಸಿಮಾಡಿ ಉರಿಯನ್ನು ಆಫ್ ಮಾಡಿ.
- ಅನ್ನ ಹಾಗೂ ಚಪಾತಿಯೊಡನೆ ಸೈಡ್ ಡಿಶ್ ಆಗಿ ಹಾಕಿಕೊಳ್ಳಲು ಈ ಪಲ್ಯ ಚೆನ್ನಾಗಿರುತ್ತದೆ.
ಟಿಪ್ಸ್:
- ಈ ಪಲ್ಯಕ್ಕೆ ಈರುಳ್ಳಿ ಹಾಕಿದರೂ ಚೆನ್ನಾಗಿರುತ್ತದೆ. ಈರುಳ್ಳಿ ಸೇರಿಸುವುದಾದರೆ ಸಣ್ಣಗೆ ಹೆಚ್ಚಿಕೊಂಡು ಮಸಾಲಾ ಪುಡಿ ಸೇರಿಸುವ ಸಮಯದಲ್ಲಿ ಸೇರಿಸಿ ಹಸಿ ವಾಸನೆ ಹೋಗುವವರೆಗೆ ಪಲ್ಯವನ್ನು ಬಿಸಿಮಾಡಿ ನಂತರ ಸರ್ವ್ ಮಾಡಿ.
- ಇದೇ ವಿಧಾನದಲ್ಲಿ ನುಗ್ಗೆಸೊಪ್ಪಿನ ಬದಲು ಕ್ಯಾಪ್ಸಿಕಂ / ಡೊಳ್ಳು ಮೆಣಸಿನಕಾಯಿ ಬಳಸಿಯೂ ಪಲ್ಯ ತಯಾರಿಸಬಹುದು.
- ನಾನು ಈ ಪಲ್ಯಕ್ಕೆ ಕೊಬ್ಬರಿತುರಿ ಬಳಸಿದ್ದೇನೆ. ಇದರ ಬದಲು ತೆಂಗಿನತುರಿಯನ್ನು ಬೇಕಿದ್ದರೂ ಬಳಸಬಹುದು.