ಬೇಕಾಗುವ ಸಾಮಗ್ರಿಗಳು:
- ಪಾಲಕ್ ಸೊಪ್ಪು – 1 ದೊಡ್ಡ ಕಟ್ಟು
- ಟೊಮೆಟೋ – 1
- ಈರುಳ್ಳಿ – 1, ಮೀಡಿಯಮ್ ಸೈಜಿನದು
- ತುರಿದ ಬೆಳ್ಳುಳ್ಳಿ – 1 ಟೀ ಸ್ಪೂನ್
- ತುರಿದ ಶುಂಟಿ – 1 ಟೀ ಸ್ಪೂನ್
- ಜೀರಿಗೆ – 1 ಟೀ ಸ್ಪೂನ್
- ಕೊತ್ತಂಬರಿ ಪುಡಿ – 1 1/2 ಟೀ ಸ್ಪೂನ್
- ಗರಮ್ ಮಸಾಲಾ ಪುಡಿ – 1/2 ಟೀ ಸ್ಪೂನ್
- ಅಚ್ಚಮೆಣಸಿನಪುಡಿ – 1 1/4 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಉಪ್ಪು – ರುಚಿಗೆ ತಕ್ಕಷ್ಟು
- ನಿಂಬೆರಸ – 1 ಟೀ ಸ್ಪೂನ್ ಅಥವಾ ರುಚಿಗೆ ತಕ್ಕಷ್ಟು
- ಪನೀರ್ – 300 ಗ್ರಾಂ
- ಎಣ್ಣೆ – 7 ಟೇಬಲ್ ಸ್ಪೂನ್
- ನೀರು – 3 ಕಪ್
ತಯಾರಿಸುವ ವಿಧಾನ:
- ಟೊಮೆಟೋ ಹಣ್ಣನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಈರುಳ್ಳಿಯನ್ನು ತುರಿದುಕೊಳ್ಳಿ.
- ಪಾಲಕ್ ಸೊಪ್ಪನ್ನು ಸ್ವಚ್ಛವಾಗಿ ತೊಳೆದುಕೊಂಡು 1 1/2 ಕಪ್ ಅಥವಾ ಅಗತ್ಯವಿರುವಷ್ಟು ನೀರು ಸೇರಿಸಿ ಬೇಯಿಸಿಕೊಳ್ಳಿ. ಸೊಪ್ಪು ಬೇಯಿಸಿದ ನೀರನ್ನು ಎತ್ತಿಟ್ಟುಕೊಂಡು, ಸೊಪ್ಪನ್ನು ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ.
- ಪನೀರ್ ನ್ನು ಬೇಕಾದ ಸೈಜಿಗೆ ಕತ್ತರಿಸಿಕೊಂಡು ತವಾದ ಮೇಲೆ ಸ್ವಲ್ಪ ಎಣ್ಣೆ ಹಾಕಿ ಹೊಂಬಣ್ಣಕ್ಕೆ ಬೇಯಿಸಿಕೊಳ್ಳಿ.
- ಒಂದು ದಪ್ಪ ತಳದ ಬಾಣಲೆಯಲ್ಲಿ 5 – 6 ಟೇಬಲ್ ಸ್ಪೂನ್ ನಷ್ಟು ಎಣ್ಣೆ ಬಿಸಿಮಾಡಿ ಜೀರಿಗೆ ಸೇರಿಸಿ ಒಗ್ಗರಣೆ ಮಾಡಿಕೊಂಡು ತುರಿದ ಶುಂಟಿ – ಬೆಳ್ಳುಳ್ಳಿ ಸೇರಿಸಿ ಹಸಿ ವಾಸನೆ ಹೋಗುವಂತೆ ಹುರಿಯಿರಿ.
- ಇದಕ್ಕೆ ತುರಿದ ಈರುಳ್ಳಿ ಸೇರಿಸಿ ನಸು ಕಂದುಬಣ್ಣ ಬರುವವರೆಗೆ ಹುರಿಯಿರಿ.
- ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೋ, 1/4 ಟೀ ಸ್ಪೂನ್ ಉಪ್ಪು ಸೇರಿಸಿ ಮಿಕ್ಸ್ ಮಾಡಿ, ಮುಚ್ಚಳ ಮುಚ್ಚಿ ಬೇಯಿಸಿ.
- ಇದನ್ನು ಆಗಾಗ್ಗೆ ಕೈಯಾಡಿಸುತ್ತಿದ್ದು, ಮಿಶ್ರಣ ಎಣ್ಣೆ ಬಿಡತೊಡಗಿದಾಗ ಪಾಲಕ್ ಪೇಸ್ಟ್ ಸೇರಿಸಿ. ಬೇಕಾದಷ್ಟು ನೀರು, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಯಲು ಬಿಡಿ. ಪಾಲಕ್ ಸೊಪ್ಪು ಬೇಯಿಸಿದ ನೀರನ್ನೇ ಇಲ್ಲಿ ಬಳಸಬಹುದು.
- ಪಾಲಕ್ ಮಿಶ್ರಣಕ್ಕೆ ಕೊತ್ತಂಬರಿ ಪುಡಿ, ಗರಂ ಮಸಾಲಾ ಪುಡಿ ಹಾಗೂ ಅಚ್ಚಮೆಣಸಿನಪುಡಿ ಸೇರಿಸಿ ಕೈಯಾಡಿಸಿ 3 – 4 ನಿಮಿಷ ಕುದಿಸಿ ಇಳಿಸಿ.
- ತಯಾರಾದ ಪಾಲಕ್ ಗ್ರೇವಿಗೆ ರುಚಿಗೆ ತಕ್ಕಷ್ಟು ನಿಂಬೆರಸ ಸೇರಿಸಿ ಮಿಕ್ಸ್ ಮಾಡಿಕೊಂಡು ಪನೀರ್ ಪೀಸ್ ಗಳನ್ನು ಸೇರಿಸಿ ನಿಧಾನವಾಗಿ ಮಿಕ್ಸ್ ಮಾಡಿ.
- ಹಬೆಯಾಡುವ ಪಾಲಕ್ ಪನೀರ್ ನ್ನು ರೊಟ್ಟಿ, ಚಪಾತಿ ಅಥವಾ ಪೂರಿಯೊಡನೆ ಸರ್ವ್ ಮಾಡಿ.
ಟಿಪ್ಸ್:
- ಪನೀರ್ ತಯಾರಿಸುವಾಗ ಉಳಿಯುವ ನೀರನ್ನು ಚೆಲ್ಲದೆ ಇಟ್ಟರೆ ವಿವಿಧ ಗ್ರೇವಿಗಳಲ್ಲಿ ಬಳಸಲು ಚೆನ್ನಾಗಿರುತ್ತದೆ. ನಾನು ಇಲ್ಲಿ ಪನೀರ್ ತಯಾರಿಸಿದ ನೀರನ್ನೇ ಬಳಸಿದ್ದೇನೆ.
- ಅಚ್ಚಮೆಣಸಿನಪುಡಿಯ ಬದಲು ಹಸಿಮೆಣಸನ್ನು ಬೇಕಿದ್ದರೂ ಬಳಸಬಹುದು. ಹಸಿಮೆಣಸು ಬಳಸುವುದಾದರೆ ಶುಂಟಿ – ಬೆಳ್ಳುಳ್ಳಿ – ಹಸಿಮೆಣಸು ಇಷ್ಟನ್ನೂ ಸೇರಿಸಿ ನುಣ್ಣಗೆ ಪೇಸ್ಟ್ ಮಾಡಿಕೊಂಡು ಬಳಸಿ