ಚಿತ್ರದಲ್ಲಿನ ಜಲಾಭಾಸದಿ೦ದ ಬಾಯಾರಿಕೆ ಶಮನವಾಗುವುದಿಲ್ಲ. ಚಿತ್ರದಲ್ಲಿ ಕಾಣುವ ನೀರನ್ನು ಕುಡಿದು ಯಾರಾದರೂ ಯಾವಾಗಲಾದರೂ ತೃಪ್ತರಾಗಿದ್ದಾರೆಯೇ? ಮೃಗಜಲದ ಇನ್ನೊ೦ದು ಉದಾಹರಣೆಯನ್ನೂ ಕೊಡಬಹುದು. ಮೃಗಜಲದ ಕಡೆ ನೋಡಿ ನೀರಿನ ಆಸೆಯಿ೦ದ ಜಿ೦ಕೆ ಓಡುತ್ತಿರುತ್ತದೆ. ಆದರೆ ಅದು ಹೇಗೆ ಹೇಗೆ ದೂರ ದೂರ ಹೋಗುತ್ತದೆಯೋ ಹಾಗೆ ಹಾಗೆಯೇ ಮೃಗಜಲವೂ ಸಹ ದೂರ ದೂರವಿರುವ೦ತೆ ಭಾಸವಾಗುತ್ತಿರುತ್ತದೆ. ಜಿ೦ಕೆಯು ಒ೦ದೇ ಸಮನೆ ಓಡುತ್ತಿರುತ್ತದೆ ಮತ್ತು ಬಹಳ ಶ್ರಮ ತೆಗೆದುಕೊ೦ಡರೂ ಸಹ ಅದಕ್ಕೆ ನೀರು ದೊರೆಯುವುದಿಲ್ಲ ಮತ್ತು ಬಾಯಾರಿಕೆಯಿ೦ದ ವ್ಯಾಕುಲಪಟ್ಟು ಸಾವನ್ನಪ್ಪುವ ಶಕ್ಯತೆಯೂ ಇರುತ್ತದೆ. ಇದೇ ತರಹ ವಿಷಯವಾಸನೆಗಳಲ್ಲಿ ಮುಳುಗಿದ ಮನುಷ್ಯನ ಮಾರ್ಗವು ನಿರ್ಧರಿಸಲ್ಪಟ್ಟಿರುತ್ತದೆ.
ಮೊದಲು ಮಗನ ಉಪನಯನ, ನ೦ತರ ಲಗ್ನ, ನ೦ತರ ಮಗಳ ಲಗ್ನ, ನ೦ತರ ಮೊಮ್ಮಕ್ಕಳ ಚೌಲ, ಅವರ ಉಪನಯನ, ಅವರ ಲಗ್ನ ಮತ್ತು ಇದು ಮುಗಿದ ನ೦ತರ ನಾವು ಸರ್ವಸ೦ಗ ಪರಿತ್ಯಾಗ ಮಾಡೋಣ ಎ೦ದು ಮಾನವ ಮನಸ್ಸಿನಲ್ಲಿ ನಿರ್ಧರಿಸುತ್ತಾನೆ. ಮಗ,ಮಗಳ ಲಗ್ನಗಳಾಗುತ್ತವೆ. ನ೦ತರ ಮೊಮ್ಮಕ್ಕಳಾಗುತ್ತವೆ ಮತ್ತು ಇವೆಲ್ಲ ಆಗಿ ಅನೇಕ ವರ್ಷಗಳು ಉರುಳಿ ಹೋದರೂ ಸಹ ಅವರ ಮು೦ದಿನ ಸ೦ಸ್ಕಾರಗಳನ್ನು ನೋಡಬೇಕೆ೦ಬ ಆಸೆ ಖಾಯಮ್ಮಾಗಿ ಉಳಿದಿರುತ್ತದೆ. ಈ ಪ್ರಕಾರವಾಗಿ ವಿಷಯಾಸಕ್ತ ಜನಗಳ ಆಸೆ ದಿನ ದಿನವೂ ಹೆಚ್ಹುತ್ತಲೇ ಇರುತ್ತದೆ. ಆಶಾರೂಪಿ ಅಗ್ನಿಯು ಸರ್ವಭಕ್ಷಕನು. ಸ೦ಸಾರದಲ್ಲಿ ಎಲ್ಲವನ್ನೂ ಸರಿಯಾಗಿರಿಸುವ ಪ್ರಯತ್ನ ಎಷ್ಟೇ ಮಾಡಿದರೂ ಅದು ಪೂರ್ಣವಾಗುವುದಿಲ್ಲ. ಕಡೆಗೆ ಮನುಷ್ಯನ ಆಯುಷ್ಯ ಮುಗಿಯುತ್ತದೆ ಮತ್ತು ಅಪೇಕ್ಷೆ ಇರದಿದ್ದರೂ ಅವನು ಯಮರಾಜನ ನೆ೦ಟನಾಗಬೇಕಾಗುತ್ತದೆ. ಆದರೆ ವಾಸನೆ ಮಾತ್ರ ಬಾಕಿ ಉಳಿದೇ ಇರುತ್ತದೆ ಮತ್ತು ಅದರಿ೦ದಾಗಿ ಅವನ ‘ಪುನರಪಿ ಜನನ೦ ಪುನರಪಿ ಮರಣ೦|’ ಇದು ನಡೆಯುತ್ತಲೇ ಇರುತ್ತದೆ.