ಕ್ರಮವೊಂದು ಲಕ್ಷ್ಯವೊಂದುಂಟೇನು ಸೃಷ್ಟಿಯಲಿ? |
ಭ್ರಮಿಪುದೇನಾಗಾಗ ಕರ್ತೃವಿನ ಮನಸು? ||
ಮಮತೆಯುಳ್ಳವನಾತನಾದೊಡೀ ಜೀವಗಳು |
ಶ್ರಮಪಡುವುವೇಕಿಂತು ? – ಮಂಕುತಿಮ್ಮ || ೦೦೮ ||
ನಮ್ಮ ಸುತ್ತಲ ಸೃಷ್ಟಿಯನ್ನು ಒಮ್ಮೆ ಅವಲೋಕಿಸಿ ನೋಡಿದರೆ ಎಷ್ಟೊಂದು ವೈವಿಧ್ಯ ಪ್ರಬೇಧಗಳು ಕಣ್ಣಿಗೆ ಬೀಳುತ್ತವೆ ಎನ್ನುವುದು ಬರಿಯ ಊಹೆಯಳತೆಯಲ್ಲೂ ಹಿಡಿದಿಡಲು ಅಸಾಧ್ಯ. ಅವೆಲ್ಲವನ್ನು ಒಟ್ಟಾಗಿ ನೋಡಿದಾಗ ಕವಿಯ ಮನದಲ್ಲಿ ಮೂಡುವ ಪ್ರಶ್ನೆಯೆಂದರೆ – ಈ ಆಗಾಧ, ವೈವಿಧ್ಯಮಯ ಸೃಷ್ಟಿಯಲ್ಲಿ ಏನಾದರೂ ಕ್ರಮಬದ್ಧವಾದ ಯೋಜನೆಯೇನಾದರು ಇದೆಯೆ ? ಯಾವುದಾದರು ಅಂತಿಮ ಗುರಿ ಸಾಧನೆಯ ಉದ್ದೇಶವಿದೆಯೆ ? ಎಂಬುದು. ಹೊರನೋಟದಲ್ಲಿ ನೋಡಿದಾಗ ಒಂದಕ್ಕೊಂದು ಸಂಬಂಧವಿರದ ನೂರೆಂಟು ಅಸ್ತಿತ್ವಗಳನ್ನು ತೇಪೆ ಹಾಕಿ ಹೇಗೊ ಒಟ್ಟಾಗಿ ಪೇರಿಸಿಟ್ಟಂತೆ ಕಾಣುವ ಈ ಸೃಷ್ಟಿ ನಿಜವಾಗಿಯೂ ಯೋಜನಾಬದ್ದವಾಗಿ, ಕ್ರಮಬದ್ಧವಾಗಿ, ಸೃಜನಾತ್ಮಕವಾಗಿ ಸೃಷ್ಟಿಸಿದ್ದೆ ? ಅಥವಾ ಯಾವುದೊ ಗಳಿಗೆಯೊಂದರಲ್ಲಿ ಸೃಷ್ಟಿಕರ್ತನ ಮನದಲ್ಲಿ ಮೂಡಿಬಂದ ಭ್ರಮಾರೂಪದ ಅಡ್ಡಾದಿಡ್ಡಿ ಆಲೋಚನೆಯೊಂದು ಮೂರ್ತರೂಪಾಗಿ ಈ ರೀತಿಯ ಅವ್ಯವಸ್ಥಿತವಾಗಿ ಕಾಣುವ ಸೃಷ್ಟಿಯುಂಟಾಯಿತೆ ? ಸೃಷ್ಟಿಕರ್ತನನ್ನು ಮಮತಾಮಯಿ, ಕರುಣಾಮಯಿ, ತನ್ನ ಸೃಷ್ಟಿಯ ಮೇಲೆ ಅಪಾರ ಕಾಳಜಿಯುಳ್ಳವನು ಎಂದೆಲ್ಲಾ ಹೇಳುತ್ತಾರೆ. ಅವನು ಅಷ್ಟೆಲ್ಲ ವಿಶೇಷಣಗಳಿಗೆ ನಿಜಕ್ಕೂ ನ್ಯಾಯ ದೊರಕಿಸಬೇಕಿದ್ದರೆ ತಾನು ಸೃಷ್ಟಿಸಿದ ಜೀವಗಳು ಶ್ರಮ ಪಡದಂತೆ, ಯಾತನೆಗೊಳಗಾಗದಂತೆ, ಸುಖ-ಶಾಂತಿ-ಸಮೃದ್ಧಿಯಿಂದ ನೆಮ್ಮದಿಯಾಗಿರುವಂತೆ ಕಾಪಾಡಿಕೊಂಡು ಬರಬೇಕಿತ್ತಾಲ್ಲಾ ? ಯಾಕಾ ಕಾಳಜಿ ಕಾಣುವುದಿಲ್ಲ ? ಎಂದು ಪ್ರಶ್ನಿಸುತ್ತಾನೆ ಮಂಕುತಿಮ್ಮ.
ಇಲ್ಲಿ ಮತ್ತೆ ಗಮನಿಸಬಹುದಾದ ಅಂಶವೆಂದರೆ ಮೊದಲೆರಡು ಸಾಲುಗಳು ಗಹನ ತಾತ್ವಿಕವಾದ ಸೃಷ್ಟಿಕ್ರಮದ ಮಾತಾಡಿದರೆ, ಕೆಳಗಿನೆರಡು ಸಾಲುಗಳು ಆ ಗಹನತೆಯನ್ನು ಲೌಕಿಕಕೆ ಜೋಡಿಸುವ ಪ್ರಾಪಂಚಿಕ ಯಾತನೆಗಳನ್ನು ಕುರಿತು ಪ್ರಶ್ನಿಸುತ್ತದೆ. ಹೀಗೆ ಮತ್ತೆ ಗಹನದಿಂದ ಸರಳಕ್ಕೆ ಕೊಂಡಿಯಾಗುವ ಕವಿಭಾವ ಮತ್ತೆ ಎದ್ದು ಕಾಣುತ್ತದೆ. ಅವೆರಡರ ನಡುವಿನ ದೂರವನ್ನು ಓದುಗರ ನಿಲುಕಿಗೆ ಬಿಟ್ಟುಬಿಡುವುದರಿಂದ ಪ್ರತಿಯೊಬ್ಬರೂ ಆ ಕಂದಕವನ್ನು ತಮ್ಮ ತಮ್ಮ ಜ್ಞಾನ, ವಿವೇಚನೆಯನುಸಾರ ತುಂಬಿಸಿಕೊಳ್ಳಬಹುದು. ಬಹುಶಃ ಇದರಿಂದಾಗಿಯೆ ಈ ಪದ್ಯಗಳು ಪ್ರತಿಯೊಬ್ಬರಿಗು ಬೇರೆಬೇರೆಯದೆ ಆದ ಅರ್ಥವನ್ನು ಸ್ಪುರಿಸುವುದು – ಬಲ್ಲವರಿಗೆ, ಪಂಡಿತರಿಗೆ ಆ ಅಂತರ ನೂರಾರು ಮೈಲುದ್ದದ ಆಧ್ಯಾತ್ಮಿಕ, ವೇದಾಂತಿಕ ಸರಕಿಂದ ತುಂಬಿಸಿಡಬಲ್ಲ ರಾಜಮಾರ್ಗವಾಗಿ ಬೆರಗುಗೊಳಿಸಿದರೆ, ಅದಾವುದು ಬೇಕಿಲ್ಲದ ಪಾಮರನಿಗೆ ನಡುವಿನ ಅಂತರವೆ ಗೋಚರಿಸದೆ, ಮೊದಲು ಭಗವಂತನ ಮಾತಾಡಿ ನಂತರ ಲೌಕಿಕಕ್ಕೆ ನಂಟು ಹಾಕಿದ ಮಾಮೂಲಿ ಸಾಲುಗಳಾಗಿಬಿಡುತ್ತವೆ.
ಆದರೆ ಅದೇ ಕವಿ ದೃಷ್ಟಿಯಲ್ಲಿ ಮೊದಲೆರಡು ಸಾಲುಗಳಲ್ಲಿ ಆ ಪರಮ ಶಕ್ತಿಯ ಕಾರ್ಯ, ವಿಕ್ರಮ, ಪರಾಕ್ರಮವನ್ನು ಶ್ಲಾಘಿಸಿದಂತೆ ಕಂಡರೂ, ಕೊನೆಯೆರಡು ಸಾಲುಗಳಲ್ಲಿ ಆ ಸಾಧನೆಯ ಫಲಿತದಲ್ಲಡಗಿರುವ ಕುಂದು, ಕೊರತೆ, ಹುಳುಕು, ದೋಷಗಳನ್ನು ಎತ್ತಾಡುವ ವಿಮರ್ಶೆ, ಟೀಕೆಯಾಗಿಬಿಡುತ್ತದೆ. ಆ ಶ್ಲಾಘನೆ, ಟೀಕೆ, ವಿಮರ್ಶೆಗಳೂ ಕೂಡ ಬಹುತೇಕ ಪ್ರಶ್ನಾರೂಪದಲ್ಲಿರುವುದರಿಂದ ಅದು ಕವಿ ದೇವರಿಗೆ ಹಾಕಿದ ಪ್ರಶ್ನೆಯೂ ಆಗುತ್ತದೆ, ಸ್ವಯಂ ತನಗೆ ಹಾಕಿಕೊಂಡದ್ದೂ ಆಗಿಬಿಡುತ್ತದೆ, ಅಂತಿಮವಾಗಿ ಅದೆ ಪ್ರಶ್ನೆ ಓದುಗ ಮನಕ್ಕು ದಾಟಿಕೊಂಡುಬಿಡುತ್ತದೆ ಅವರಿಗರಿವಿಲ್ಲದಂತೆ! ಅದೇ ಇಲ್ಲಿನ ಬಹುತೇಕ ಪದ್ಯಗಳಲ್ಲಿರುವ ಒಂದು ಸಾಮಾನ್ಯ ಅಂಶ.FormatಬದಿಗೆPosted onನವೆಂ