ಅಕ್ಷರರೂಪ :ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ. ಪುಣೆ.

 

ನೀನು ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೋ. ಶಾಂತನಾಗು. ಏನಾಗಬೇಕೋ ಹಾಗೇ ಆಗುತ್ತದೆ. ಆಗುವದು ಅಪರಿಹಾರ್ಯವೆಂದಾದ ಮೇಲೆ ಮನಸ್ಸಿಗೇಕೆ ಹಚ್ಚಿಕೊಳ್ಳಬೇಕು?
(ಇಸವಿ ಸನ ೧೯೪೬ರಲ್ಲಿ ಕುಮಾರಿ ರಾಧಾಳ ತಂದೆಗೆ ಅವಳ ಲಗ್ನದ ಸಂದರ್ಭದಲ್ಲಿ ಬರೆದ ಈ ಪತ್ರದ ಮುಂದುವರಿದ ನಾಲ್ಕನೆಯ ಕೊನೆಯ ಭಾಗ)

ನನಗೆ ರಾಧೆಯ ಅಂತರಂಗ ಗೊತ್ತಿದೆ. ಆದರೆ ಏನೂ ಹೇಳಲು ಅವಕಾಶ ಇಲ್ಲಾಗಿದೆ. ನಂತರ ಬಂದ ಮೇಲೂ ನನಗೆ ಸುಮ್ಮನಿರಲಾಗಲಿಲ್ಲ. ‘ನೀನು ಏನಾದರೂ ದಬಾಯಿಸಿ ಒತ್ತಾಯದಿಂದ ಈ ಲಗ್ನ ಕೂಡಿಸಿದ್ದು ಅಲ್ಲವಲ್ಲ?’ ಎಂದು ಕೇಳಿದೆ. ಆ ವೇಳೆಯೂ ನಿನ್ನ ಮೊದಲಿನ ಅದೇ ಉತ್ತರವೇ ಬಂತು. ನಂತರ ಕೆಲ ದಿವಸಗಳ ಮೇಲೆ ಆ ಹುಡುಗ ಬಂದ. ಅವನೂ ‘ನಮ್ಮದು ಇಬ್ಬರಿದೂ ನಿರ್ಣಯ ಆಗಿದೆ’ ಎಂದು ಹೇಳಿದ. ‘ಚಿ.ರಾಧೆಯ ವಿಚಾರ ನಿನಗೆ ಗೊತ್ತಿದೆಯಲ್ಲಾ?’ ಎಂದು ನಾನು ತಿರುಗಿ ಕೇಳಿದೆ. ಅದಕ್ಕೆ ‘ನಾವು ಬಹಳ ಕಾಲ ಪರಸ್ಪರ ಮಾತನಾಡಿದ್ದೇವೆ’ ಎಂದು ಅವನು ಹೇಳಿದನು.
ಇದು ಏನು ಗೌಡಬಂಗಾಲ? ಏನೂ ಅರ್ಥವಾಗಲಿಲ್ಲ!
ದೇವರ ಮೇಲೆ ಭಾರ ಹಾಕಿ ನಾನು ಸುಮ್ಮನೇ ಉಳಿದುಬಿಟ್ಟೆ. ಯೋಗವಿದ್ದರೆ ಆಗುತ್ತದೆ ಎಂದು ಸಮಾಧಾನ ಮಾಡಿಕೊಂಡೆ. ಮನೋದೇವತೆ ಯಾವುದೇ ಸೂಚನೆ ಕೊಡಲಿಲ್ಲ. ಹುಡುಗನ ತಂದೆ-ತಾಯಿಗೆ ಆಶೀರ್ವಾದ ಕೊಡುವಾಗ ಕೂಡ ಅಥವಾ ಹುಡುಗನಿಗೆ ಮಂತ್ರಾಕ್ಷತೆ ಕೊಡುವಾಗಲೂ ಈ ಸಂಬಂಧದ ದೃಷ್ಟಿಯಿಂದ ಆಶೀರ್ವಾದ ಕೊಟ್ಟಿಲ್ಲ; ಇದು ಗೋಪ್ಯದ ಸಂಗತಿ. ‘ಲಗ್ನವಾಗುವ ವರೆಗೆ ನೋಡೋಣ. ನಿಶ್ಚಯ ಆಯಿತು ಅಂದರೆ ಏನಾಯಿತು? ದೈವೀ ಯೋಜನೆ ಹೇಗಿದೆ ಎಂಬುವದು ಯಾರಿಗೆ ಗೊತ್ತು?’ ಎಂದು ಚಿ.ಸೌ. ಸೀತೆಯೊಡನೆ ಹೇಳೂ ಬಿಟ್ಟೆ. ನಿನ್ನ ಮತ್ತು ರಘುನಾಥನ ಮಾತು ಕೇಳಿದಂತೆ ಅವರವರ ಅಧಿಕಾರಕ್ಕನುಸಾರ ಪ್ರವೃತ್ತಿ ಅಥವಾ ನಿವೃತ್ತಿ ಅವರವರ ಪಾಲಿಗೆ ಬರುತ್ತದೆ. ನನ್ನ ಕಡೆಯಿಂದಾಗುವ ಸಹಾಯವನ್ನು ಇಬ್ಬರಿಗೂ ಮಾಡುತ್ತೇನೆ. ‘ಇವರು ಇದೇ ಮಾರ್ಗದಲ್ಲಿ ಹೋಗಬೇಕು ಎಂದು ಅವರ ಮನೋವೃತ್ತಿಗೆ ವಿರುದ್ಧ ನಿರ್ಬಂಧ ಹಾಕುವದು ಹುಚ್ಚುತನವೇ’, ಎಂದು ಈ ಮಾತುಕತೆಗಳಿಂದ ನನ್ನ ಮನಸ್ಸಿನಲ್ಲಿ ಬಂತು. ಮತ್ತು ನಾನು ತಟಸ್ಥನಾಗಿ ಉಳಿದೆ. ಬಹುತೇಕ ಇದು ನನ್ನ ತಪ್ಪಿರಬಹುದು.
ಮುಂದೆ ದೇವತೆಗಳ ಮುಖದಿಂದ ನಾನು ಯಾವಾಗ ಕೇಳಿದೆನೋ ಆಗ ರಾಧೆಗೆ ಪತ್ರ ಹಾಕಿದೆ. ರಾಧೆಯ ಮನಸ್ಸಿನಲ್ಲಿ ಇಲ್ಲದೇ ಹೋದರೆ ಆ ಹುಡುಗನ ಜೀವನ ಯಾಕೆ ವ್ಯರ್ಥವಾಗಬೇಕು? ಇರಲಿ. ‘ಈಶ್ವರೇಚ್ಛಾ ಬಲೀಯಸಿ’
ಆ ಹುಡುಗನಿಗೆ ನಾನು ಪತ್ರ ಹಾಕಿದ್ದೇನೆ. ಅವನು ಬಂದ ಮೇಲೆ ಅವನ ಮನಸ್ಥಿತಿಯನ್ನು ಅರಿತು, ವಿಕೋಪಕ್ಕೆ ಹೋಗದಂತೆ, ಅದೇನು ಮಾಡಲಿಕ್ಕೆ ಬರುತ್ತದೆಯೋ ಎಂದು ನೋಡುತ್ತೇನೆ. ದೇವತೆಗಳದ್ದು ನಿಜವಾದರೆ ಏನು ಮಾಡುವದು?
ಚಿ. ಮೀರಳ ಹಣೆಬರಹದಂತೆ, ಹೇಗಿದ್ದರೂ, ಮೊದಲಿಂದಲೇ ಅವಳ ಮನಸ್ಸಿನಂತೆಯೇ ಲಗ್ನ ಮಾಡಿಕೊಳ್ಳುವದೆಂದೇ ಆಗಿದೆ. ಈ ಮುಹೂರ್ತದಲ್ಲಿಯೇ ಕೂಡಿಸಿದ ದ್ರವ್ಯವನ್ನು ಉಪಯೋಗಿಸಿ ಲಗ್ನ ಮಾಡಿ ಮುಗಿಸಿದರೆ ಆಯಿತು. ಮದುವೆಗೆಂದು ಕೂಡಿಸಿದ ಹಣವನ್ನೇನು ಮಾಡಬೇಕು ಎಂಬ ಪ್ರಶ್ನೆ ಇರುವದಿಲ್ಲ.
ಚಿ. ರಾಧೆಗೆ ಲಗ್ನ ಮಾಡಿಕೊಳ್ಳುವ ಇಚ್ಛೆಯೇ ಇದ್ದ ಪಕ್ಷದಲ್ಲಿ, ಈಗಲೂ ಲಗ್ನ ಮಾಡಿಕೊಳ್ಳದೇ ಇರದಿರುವ ಬಗ್ಗೆ ಆಗ್ರಹ ‘ಇಲ್ಲ’ ಎಂದಾದರೆ, ವಿಷಯೇಚ್ಛೆ ಇದ್ದರೆ, ಸಂಸಾರವಾಸನೆ ಇಲ್ಲದೇ ಇರುವದರಿಂದ ಪರಸ್ಪರ ವಿರುದ್ಧ ಸ್ವಭಾವದಿಂದಾಗಿ ಇಬ್ಬರಿಗೂ ಹೊಂದಾಣಿಕೆ ಆಗುವದಿಲ್ಲ ಮತ್ತು ಇಬ್ಬರಿದೂ ಸಂಸಾರ ಸುಖಮಯವಾಗುವದಿಲ್ಲ. ‘ಎಣ್ಣೇನೂ ಹೋಯಿತು, ತುಪ್ಪವೂ ಹೋಯಿತು, ಆದರೆ ಬಂತು ಧೂಪದ ಪಾತ್ರೆ’ ಎಂದಾಗಬಾರದು ಎಂದು ಪತ್ರ ಬರೆದೆ.
ಸಮ್ಮತಿಯಿಂದ ಆಗುತ್ತಿದ್ದರೆ ಆಗಲಿ. ನಾನು ಯಾಕೆ ಅಡ್ಡ ಬರಲಿ? ‘ಶಂತನೋತು ಪ್ರಭುರೀಷಃ’ ಎಂದುಕೊಂಡು ನನ್ನಷ್ಟಿಗೆ ನಾನು ಇದ್ದುಬಿಡುತ್ತೇನೆ. ವಿಧಿಯಲ್ಲೇನು ಬರೆದಿದೆಯೋ ಹಾಗೇ ಆಗುತ್ತದೆ. ನೀನು ಮನಸ್ಸನ್ನು ಸ್ಥಿಮಿತದಲ್ಲಿಟ್ಟುಕೋ. ಶಾಂತನಾಗು. ಏನಾಗಬೇಕೋ ಹಾಗೇ ಆಗುತ್ತದೆ. ಆಗುವದು ಅಪರಿಹಾರ್ಯವೆಂದಾದ ಮೇಲೆ ಮನಸ್ಸಿಗೇಕೆ ಹಚ್ಚಿಕೊಳ್ಳಬೇಕು?
‘ವಿವೇಕದಿಂದ ಸಿಕ್ಕುವದಿಲ್ಲ ಎಂಬುದು ಯಾವುದೂ ಇಲ್ಲ. ಏಕಾಂತದಲ್ಲಿ ವಿವೇಕ ಬುದ್ಧಿಯನ್ನು ಧರಿಸಿ ಸುಮ್ಮನಿದ್ದು ಬಿಡಬೇಕು’ ‘ಅವಿವೇಕದಿಂದ ಅಹಿತವೇ ಆಗುತ್ತದೆ’ ಆದ್ದರಿಂದ ‘ಆ ಮಾರ್ಗವನ್ನು ಬಿಟ್ಟು ಬಿಡಬೇಕು’
ಬಹುತೇಕ ಚಿ. ದತ್ತನ ಮುಂಜಿಯು ಮುಗಿದಿರಬಹುದು.
‘ಸರ್ವೇ ಜನಾಃ ಸುಖಿನೋ ಭವಂತು’
‘ಇತಿ ಶಮ್’
ಶ್ರೀಧರ
ಚಿ. ರಘುನಾಥನ ಭೆಟ್ಟಿಯಾಗಿ ಲಗ್ನದ ಬಗ್ಗೆ ನಿಶ್ಚಿತವಾಗಿ ತಿಳಿಸುತ್ತೇನೆ. ಬೇಗನೆ ಬರಲು ಹೇಳಿದ್ದೇನೆ. ಚಿ. ರಾಧೆಯ ಅಂತರಂಗ ನಿದರ್ಶನದ ಪತ್ರ ಬರಲಿ.
(ಮಾತೋಶ್ರೀ ರಾಧೆಗೆ ಸಂಬಂಧಿಸಿದ ಪತ್ರ ಸರಣಿ ಮುಂದುವರಿಯುವದು)

RELATED ARTICLES  ಬಸಳೆ ಸೊಪ್ಪಿನ ಬೆಂದಿ ಮಾಡೋದು ಹೇಗೆ?