ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ.ಪುಣೆ

‘ಬ್ರಹ್ಮದೇವರ ಬರಹ ಅಳಿಸಿ ಹಾಕಲು ಯಾರು ಸಮರ್ಥರಿದ್ದಾರೆ?’ ಇದು ಶ್ರೀಧರರ ಪ್ರಶ್ನೆ.
(ಇಸವಿ ಸನ ೧೯೪೭ರ ಸುಮಾರಿಗೆ ಮಾತೋಶ್ರೀ ರಾಧೆಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಗಿರಿನಾರ
ಶಕೆ ೧೮೬೯
ಸೌ. ಚಿ. ರಾಧೆಗೆ ಆಶೀರ್ವಾದ,
ನನ್ನಿಂದ ಪತ್ರ ಬಂದಿಲ್ಲ ಎಂದು ದಿನವೂ ದಾರಿ ಕಾಯ್ದು ದಣಿದಿರಬಹುದು. ನಿನ್ನ ಪತ್ರ ಕಾಣೆಯಾಗಿ ಹೋಗಿತ್ತು. ನಿನ್ನ ವಿಳಾಸ ನನ್ನ ಲಕ್ಷದಲ್ಲಿರದೇ ಇದ್ದದ್ದರಿಂದ ಪತ್ರ ಕಳಿಸಲು ಆಗಲಿಲ್ಲ. ಮೊನ್ನೇನೇ ಚಿ. ಅಯ್ಯಾ ಹುಡುಕಿ ಕೊಟ್ಟ. ನಿನ್ನೇನೇ ಬರೆಯಲು ಪ್ರಾರಂಭಿಸಿದೆ. ಆದರೆ ಪೂರ್ಣಮಾಡಲು ಆಗಲಿಲ್ಲ. ಹಾಗಾಗಿ ಇಂದು ಪತ್ರ ಪೂರ್ಣಮಾಡಲು ಕುಳಿತೆ.
ಆಯಿತು! ಬ್ರಹ್ಮನೇ ಅಡ್ಡ ಬಂದರೂ ಆಗುವದು ಆಗೇ ಆಗುತ್ತದೆ! ಈ ಕೆಳಗಿನ ಮಾತಿನಂತೆಯೇ ಆಯಿತು.
‘ಲಿಖಿತಮಪಿ ಲಲಾಟೇ ಪ್ರೋಜ್ಝಿ ತು ಕಃ ಸಮರ್ಥಃ?’
‘ಬ್ರಹ್ಮದೇವರ ಬರಹ ಅಳಿಸಿ ಹಾಕಲು ಯಾರು ಸಮರ್ಥರಿದ್ದಾರೆ?’
ಎಂದು ಈ ವಾಕ್ಯದಲ್ಲಿ ಕೇಳಿದ್ದಾರೆ. ಅಂದರೆ ಯಾರೂ ಇಲ್ಲ ಎಂಬುದನ್ನು ಇದರಿಂದ ತೋರಿಸುತ್ತಿದ್ದಾರೆ.
ಪರಮಾತ್ಮ ಸರ್ವಜ್ಞನಿದ್ದಾನೆ. ಅದೆಲ್ಲೋ ಸಂಸಾರದ ವಾಸನೆ ನಿನ್ನ ಅಂತಃಕರಣದಲ್ಲಿ ಅವಿತುಕೊಂಡಿತ್ತು ಮತ್ತು ಸಂಸಾರದ ಆಘಾತ ಅನುಭವಿಸಿದ ಹೊರತು ಆ ವಾಸನೆ ನಷ್ಟವಾಗುವದು ಶಕ್ಯವಿಲ್ಲವಾಗಿರಬೇಕು. ಅದಕ್ಕಾಗಿಯೇ ಅವನು ಮತ್ತೆ ವಾಸನೆ ಇಡಬಾರದು ಎಂದು ಸಂಸಾರದಲ್ಲಿ ಹಾಕಿದ್ದಾನೆ. ಇದನ್ನು ದೇವರು ಒಳ್ಳೆಯದಕ್ಕೇ ಮಾಡುತ್ತಾನೆ.ಸುಖಕ್ಕೋಸ್ಕರ ಸಂಸಾರವಲ್ಲ. ಸುಖಕ್ಕೋಸ್ಕರ ಸಂಸಾರ ಮಾಡುವದಲ್ಲ. ಸುಖ-ದುಃಖದಿಂದ ಸಂಸಾರದ ವಾಸನೆ ಹೋಗಲಿ, ಸಂಸಾರದ ಬಗ್ಗೆ ವೈರಾಗ್ಯ ದೇಹಕ್ಕೆ ನಾಟಲಿ, ನೋಡಿ ನೋಡಿ ಮನಸ್ಸು ಹೇಸಿಕೊಳ್ಳುವಂತೆ, ಸಂಸಾರ ಸುಖದ ಬಗ್ಗೆ ಮನಸ್ಸು ಹೇಸಿಕೊಳ್ಳಬೇಕು … ಇದಕ್ಕಾಗಿಯೇ ಸಂಸಾರ ಮಾಡಬೇಕಾಗದ್ದಿರುತ್ತದೆ.

RELATED ARTICLES  ಸ್ವಾದಿಷ್ಟವಾದ ರುಚಿಕರ ಹಲಸಿನ ಕಾಯಿಯ ಪಲ್ಯ…!!

‘ಯಾರು ಸಂಸಾರ ದುಃಖದಲ್ಲಿ ನೊಂದನೋ, ಯಾರು ತ್ರಿವಿಧ ತಾಪದಿಂದ ಹುರಿಯಲ್ಪಟ್ಟನೋ ಅವನೇ ಪಾರಮಾರ್ಥದ ‘ಅಧಿಕಾರಿ’ಯಾಗುತ್ತಾನೆ. ಸಂಸಾರಸಂಗದಿಂದ ಸುಖವಾಯಿತು ಎಂಬುದನ್ನು ಯಾರೂ ನೋಡಿಲ್ಲ, ಕೇಳಿಲ್ಲ!’
ನ್ಯೂನ್ಯತೆ, ಅಡಚಣಿ, ದುಃಖ, ಶೋಕ, ಕಳಕಳಿಗಳಿಂದಲೇ ಸಂಸಾರ ತುಂಬಿಕೊಂಡಿದೆ. ಹೇಗೆ ಉರಿ ಬಿಸಿಲು ಮಳೆಗಾಲದಲ್ಲಿನ ಸೂರ್ಯನಂತೆ ಕೆಲ ಕಾಲ ಸುಖದಂತೆ ಭಾಸವಾಗುವದೋ, ಹಾಗೇ, ವಿಷಯೀ ಮನುಷ್ಯನಿಗೆ ಮೊದ ಮೊದಲು ಕೆಲಕಾಲ ವಿಷಯಸುಖದ ದಿನಗಳು ಭ್ರಾಂತಸ್ಥಿತಿಯಿಂದಾಗಿ ಸವಿಯೆನಿಸಹತ್ತುತ್ತೋ ಇಲ್ಲವೋ, ಅಷ್ಟರಲ್ಲೇ, ಅದೇ ಮುಂದೆ ಹರಡಿ ಹಬ್ಬಿರುವ ಕೊರತೆ, ಚಿಂತೆ ಮುಂತಾದವುಗಳಿಂದ ಅದೇ ತನ್ನ ಭೀಷಣ ಸ್ವರೂಪದಿಂದ ಕಾಣಹತ್ತುತ್ತದೆ. ಸಂಸಾರದಲ್ಲಿ ಧುಮುಕುವ ಮೊದಲಿನ ಸಂಸಾರಸುಖದ ಚಿತ್ತಾಕರ್ಷಕ ಗಾಳಿ ಗೋಪುರ, ಸಂಸಾರದಲ್ಲಿ ಬಿದ್ದ ಮೇಲೆ ಹೆಚ್ಚು ದಿನ ಇರುವದಿಲ್ಲ. ‘ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ’ ಎಂದು ಹೇಳುತ್ತಾರಲ್ಲಾ ಅದೇ ಪರಿಸ್ಥಿತಿ ಇಲ್ಲಿದೆ.
ಮಗಾ!
ನಿನ್ನ ಮನಸ್ಸಿನಲ್ಲಿರುವ ಸಂಸಾರ ವಾಸನೆಯನ್ನು ತೊಳೆದು ಹಾಕಲು ಸಂಸಾರದಲ್ಲಿಯ ದುಃಖವೇ ಸಾಬೂನು ಎಂದು ಗ್ರಹಿಸಿ, ಸಂಸಾರ ತಾಪತ್ರಯದಿಂದ ದುಃಖಿಯಾಗದೇ, ವಿವೇಕರೂಪಿಯೆಂಬ ಶುದ್ಧ ನೀರಿನಿಂದ ಮನಸ್ಸನ್ನು ಶುದ್ಧ ಮಾಡುವದಕ್ಕೆ ಮತ್ತು ವಾಸನಾ ಶೂನ್ಯನಾಗುವದಕ್ಕೆ ದಿನವೂ ಹೊಸ ಉತ್ಸಾಹದಿಂದ ನಡೆ. ಜಗತ್ತಿನ ಬವಣೆಗಳೆಲ್ಲ, ದುಃಖರೂಪೀ ಸಂಸಾರಬೀಜಗಳನ್ನು ಹುರಿದು ನಿಷ್ಕ್ರಿಯಗೊಳಿಸುವ ಕಾರ್ಯವನ್ನೇ ದಿನವೂ ಮಾಡುತ್ತಿವೆ ಎಂದುಕೊಂಡು, ನಿತ್ಯವೂ ಹೊಸ ಉತ್ಸಾಹದಿಂದ ಇರು!
ಮಗಾ!
ಸ್ವರೂಪದ ದೃಷ್ಟಿಯಿಂದ ನಿನ್ನಲ್ಲಿ ದುಃಖವೆನ್ನುವದು ಪ್ರವೇಶ ಮಾಡಲಿಕ್ಕೇ ಶಕ್ಯವಿಲ್ಲ. ಇರುವೆಯ ಶ್ವಾಸದಿಂದ ಹೇಗೆ ಗುಡ್ಡ ಒಂದಿಂಚೂ ಸರಿಯುವದಿಲ್ಲವೋ, ಹಾಗೇ ನಿಷ್ಪಾಪ- ನಿತ್ಯಾನಂದ ಸ್ಥಿತಿ, ಸಂಸಾರ ದುಃಖದಿಂದ ತಿಲ ಮಾತ್ರವೂ ಅಲುಗುವದಿಲ್ಲ.
‘ರಾಜ ತನ್ನ ರಾಜಠೀವಿಯಲ್ಲಿ ಸುಮ್ಮನೇ ಇದ್ದಾಗಲೂ, ಎಲ್ಲ ಕಾರುಭಾರ ತಾನೇ ತಾನಾಗಿ ನಡೆದಿರುತ್ತದೆ’ … ಅದೇ ರೀತಿ, ಸ್ವರೂಪದ ಆನಂದದಿಂದ ಯಾವಾಗಲೂ ನೀನು ಪ್ರಸನ್ನನಾಗಿದ್ದರೆ ಶ್ರುತಿಯಲ್ಲಿ ಹೇಳಿದಂತೆ ಎಲ್ಲ ದೇವತೆಗಳೂ ನಿನಗೆ ಅನುಕೂಲವಾಗಿಯೇ ನಡೆಯುತ್ತಾರೆ.
‘ಯಾರಿಗೆ ಶ್ರೀಗುರುಬೋಧವಾಗಿದೆಯೋ ಅವರಿಗೆ ಸಂಸಾರದ ಕೊಂಡಿಯಿಲ್ಲ; ಸ್ವರೂಪಾನಂದದಲ್ಲಿಯೇ ಸಮರಸವಾಗಿ ತೇಲುತ್ತಿರುತ್ತಾರೆ’
ತಲೆಯ ಮೇಲೆ ಮನೆಯ ಸೂರಿರುವಾಗ ಮನುಷ್ಯನಿಗೆ ಮಳೆ ಹೇಗೆ ತಾಗುವದೇ ಇಲ್ಲವೋ, ಹಾಗೆಯೇ ಶ್ರೀಗುರುಬೋಧದ ಆಶ್ರಯದ ಸುರಕ್ಷಿತ ಸ್ಥಳದಲ್ಲಿ, ಆತ್ಮಸ್ವರೂಪದ ನಿಷ್ಠೆಯಲ್ಲಿರುವಾಗ, ಸಂಸಾರದ ದುಃಖದ ಕಲ್ಪನೆಯೇ ಇರುವದಿಲ್ಲ.
‘ನಾನು’ ಎನ್ನುವ ನಿನ್ನ ಅನುಭವ, ಆನಂದಪೂರ್ಣವಾಗಿರುವ ನಿನ್ನದೇ ಮಂಗಲ ಸ್ವರೂಪದಿಂದಲೇ ಉದ್ಭವಿಸಿ, ನಿನ್ನ ಸ್ವರೂಪದ ಅರಿವಿನಿಂದ, ಸುಖರೂಪವೇ ಆಗಿದೆ …. ಈ ಪರಮಸತ್ಯವನ್ನು ಎಂದಿಗೂ ಮರೆಯದಿರು. ಇದೇ ಗುರುವಿನ ಸಂಕೇತ; ಮೋಕ್ಷಸುಖದ ಈ ತಾಯ್ಮನೆಯ ವಾಸವನ್ನು ಸರ್ವಥಾ ಬಿಡುವದು ತರವಲ್ಲ. ಇರಲಿ.
ಶ್ರೀಗುರು ಪರಮಾತ್ಮನ ಸಂಪೂರ್ಣ ಕೃಪೆ ನಿನ್ನ ಮೇಲಿರಲಿ; ಎರಡೂ ಕುಲ ನಿನ್ನಿಂದ ಉದ್ಧಾರವಾಗಲಿ. ಎಲ್ಲ ದುಃಖ – ಶೋಕ ಅಳಿಸಿಹೋಗಲಿ. ನಿನ್ನ ಮಹದ್ಭಾಗ್ಯ ಉದಯವಾಗಲಿ.
||ಇತಿ ಶಮ್||
||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ..

RELATED ARTICLES  ನಾನು ಇದರಲ್ಲಿ ಹೇಳುವದೇನಿದೆ? ಎಂದರು