ಅಕ್ಷರರೂಪ:ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ .ಪುಣೆ.

 

ಸ್ವರ್ಗಾಶ್ರಮ ಒಬ್ಬ ಸಾಧಕನಿಗೆ ಮತ್ತು ಸಿದ್ಧರಿಗೂ ಕೂಡ ಏಕಾಂತದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವದಕ್ಕೆ, ಎಲ್ಲ ದೃಷ್ಟಿಯಿಂದಲೂ ಅತ್ಯಂತ ಅನುಕೂಲ ಮತ್ತು ಅತಿಸುಂದರ ಸ್ಥಳವಾಗಿದೆ!
(ಇಸವಿ ಸನ ೧೯೪೬ರ ಸುಮಾರಿಗೆ ಶ್ರೀ ನಿರ್ವಾಣಜೀ, ಹೃಷೀಕೇಶ, ಇವರಿಗೆ ಬರೆದ ಪತ್ರ)

ಸ್ವರ್ಗಾಶ್ರಮ
||ಓಂ ನಮೋ ಭಗವತೇ ಶ್ರೀಸಮರ್ಥಾಯ||
ಶ್ರೀ ಬದ್ರಿಕಾಶ್ರಮದಿಂದ ವಿಜಯದಶಮಿಯ ದಿನ ಹೊರಟು ಕಾರ್ತೀಕ ವದ್ಯ ೬ಕ್ಕೆ ಸ್ವರ್ಗಾಶ್ರಮಕ್ಕೆ ಬಂದು ತಲುಪಿದೆ. ಶ್ರೀಮಹಾದೇವಜೀ ಎಂಬ ಹೆಸರಿನ ಒಬ್ಬ ಸನ್ಯಾಸಿಗಳು ದಾರಿಯಲ್ಲಿ ಸಿಕ್ಕಿ, ತುಂಬಾ ಆದರದಿಂದ ತನ್ನ ಸ್ಥಳಕ್ಕೆ ಕರೆದುಕೊಂಡು ಹೋದರು. ಶ್ರೀಬದರೀನಾರಾಯಣದಲ್ಲೇ ಅವರ ಪರಿಚಯವಾಗಿತ್ತು. ಇಲ್ಲಿಯ ಜನರು ಇವರ ಮೇಲೆ ತುಂಬಾ ನಿಷ್ಠೆ ಇಟ್ಟುಕೊಂಡಿದ್ದಾರೆ. ೧೦-೧೨ ಸಾವಿರ ಖರ್ಚು ಮಾಡಿ ಅನೇಕ ಶಿವಾಲಯಗಳನ್ನು ಕಟ್ಟಿಸಿದ್ದಾರೆ. ಆಲಮೋಡಾ, ರಾಣೀಖೇತ, ನೈನಿತಾಲ ಈ ಮಾರ್ಗವಾಗಿ ಹಲದ್ವಾನಿ ಸ್ಟೇಶನ ತಲುಪಿದೆ. ಗಾಡಿಯಿಂದಲೇ ಈ ಎಲ್ಲ ಪ್ರವಾಸವಾಯಿತು. ಈ ಪ್ರದೇಶವೆಂದರೆ ಸೃಷ್ಟಿಸೌಂದರ್ಯದಿಂದ ತುಂಬಿದ ಸ್ಥಳಗಳ ಪ್ರದರ್ಶನವೇ ಆಗಿದೆ.
ಭವಿಷ್ಯಬದರಿ, ಜ್ಯೋತಿಬದರಿ, ಧ್ಯಾನ ಬದರಿ, ವೃದ್ಧ ಬದರಿ ಮತ್ತು ಗೋಪೇಶ್ವರ ಬದರಿ ಸೇರಿಸಿ ಪಂಚ ಬದರಿಯ ಯಾತ್ರೆಯಾಯಿತು. ಮುಂದೆ ಘೋರ ಕಲಿಯುಗದಲ್ಲಿ ವಿಷ್ಣುಪ್ರಯಾಗದ ಮುಂದಿರುವ, ಎದುರು-ಬದುರಿರುವ ಎರಡು ಪರ್ವತಗಳು ಕೂಡಿ ಹೋಗಿ, ಈಗಿನ ಬದರಿಯ ಮಾರ್ಗ ಮುಚ್ಚಿ ಹೋಗುವದು. ಆ ವೇಳೆ ಭವಿಷ್ಯ ಬದರಿಯ ಯಾತ್ರೆ ಪ್ರಾರಂಭವಾಗುವದು. ಜ್ಯೋತಿರ್ಮಠದಿಂದ ಈ ಕ್ಷೇತ್ರ ೧೨-೧೩ ಕಿ.ಮಿ. ಅಂತರದಲ್ಲಿ ಎತ್ತರದ ಮೇಲಿದೆ. ಒಂದು ದಟ್ಟ ಗಿಡಗಳ ಹಿಂಡಿನ ಮಧ್ಯ ಭವಿಷ್ಯ ಬದರಿಯ ದೇವಸ್ಥಾನವಿದೆ. ದೇವಸ್ಥಾನ ತುಂಬಾ ಸಣ್ಣದಾಗಿದೆ. ಹಳ್ಳಿ ೨-೩ ಕಿ.ಮಿ. ದೂರ ಇಳುವಿನಲ್ಲಿದೆ. ಗುಡ್ಡಗಾಡಿನ ಇಲ್ಲಿಯ ಜನರಿಗಿಂತಲೂ ಬೇರೆಯವರೇ ಈ ಯಾತ್ರೆಗೆಂದು ಹೋಗುವದು ಕಾಣುತ್ತದೆ.
ಒಂದರಿಂದ ಎರಡು ಅಡಿಗಳ ಒಂದು ಅಸ್ಪಷ್ಟ ಮೂರ್ತಿ ಒಂದು ಸಣ್ಣ ದೇವಸ್ಥಾನದಲ್ಲಿದೆ. ಈ ಮೂರ್ತಿ ದಿನ ದಿನಕ್ಕೂ ಆಕಾರ ಹೊಂದುತ್ತಿದೆ ಎನ್ನುತ್ತಾರೆ. ಅವಯವ ಇನ್ನೂ ಸ್ಪಷ್ಟವಾಗಿ ಕಾಣಿಸುತ್ತಿಲ್ಲ. ಇನ್ನೂ ಎಷ್ಟು ಕಾಲ ಕಳೆಯಬೇಕೋ ಯಾರಿಗೆ ಗೊತ್ತು? ಅಲ್ಲಿಯ ವರೆಗೆ ಪೂರ್ಣಾಕಾರ ತಯಾರಿಯಾಗುವದು. ನಂದಪ್ರಯಾಗದಿಂದ ಶ್ರೀಮಹಾದೇವಜೀಯವರ ಆಶ್ರಮಕ್ಕೆ ಹೋಗಲು ೧೫-೨೦ ದಿನಗಳು ತಾಗಿದವು. ಒಟ್ಟಿನಮೇಲೆ, ಹೊರಟ ಮೇಲಿಂದ ಇವರ ಈ ಸ್ಥಳ ಬಂದು ತಲುಪಲು ಒಂದು ತಿಂಗಳೇ ತಾಗಿತು. ನಿಧಾನವಾಗಿ ಪ್ರವಾಸವನ್ನು ಆಹ್ಲಾದಿಸುತ್ತ ಆನಂದದಿಂದ ಸಾವಕಾಶ ಬಂದು ಮುಟ್ಟಿದೆ.
ಹೃಷೀಕೇಶದಿಂದ ಸ್ವರ್ಗಾಶ್ರಮ ಸುಮಾರು ೫ ಕಿ.ಮಿ. ಕಾಲುದಾರಿಯಿಂದ ಆಗುತ್ತದೆ. ಮಾರ್ಗಮಧ್ಯ ೨-೨|| ಕಿ.ಮಿ.ನಲ್ಲಿರುವ ಶಿವಾನಂದ ಆಶ್ರಮದ ಹತ್ತಿರದಿಂದ ದೋಣಿಯಲ್ಲಿ ಕುಳಿತು ಬರಬಹುದು. ಮೂರು-ನಾಲ್ಕು ದೋಣಿಗಳಿವೆ. ಆಗಾಗ ಬಂದು ಹೋಗುತ್ತ ಸಂಜೆಯ ವರೆಗೂ ಸಂಚರಿಸುತ್ತವೆ.
ಸ್ವರ್ಗಾಶ್ರಮ ಒಬ್ಬ ಸಾಧಕನಿಗೆ ಮತ್ತು ಸಿದ್ಧನಿಗೂ ಏಕಾಂತದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವದಕ್ಕೆ ಎಲ್ಲ ದೃಷ್ಟಿಯಿಂದಲೂ ಅತ್ಯಂತ ಅನುಕೂಲ ಮತ್ತು ಅತಿ ಸುಂದರ ಸ್ಥಳವಾಗಿದೆ. ಇಲ್ಲಿ ಏಕಾಂತಕ್ಕೆ ವನವೂ ಇದೆ, ಅಲ್ಲಲ್ಲಿ ಕುಟಿಗಳೂ ಇವೆ. ಮಧ್ಯ ಮಧ್ಯ ಚಿತ್ತಕ್ಕೆ ಶಾಂತಿ ನೀಡುವ ಸುರಮ್ಯ ಮರಗಳೂ ಇವೆ. ಗಂಗಾಪ್ರವಾಹ ಇಲ್ಲಿ ಗಂಭೀರ ಮಂದವಾಗಿದೆ. ಹಾಗಾಗಿ ಅತ್ಯಂತ ಚಿತ್ತಾಕರ್ಷಕ ಮತ್ತು ಪವಿತ್ರ ಭಾವನೆಯನ್ನು ಜಾಗ್ರತ ಮಾಡುವಂತಿದೆ. ಏನೇ ಮಾಡಿದರೂ ಇಲ್ಲಿಂದ ಕಾಲು ಕೀಳಲು ಆಗದು. ಸ್ವಲ್ಪ ದಿನವಾದರೂ ಇಲ್ಲಿ ಇರಬೇಕಾಗುವದು ಎಂದೇ ಅನಿಸುತ್ತಿದೆ. ಆದಾಗ್ಯೂ ‘ಈಶ್ವರಿಚ್ಛಾ ಬಲೀಯಸೇ’
ಶ್ರೀಸಮರ್ಥ ಕೃಪೆಯಿಂದ ಎಲ್ಲರೂ ಕ್ಷೇಮದಿಂದಿರಬಹುದು.
ಎಲ್ಲರ ಹಿತಚಿಂತಕ
ಶ್ರೀಧರ
(ಮುಂದುವರಿಯುವದು)

RELATED ARTICLES  ಕನಸು - ೩