IMG 20170821 WA0002

ಎನ್ ಮುರಳೀಧರ್

ನೆಲಮಂಗಲ

9902772278
ಮನುಷ್ಯನಿಗೂ ಜಡವಸ್ತುಗಳಿಗೂ ಯಾವ ರೀತಿ ಹೋಲಿಕೆ ಇರುತ್ತದೆ ಎಂಬ ಅಂಶವನ್ನು ನನಗೆ ತಿಳಿದ ಮಟ್ಟಿಗೆ ಹೇಳಲು ಒಂದು ಸಣ್ಣ ಪ್ರಯತ್ನ ಮಾಡಿದ್ದೇನೆ. ಅದೇರೀತಿ ಮನುಷ್ಯನಿಗೂ ಬೀಗಕ್ಕೂ ಏನು ಹೋಲಿಕೆ ಇದೆ ಎಂದು ನೋಡಿದಾಗ:
ಬೀಗಕ್ಕೂ ಮನಸ್ಸಿಗೂ ಎನು ಹೋಲಿಕೆ ಇದೆ ಎಂದು ಯಾರಾದರೂ ಕೇಳಬಹುದು. ಬೀಗ ಒಂದು ಜಡವಸ್ತು ಎಲ್ಲರೂ ಉಪಯೋಗಿಸುವಂತಹ ವಸ್ತು ಅಷ್ಟೇ. ಧನಿಕರ ದೊಡ್ಡ ಮನೆಗಳಿಂದ ಹಿಡಿದು ಬಡವರ ಗುಡಿಸಲಿನತನಕ ಈ ಎರಡು ವಸ್ತುಗಳಿಂದ ಭದ್ರ ಪಡಿಸುವರು ಹಾಗೂ ಪ್ರತಿಯೊಂದು ಮನೆ, ಅಂಗಡಿ, ಬ್ಯಾಂಕ್, ಕಛೇರಿ ಎಲ್ಲಾ ಕಡೆಗಳಲ್ಲಿ ಆಸ್ತಿ ಪಾಸ್ತಿ ರಕ್ಷಣೆಗೆ ಬಾಗಿಲಿಗೆ ಬೀಗ ಹಾಕಿ ಬೀಗದ ಕೈಯನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವರು ಎಂದಷ್ಟೇ ಮೇಲ್ನೋಟಕ್ಕೆ ಕಾಣಬಹುದು. ಬೀಗ ಹಾಕದೆ ಇದ್ದರೆ ಯಾರೂ ಬೇಕಾದರೂ ಮನೆಗಳಿಗೆ ನುಗ್ಗಿ ಏನು ಬೇಕಾದರೂ ತೆಗೆದುಕೊಂಡು ಹೋಗಬಹುದು. ಆಸ್ತಿ ಪಾಸ್ತಿ ಒಡವೆ ರಕ್ಷಣೆಗೆ ಬೀಗ ಬೇಕೇ ಬೇಕು. ಇದನ್ನು ತೆಗೆದು ಹಾಕಿ ಮಾಡಲು ಕೀ ಅವಶ್ಯಕವಾಗಿರಬೇಕು. ಇದು ಎಲ್ಲರಿಗೂ ತಿಳಿದ ವಿಷಯ. ಚೆನ್ನಾಗಿದ್ದಾಗ ಬೀಗವನ್ನು ಉಪಯೋಗಿಸಿ ನಂತರ ಆಚೆಗೆ ಎಸೆಯುತ್ತೇವಷ್ಟೇ? ಇದರಲ್ಲಿ ಏನು ವಿಶೇಷ ಇದೆ ಎಂದು ಅನೇಕರು ಕೇಳಬಹುದು.
ಆದರೆ ಬೀಗಕ್ಕೂ ಮನುಷ್ಯನಿಗೂ ಯಾವ ರೀತಿ ಹೋಲಿಕೆ ಇದೆ ಎಂದು ತಿಳಿಯಲು ಇದರ ಒಳಾರ್ಥವನ್ನು ನೋಡಿದಾಗ, ನಮ್ಮನ್ನು ನಾವೇ ರಕ್ಷಿಸಬೇಕಾದಲ್ಲಿ ಈ ಎರಡು ವಸ್ತುಗಳು ಅವಶ್ಯಕವಾಗಿ ಬೇಕಾಗುತ್ತದೆ. ಅಂದರೆ ನಾವೇನು ಬೀಗ ಹಾಕಿಕೊಳ್ಳುವುದೇ? ಎಂದರೆ ಖಂಡಿತಾ ಇಲ್ಲ. ಬೀಗ ಎಂದರೆ ನಮ್ಮ ಮನಸ್ಸು, ಬೀಗದ ಕೈ ಎಂದರೆ ಅದರ ನಿಯಂತ್ರಣ ಎಂದು ಅರ್ಥ.
ಮನುಷ್ಯನ ಮನಸ್ಸು ಚಂಚಲತೆಯಿಂದ ಕೂಡಿದ ಓಡುವ ಕುದುರೆಯಂತೆ ಇರುತ್ತದೆ. ಮನಸ್ಸು ಒಂದು ರೀತಿಯಲ್ಲಿ ರಾಕೆಟ್‍ಗಿಂತಲೂ ವೇಗವಾದದ್ದು. ಇದನ್ನು ಹತೋಟಿಯಲ್ಲಿಡುವುದೇ ಒಂದು ದೊಡ್ಡ ಸಾಹಸ ಪಟ್ಟಂತೆ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ ಮನಸ್ಸು ಒಂದು ಮರ್ಕಟ ಅಂದರೆ ಮಂಗ ಇದ್ದಹಾಗೆ ಒಂದು ಕಡೆ ಸ್ಥಿರವಾಗಿ ಇರುವುದಿಲ್ಲ. ಮಂಗವು ಮರದಿಂದ ಮರಕ್ಕೆ, ಕಟ್ಟಡದಿಂದ ಕಟ್ಟಡಕ್ಕೆ ಎಲ್ಲೆಂದರಲ್ಲಿ ಹಾರುತ್ತದೆಯೋ ಅದೇ ರೀತಿ ನಮ್ಮ ಮನಸ್ಸು ಚಂಚಲತೆಯಿಂದ ಕೂಡಿರುತ್ತದೆ.
ಮಾನವನ ಮನಸ್ಸು ನಿಶ್ಚಲ ಭಕ್ತಿ ಕರುಣೆ, ಪ್ರೀತಿ, ದಯೆ, ಅಹಿಂಸೆ, ಮಾನವೀಯತೆ, ಹೃದಯವಂತಿಕೆ ಮತ್ತು ಮಮತೆ ವಾತ್ಯಲ್ಯ, ಪರೋಪಕಾರ ಗುಣಗಳಂಥ ಒಳ್ಳೆ ಗುಣಗಳ ಜೊತೆಗೆ ಹರಿಷಡ್ವರ್ಗಗಳೆಂಬ ಅವಗುಣಗಳನ್ನು ಹೊಂದಿರುವ 17 ಲೀವರ್ಸ್‍ನ ಬೀಗದಂತೆ ಇರುತ್ತದೆ. ಇಂತಹ ಬೀಗಕ್ಕೆ ಕಡಿವಾಣ ಹಾಕುವುದೆಂದರೆ ಸುಲಭದ ಮಾತಲ್ಲ.
ಮನೆಗೆ ಬೀಗವನ್ನು ಸುಲಭವಾಗಿ ಹಾಕಿ ಬೀಗದ ಕೈಯನ್ನು ಕೈಯಲ್ಲಿ ಇಟ್ಟುಕೊಂಡು ಹೋಗಬಹುದು. ಆದರೆ ಮನವೆಂಬ ಬೀಗವನ್ನು ಕಡಿವಾಣವೆಂಬ ಬೀಗದ ಕೈಯಿಂದ ನಿಯಂತ್ರಿಸುವುದು ಬಹಳ ಕಷ್ಟಸಾಧ್ಯ. ಇದರಲ್ಲಿ ವಿಫಲವಾದರೆ ಮನಸ್ಸು ಹೇಳಿದಂತೆ ನಾವು ಕೇಳಬೇಕಾಗುತ್ತದೆ. ಇದರಿಂದ ನಮ್ಮನ್ನು ನಾವೇ ರಕ್ಷಿಸಿಕೊಳ್ಳಲು ಆಗುವುದಿಲ್ಲ, ಯಾವ ದುರಂತ ಬೇಕಾದರೂ ಸಂಭವಿಸಬಹದು.
ಯಾರಾದರೂ ಕಷ್ಟದಲ್ಲಿದ್ದರೆ ಕರುಣೆ ತೋರಿ ಸಹಾಯ ಮಾಡುವುದು ಮಾನವ ಧರ್ಮ. ಅಪಘಾತಗಳಲ್ಲಿ ಸಿಲುಕಿ ಗಾಯಗೊಂಡು ನರಳುತ್ತಿರುವವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವುದು ಮಾನವೀಯತೆ. ಸಿಕ್ಕ ವಸ್ತುಗಳನ್ನು ಮಾಲೀಕರಿಗೆ ತಲುಪಿಸುವುದು ಹೃದಯವಂತಿಕೆ. ಬೇರೆಯವರು ಯಾವುದಾದರೂ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದಾಗ ಅಭಿನಂದಿಸುವುದು ಹೃದಯ ವೈಶಾಲ್ಯತೆ, ಸಹಾಯ ಬಯಸಿ ಬಂದಾಗ ಸಹಾಯ ಮಾಡುವುದು ಪರೋಪಕಾರ ಗುಣ. ತಂದೆ ತಾಯಿ ಗುರುಗಳನ್ನು ಗೌರವಿಸುವುದು ಸಂಸ್ಕಾರ. ತಂದೆ ತಾಯಿಗಳು ಮಕ್ಕಳನ್ನು ಮಮತೆಯಿಂದ ನೋಡಿಕೊಳ್ಳುವುದು ನಂತರ ಮಕ್ಕಳು ಸಹ ತಂದೆ ತಾಯಿಯರನ್ನು ಅವರ ವೃದ್ದಾಪ್ಯದಲ್ಲಿ ನೋಡಿಕೊಳ್ಳುವುದೇ ವಾತ್ಸಲ್ಯ ಹಾಗೂ ಕರ್ತವ್ಯ.
ಮೇಲ್ಕಂಡ ಎಲ್ಲಾ ಒಳ್ಳೆಯ ಗುಣಗಳು ಮನುಷ್ಯರಿಗಾಗಲೀ ಅಥವಾ ಸಮಾಜಕ್ಕಾಗಲೀ ಯಾವುದೇ ಹಾನಿ ಮಾಡುವುದಿಲ್ಲ. ಇದರಿಂದ ಸಮಾಜದಲ್ಲಿ ಒಳ್ಳೆಯ ವಾತಾವರಣವೇ ಮೂಡುತ್ತದೆ. ಆ ಮನುಷ್ಯನು ಸಹ ಎಲ್ಲರಿಗೂ ಮಾದರಿಯಾಗುತ್ತಾನೆ. ಇಂತಹ ಗುಣಗಳನ್ನು ಹತೋಟಿಯಲ್ಲಿಡುವ ಅವಶ್ಯಕತೆ ಇಲ್ಲ. ಈ ರೀತಿಯ ಗುಣಗಳು ಹೆಚ್ಚಿದಷ್ಟೂ ಸಮಾಜ ಬೆಳಗುತ್ತದೆ.ಆದರೆ, ಮನಸ್ಸಿನ ಇನ್ನೊಂದು ಮುಖ ಇದೆಯಲ್ಲ, ಅದೇ ಅವಗುಣಗಳು. ಇದರಿಂದ ಮನುಷ್ಯನಿಗೆ ಹಾಗೂ ಸಮಾಜಕ್ಕೆ ತುಂಬಾ ತೊಂದರೆಯಾಗುವುದು. ಇದನ್ನು ಹತೋಟಿಯಲ್ಲಿಡದಿದ್ದರೆ ಮನುಷ್ಯನು ಸುರಕ್ಷಿತವಾಗಿರುವುದಿಲ್ಲ ಅದೇರೀತಿ ಸಮಾಜವೂ ಸುರಕ್ಷಿತವಾಗಿರುವುದಿಲ್ಲ ಹಾಗೂ ಮನುಷ್ಯ ಕೆಡವುದರ ಜೊತೆಗೆ ಸಮಾಜದ ಸ್ವಾಸ್ಥ್ಯವು ಕೆಡುತ್ತದೆ.

RELATED ARTICLES  ನಿಧಿಧ್ಯಾಸದಲ್ಲಿ ಸಾಕ್ಷಾತ್ಕಾರ ಹಿತಮಿತವಾಗಿದೆ.

ಮುಖ್ಯವಾಗಿ ಹರಿಷಡ್ವರ್ಗಗಳು ಮನಸ್ಸಿನಲ್ಲಿದ್ದು ಅದಕ್ಕೆ ಕಡಿವಾಣ ಹಾಕದಿದ್ದರೆ, ಅಪರಾಧ ಪ್ರಕರಣಗಳು, ಮೋಸ ವಂಚನೆ ಇವುಗಳೆಲ್ಲಾ ಸಂಭವಿಸಿ ಯಾವ ಗಳಿಗೆಯಲ್ಲಿ ಏನು ಬೇಕಾದರೂ ಸಂಭವಿಸಬಹುದು. ಒಂದು ಕ್ಷಣದ ತಪ್ಪಿಗೆ ಬಹಳ ಕಾಲದವರೆಗೂ ಪಶ್ಚಾತ್ತಾಪ ಹಾಗೂ ಶಿಕ್ಷೆಯನ್ನು ಅನುಭವಿಸಬೇಕಾಗುವ ಸಂದರ್ಭ ಒದಗಿ ಬರಬಹುದು.
ಒಂದು ಸಲ ಜೀವನದಲ್ಲಿ ಯಶಸ್ಸು ಕಾಣದಿದ್ದರೆ ಇನ್ನೊಂದು ಸಲ ಪ್ರಯತ್ನಿಸಬೇಕು. ಇನ್ನೊಂದು ಸಲ ಪ್ರಯತ್ನಿಸಲು ಮನಸ್ಸು ಮಾಡಬೇಕು. ಒಂದು ಸಲ ಯಶಸ್ಸು ಸಿಗಲಿಲ್ಲ ಇನ್ನೊಂದು ಸಲ ಏನಾಗುವುದೋ ಎಂಬ ಆತಂಕವನ್ನು ನಮ್ಮ ಮನಸ್ಸಿನಿಂದ ದೂರೀಕರಿಸಬೇಕು. ಕೆಲವರು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅಥವಾ ಜೀವನದಲ್ಲಿ ಯಶಸ್ಸು ಕಾಣದಿದ್ದರೆ ದುರ್ಬಲ ಮನಸ್ಸಿನವರು ಅವಮಾನಿತರಾದವರಂತೆ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ಇದರಲ್ಲಿ ಕೆಲವರು ಅಸುನೀಗುತ್ತಾರೆ ಅದೃಷ್ಟವಶಾತ್ ಕೆಲವರು ಉಳಿಯುತ್ತಾರೆ. ಇಂತಹ ನಿರ್ಧಾರ ಯಾವುದೇ ರೀತಿಯಲ್ಲೂ ಒಳ್ಳೆಯದಲ್ಲ. ಒಂದು ಸಲ ಸೋತರೇನು, ಇನ್ನೊಂದು ಸಲ ಗೆಲುವನ್ನು ಪಡೆದೇ ಪಡೆಯುತ್ತೇನೆಂಬ ಛಲದಿಂದ ಮುನ್ನುಗ್ಗಿದರೆ ಖಂಡಿತಾ ಜಯವು ಲಭ್ಯವಾಗುವುದರಲ್ಲಿ ಸಂಶಯವಿಲ್ಲ.
ಕೆಲವು ಬೀಗಗಳು ಗಟ್ಟಿಯಾಗಿದ್ದು, ನಿಜವಾದ ಕೀ ಬಳಸಿದರೆ ಮಾತ್ರ ತೆಗೆಯುವಂತೆ ಇರುತ್ತದೆ. ಆದರೆ ಕೆಲವು ಬೀಗಗಳನ್ನು ಯಾವುದಾದರೂ ಉಪಕರಣ ಬಳಸಿ ತೆಗೆಯಬಹುದಾಗಿರುತ್ತದೆ. ಅಂದರೆ ನಮ್ಮ ಮನಸ್ಸು ಯಾವತ್ತೂ ಗಟ್ಟಿಯಾದ ಬೀಗದಂತೆ ಇರಬೇಕು. ಅಂದರೆ ಧೃಡ ಮನಸ್ಸು ಇರಬೇಕು.
ಯಾರಾದರೂ ಅತಿ ಪ್ರೀತಿ ಪಾತ್ರರು ಮೃತರಾದರೆ, ದುಃಖ ಪಡುವುದು ಸಹಜ. ಆದರೆ ಕೆಲವರು ಅತೀವ ದುಃಖದಿಂದ, ಅದನ್ನೇ ಮನಸ್ಸಿನಲ್ಲಿ ಇಟ್ಟುಕೊಂಡು ಸದಾ ಕೊರಗುತ್ತಾ ಆ ದುಃಖದಿಂದ ಹೊರಬರುವುದೇ ಇಲ್ಲ. ಇದರಿಂದ ಮಾನಸಿಕವಾಗಿ ಕುಗ್ಗಿ ಖಿನ್ನತೆಗೆ ಒಳಗಾಗುವ ಅಪಾಯ ಇರುತ್ತದೆ. ಇಂದು ಅವರು ಹೋಗಿದ್ದಾರೆ ನಾಳೆ ನಾವು ಹೋಗುತ್ತೇವೆ, ಇರುವಷ್ಟು ದಿನ ನೆಮ್ಮದಿಯಾಗಿ ಬದುಕೋಣ ಎಂದು ದೃಡ ಮನಸ್ಸಿನಿಂದ ಇರಬೇಕು ಇಲ್ಲದಿದ್ದಲ್ಲಿ ಇವರನ್ನು ನಂಬಿದವರು ಬೀದಿ ಪಾಲಾಗ ಬೇಕಾಗುತ್ತದೆ.
ಬೀಗದ ಕೈ ಕಳೆದುಹೋದಾಗ ಬೇರೆ ನಕಲಿ ಬೀಗದ ಕೈ ಮಾಡಿಸಬಹುದು. ಮನಸ್ಸೆಂಬ ಬೀಗಕ್ಕೆ ಕಡಿವಾಣವೆಂಬ ಬೀಗದ ಕೈಯನ್ನು ನಕಲು ಮಾಡಲು ಸಾಧ್ಯವಿಲ್ಲ. ಎಲ್ಲಾದರೂ ಹೋಗಬೇಕಾದರೆ ಮನೆಗೆ ಬೀಗ ಹಾಕಿ ಬೀಗದ ಕೈಯನ್ನು ನಂಬಿಕೆ ಇರುವ ಮನೆಗೆ ಕೊಟ್ಟು ಹೋಗಬಹುದು. ಆದರೆ ನಮ್ಮ ಮನಸ್ಸನ್ನು ಬೇರೆಯವರಿಗೆ ನೀಡಲು ಸಾಧ್ಯವಿಲ್ಲ. ನಾವು ನಮ್ಮ ಮನಸ್ಸನ್ನು ಎಷ್ಟೇ ನಿಯಂತ್ರಣದಲ್ಲಿಟ್ಟು ಕೊಂಡಿದ್ದರೂ ಸಹ ಬೇರೆಯವರ ಬಲವಂತಕ್ಕೆ ಮನಸ್ಸನ್ನು ಬದಲಾಯಿಸುವ ಅನೇಕ ಸಂದರ್ಭಗಳು ಬಂದೇ ಬರುತ್ತದೆ. ಇದರಿಂದ ವಿಚಲಿತರಾಗದೇ ನಮ್ಮ ದೃಢ ಮನಸ್ಸನ್ನು ಚಂಚಲಗೊಳಿಸಬಾರದು. ಇದರಿಂದ ಕೆಲವೊಮ್ಮೆ ನಿಷ್ಟೂರಕ್ಕೂ ಗುರಿಯಾಗಬಹುದು. ಆದರೆ ನಮ್ಮ ರಕ್ಷಣೆಗಾಗಿ ನಿಷ್ಟೂರವಾದರೂ ಮುಂದಿನ ದಿನಗಳಲ್ಲಿ ನಮಗೇ ಅನುಕೂಲವಾಗುವ ಸಂಭವವೇ ಹೆಚ್ಚು. ಆದರೆ ನಮ್ಮ ಮನಸ್ಸನ್ನು ಎಷ್ಟೇ ಹತೋಟಿಯಲ್ಲಿಟ್ಟಿದ್ದರೂ ಸಹ ಕೆಲವೊಮ್ಮೆ ಪರಿಸ್ಥಿತಿಯ ಶಿಶುವಾಗಿ ಅನಿವಾರ್ಯ ಕಾರಣಗಳಿಂದ ಕಷ್ಟಕ್ಕೆ ಸಿಲುಕಬೇಕಾದ ಸಂದರ್ಭ ಒದಗಿಬರುತ್ತದೆ. ಇದಕ್ಕೆ ಪರಿಹಾರವೇ ಇಲ್ಲವೆಂಬಂತೆ ಆಗುತ್ತದೆ.
ಬೀಗವನ್ನು ಬಳಕೆ ಮಾಡುತ್ತಾ ಬಂದಂತೆ ಕೆಲವೊಮ್ಮೆ ಗಟ್ಟಿಯಾಗಿ ತೆಗೆಯದೇ ಇರುವಂತಾಗಬಹುದು ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಹಾಕಿ ಸರಿಪಡಿಸಬೇಕು. ನಮ್ಮ ಮನಸ್ಸೆಂಬ ಬೀಗವು ಸಹ ಹಲವಾರು ಪರಿಸ್ಥಿತಿಯಿಂದ ಕೆಟ್ಟುಹೋಗಬಹುದು. ಇದನ್ನು ಸಹ ಸಮಾಧಾನವೆಂಬ ಎಣ್ಣೆಯಿಂದ ಸ್ವಚ್ಛಗೊಳಿಸಿ ಸರಿಪಡಿಸಬೇಕು.
ಬೀಗವನ್ನು ಯಾರಾದರೂ ಒಡೆದರೆ ಯಾವರೀತಿ ಪುನಃ ಒಂದು ಮಾಡಲು ಸಾಧ್ಯವಿಲ್ಲವೋ ಅದೇರೀತಿ ಮನಸ್ಸೆಂಬ ಬೀಗವು ಒಡೆದರೂ, ಅದನ್ನೂ ಸಹ ಒಂದು ಮಾಡಲು ಸಾಧ್ಯವಿಲ್ಲ. ಕೆಲವೊಮ್ಮೆ ರಿಪೇರಿ ಮಾಡಿಸಬಹದು ಅದರೆ ಮೊದಲಿನಂತೆ ಆ ಬೀಗವು ಗಟ್ಟಿಯಾಗಿರುವುದಿಲ್ಲ. ಯಾವಾಗ ಬೇಕಾದರೂ ಪುನಃ ಕೆಟ್ಟು ಹೋಗಬಹುದು. ಅದೇರೀತಿ ಒಡೆದು ಹೋದ ಮನಸ್ಸನ್ನು ಕಷ್ಟಪಟ್ಟು ಒಂದು ಮಾಡಬಹುದು ಆದರೆ ಮೊದಲಿನ ರೀತಿಯಂತೆ ವಿಶ್ವಾಸ ಬರುವುದೇ ಇಲ್ಲ. ಒಂದು ಸಣ್ಣ ಮಾತಿಗೂ ಪುನಃ ಮನಸ್ಸುಗಳು ಒಡೆದುಹೋಗಬಹುದು.
ಮನುಷ್ಯನ ಜೀವನ ಯಾವಾಗಲೂ ಅವನ ಮನಸ್ಥಿತಿಗೆ ಅವಲಂಬಿತವಾಗಿರುತ್ತದೆ. ಆದ್ದರಿಂದ ಯಾವಾಗಲೂ ಒಳ್ಳೆಯ ಕೆಲಸಗಳನ್ನು ಮಾಡಲು ಮಾತ್ರ ಮನಸ್ಸು ಮಾಡಬೇಕು. ಕೆಟ್ಟ ಕೆಲಸವನ್ನು ಮಾಡಲು ಯಾವುದೇ ಕಾರಣಕ್ಕೂ ಮನಸ್ಸು ಮಾಡದಿದ್ದರೆ ಒಳ್ಳೆಯದು. ಮನಸ್ಸೆಂಬ ಬೀಗವನ್ನು ಕಡಿವಾಣ ಎಂಬ ಬೀಗದ ಕೈಯಿಂದ ಹತೋಟಿಯಲ್ಲಿಟ್ಟರೆ ಮಾತ್ರ ಬರುವ ಕಷ್ಟಗಳಿಂದ ಪಾರಾಗಬಹುದು. ಅದೇರೀತಿ ನಾವು ಧೃಡ ಮನಸ್ಸಿನಿಂದ ದೇವರಲ್ಲಿ ನಂಬಿಕೆ ಇಟ್ಟು ಮುನ್ನಡೆದರೆ ನಮ್ಮ ಕಾರ್ಯಗಳು ಸಹ ಯಶಸ್ವಿ ಯಾಗುವುದರಲ್ಲಿ ಸಂಶಯವೇ ಇಲ್ಲ.

RELATED ARTICLES  ಮಕ್ಕಳ ಬದುಕಿಗೆ ಸೋಪಾನವಾಗಿ..