Home Food ಕಿಗ್ಗದ ಋಷ್ಯಶೃಂಗ ಕ್ಷೇತ್ರ

ಕಿಗ್ಗದ ಋಷ್ಯಶೃಂಗ ಕ್ಷೇತ್ರ

ಕಿಗ್ಗ, ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಪ್ರವಾಸಿ ಕ್ಷೇತ್ರವಾದ ಶೃಂಗೇರಿಯಿಂದ ಕೇವಲ ಹತ್ತು ಕಿ.ಮೀ ಗಳಷ್ಟು ದೂರದಲ್ಲಿ ನೆಲೆಸಿರುವ ಪುಟ್ಟ ಗ್ರಾಮ. ಗ್ರಾಮ ಪುಟ್ಟದಾದರೂ ಇಲ್ಲಿರುವ ಎರಡು ಆಕರ್ಷಣೆಗಳು ಮಾತ್ರ ಬಲು ದೊಡ್ಡವು. ಒಂದು ಇದಕ್ಕೆ ಹತ್ತಿರದಲ್ಲಿರುವ ನಯನಮನೋಹರವಾದ ಸಿರಿಮನೆ ಜಲಪಾತ ಕೇಂದ್ರ. ಎರಡನೆಯದ್ದು ಅದ್ಭುತ ಕಥೆ ಹೊಂದಿರುವ ಋಷ್ಯಶೃಂಗೇಶ್ವರನ ದೇವಾಲಯ. ಕಥೆ ಏನೆಂದು ತಿಳಿದು ಬಿಡಿ!
ಕಶ್ಯಪ ಬ್ರಹ್ಮನ ಸುಕುಮಾರರಾದ ವಿಭಾಂಡಕ ಮಹರ್ಷಿಗಳು ತಂದೆಯ ಅಣತಿಯಂತೆ ಪರಮೇಶ್ವರನಿಂದ ವರದಾನ ಪಡೆಯುವ ಸಲುವಾಗಿ ಘನಘೋರ ತಪಸ್ಸನ್ನಾಚರಿಸಲು ಪ್ರಾರಂಭಿಸುತ್ತಾರೆ. ಸಹಸ್ರಾರು ವರ್ಷಗಳ ನಂತರ ಅವರ ಶಿರಸ್ಸಿನಿಂದ ತಪೋ ಜ್ವಾಲೆಯು ಪ್ರಖರವಾಗಿ ಬೆಳಗುತ್ತ ಲೋಕವನ್ನಾವರಿಸಲು ಶುರುವಾಗುತ್ತದೆ. ಇದರಿಂದ ಹೆದರಿದ ದೇವತೆಗಳು ಅವರ ತಪಸ್ಸನ್ನು ಭಂಗಗೊಳಿಸಲು ನಿರ್ಧರಿಸುತ್ತಾರೆ. ದೇವೇಂದ್ರನ ಆಜ್ಞೆಯಂತೆ ಅಪ್ಸರೆಯರು ವಿಭಂಡಕರು ತಪಸ್ಸು ಮಾಡುತ್ತಿರುವ ಪರ್ವತದ ಬಳಿ ಬರುತ್ತಾರಾದರೂ ಅದನ್ನು ಏರಲು ಅವರಿಗೆ ಸಾಧ್ಯವಾಗದೆ ಅಲ್ಲೆ ಹರಿಯುತ್ತಿದ ತುಂಗಾ ನದಿಯಲ್ಲಿ ಸಮಯ ಕಳೆಯ ತೊಡಗುತ್ತಾರೆ. ಒಂದೊಮ್ಮೆ ವಿಭಂಡಕರು ನಿತ್ಯದಂತೆ ಬೆಳಿಗ್ಗೆ ತುಂಗೆಯಲಿ ಸ್ನಾನ ಮಾಡಲು ಬಂದಾಗ ಸಮಯ ನೋಡಿ ಆ ಅಪ್ಸರೆಯರು ತಮ್ಮ ದೇಹ ಸೌಂದರ್ಯದ ಸಿರಿಯನ್ನು ಅನಾವರಣಗೊಳಿಸುತ್ತ ಜಲಕ್ರೀಡೆಯಾಡತೊಡಗುತ್ತಾರೆ. ಒಂದು ಕ್ಷಣ ಇದರಿಂದ ವಿಭಂಡಕರು ವಿಚಲಿತರಾಗಿಬಿಡುತ್ತಾರೆ ಹಾಗೂ ಅದರ ಪರಿಣಮಾವಾಗಿ ಅವರಿಂದ ಸ್ಖಲನಗೊಂಡ ರೇತಸ್ಸು (ವೀರ್ಯ) ನದಿಯಲ್ಲಿ ಸೇರಿ ಬಿಡುತ್ತದೆ. ಅದೆ ಸಮಯದಲ್ಲಿ ಕೊಂಬಿರುವ ಜಿಂಕೆಯೊಂದು ದಾಹ ಉಂಟಾಗಿ ನದಿಯ ನೀರು ಸೇವಿಸುತ್ತಿರುವಾಗ ಅದರ ಬಾಯಿಯ ಮೂಲಕ ಋಷಿಗಳ ರೇತಸ್ಸು ಅದರ ದೇಹದೊಳಗೆ ಹೊಕ್ಕಿ ಗರ್ಭ ಸೇರುತ್ತದೆ. ನವಮಾಸದ ನಂತರ ಪ್ರಾತಃ ಕಾಲದ ಶುಭ ಮುಹೂರ್ತವೊಂದರಲ್ಲಿ ಆ ಜಿಂಕೆಯು ಪೊದೆಯ ನಡುವೆ ಮಾನವ ಸಂತಾನವೊಂದಕ್ಕೆ ಜನ್ಮ ನೀಡಿ ಪ್ರಾಣಿ ಸಹಜ ವರ್ತನೆಯಂತೆ ಅಲ್ಲಿಂದ ತೆರಳಿ ಬಿಡುತ್ತದೆ. ಇತ್ತ ವಿಭಂಡಕರು ಎಂದಿನಂತೆ ಸ್ನಾನ ಮಾಡಲು ಬಂದಾಗ ಮಗುವೊಂದರ ಅಳು ಕೇಳಿ ಅದರ ಬಳಿ ತೆರಳುತ್ತಾರೆ. ದಿವ್ಯ ಶಕ್ತಿಯುಳ್ಳವರಾಗಿದ್ದ ಅವರಿಗೆ ತಾವೆ ಅದರರ ಜನ್ಮದಾತನೆಂದು ತಿಳಿದು ಬಿಡುತ್ತದೆ. ಜಿಂಕೆಯ ಹೊಟ್ಟೆಯಿಂದ ಜನ್ಮವಾಗಿರುವುದರಿಂದ ಹಣೆಯ ಮೇಲೆ ಶೃಂಗವಿರುತ್ತದೆ ಆ ಮಗುವಿಗೆ. ಹಾಗಾಗಿ ಋಷಿ ಮೂಲ ಹಾಗೂ ಶೃಂಗವಿರುವ ಕಾರಣ ವಿಭಂಡಕರು ಆ ಮಗುವಿಗೆ ಋಷ್ಯಶೃಂಗ ಎಂಬ ಹೆಸರನ್ನಿಟ್ಟು ಬೆಳೆಸುತ್ತಾರೆ. ಹೀಗೆ ಬೆಳೆದ ಋಷ್ಯಶೃಂಗನು ಮುಂದೆ ತಾನಿದ್ದ ಸ್ಥಳ ತೊರೆದು ಅತ್ಯಂತ ಮಹತ್ವದ ಹಾಗೂ ಪವಿತ್ರ ಜೀವವಾಗಿ ಬಾಳಿ ಕೊನೆಗೆ ಸಕಲ ವೈಭೋಗಗಳನ್ನು ತೊರೆದು ತಂದೆಯ ಹಾಗೆ ಶಿವನಲ್ಲಿ ಐಕ್ಯನಾಗಬೇಕೆಂಬ ಉತ್ಕಟ ಇಚ್ಛೆಯಿಂದ ಮರಳಿ ತಂದೆಯು ವಾಸಿಸುತ್ತಿದ್ದ ಪರ್ವತಕ್ಕೆ ಬಂದು ಕಠಿಣವಾದ ತಪಸ್ಸನ್ನಾಚರಿಸುತ್ತಾನೆ. ಅವನ ತಪಸ್ಸಿಗೆ ಮೆಚ್ಚಿದ ಶಿವನು ಪ್ರತ್ಯಕ್ಷನಾಗಿ ವರ ಕೇಳಲು ಹೇಳಿದಾಗ, ಋಷ್ಯಶೃಂಗನು ಆನಂದದಿಂದ ಗದ್ಗದಿತನಾಗಿ ನಿನ್ನಲ್ಲಿ ನಾನು ಐಕ್ಯನಾಗಬೇಕು ಎಂದು ಹೇಳುವುದರ ಬದಲು ನನ್ನಲ್ಲಿ ನೀನು ಐಕ್ಯನಾಗು ಎಂದು ಹೇಳಿ ಬಿಡುತ್ತಾನೆ. ಅದನ್ನು ಅನುಗ್ರಹಿಸಿದ ಶಿವನು ತಕ್ಷಣ ಋಷ್ಯಶೃಂಗನಲ್ಲಿ ಐಕ್ಯನಾಗಿ ಋಷ್ಯಶೃಂಗೇಶ್ವರನಾಗಿ ಅಲ್ಲಿಯೆ ನೆಲೆಸಿ ಬಿಡುತ್ತಾನೆ. ವರ ಕೇಳುವಾಗ ಆದ ಮಾತಿನ ಗೊಂದಲದಿಂದ ಈ ಸ್ಥಳಕ್ಕೆ ಕಗ್ಗ ಎಂಬ ಹೆಸರು ಬಂದು ಮುಂದೆ ಕಾಲ ಕಳೆದಂತೆ ಅದು ಕಿಗ್ಗವಾಗಿ ಬದಲಾಗಿದೆ.
ಸಿರಿಮನೆ ಜಲಪಾತ ಇಲ್ಲಿಂದ ಐದು ಕಿ.ಮೀ ದೂರದಲ್ಲಿ ಸಿರಿಮನೆ ಜಲಪಾತವಿದೆ. ಸಿರಿಮನೆ ಜಲಪಾತಕ್ಕೆ ತೆರಳಲು ಮಣ್ಣಿನ ಹಾದಿ ಇದೆಯಾದರೂ ಕಿಗ್ಗದಿಂದ ಯಾವ ವಾಹನಗಳು ದೊರಕುವುದಿಲ್ಲ. ಶೃಂಗೇರಿಯಿಂದಲೆ ಬಾಡಿಗೆ ಕಾರಿನ ಮುಲಕ ಈ ಸ್ಥಳಕ್ಕೆ ತೆರಳಬಹುದು. ನಿಮ್ಮ ಸ್ವಂತ ವಾಹನವಿದ್ದರಂತೂ ಇನ್ನು ಅನುಕೂಲ. ಆದಾಗ್ಯೂ ನೋಡಬೇಕೆಂದಿದ್ದರೆ ಶೃಂಗೇರಿಯಿಂದ ಕಿಗ್ಗಕ್ಕೆ ಬಸ್ಸಿನ ಮೂಲಕ ಬಂದು ಅಲ್ಲಿಂದ ಐದು ಕಿ.ಮೀ ನಡೆಯುತ್ತ ಸಿರಿಮನೆ ಜಲಪಾತವನ್ನು ತಲುಪಬಹುದು.

ಶೃಂಗೇರಿಯು ಬೆಂಗಳೂರಿನಿಂದ 330 ಕಿ.ಮೀ ಗಳಷ್ಟು ದೂರವಿದ್ದು ತೆರಳಲು ಬೆಂಗಳೂರಿನಿಂದ ಖಾಸಗಿ ಹಾಗೂ ಸರ್ಕಾರಿ ಬಸ್ಸುಗಳೆರಡೂ ಲಭ್ಯವಿದೆ. ಇನ್ನು ಒಂದೊಮ್ಮೆ ಶೃಂಗೇರಿ ತಲುಪಿದರೆ ಅಲ್ಲಿಂದ ಹತ್ತು ಕಿ.ಮೀ ದೂರದಲ್ಲಿರುವ ಕಿಗ್ಗವನ್ನು ತಲುಪುವುದು ಬಲು ಸುಲಭ. ಸಾಕಷ್ಟು ಬಸ್ಸುಗಳು ಶೃಂಗೇರಿಯಿಂದ ಕಿಗ್ಗದ ಮೂಲಕ ಸಾಗುವುದರಿಂದ ಕಿಗ್ಗವನ್ನು ಸುಲಭವಾಗಿ ತಲುಪಬಹುದು. ಕಿಗ್ಗಕ್ಕೆ ತಲುಪಿದರೆ ಅಲ್ಲಿ ಮೊದಲು ಕೊಂಬಿರುವ ಶಿವಲಿಂಗ ಹೊಂದಿರುವ ಋಷ್ಯಶೃಂಗ ದೇವಾಲಯಕ್ಕೆ ಭೇಟಿ ನೀಡಿ ತದನಂತರ ಸಿರಿಮನೆಯತ್ತ ಪ್ರಯಾಣ ಬೆಳೆಸಬಹುದು.