ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.
ಶ್ರೀಮತಿ ಸಮತಾ ಕಿರಣ್
ವರಸೆಯಲ್ಲಿ ಅಕ್ಕನ ಮಗಳು. ನನ್ನ ಬಾಲ್ಯದ ಸಹಪಾಠಿ. ನನಗಿಂತ ಹನ್ನೆರಡು ದಿನ ತಡವಾಗಿ ಭೂಮಿಗೆ ಅವತರಿಸಿದವಳು. ಎಲ್ಲಕ್ಕಿಂತ ಹೆಚ್ಚಿಗೆ ನನ್ನ ಬಾಲ್ಯದ ದಿನಗಳನ್ನು ಬಂಗಾರವಾಗಿಸಿದವಳು. ನಾನು, ನನ್ನ ಅಕ್ಕ ಸಂಧ್ಯಾ, ಮತ್ತು ಸಮತಾ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದುದು. ಸಮತಾಳಿಗೆ ನಾವು ನಾಲ್ಕೈದು ಜನ ಮಾವಂದಿರು. ಹೀಗಾಗಿ ನಾನು ಅವಳಿಗೆ ಪುಟ್ಟಿಮಾವ… ಪುಟ್ಟಿಮಾವ…. ಆಗಿ ಹೋದೆ. ಶಾಲೆಗೆ ಹೋದಾಗಲೂ ಅವಳು ಹೀಗೇ ಕರೆಯುತ್ತಿದ್ದರೆ ನನಗೆ ಅಸಹನೀಯವಾಗಿತ್ತು. ಒಮ್ಮೆ ಗದರಿದ್ದೆ ಕೂಡ.
ಸಮತಾಳ ಅಮ್ಮ…. ನನ್ನ ದೊಡ್ಡ ಅಕ್ಕ ಮಹಾದೇವಿ. ಅವಳನ್ನು ಸಿದ್ದಾಪುರದ ತಾರಗೋಡಿನ ಶ್ರೀ ಸುಬ್ರಾಯ ಹೆಗಡೆ ಎನ್ನುವವರಿಗೆ ಮದುವೆ ಮಾಡಿ ಕೊಟ್ಟಿದ್ದು. ಅಂದರೆ ಸಮತಾಳ ಅಪ್ಪ ತಾರಗೋಡಿನ ಸುಬ್ರಾಯ ಹೆಗಡೆ. ಆಗಿನ ಕಾಲಕ್ಕೆ ಸಿದ್ದಾಪುರ ಎಂದರೆ ಈಗ ಪಂಜಾಬಿಗೇ ಹೋದಷ್ಟು ದೂರ. ಬಸ್ಸಿನ ಸೌಲಭ್ಯಗಳಿಲ್ಲದ ಕಾಲ ಅದು. ಹೀಗಾಗಿ ವರ್ಷಕ್ಕೊಮ್ಮೆಯೋ…ಅಥವಾ ಎರಡು ಬಾರಿಯೋ ಅಕ್ಕ, ಬಾವನ ದರ್ಶನವಾಗುತ್ತಿತ್ತು. ಅಜ್ಜನ ಮನೆಯಲ್ಲಿ ಶಾಲೆ ಹತ್ತಿರವಾದ್ದರಿಂದ ಮತ್ತು ಶ್ರೀ ಗೌರಿ, ಮತ್ತು ಶ್ರೀಗಣೇಶ ಎಂಬ ಮತ್ತಿಬ್ಬರು ಮಕ್ಕಳಿದ್ದರಿಂದ ಸಮತಾ ನಮ್ಮ ಜೊತೆಗೆ ಉಳಿದಳು… ಬೆಳೆದಳು. ಒಟ್ಟಿಗೆ ಹೋಮ್ ವರ್ಕ, ಒಟ್ಟಿಗೇ ಶಾಲೆ. ನಗು, ಅಳು, ಹಟ, ಕೋಪ, ಆಟ, ಊಟ, ಆಹಾ…..ಬಾಲ್ಯದ ಮಜವೇ ಬೇರೆ ಬಿಡಿ. ಓದಿನಲ್ಲಿ ನಮ್ಮ ಸಮತಾ ಅಷ್ಟೆಲ್ಲ ಮುಂದಿರಲಿಲ್ಲ. ಅಕ್ಷರ ಸ್ವಲ್ಪ ಕೋಳಿ ಕಾಲು.? ಆದರೂ ಹಾಗೆ ಹಿಂದೆ ಬೀಳುವವಳೂ ಅಲ್ಲ.
ಮಳೆಗಾಲದಲ್ಲಿ ನಮ್ಮ ಕೇರಿಯ ಹುಡುಗರೆಲ್ಲ ಕೊಡೆ ಹಿಡಿದು ಹೊರಟೆವೆಂದರೆ ಮನೆ ಸೇರುವುದು ಆಗೊಮ್ಮೆ. ಈಗೊಮ್ಮೆ. ಹೀಗಾಗಿ ಅಡುಗೆ ಮನೆ ಆಟ, ಕೋಲಿನಿಂದ ಮನೆ ಕಟ್ಟುವುದು, ಮರಳಿನಲ್ಲಿ ಆಟ, ಇದರೊಳಗೇ ಹೆಚ್ಚಿನ ಕಾಲ ಹೋಗುವುದು. ಶಾಲೆಯಲ್ಲಿ ಕೂಡ ಯಾರೇ ಜಗಳಕ್ಕೆ ನಿಂತರೂ ಸಮತಾ ನನ್ನನ್ನು ಬಿಟ್ಟು ಕೊಟ್ಟವಳಲ್ಲ. ಎಷ್ಟಂದರೂ ಮಾವ ? . ಹೀಗಾಗಿ ನನ್ನದೇ ತಪ್ಪಿದ್ದರೂ ಅವಳ ಮುಂದೆ ಸರಿ ಕೂಡ ಶರಣಾಗತಿ ಆಗುತ್ತಿತ್ತು. ಆದರೂ ಆಗ ಕೆಲವು ಕಿಲಾಡಿತನದಿಂದ ಅವಳಿಗೆ ತೊಂದರೆ ಕೊಟ್ಟಿದ್ದಕ್ಕೆ ಇಂದಿಗೂ ಒಮ್ಮೊಮ್ಮೆ ಬೇಸರವೆನಿಸುತ್ತದೆ.
ಆದರೆ ಪಿ.ಯು.ಸಿ ಮುಗಿಯುವ ಹೊತ್ತಿಗೆ ಮನೆಯಲ್ಲಿ ಮದುವೆಯ ಪ್ರಸ್ತಾಪ ಬಂದಿತ್ತು. ಪದವಿ ಮುಗಿಸದೇ ಸಮತಾಳನ್ನು ಕೊಲ್ಲೂರು-ನಿಟ್ಟೂರಿನ ಹತ್ತಿರ ಕಿರಣ ಎಂಬುವವರಿಗೆ ಮದುವೆ ಮಾಡಿ ಕೊಟ್ಟೆವು.
ಮದುವೆಯ ಹೊತ್ತಿಗೆ ಅಕ್ಕ ಸಂಧ್ಯಾಳಿಗೂ ಮತ್ತು ನನಗೂ ಸರಕಾರಿ ನೌಕರಿ ಸಿಕ್ಕಿತ್ತು. ಹೀಗಾಗಿ ನಮ್ಮ ಸಮತಾಳಿಗೆ ನಾವೇ ನಮ್ಮ ಸ್ವಂತ ಹಣದಿಂದ Kodak ಕ್ಯಾಮರಾ ಖರೀದಿಸಿದೆವು. ????? ರೀಲ್ ಕ್ಯಾಮರಾ ಆಗ ಫೇಮಸ್. ಈಗ ನಮಗೇ ನಗು ಬರುತ್ತದೆ. ಎಲ್ಲೂ ಕಾಣ ಸಿಗಲಿಕ್ಕಿಲ್ಲ ಅದು ಈಗ.
ನಮ್ಮ ದೊಡ್ಡಕ್ಕ ಬಾವನದು ಆದರ್ಶ ದಾಂಪತ್ಯ. ನಮ್ಮ ಅಕ್ಕ ನಿಜಕ್ಕೂ ಸಾಧ್ವಿ. ಹುಳುಕು ಕೊಳಕುಗಳಿಲ್ಲದೇ ತುಂಬು ಸಂಸಾರ ತೂಗಿಸಿಕೊಂಡು ಹೋಗುವವಳು. ಬಾವನೋ ಹಾಸ್ಯ ಚಕ್ರವರ್ತಿ ನರಸಿಂಹ ರಾಜು ಇದ್ದ ಹಾಗೆ. ತಮಾಷೆ ಮಾಡುವುದಕ್ಕೆ ಎತ್ತಿದ ಕೈ. ನಮ್ಮ ಅಕ್ಕ ಅಳುವುದಕ್ಕೆ ಎತ್ತಿದ ಕೈ. ಭಾವನಾ ಜೀವಿಗಳಾದ ನಾವು ಸಮತಾಳ ಮದುವೆಯಲ್ಲಂತೂ ಕೋರಸ್ ಆಗಿ ಅತ್ತೆವು.???????????
ಆದರೆ ಒಂದಿಷ್ಟು ಕಾಲ ಸಂದುವ ಹೊತ್ತಿಗೆ ಜ್ವರವೊಂದು ನೆಪವಾಯ್ತು. ನಮ್ಮಕ್ಕನನ್ನು ಉಳಿಸಿಕೊಳ್ಳುವುದಕ್ಕೇ ನಮ್ಮಿಂದ ಆಗಲಿಲ್ಲ. ನಮ್ಮ ಬಾವನಂತೂ ಈಗಲೂ ಅಂತರಂಗದಿಂದ ಬೇಯುವುದನ್ನು ನಮ್ಮ ಹತ್ತಿರ ನೋಡಲಿಕ್ಕಾಗುವುದಿಲ್ಲ. ಅಕ್ಕ ಇಲ್ಲದ ಕೊರತೆ ನಮ್ಮ ಸಮತಾಳ ತಂಗಿ ಶ್ರೀಗೌರಿಗೆ ಕಾಡಬಾರದೆಂದೇ ಅವಳನ್ನು ಹೊತ್ತುಕೊಂಡು ಹೋಗಿ ಮದುವೆಯ ಮಂಟಪಕ್ಕೆ ಬಿಟ್ಟು ಬಂದಿದ್ದೇನೆ.
ಸಮತಾಳನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುವ ಕಿರಣ್ ಅತ್ಯಂತ ಸಭ್ಯ ಮನುಷ್ಯ. ಗೋವಾ ರಾಜ್ಯದ ಮಡಗಾಂವಿನಲ್ಲಿ ಸ್ವಂತ ಉದ್ಯೋಗಿಯಾಗಿರುವ ಕಿರಣ್ ಮತ್ತು ಸಮತಾ ದಂಪತಿಗೆ ಸಮೃದ್ಧನೆಂಬ ಮುದ್ದಾದ ಮಗನಿದ್ದಾನೆ. ಸಮತಾ ಯಾವುದಕ್ಕೂ ಕಡಿಮೆಯಿಲ್ಲದಂತೆ ಬಿಂದಾಸಾಗಿ ಬದುಕುತ್ತಾಳೆ. ಅವಳು ನಮಗೆ ಯಾವತ್ತೂ ಬತ್ತದ ಒಲವಿನ ಒರತೆ. ಎಷ್ಟೇ ತಮಾಷೆ ಮಾಡಿದರೂ ನಗುನಗುತ್ತಲೇ ಸ್ವೀಕರಿಸುವ ಸಮತಾ ಯಾವ ದೊಡ್ಡ ವ್ಯಕ್ತಿಗೇನೂ ಕಡಿಮೆಯಲ್ಲ. ದೊಡ್ಡ ಕೆಲಸ ಮಾಡಿದವರು ಮಾತ್ರ ದೊಡ್ಡವರಾಗುವುದಿಲ್ಲ. ಮನುಷ್ಯನಿಗಿರುವ ಸದ್ಭಾವನೆಯೇ ಅವನನ್ನು ದೊಡ್ಡವನನ್ನಾಗಿಸುತ್ತದೆ.
ಸಮತಾ, ಕಿರಣ್ ಭಾವ, ಸಮೃದ್ಧನಿಗೆ ನನ್ನ ಇಷ್ಟ ದೈವ ಇಡಗುಂಜಿ ಮಹಾಗಣಪತಿಯು ಸುಖ, ಶಾಂತಿ, ನೆಮ್ಮದಿ, ಆರೋಗ್ಯ, ಐಶ್ವರ್ಯಗಳನ್ನು ದಯಪಾಲಿಸಲೆಂದು ಪ್ರಾರ್ಥಿಸುತ್ತೇನೆ.
ಸಮತಾಳಿಗೆ ಪುಟ್ಟಿಮಾವನ ಶುಭ ಹಾರೈಕೆಗಳು
✍ಸಂದೀಪ ಎಸ್ ಭಟ್ಟ