ಆತ್ಮೀಯ ಓದುಗರೇ……
ಬಹುದಿನಗಳ ಕನಸು ನನಸಾಗುತ್ತಿರುವ ಕ್ಷಣವಿದು. ನನ್ನ ಮಗ ಶ್ರೀಧರ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ “ಸರಸ್ವತಿ ವಿದ್ಯಾಕೇಂದ್ರ”ದಲ್ಲಿ 5 ನೇ ತರಗತಿಯಲ್ಲಿ ಓದುತ್ತಿದ್ದ ವರ್ಷವದು…..ಆತ ಮನೆಗೆ ಬಂದಕೂಡಲೇ ಗುನುಗುನಿಸುತ್ತಿದ್ದ ಕಬೀರರ ದೋಹೆಗಳು ಅಂದು ನನಗೆ ನೀಡಿದ್ದ ಪ್ರೇರಣೆಯೇ ಇಂದು ಈ ಅಂಕಣ ಬೆಳಕಿನೆಡೆಗೆ…. ಮೂಡಿಬರಲು ಕಾರಣ. ಕಬೀರರ ದೋಹೆಗಳ ಬಗ್ಗೆ ಏನೂ ಗೊತ್ತಿಲ್ಲದ ಆ ಕಾಲದಲ್ಲಿ ನನ್ನಲ್ಲಿ ಆ ಕುರಿತಾದ ಆಸಕ್ತಿ ಮೂಡಿಸಿದ್ದು ನನ್ನ ಮಗನ ಆ ಗುನುಗುಟ್ಟುವಿಕೆ. ಕನ್ನಡ ದೋಹೆಗಳಿಗಾಗಿ ಬೆಂಗಳೂರಿನಲ್ಲೂ ಹುಡುಕಾಡುವಂತೆ ಮಾಡಿ ಅಂತಿಮವಾಗಿ ಶ್ರೀ ರಾಮಕೃಷ್ಣಾಶ್ರಮದಲ್ಲಿ ಸ್ವಾಮಿ ಪುರುಷೋತ್ತಮಾನಂದರ ಕನ್ನಡ ಅನುವಾದ ದೊರಕಿದಾಗ ಆದ ಆನಂದ ಅದು ವರ್ಣನಾತೀತ.
ಆ ಹುಡುಕಾಟಕ್ಕೆ ತನ್ಮೂಲಕವಾಗಿ ದೊರಕಿದ ಆನಂದಕ್ಕೆ ಕಾರಣೀಕರ್ತನಾದ ನನ್ನ ಮಗ ಶ್ರೀಧರ ನಿಗೆ ಈ ಅಂಕಣದ ಅರ್ಪಣೆ. ಸತ್ವಾಧಾರ ನಮ್ಮ ಗೆಳೆಯರ ಬಳಗದ ಕನಸಿನ ಕೂಸು. ಸತ್ವದಿಂದ ತುಂಬಿ ತುಳುಕುತ್ತಿರುವ ಕಬೀರರ ದೋಹೆ ಗಳ ಅಂತರಂಗ ಬಹಿರಂಗವಾಗಲು ಸತ್ವಾಧಾರ ಕ್ಕಿಂತ ಉತ್ತಮ ವೇದಿಕೆ ಇನ್ನೊಂದಿರಲು ಸಾಧ್ಯವಿಲ್ಲ ಎಂಬುದು ನನ್ನ ಅಂಬೋಣ. ಅದಕ್ಕೇ ಗೆಳೆಯ ಗಣೇಶ ಜೋಶಿಯೊಂದಿಗೆ ಚರ್ಚಿಸಿ ನಿಮಗೆ ದಿನಕ್ಕೊಂದು ದೋಹೆ ಯನ್ನು ಅರ್ಥವಿವರಣೆಯೊಂದಿಗೆ ಕೊಡಲು ಸಂಕಲ್ಪಿಸಿದ್ದೇನೆ. ಕಬೀರರ ದೋಹೆಗಳನ್ನು ಅಷ್ಟೇ ಸುಂದರವಾಗಿ ವಿವರಿಸುವುದು ಕಷ್ಟವಾದರೂ ನನ್ನ ಸೀಮಿತ ಸಾಮರ್ಥ್ಯದಲ್ಲಿ ಪ್ರಯತ್ನಿಸಿದ್ದೇನೆ. ಓದಿ…ನಿಮಗೆ ಇಷ್ಟವಾದರೆ ನಾನು ಪಟ್ಟ ಕಷ್ಟ ಸಾರ್ಥಕ…..
ನಿಮ್ಮವ.
ರವೀಂದ್ರ ಭಟ್ಟ ಸೂರಿ
ಹೆಗಡೆ-ಕುಮಟಾ(ಉ.ಕ.)
9448028443