Home Article ಹಾಲಿ ಶಾಸಕರ ಊರಿನಲ್ಲಿಯೇ ಬಿಜೆಪಿ ಬೆಂಬಲಿತರ ಗೆಲುವು : ಚುನಾವಣೆ ನಡೆದ 9 ಗ್ರಾ.ಪಂ.ಗಳಲ್ಲಿ 6...

ಹಾಲಿ ಶಾಸಕರ ಊರಿನಲ್ಲಿಯೇ ಬಿಜೆಪಿ ಬೆಂಬಲಿತರ ಗೆಲುವು : ಚುನಾವಣೆ ನಡೆದ 9 ಗ್ರಾ.ಪಂ.ಗಳಲ್ಲಿ 6 ಬಿಜೆಪಿ ತೆಕ್ಕೆಗೆ.

ಕಾರವಾರ : ಹಾಲಿ ಶಾಸಕ ಸತೀಶ ಸೈಲ್ ಅವರ ಊರಾದ ಮಾಜಾಳಿ ಗ್ರಾಮ ಪಂಚಾಯತ್‌ದಲ್ಲೇ ಬಿಜೆಪಿ ಬೆಂಬಲಿತ ಅಧ್ಯಕ್ಷ- ಉಪಾಧ್ಯಕ್ಷರು ಆಯ್ಕೆಯಾಗಿದ್ದು, ಸತೀಶ್ ಸೈಲ್ ಅವರಿಗೆ ತೀವ್ರ ಮುಖಭಂಗ ಆದಂತಾಗಿದೆ. ಬುಧವಾರ ಚುನಾವಣೆ ನಡೆದ 9 ಗ್ರಾ.ಪಂ.ಗಳಲ್ಲಿ 6 ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ. ಅಮದಳ್ಳಿ ಗ್ರಾಪಂನಲ್ಲಿ ಉಪಾಧ್ಯಕ್ಷ ಸ್ಥಾನ ಲಭಿಸಿದೆ. ಮಾಜಾಳಿ, ಶಿರವಾಡ, ಹಣಕೋಣ, ದೇವಳಮಕ್ಕಿ, ಗೋಟೆಗಾಳಿ ಹಾಗೂ ಅಸ್ನೋಟಿ ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ. ತೀವ್ರ ಸ್ಪರ್ಧೆ ಇದ್ದ ಹಾಗೂ ಹಾಲಿ ಶಾಸಕರ ಊರಾದ ಮಾಜಾಳಿ ಗ್ರಾಪಂನಲ್ಲೇ ಬಿಜೆಪಿ ಬೆಂಬಲಿತರು ಅಧಿಕಾರಕ್ಕೇರಿದ್ದಾರೆ. ಮಾಜಾಳಿ ಗ್ರಾಪಂ ಅಧ್ಯಕ್ಷರಾಗಿ ಮಂಗಲಾ ಕೊಠಾರಕರ, ಉಪಾಧ್ಯಕ್ಷರಾಗಿ ವಿನಯಾ ಭಟ್ ಆಯ್ಕೆಯಾಗಿದ್ದಾರೆ. ಅಸ್ನೋಟಿ ಗ್ರಾಪಂ ಅಧ್ಯಕ್ಷರಾಗಿ ಸಂಜಯ ಸಾಳುಂಕೆ ಹಾಗೂ ಉಪಾಧ್ಯಕ್ಷರಾಗಿ ಅಶ್ವಿನಿ ಮಾಳ್ಸೇಕರ ಆಯ್ಕೆಯಾದರು. ಹಣಕೋಣ ಗ್ರಾಪಂ ಅಧ್ಯಕ್ಷರಾಗಿ ಶಾಂತಾರಾಮ ತಾಮ್ಸೆ ಹಾಗೂ ಉಪಾಧ್ಯಕ್ಷರಾಗಿ ಅನಿತಾ ಆಯ್ಕೆಯಾಗಿದ್ದಾರೆ. ಗೋಟೆಗಾಳಿ ಗ್ರಾಪಂ ಅಧ್ಯಕ್ಷರಾಗಿ ವರ್ಷಾ ಪಡುವಳಕರ ಹಾಗೂ ಉಪಾಧ್ಯಕ್ಷರಾಗಿ ಪ್ರಶಾಂತ ಗಾಂವಕರ ಆಯ್ಕೆಯಾದರು. ದೇವಳಮಕ್ಕಿ ಗ್ರಾಪಂ ಅಧ್ಯಕ್ಷರಾಗಿ ಸಂತೋಷ ಗೌಡ ಹಾಗೂ ಉಪಾಧ್ಯಕ್ಷರಾಗಿ ಕೋಮಲ ದೇಸಾಯಿ ಆಯ್ಕೆಯಾಗಿದ್ದಾರೆ. ಶಿರವಾಡ ಗ್ರಾಪಂ ಅಧ್ಯಕ್ಷರಾಗಿ ಅಶ್ವಿನಿ ದಿಲೀಪ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ದಿಲೀಪ ನಾಯ್ಕ ಆಯ್ಕೆಯಾಗಿದ್ದಾರೆ.

ಶಿರವಾಡ ಗ್ರಾಪಂಗೆ ಪತ್ನಿ ಹಾಗೂ ಪತಿ ಅಧ್ಯಕ್ಷ ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವುದು ಒಂದು ದಾಖಲೆಯಾಗಿದೆ. ಅಮದಳ್ಳಿ ಗ್ರಾಪಂ ಉಪಾಧ್ಯಕ್ಷರಾಗಿ ಕಲಾವತಿ ಯಾದೋಬಾ ದುರ್ಗೇಕರ ಆಯ್ಕೆಯಾದರು. ಬುಧವಾರ ಈ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷ, ಉಪಾಧ್ಯಕ್ಷರ ಹುದ್ದೆಗಳಿಗೆ ಚುನಾವಣೆ ನಡೆಯಿತು. ಭಾರತೀಯ ಜನತಾ ಪಕ್ಷದ ಬೆಂಬಲಿಗರು ಹೆಚ್ಚಿನ ಗ್ರಾಪಂಗಳಲ್ಲಿ ಅಧಿಕಾರಕ್ಕೆ ಏರುವ ಮೂಲಕ ಗ್ರಾಮೀಣ ಮಟ್ಟದಲ್ಲೂ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದoತಾಗಿದೆ. ಮಾಜಿ ಶಾಸಕಿ ರೂಪಾಲಿ ಎಸ್.ನಾಯ್ಕ ಕ್ಷೇತ್ರದಲ್ಲಿ ತಮ್ಮ ಹಿಡಿತ ಹೊಂದಿರುವುದು ಸಾಬೀತಾಗಿದೆ. ಸಂಭ್ರಮಾಚರಣೆ: ಬಿಜೆಪಿ ಹೆಚ್ಚಿನ ಗ್ರಾಮ ಪಂಚಾಯತಿಗಳಲ್ಲಿ ಅಧಿಕಾರ ಹಿಡಿದ ಕಾರಣ ಮಾಜಿ ಶಾಸಕಿಯ ಮನೆಗೆ ಆಗಮಿಸಿದ ನೂತನ ಅಧ್ಯಕ್ಷ, ಉಪಾಧ್ಯಕ್ಷರು, ಬಿಜೆಪಿ ಪ್ರತಿನಿಧಿಗಳು, ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿದರು. ರೂಪಾಲಿ ನಾಯ್ಕ ಕೂಡ ಆಯ್ಕೆಯಾದವರಿಗೆಲ್ಲ ಶಾಲು ಹೊದಿಸಿ, ಸಿಹಿ ತಿನ್ನಿಸಿ ಶುಭ ಕೋರಿದರು.