Home Article ಬದುಕಿಗೆ ಬಣ್ಣ ತುಂಬಿದವರು

ಬದುಕಿಗೆ ಬಣ್ಣ ತುಂಬಿದವರು

ನೋವು ನೀಡುವ, ಹಂಗಿಸುವ, ಕಾಲೆಳೆಯುವ, ಹಿಂಸಿಸುವ, ಸಲ್ಲದ ಕಿರುಕುಳ ಕೊಟ್ಟು ಚಂದ ನೋಡುವ ಜನ ನಮ್ಮ ಬದುಕಿನ ಬಣ್ಣವನ್ನು ಕೆಡಿಸಿ ರಾಡಿ ಎಬ್ಬಿಸುತ್ತಾರಷ್ಟೇ….. ಆದರೆ ನಮ್ಮ ದಿನಗಳಿಗೆ ನಲಿವು ತುಂಬಿದ, ಕಾಳಜಿ ತೋರಿದ, ನಮ್ಮ ಅಭ್ಯುದಯವನ್ನೇ ಮನಸಾರೆ ಹಾರೈಸಿದ ಜನ ನಮ್ಮ ಕೊನೆಯುಸಿರು ಇರುವವರೆಗೂ ನಿತ್ಯ ಸ್ಮರಣೀಯರಾಗುತ್ತಾರೆ. ಅಂತಹ ನನ್ನ ಬಳಗದ ಅನೇಕರ ಪರಿಚಯವನ್ನು ನಾನು ಮಾಡುವದಕ್ಕಾಗಿಯೇ ಈ ಅಂಕಣದೊಂದಿಗೆ ನಿಮ್ಮ ಎದುರಾಗುತ್ತಿದ್ದೇನೆ. ನನ್ನ ಬದುಕಿಗೆ ಬಣ್ಣ ತುಂಬಿದವರು ಇವರು.

ಡಾ|| ಜಿ.ಜಿ.ಹೆಗಡೆ, ಕುಮಟಾ.

ದೊಡ್ಡ ಮನುಷ್ಯರ ಬಗೆಗೆ ಬರೆದು ದೊಡ್ಡವನಾಗಬೇಕೆಂಬ ಹಂಬಲವಿಲ್ಲದ ನಾನು ಇಂದು ದೊಡ್ಡ ಮನುಷ್ಯರಾದರೂ ಸಣ್ಣವರ ಜೊತೆಗೂ ಬೆರೆಯುವ ಡಾ|| ಜಿ.ಜಿ. ಹೆಗಡೆಯವರ ಆತ್ಮೀಯತೆಯ ಕುರಿತಾಗಿ ಕೃತಜ್ಞತೆ ಅರ್ಪಿಸಬೇಕು. ಅದಕ್ಕಾಗಿ ಈ ಲೇಖನ ಮಾಲಿಕೆಯನ್ನು ಅವರಿಗರ್ಪಿಸುತ್ತಿದ್ದೇನೆ.
ಕೆನರಾ ಹೆಲ್ತ ಕೇರ್ ಸೆಂಟರ್ ಬಗ್ಗೋಣ…. ಎಂದು ಕರೆಯುವವರು ಕೆಲವೇ ಕೆಲವು ಜನ. ಆದರೆ ಡಾ ಜಿ.ಜಿ.ಹೆಗಡೆಯವರ ಹಾಸ್ಪಿಟಲ್ ಎಂದು ಕರೆಯುವವರೇ ಬಹಳಷ್ಟು ಮಂದಿ. ಹಲವಾರು ತಾಯಂದಿರ, ರೋಗಿಗಳ ಪಾಲಿಗೆ ಸಾಕ್ಷಾತ್ ದೇವರೇ ಆದ ಡಾ|| ಜಿ.ಜಿ.ಹೆಗಡೆ ಹಾಗೂ ಡಾ|| ಸೀತಾಲಕ್ಷ್ಮಿ ದಂಪತಿಗಳಿಗೆ ಅನವರತ ರೋಗಿಗಳ ಸೇವೆಯೇ ಬದುಕಿನ ಗುರಿ. ನಾಡಿನ ನಾನಾ ಭಾಗದ ಜನ ಈ ವೈದ್ಯ ದಂಪತಿಗಳನ್ನು ಹುಡುಕಿಕೊಂಡು ಬರುತ್ತಾರೆ.
ಡಾ|| ಜಿ.ಜಿ.ಹೆಗಡೆಯವರು ಅತ್ಯಂತ ಗಂಭೀರವಾಗಿರುವ ಸರಳ, ಸುಂದರ ಡಾಕ್ಟರ್. ಡಾಕ್ಟರ್ ನೋಡಿದ ಕೂಡಲೇ ಅರ್ಧ ರೋಗ ವಾಸಿಯಾದಂತೆ. ಸ್ತ್ರೀರೋಗ ತಜ್ಞರಾದರೂ ಬಹಳಷ್ಟು ಜನ ಅವರಲ್ಲಿಗೆ ಸಾಮಾನ್ಯ ರೋಗಿಯಾಗಿ ಬರುತ್ತಾರೆ. ಡಾ|| ಜಿ.ಜಿ.ಹೆಗಡೆಯವರಲ್ಲದಿದ್ದರೆ ನಾನು ಬದುಕುತ್ತಲೇ ಇರಲಿಲ್ಲ ಎಂಬ ಮಾತನ್ನು ನಾನು ಎಷ್ಟೋ ಜನರ ಬಾಯಲ್ಲಿ ಕೇಳಿದ್ದೇನೆ. ಅಂತಹ ಜಿ.ಜಿ.ಹೆಗಡೆಯವರು ಮಧ್ಯರಾತ್ರಿ ಬಂದು ಎಬ್ಬಿಸಿದರೂ ರೋಗಿಗಳನ್ನು ನೋಡುವುದಕ್ಕೆ ಬೇಸರಿಸುವವರಲ್ಲ. ಕಳೆದ ಮೂರ್ನಾಲ್ಕು ದಶಕಗಳಿಂದ ರೋಗಿಗಳ ಸೇವೆ ಮಾಡುತ್ತಾ ನಾಡಿನಾದ್ಯಂತ ಪ್ರಖ್ಯಾತರಾದ ಡಾ|| ಜಿ.ಜಿ.ಹೆಗಡೆಯವರು ನಮ್ಮ ಮಣ್ಣಿನ ನಿಜವಾದ ಆಸ್ತಿ.
ಡಾ|| ಜಿ.ಜಿ.ಹೆಗಡೆಯವರು ಸಾಮಾಜಿಕ ಜೀವಿಯಾಗಿಯೂ ಬದುಕಲು ಇಷ್ಟ ಪಡುವವರು. ಹೀಗಾಗಿ ಅವರು ಹಲವಾರು ಸಾಮಾಜಿಕ ಸಂಸ್ಥೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಳ್ಳುತ್ತಾರೆ. ತಾನು ವೈದ್ಯನಾಗಷ್ಟೇ ಅಲ್ಲದೇ ಸಮಾಜದ ಪ್ರತಿಯೊಬ್ಬರಿಗೂ ಹಲವಾರು ರೀತಿಯಲ್ಲಿ ಸ್ಪಂದಿಸಬೇಕೆಂಬುದು ಅವರ ಮನದಾಳದ ಬಯಕೆ. ರಾಜಕೀಯ ರಂಗದಲ್ಲೂ ಅವರು ತಮ್ಮನ್ನು ತಾವು ತೊಡಗಿಸಿಕೊಂಡವರು.
ಡಾ|| ಜಿ.ಜಿ.ಹೆಗಡೆಯವರನ್ನು ನಮ್ಮ ಮನೆಗೊಮ್ಮೆ ಕರೆಸಿಕೊಳ್ಳಬೇಕೆಂದು ನನಗೆ ಬಹಳ ಆಸೆಯಿತ್ತು. ಒಮ್ಮೆ ನಮ್ಮ ಮನೆಯಂಗಳದಲ್ಲಿ ಗಾನ-ದಾನ-ಯಾನ ಎನ್ನುವ ವಿನೂತನ ಕಾರ್ಯಕ್ರಮ ಏರ್ಪಡಿಸಿ ಅವರನ್ನು ಕರೆದು ಬರಬೇಕೆಂದು ಕುಮಟಾಕ್ಕೆ ಹೋಗಿದ್ದೆ. ಪ್ರತಿಷ್ಠಿತರಾದವರಿಗೆ ನಮ್ಮಂತಹ ಸಾವಿರಾರು ಸಾಮಾನ್ಯರು ದಿನವೂ ಸಿಗುತ್ತಾರೆ. ಮದುವೆ, ಉಪನಯನ, ಅದೂ ಇದೂ ಅಂತ ನೂರಾರು ಆಮಂತ್ರಣ ಅವರ ಟೇಬಲ್ಲಿನ ಮೇಲಿರುತ್ತದೆ. ಹೋಗುವುದಿರಲಿ…ಒಮ್ಮೊಮ್ಮೆ ಅದನ್ನು ನೋಡಿ ಓದುವುದಕ್ಕೂ ಅವರಿಗೆ ಪುರುಸೊತ್ತು ಇರುವುದಿಲ್ಲ. ಆದರೂ ಕರೆಯದೇ ಇರುವುದು ಸರಿಯಲ್ಲವೆಂದು ನಾನು ಧೈರ್ಯ ಮಾಡಿ ಹೋದೆ. ಡಾಕ್ಟರ್ ನನಗೆ ಇಂತಿಷ್ಟು ಹೊತ್ತಿಗೆ ಬರಬೇಕೆಂದು ಮೊದಲೇ ಸೂಚಿಸಿದ್ದರಿಂದ ಸಮಯಕ್ಕೆ ಸರಿಯಾಗಿ ನಾನು ಅವರನ್ನು ಕಾಣಲು ಹೋದೆ. ಡಾಕ್ಟರ್ ನನ್ನ ಕಂಡ ಕೂಡಲೇ ಸಂದೀಪ್…….ಏಳು ಮನೆಗೇ ಹೋಗುವ ಅಂತ ನನ್ನನ್ನು ಅತ್ಯಂತ ಗೌರವಾದರಗಳಿಂದ ಮನೆಗೆ ಕರೆದುಕೊಂಡು ಹೋದರು. ಬೇಡವೆಂದರೂ ಚಹಾ ಮಾಡಿಸಿದರು. ನನ್ನ ಹತ್ತಿರ ಅದೆಷ್ಟೋ ವರ್ಷಗಳ ಒಡನಾಟವಿರುವರಂತೆ ಆತ್ಮೀಯವಾಗಿ ಸಂಭಾಷಣೆ ನಡೆಸಿದರು. ನನ್ನ ಕಾರ್ಯ ಸಾಧನೆಗಾಗಿ ಬಾಯ್ತುಂಬ ಶ್ಲಾಘಿಸಿದರು. ಮತ್ತು ಬಂದೇ ಬರುತ್ತೇನೆಂಬ ಆಶ್ವಾಸನೆ ಇತ್ತರು.
‌ಕೆಲವೊಮ್ಮೆ ‘ಬರುತ್ತೇನೆ’. ಎಂದು ಹೇಳುವುದು ವೈದ್ಯರಿಗೆ ರೂಢಿಯಾಗಿ ಬಿಟ್ಟಿರುತ್ತದೆ. ಆದರೆ ಕಾರ್ಯಕ್ರಮಗಳಿಗೆ ಹೋಗುವುದು ಅವರ ಜೊತೆ ಸಮಯ ಕೊಡುವುದು ತುಂಬಾ ಕಷ್ಟದ ಕೆಲಸ. ಅದರಲ್ಲೂ ಆಸ್ಪತ್ರೆಯ ತುಂಬಾ ರೋಗಿಗಳಿಂದ ತುಂಬಿಕೊಂಡಿರುವ ಡಾ|| ಜಿ.ಜಿ.ಹೆಗಡೆಯವರು ನನ್ನ ಹತ್ತಿರ ಸುಮ್ಮನೆ….ಪ್ರೀತಿಗಾಗಿ ಬರುತ್ತೇನೆ ಎನ್ನುತ್ತಾರೆ….ಆದರೆ ಅವರು ಬರುವುದಿಲ್ಲ ಎನ್ನುವುದು ನನ್ನ ಮನಸ್ಸಿಗೆ ಖಾತ್ರಿಯಿತ್ತು. ಆದರೂ ಹೊರಡುವಾಗ ಡಾಕ್ಟರ್ ನಿನ್ನ ಕೆಲಸಗಳಿಗೆ ನನ್ನ ಬೆಂಬಲ ಸದಾ ಇರುತ್ತದೆಂದು ನನ್ನ ಬೆನ್ನು ತಟ್ಟಿದರು.
ನನ್ನ ಗಾನ-ದಾನ-ಯಾನ ಕಾರ್ಯಕ್ರಮ ಇನ್ನೇನು ಪ್ರಾರಂಭವಾಗುತ್ತದೆ ಎನ್ನುವಷ್ಟರಲ್ಲಿ ನಮ್ಮ ಡಾಕ್ಟರ್ ಹಾಜರ್. ನನಗೆ ಪರಮಾಶ್ಚರ್ಯವಾಗಿ ಹೋಯ್ತು. ಸಂದೀಪನ ಮನೆಯಂಗಳಕ್ಕೆ ಬಂದು ಅವಸರದ ನಡುವೆಯೂ ಹೃನ್ಮನ ತಣಿಸುವಂತೆ 15 ನಿಮಿಷ ವಾಗ್ಝರಿ ಹರಿಸಿದ ಡಾಕ್ಟರ್ ನನ್ನ ಅರಿವಿನ ಪರಿಧಿಯನ್ನೂ ದಾಟಿ ಆಪ್ತರಾದರು. ನಮ್ಮ ಮಕ್ಕಳಿಗೆ ತಾನೂ ಪ್ರೀತಿಯಿಂದ ಪುಸ್ತಕ ಹಂಚಿದರು.
ಕೆಲವೊಮ್ಮೆ ಅವರು ದೊಡ್ಡ ಮನುಷ್ಯರೆಂದು ನಾವು ಅವರ ಹತ್ತಿರವೇ ಹೋಗುವುದಿಲ್ಲ. ಆದರೆ ಅಂಥವರಲ್ಲೂ ಮಾನವೀಯ ಸ್ಪಂದನೆಗಳು ಸಹಜವಾಗಿಯೇ ಇರುತ್ತವೆ ಎನ್ನುವುದಕ್ಕೆ ಡಾ|| ಜಿ.ಜಿ.ಹೆಗಡೆ ಸಾಕ್ಷಿ. ಅವರ ಪ್ರೀತಿಗೆ ನಾನು ಶರಣು.
ಇಂದಿಗೂ ಅವರು ನನ್ನ ಬಳಗದಲ್ಲಿದ್ದು ಬಿಡುವಾದಾಗ ಸ್ಪಂದಿಸುತ್ತಾರೆ. ಶುಭಾಶಯ ಕೋರುತ್ತಾರೆ. ನಾನು ಅತ್ಯಂತ ಗೌರವಾದರಗಳಿಂದ ನೋಡುವ ವ್ಯಕ್ತಿ ಅವರು. ವೈದ್ಯಕೀಯ ಕ್ಷೇತ್ರದಲ್ಲಿ ಇಷ್ಟೊಂದು ಹೆಸರು ಮಾಡಿದ್ದರೂ ನಿಗರ್ವಿಯಾಗಿರುವ ಅವರನ್ನು ನೋಡಿ ಕಲಿಯುವುದು ಬೇಕಾದಷ್ಟಿದೆ. ಡಾ|| ಜಿ.ಜಿ.ಹೆಗಡೆ ವೈದ್ಯ ರತ್ನ.
ನಾನು ಅವರಿಗೆ ಎಂದೂ disturb ಮಾಡುವುದಿಲ್ಲ. ಅವರ ಸ್ನೇಹವನ್ನು ದುರುಪಯೋಗ ಪಡಿಸಿಕೊಂಡಿದ್ದೂ ಇಲ್ಲ. ಡಾಕ್ಟರ್ ಹೆಸರು ಹೇಳಿಕೊಂಡು ಕೆಲಸ ಮಾಡಿಸಿಕೊಂಡು ಬರುವ ಸ್ವಭಾವವೂ ನನ್ನದಲ್ಲ. ಆದರೆ ನಮ್ಮ ಡಾಕ್ಟರ್ ಹೀಗೂ ಇದ್ದಾರೆ ಎನ್ನುವುದನ್ನು ಸ್ಮರಿಸಿ ಬರೆಯದಿದ್ದರೆ ಅದು ನನ್ನ ಬಳಗದ ಬಹಳಷ್ಟು ಜನಕ್ಕೆ ಗೊತ್ತೇ ಇರುವುದಿಲ್ಲ ಎನ್ನುವ ಕಾರಣಕ್ಕಾಗಿ ಬರೆದೆ. ಸರ್….ನಿಮ್ಮ ಈ ಸೇವೆ ಸದಾ ಮಾದರಿ. ಮಾರ್ಗದರ್ಶಿ.
ನನ್ನ ಇಷ್ಟದೈವ ಇಡಗುಂಜಿ ಮಹಾಗಣಪತಿಯು ಡಾ||ಜಿ.ಜಿ.ಹೆಗಡೆಯವರು ಹಾಗೂ ಅವರ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ ನೆಮ್ಮದಿಯನ್ನಿತ್ತು ಹರಸಲೆಂದು ಪ್ರಾರ್ಥಿಸುತ್ತೇನೆ.

ಡಾ|| ಜಿ.ಜಿ.ಹೆಗಡೆಯವರಿಗೆ ಸಂದೀಪನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ