ಬೇಸರ, ನೋವು, ಟೀಕೆಗಳನ್ನು ಕೊಂಡುಕೊಳ್ಳುವದಕ್ಕೆ ಯಾರೂ ಬಯಸುವುದಿಲ್ಲ. ಹಾಗಂತ ನಾನೂ ಅದನ್ನು ಮಾರಲಿಕ್ಕೆ ಸಿದ್ಧನಿಲ್ಲ. ಮುಂದೆ ಬಹಳ ಚೆನ್ನಾಗಿ ಮಾತನಾಡಿಸಿ ಹಿಂಬದಿಯಿಂದ ನಮ್ಮನ್ನು ಗೇಲಿ ಮಾಡುವ ಜನ ಮಾರಿಗೊಬ್ಬರು ಸಿಗುತ್ತಾರೆ. ಆದರೆ ಹಿಂಬದಿಯಿಂದ ನಮ್ಮನ್ನು ಹೀಗಳೆದಾಗಲೂ ನಮ್ಮನ್ನು ಬಿಟ್ಟು ಕೊಡದ ಜನರು ವಿರಳಾತಿ ವಿರಳ. ಇನ್ನೊಬ್ಬರು ನಮ್ಮನ್ನು ಗೌರವಿಸಿದಾಗ, ನಗಿಸಿದಾಗ, ಪ್ರೀತಿಯಿಂದ ನಾಲ್ಕು ಮಾತಾಡಿದಾಗ, ಆತಿಥ್ಯ ಮಾಡಿದಾಗ ನಮಗಾಗುವ ಆನಂದ ಅದೆಷ್ಟು. ಹಾಗೆ ಸಂತೋಷಿಸುವಾಗ ನಮ್ಮಿಂದಲೂ ಇತರರು ಬಯಸುವುದು ಅದನ್ನೇ ಎಂಬುದನ್ನು ನಾವು ಯಾವತ್ತೂ ಮರೆಯಬಾರದು. ಆಕಸ್ಮಿಕವಾಗಿ ಭೇಟಿಯಾದರೂ ಮರೆಯದಂಥ ನೆನಪುಳಿಸುವ ಅನೇಕ ಸಹೃದಯಿ ವ್ಯಕ್ತಿಗಳನ್ನಿಲ್ಲಿ ಅಕ್ಷರಗಳ ಮೂಲಕ ಅನಾವರಣಗೊಳಿಸುವ ಚಿಕ್ಕ ಪ್ರಯತ್ನ ನನ್ನದು. ನನ್ನ ಬದುಕಿಗೆ ಬಣ್ಣ ತುಂಬಿದವರಿವರು.

ಡಾ || ಶ್ರೀಪಾದ ಶೆಟ್ಟಿ ( ವಿಶ್ರಾಂತ ಪ್ರಾಧ್ಯಾಪಕರು )

ಮಾತು ಬೆಳ್ಳಿ ಮೌನ ಬಂಗಾರವೆಂಬುದು ಗೊತ್ತು ನನಗೆ. ಬಂಗಾರದ ಬೆಲೆ ಜಾಸ್ತಿ ಆದಾಗೆಲ್ಲಾ ಭಯವೂ ಶುರುವಾಗುತ್ತದೆ. ಮಾತಾಡುವವರಿರಬೇಕು ಮನೆಯಲ್ಲಿ. ಯಾವಾಗಲೂ ಮೌನವಾಗಿರುವವರು ಒಂದೇ ಒಂದು ಮಾತನ್ನು ಸರಕ್ಕನೇ ಆಡಿದರೂ ಸಹಿಸಿಕೊಳ್ಳಲಾರದಷ್ಟು ತೀಕ್ಷ್ಣವಾಗಿರುತ್ತದೆ. ಹಾಗೆಯೇ ಯಾವಾಗಲೂ ಮಾತನಾಡುತ್ತಿರುವವರೂ ತಕ್ಷಣಕ್ಕೆ ಮೌನವಾಗಿ ಬಿಟ್ಟರೆ ತಡೆಯಲಾರದ ವೇದನೆಯಾಗುತ್ತದೆ. ಮೌನವನ್ನು ಮಾತಾಡಿಸಬಲ್ಲ….ಈ ಮಾತಿನ ಮಲ್ಲ. ಡಾ|| ಶ್ರೀಪಾದ ಶೆಟ್ಟರು ನಾಡು ಕಂಡ ಒಬ್ಬ ಶ್ರೇಷ್ಠ ಮಾತುಗಾರ.


ವಿಶ್ರಾಂತ ಪ್ರಾಧ್ಯಾಪಕರಾಗಿರುವ ಶ್ರೀಪಾದ ಶೆಟ್ಟರು ಅಂಕೋಲಾ ಹಾಗೂ ಹೊನ್ನಾವರ ಕಾಲೇಜಿನಲ್ಲಿ ಬಹಳ ಕಾಲ ಸೇವೆ ಸಲ್ಲಿಸಿ ವಿದ್ಯಾರ್ಥಿಗಳಲ್ಲಿ ಕನ್ನಡ ಪ್ರೀತಿ ಬೆಳೆಸಿದವರು. ಸದಾ ತಾವೂ ನಕ್ಕು ಇತರರನ್ನೂ ನಗಿಸುವ ಸರಳ ಸಜ್ಜನಿಕೆಯ ಡಾ|| ಶ್ರೀಪಾದ ಶೆಟ್ಟರ ಮನೆಯ ಪಕ್ಕದಲ್ಲೇ ನಮ್ಮ ಅಜ್ಜನ ಮನೆಯಾಗಿತ್ತು. ನನ್ನ ಆಯಿಯ ಸಂಗಡ ಶ್ರೀಪಾದ ಶೆಟ್ಟರು ಶಾಲೆಗೆ ಹೋದವರಂತೆ. ಸಣ್ಣವರಾದ ಶ್ರೀಪಾದರನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸುರಕಟ್ಟೆಗೆ ಕರೆದುಕೊಂಡು ಹೋಗುವ ದಿನಗಳನ್ನು ಆಯಿ ಈಗಲೂ ನೆನೆಯುತ್ತಾಳೆ. ಹೀಗಾಗಿ ಡಾ || ಶ್ರೀಪಾದ ಶೆಟ್ಟರು ನನಗೆ ತುಂಬಾ ಆತ್ಮೀಯತೆಯಿಂದ ಏನೋ ಮುಕಾಂಬಕ್ಕನ ಮಾಣಿ ಎಂತಲೇ ಮಾತಾಡಿಸುತ್ತಾರೆ.
ತೀರಾ ಬಡತನದ ಮಧ್ಯೆಯೂ ತಲೆಯೆತ್ತಿ ಬದುಕುವಂತಾಗಿದ್ದು ಡಾ|| ಶ್ರೀಪಾದ ಶೆಟ್ಟರ ಅಮೋಘ ಸಾಧನೆ. ಪ್ರಖ್ಯಾತ ಸಾಹಿತಿಗಳಾಗಿ, ಉಪನ್ಯಾಸಕರಾಗಿ, ಅವರು ನಾಡಿನ ಹಲವೆಡೆ ಚಿರ ಪರಿಚಿತ. ಮುತ್ತಿನಂತಹ ಮಾತುಗಳನ್ನು ಉದುರಿಸುವ ಅವರಿಗೆ ಸಾವಿರ ಸಾವಿರ ಅಭಿಮಾನಿಗಳಾಗಿದ್ದಾರೆ. ಶ್ರೀಪಾದ ಶೆಟ್ಟರ ಮಾತುಗಳನ್ನು ಕೇಳುವುದಕ್ಕಾಗಿಯೇ ಕಾರ್ಯಕ್ರಮಕ್ಕೆ ಹೋಗುವವರನ್ನೂ ಕಂಡಿದ್ದೇನೆ ನಾನು. ಹಾಸ್ಯದ ಹೊನಲಲ್ಲೂ ಗಂಭೀರ ಚಿಂತನೆ ಹೊರಡಿಸಬಲ್ಲ ಅವರ ಮಾತುಗಳಿಗೆ ನಿಜವಾಗಿಯೂ ಮಾರು ಹೋಗಿದ್ದೇನೆ ನಾನು.
ಶ್ರೀಪಾದ ಶೆಟ್ಟರು ಚೌಪದಿ ಬ್ರಹ್ಮ ದಿನಕರ ದೇಸಾಯಿಯವರ ಅಪ್ಪಟ ಅಭಿಮಾನಿಗಳು. ದಿನಕರ ದೇಸಾಯಿಯವರ ಚುಟುಕುಗಳ ಸರಣಿ ಉಪನ್ಯಾಸ ಮಾಲಿಕೆಯನ್ನು ಆಕಾಶವಾಣಿ ಭಿತ್ತರಿಸಿದ್ದು ಚಂದನ ವಾಹಿನಿಯಲ್ಲಿ ಅವರ ಮಾತಿನ ಮಂಟಪ ಪ್ರಸಾರವಾಗುತ್ತಿತ್ತು. ಕನ್ನಡ ಹಾಗೂ English ಎರಡೂ ಭಾಷೆಗಳಲ್ಲಿ ಪ್ರಭುತ್ವವಿರುವ ಶ್ರೀಪಾದ ಶೆಟ್ಟರಂಥವರು ಸಿಗುವುದು ತುಂಬಾ ಅಪರೂಪ.
ಸ್ವಲ್ಪವೂ ಗರ್ವವಿಲ್ಲದ ಶ್ರೀಪಾದ ಶೆಟ್ಟರು ತರಕಾರಿ ಅಂಗಡಿಯವನಿಂದ ಹಿಡಿದು ರಿಕ್ಷಾ ಚಾಲಕರವರೆಗೆ, ಮಕ್ಕಳಿಂದ ಹಿಡಿದು ಮುದುಕರವರೆಗೆ, ಜನ ಸಾಮಾನ್ಯನಿಂದ ಹಿಡಿದು ಮಂತ್ರಿ ಮಹೋದಯರವರೆಗೆ ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ ಮಾತನಾಡಿಸುತ್ತಾರೆ. ಶ್ರೀಪಾದ ಶೆಟ್ಟರು ಒಂದು ಕ್ಷಣ ಸುಮ್ಮನೆ ಕುಳಿತುಕೊಳ್ಳುವ ಜನ ಅಲ್ಲ. ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅವರು ಸದಾ ಅವಸರದಲ್ಲಿರುತ್ತಾರೆ. ಬಯಕೆ ತೋಟದ ಬೇಲಿ, ಚಿತ್ರಕ್ಕೆ ಬಣ್ಣ ತುಂಬಿದವರು, ಹೀಗೆ ಹಲವಾರು ಹೊತ್ತಿಗೆಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆಯಾಗಿ ನೀಡಿದ ಅವರ ಲೇಖನಗಳು ಅವರಷ್ಟೇ ಸರಳ, ಸುಂದರ.
ಡಾ|| ಶ್ರೀಪಾದ ಶೆಟ್ಟರಿಗೆ ವಾಗ್ದೇವಿಯೇ ಒಲಿದಂತೆ ಕಾಣುವುದು ನನಗೆ. ಎಷ್ಟೇ ಜನ ವೇದಿಕೆಯ ಮೇಲಿರಲಿ…..ಯಾವುದೇ ವೇದಿಕೆಯಾಗಿರಲಿ….. ಶ್ರೀಪಾದ ಶೆಟ್ಟರು ಮಾತಾಡಿದ ಮೇಲೆ ಉಳಿದವರಿದೆಲ್ಲ ಸಪ್ಪೆಯೆನಿಸಿ ಬಿಡುತ್ತದೆ. ಗ್ರಾಮ್ಯ ಸೊಗಡಿನ ಭಾಷೆಯಲ್ಲಿ ಅವರು ಭಾಷಣ ಮಾಡುತ್ತಿದ್ದರೆ ನಿದ್ದೆ ಬಂದು ತೂಕಡಿಸುತ್ತಿದ್ದವನಿಗೂ ಮತ್ತೆ ಎಚ್ಚರಾಗಿ ಕಿವಿಗೊಟ್ಟು ಕೇಳೋಣ ಎನಿಸಿಬಿಡುತ್ತದೆ. ? ಮಸ್ತ…ಮಜಾ. ಅವರ ಉದಾಹರಣೆಗಳೋ…. ಅವರು ನೀಡುವ ದೃಷ್ಟಾಂತಗಳೋ, ಅವರು ಉಪಯೋಗಿಸುವ ಸುಭಾಷಿತ, ನಾಣ್ಣುಡಿಗಳೋ, ಹಳಗನ್ನಡ ಹೊಸಗನ್ನಡ ಕವಿತೆಗಳೋ….ಮಾತಿನ ಮೃಷ್ಟಾನ್ನ ಭೋಜನ ಅದು. ತಮ್ಮ ಉದ್ದುದ್ದದ ಕೈ ಬೀಸಿ ಅವರು ಮಾತನಾಡುತ್ತಿದ್ದರೆ ಕೇಳಲು ಯಾರನ್ನೂ ಕೈಬೀಸಿ ಕರೆಯಬೇಕೆಂದಿಲ್ಲ. ?
ನುಡಿದಂತೆ ನಡೆವವರಾದ ಶ್ರೀಪಾದ ಶೆಟ್ಟರಿಂದ ಕಲಿತ ವಿದ್ಯಾರ್ಥಿಗಳು ನಿಜವಾಗಿಯೂ ಧನ್ಯತಾ ಭಾವದಿಂದ ಬೀಗುತ್ತಾರೆ. ವಾಸ್ತವವನ್ನು ಖಡಾಖಂಡಿತವಾಗಿ ಹೇಳುವ ಅವರು ಮುಲಾಜಿಗೆ ಒಳಪಡುವ ವ್ಯಕ್ತಿಯಲ್ಲ. ಎಷ್ಟೆಷ್ಟೋ ಪತ್ರಿಕೆಗಳಲ್ಲಿ ಅವರ ಅಂಕಣಗಳು ಪ್ರಕಟವಾಗಿವೆ. ಹಲವಾರು ಸಾರ್ವಜನಿಕ ಸನ್ಮಾನಗಳು ಅವರಿಗೆ ಸಂದಿವೆ. ಹಾಗಿದ್ದೂ ಅವರು ಬಾಗಿದವರೇ ಹೊರತು ಬೀಗಿದವರಲ್ಲ.
ನನ್ನ ಆಯಿಯನ್ನು ಒಮ್ಮೆ ಕರೆದುಕೊಂಡು ಶ್ರೀಪಾದ ಶೆಟ್ಟರ ಮನೆಗೆ ಹೋಗಿದ್ದೆ. ತಮ್ಮ ಬಾಲ್ಯದ ದಿನಗಳನ್ನು ನೆನೆಸಿಕೊಳ್ಳುತ್ತಾ ಶ್ರೀಪಾದ ಶೆಟ್ಟರು ಆಯಿಗೆ ಗೌರವಾದರಗಳಿಂದ ಸೀರೆ ನೀಡಿ ಪ್ರೀತಿಯಿಂದ ಉಪಚರಿಸಿದರು. ಮನೆಯವರು, ಮಕ್ಕಳು ಎಲ್ಲರೂ ಸೌಜನ್ಯವೇ ತುಂಬಿಕೊಂಡ ಸಂಸಾರ ಅದು. ಅವರ ಅಪ್ಪಟ ಅಭಿಮಾನಿಯಾದ ನನ್ನನ್ನೂ ಆಪ್ತವಾಗಿ ಕಾಣುವ ಶ್ರೀಪಾದ ಶೆಟ್ಟರು ನನ್ನ ಬದುಕೇ ಬೇಡವೆನಿಸಿದರೂ ಬದುಕಬೇಕು ಕಥಾ ಸಂಕಲನಕ್ಕೆ ಮುನ್ನುಡಿ ಬರೆದುಕೊಟ್ಟಿದ್ದಾರೆ.
ಸದ್ಗುರು ಶ್ರೀಧರರ ಪರಮ ಭಕ್ತರಾದ ಶ್ರೀಪಾದ ಶೆಟ್ಟರನ್ನು ನನ್ನ ಸದ್ಗುರು ಸದಾ ನೆನಪಿಸುತ್ತಲೇ ಇರುತ್ತಾನೆ. ಹೀಗಾಗಿ ನಾನೂ ಕೆಲವೊಮ್ಮೆ ಉಪನ್ಯಾಸಕನಾಗಿ ಹೋದಾಗ ಅವರದೇ ನೆನಪು ಮಾಡಿಕೊಂಡು ಎದುರಿಗೆ ಕುಳಿತವರ ಮೆದುಳಿಗೇ ಕೈ ಹಾಕುವ ಕೆಲಸ ಮಾಡುವುದಿಲ್ಲ. ? ಸಮಯ ಮೀರಿ ಕೊರೆಯುವುದಿಲ್ಲ. ಅವರೊಬ್ಬ ಅಸಾಮಾನ್ಯ ಓದುಗ. ಬಹುತೇಕ ದಿನಕ್ಕೆರಡು ಪುಸ್ತಕಗಳನ್ನು ಅವರು ಓದಿ ಮುಗಿಸುತ್ತಾರೆ. ನಿರರ್ಗಳವಾದ ಅವರ ಸ್ಪಷ್ಟ ಮಾತುಗಳು ಎಂಥವರಿಗೂ ಸ್ಫೂರ್ತಿ ತುಂಬುತ್ತವೆ. ಕುಂಬಕರ್ಣನೂ ಅವರ ತರಗತಿಯಲ್ಲಿ ತೂಕಡಿಸಲಾರ. ?
ಯಾರೋ ಹೇಳಿದ್ದಕ್ಕೆಲ್ಲಾ ಹೂಂ ಹೂಂ ಎಂದು ತಲೆ ಅಲ್ಲಾಡಿಸುವ ಜನ ಅಲ್ಲ ಅವರು. ಅವರು ಹೇಳಿದರೆ ಮಾತ್ರ ಅದು ಹೂಂ ಎನ್ನುವ ಹಾಗೆಯೇ ಇರುತ್ತದೆ. ಶ್ರೀಪಾದ ಶೆಟ್ಟರನ್ನು ನೆಚ್ಚಿಕೊಂಡ ಮೆಚ್ಚಿಕೊಂಡ ಸಾಹಿತಿಗಳದೆಷ್ಟೋ. ನಿರ್ವಿವಾದವಾಗಿ ಅವರೊಬ್ಬ ವಾಗ್ಭೂಷಣ.
ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪ್ರಭಾತನಗರದ ‘ಸುನಾದ’ ಎಂಬ ಹೆಸರಿನ ಮನೆಯಲ್ಲಿ ಪ್ರಸ್ತುತ ವಿಶ್ರಾಂತ ಜೀವನ ನಡೆಸುತ್ತಿರುವ ಶ್ರೀಪಾದ ಶೆಟ್ಟರು ವಿಶ್ರಾಂತಿಯೇ ಇಲ್ಲದಂತೆ ಓದುತ್ತಾರೆ. ಬರೆಯುತ್ತಾರೆ. ನೇರ ನಡೆನುಡಿಯ ಸರದಾರರಾದ ಶ್ರೀಪಾದ ಶೆಟ್ಟರಿಗೆ ತಾಲೂಕಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ನೀಡಿ ಸಾಹಿತ್ಯ ಪರಿಷತ್ತು ಗೌರವಿಸಿದೆ. ಬಿಂದಾಸಾಗಿ ಬದುಕಿ ತಮ್ಮ ಹೆಜ್ಜೆ ಗುರುತನ್ನು ಯಶಸ್ವಿಯಾಗಿ ಮೂಡಿಸಿದ ಶ್ರೀಪಾದ ಶೆಟ್ಟರು ಸಾರ್ಥಕ ಬಾಳ್ವೆ ನಡೆಸಿದ ಧೀಮಂತ ವ್ಯಕ್ತಿಯಾಗಿ ಹೊನ್ನೂರಿಗೆ ಕೀರ್ತಿ ತಂದಿದ್ದಾರೆ. ಮಾದರಿಯಾಗಿದ್ದಾರೆ. ನೋವು, ನಲಿವು, ಸುಖ, ದುಃಖಗಳ ಸಮ್ಮಿಶ್ರಣದ ಅವರ ಬದುಕಿನಲ್ಲಿ ತಾವು ಬೇವನುಂಡು ಬೆಲ್ಲ ಹಂಚಿದರು. ಶ್ರೀಪಾದ ಶೆಟ್ಟರದು ಶ್ರೀ ಪಾದವೇ… ?… ಅವರ ಒಲುಮೆ ಪಡೆದ ನಾವೇ ಭಾಗ್ಯವಂತರು.
ಸದ್ಗುರು ಶ್ರೀಧರರ ಆಶೀರ್ವಾದ ಶ್ರೀಪಾದ ಶೆಟ್ಟರು ಹಾಗೂ ಅವರ ಕುಟುಂಬದ ಮೇಲೆ ಸದಾ ಇರಲಿ. ಅವರ ಇಷ್ಟದೈವ ಆರೋಗ್ಯ, ಐಶ್ವರ್ಯ, ಸುಖ, ಶಾಂತಿ, ನೆಮ್ಮದಿಯನ್ನಿತ್ತು ಕಾಪಾಡಲಿ ಎಂದು ಪ್ರಾರ್ಥಿಸುತ್ತೇನೆ.

RELATED ARTICLES  ಅಕ್ಷರ‌ಕ್ರಾಂತಿಯ ಮೂಲಕ‌ ಗೋವಿನ ಬಾಳಲಿ ಸಂಕ್ರಾಂತಿ ಮೂಡಿಸೋಣ

ಶ್ರೀಪಾದ ಶೆಟ್ಟರಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು

✍ಸಂದೀಪ ಎಸ್ ಭಟ್ಟ

❤️????????❤️????????❤️???

ಪ್ರೀತಿಯಿಂದ ಅವರಿಗೊಮ್ಮೆ ಶುಭ ಹಾರೈಸೋಣ

?+91 79759 35393

??????⚫⚪???????⚫⚪?????

RELATED ARTICLES  ಆನ್‌ಲೈನ್ ಗೇಮಿಂಗ್‌ಗಾಗಿ ಹೊಸ ನಿಯಮ : ಕೆಲವು ಗೇಂಮ್ ಗಳು ಬಂದ್..!