ಸರಳತೆ ಇರುವ ಸೌಂದರ್ಯ ವೈಭವಕ್ಕಿಲ್ಲ. ತಿಳಿಸಾರು, ಮಜ್ಜಿಗೆ ಊಟದ ರುಚಿ ಜಿಲೇಬಿ ಕೇಸರಿಬಾತಿಗೆ ಇರುವುದಿಲ್ಲ. ಅಪರೂಪಕ್ಕೊಮ್ಮೆಯಾದರೆ ಸರಿಯದು. ರುಚಿಯ ದೃಷ್ಟಿಯಿಂದಲೂ ಹೌದು… ಆರೋಗ್ಯದ ದೃಷ್ಟಿಯಿಂದಲೂ ಹೌದು. ಉದಾಹರಣೆಗೆ ಅನ್ನವಿದೆ….. ಅನ್ನದಷ್ಟು ರುಚಿಯಾದ ವಸ್ತು ಯಾವುದೂ ಇಲ್ಲ . ಯಾಕೆ…? ಯಾಕೆಂದರೆ ಎಷ್ಟು ದಿನ ಉಂಡರೂ ಬೇಸರವೆಂತಾ ಅನ್ನಿಸುವುದಿಲ್ಲ. ನಿತ್ಯ ಅನ್ನ ಊಟ ಮಾಡುತ್ತೇವೆ. ನಾವು ಪ್ರತಿನಿತ್ಯ ಬೇರೆ ಬೇರೆ ಪದಾರ್ಥಗಳ ಜೊತೆ ಅದನ್ನು ಸೇವಿಸುತ್ತೇವೆ. ಯಾರಾದರೂ ಅನ್ನ ಉಂಡು ಬೇಸರವಾಯ್ತು ಎನ್ನುವವರು ಇದ್ದಾರೆಯೇ..? ಖಂಡಿತ ಇಲ್ಲ . ನೀರು ಕುಡಿದು ಬೇಸರವಾಯ್ತು… ಎಷ್ಟು ದಿನ ನೀರು ಕುಡಿಯುವುದು ಎಂದು ಯಾರಾದರೂ ಹೇಳುತ್ತಾರೆಯೇ… ಇಲ್ಲ. ಇನ್ನು ಹಾಲು ಮಜ್ಜಿಗೆ ಇದು ಬೇಸರ ತರಿಸುವುದುಂಟಾ? ಯಾವಾಗಲೂ ಇಲ್ಲ. ಇದರ ಸೌಂದರ್ಯ ಶಾಶ್ವತ ಅಂತ. ಅವು ಕಣ್ಣು ಕುಕ್ಕುವುದಿಲ್ಲ. ದೊಡ್ಡ ಶಬ್ದ ಮಾಡುವುದಿಲ್ಲ. ಆದರೆ ಇರುವ ಆಕರ್ಷಣೆಯನ್ನು ಎಂದೂ ಬಿಟ್ಟುಕೊಡುವುದಿಲ್ಲ. ಸಾತ್ವಿಕತೆಯೇ ಹಾಗೆ. ಸಾತ್ವಿಕತೆಯ ಕಥೆಯೇ ಹಾಗೆ. ಅದು ಸ್ಥಿರತೆ. ರಜೋಗುಣದ ರಾಜಸ್ವವಾಗಿರತಕ್ಕಂತ ಸಂಗತಿಗಳು ಬೇಗ ಆಕರ್ಷಣೆ ಮಾಡುತ್ತವೆ. ಆದರೆ ಅಷ್ಟೇ ಬೇಗ ತಮ್ಮ ಆಕರ್ಷಣೆಯನ್ನು ಕಳೆದುಕೊಳ್ಳುತ್ತದೆ. ಅನ್ನ ತಿಂದಷ್ಟು ನಮ್ಮಿಂದ ಜಿಲೇಬಿ ತಿನ್ನಲು ಸಾಧ್ಯವಿಲ್ಲ. ಅಥವಾ ನಿತ್ಯ ಅನ್ನ ಊಟ ಮಾಡಿದ ಹಾಗೆ ಜಿಲೇಬಿ ತಿನ್ನಲು ಸಾಧ್ಯವಿಲ್ಲ. ಆದರೆ ನಿತ್ಯ ನಾವು ಉಪಯೋಗಿಸುವುದರಿಂದ ಅದರ ಮೌಲ್ಯದ ಅರಿವಿಲ್ಲ. ನಮಗೆ ವಿದ್ಯುತ್ ಇದ್ದಾಗ ವಿದ್ಯುತ್ತಿನ ಮಹತ್ವ….ಅಮ್ಮ ನಿದ್ದಾಗ ಅಮ್ಮನ ಮಹತ್ವ… ಹೆಂಡತಿ ಇದ್ದಾಗ ಹೆಂಡತಿಯ ಮಹತ್ವ ಗೊತ್ತಾಗುವುದಿಲ್ಲ. ಇದು ಕೇವಲ ಅಮ್ಮನ ಕಥೆಯಷ್ಟೇ ಅಲ್ಲ…. ಅನ್ನದ ಕಥೆಯೂ ಹೌದು…! ಅನ್ನದ ಬೆಲೆ ನಮಗೆ ಗೊತ್ತಿಲ್ಲ ಒಂದಷ್ಟು ದಿನ ಅನ್ನ ಬಿಟ್ಟರೆ ಅದರ ಮಹತ್ವವೇನು ಎಂದು ನಮಗೆ ತಿಳಿಯುತ್ತದೆ. ಅದರ ಮೌಲ್ಯದ ಅರಿವಾಗುತ್ತದೆ . ಸರಳತೆಯಲ್ಲಿ ಸೌಂದರ್ಯವಿದೆ ಅನ್ನುವುದು ಅದಕ್ಕೆ.
ಸಮಾಜದಲ್ಲೂ ಹಾಗೆಯೇ ಇಲ್ಲಿ ಬಣ್ಣ ಬಣ್ಣದ ವ್ಯಕ್ತಿಗಳು, ದಿನಕ್ಕೊಂದು ಬಣ್ಣ ಬದಲಾಯಿಸುವ ವ್ಯಕ್ತಿಗಳು, ಸರಳ ವ್ಯಕ್ತಿಗಳು ಎಲ್ಲರೂ ಇದ್ದಾರೆ. ನಮ್ಮ ನಡುವಿನ ಸಿನಿಮಾ ತಾರೆಯರು ಅವರು ಕೇವಲ ಬಟ್ಟೆಯ ಬಣ್ಣ ಮಾತ್ರವಲ್ಲ ಮುಖದ ಬಣ್ಣವನ್ನು ಬದಲಾಯಿಸುತ್ತಿರುತ್ತಾರೆ. ಬಣ್ಣ ತೆಗೆದರೆ ಮತ್ತೆ ನೋಡುವ ಹಾಗಿಲ್ಲ ಅಂತಹ ಪರಿಸ್ಥಿತಿಯೂ ಇದೆ . ಅಂತಹ ಆಕರ್ಷಣೆಗಳು ತುಂಬಾ ಇದೆ. ಅಲ್ಲೆಲ್ಲ ರಜೋಗುಣದ ಪ್ರಕೋಪ ಇದೆ. ಆದರೆ ಗುರುವೆಂಬ ಆಕರ್ಷಣೆ ಹೇಗೆ ಎಂದರೆ ಅಲ್ಲಿ ಸರಳತೆಯ ಆಕರ್ಷಣೆಯಿದೆ. ಅದು ಸೌಮ್ಯ ಕಾವಿ ಬಣ್ಣದ ಆಕರ್ಷಣೆ .ತುಳಸಿ ಮಾಲೆಯ ಆಕರ್ಷಣೆ. ಅದು ನಿತ್ಯ ಮಧುರ. ಕೊನೆಗೂ ಒಂದೇ ಸತ್ಯ ಸರಳತೆಯಲ್ಲಿ ಸೌಂದರ್ಯವಿದೆ ಸರಳತೆಯಲ್ಲಿ ಆಕರ್ಷಣೆಯಿದೆ
ಶಂಕರಾಚಾರ್ಯರು ಹೇಳಿದ್ದು ಇದನ್ನೇ…. “ಒಂದು ಮಾತ್ರ ಸತ್ಯ ಅದು ಯಾವುದು ಎಂದರೆ ಮೂಲ ತತ್ವವೊಂದೇ ಅದು ಸೃಷ್ಟಿ ಉಳಿದದ್ದೆಲ್ಲ ಮಿಥ್ಯ” ಎಂದರು. ಹಾಗಾಗಿ ಕೂಡುವ ಲೆಕ್ಕಕ್ಕಿಂತ ಕಳೆಯುವ ಲೆಕ್ಕವೇ ಒಳ್ಳೆಯದು. ಯಾಕೆಂದರೆ ಒಂದರ ನಂತರ ಎಲ್ಲ ಸಂಖ್ಯೆಗಳು ಸುಳ್ಳಾಗುತ್ತದೆ…. ಕಲ್ಪನೆಯಾಗುತ್ತದೆ. ಆಗ ಪ್ರಪಂಚ ಮಾಯೆ ಎನ್ನುವುದು ತಿಳಿಯುತ್ತದೆ. ಹಾಗಾಗಿ ಕಳೆಯುವ ಲೆಕ್ಕವೇ ಒಳ್ಳೆಯದು… ಕೂಡುವ ಲೆಕ್ಕಕ್ಕಿಂತ. ಸನ್ಯಾಸ ಅಂದರೆ ಅದು ಕಳೆಯುವ ಲೆಕ್ಕ. ಆವರೆಗೆ ಏನೆಲ್ಲಾ ಸಾಧಿಸಿದೆ ಅವನ್ನೆಲ್ಲ ಕಳೆಯಬೇಕು. ಅದೇ ಸನ್ಯಾಸ. ಎಲ್ಲವನ್ನೂ ಕಳೆಯುವುದರಿಂದ ಅವರು ‘ಪೂಜ್ಯ’ರಾಗುತ್ತಾರೆ… ಇನ್ನೂ ಕಳೆದರೆ ಅವರು “ಪರಮಪೂಜ್ಯ” ರಾಗುತ್ತಾರೆ. ಅದರಲ್ಲಿ ಸ್ವಾರಸ್ಯವಿದೆ ಯಾವುದನ್ನು ಕಳೆಯಲಿಕ್ಕೆ ಸಾಧ್ಯವಿಲ್ಲವೋ ಅದೊಂದನ್ನು ಬಿಟ್ಟು ಮತ್ತೆಲ್ಲವನ್ನೂ ಕಳೆಯುವುದಕ್ಕೆ ಮುಕ್ತಿ ಎಂದು ಹೆಸರು. ಅದಕ್ಕೆ ‘ಪರಮಪದ’ ಎಂದು ಎನ್ನುತ್ತಾರೆ. ಅಲ್ಲೇ ಇರುವುದು ಪೂರ್ಣಾನಂದ… ಪೂರ್ಣ ತೃಪ್ತಿ. ರಾಮಕೃಷ್ಣ ಪರಮಹಂಸರು ಕಂಡಿದ್ದು ಅದನ್ನೇ…ಅವರು ಕಂಡುಕೊಂಡ ಪರಮ ತತ್ವ ಅದೇ. ಅವರಂತೂ ಅವರ ಅತ್ಯಂತ ಪ್ರೀತಿಯ ಕಾಳಿಕಾ ಮಾತೆಯನ್ನು ಜ್ಞಾನ ಖಡ್ಗದಿಂದ ಭೇದಿಸಿ ಒಳಹೊಕ್ಕು ಅದ್ವೈತವನ್ನು ಕಂಡವರು. ಕಾಳಿಕಾಮಾತೆಯ ಅಂತರಂಗದ ಮೂರ್ತಿಯೊಳಗೆ ಪರಮ ತತ್ವವನ್ನು ದರ್ಶಿಸಿದರು. ಅದಕ್ಕೆ ಬಲ್ಲವರು ಹೇಳುವುದು ವಿಗ್ರಹ ಭಂಜಕರಾಗಬೇಡಿ…. ವಿಗ್ರಹ ಭೇದಕರಾಗಿ ಎಂದು. ಅಂದರೆ ವಿಗ್ರಹವನ್ನು ಭೇದಿಸಿ ಒಳ ಹೋಗಿ ಆ ಮೂರ್ತಿಯ ಆಚೆ ಇರುವ ಅಮೂರ್ತವನ್ನು……ಸಾಕಾರದ ಆಚೆ ಇರುವ ನಿರಾಕಾರವನ್ನು ಕಾಣಬೇಕು ಎಂದು.
ತೋತಾಪರಿ ಎನ್ನುವ ಗುರು ಪರಮಹಂಸರಿಗೆ ಅದ್ವೈತವನ್ನು ಬೋಧಿಸುತ್ತಾರೆ. ಪರಮಹಂಸರು ತಮ್ಮ ಕೊನೆಯ ದಿನಗಳಲ್ಲಿ ತಮ್ಮೆದುರು ಯಾರಾದರೂ ಕುಳಿತಿದ್ದರೆ ಅಲ್ಲಿ ನೋಡಿ ಈಶ್ವರ ಕುಳಿತಿದ್ದಾನೆ ಎನ್ನುತ್ತಿದ್ದರು. ಈಶ್ವರ ಊಟ ಮಾಡುತ್ತಿದ್ದಾನೆ ಎನ್ನುತ್ತಿದ್ದರು. ಅಂತಹ ಉನ್ನತ ಸ್ಥಿತಿಯನ್ನು ಅವರು ತಲುಪಿದ್ದರು. ರಾಮಕೃಷ್ಣ ಪರಮಹಂಸರಿಗೆ ಕ್ಯಾನ್ಸರ್ ಆಗಿತ್ತು ಆಹಾರ ಸೇವಿಸುವುದು ಕಷ್ಟವಾಗುತ್ತಿತ್ತು. ಆಗ ವಿವೇಕಾನಂದರು ಹಾಗೂ ಇತರೆ ಶಿಷ್ಯರು ಎಲ್ಲರೂ ಅವರಿಗೆ ಹೇಳಿದರಂತೆ… “ಕಾಳಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಕನಿಷ್ಠ ಪಕ್ಷ ಊಟ ಒಳಗೆ ಹೋಗುವಂತಾಗಲಿ” ಎಂದು. “ನೀವು ಆಹಾರ ಸೇವಿಸದೆ ಇರುವುದನ್ನು ನೋಡಲಿಕ್ಕಾಗೋದಿಲ್ಲ” ಎಂದರು ಅವರು. ಆಗ ಪರಮಹಂಸರು ಕಾಳಿಕಾ ದೇವಿಯಲ್ಲಿ ಪ್ರಾರ್ಥನೆ ಮಾಡಿ ಬಂದು ಹೇಳಿದರಂತೆ …”ನಾನು ತಾಯಿಯಲ್ಲಿ ಹೇಳಿದೆ ನನ್ನ ಶಿಷ್ಯರು ಹೀಗೆ ಹೇಳುತ್ತಿದ್ದಾರೆಂದು ಆಗ ಅಮ್ಮ ಹೇಳಿದ್ದು ಇಷ್ಟೆಲ್ಲ ಬಾಯಿಯಿಂದ ನೀನೇ ಊಟ ಮಾಡುತ್ತಿರುವುದಲ್ಲ ಎಂದು. ಜಗತ್ತಿನಲ್ಲಿ ಯಾರ್ಯಾರು ಊಟ ಮಾಡುತ್ತಿದ್ದಾರೋ ಅದೆಲ್ಲ ನೀನೇ ಮಾಡುತ್ತಿರುವುದು” ಎಂದು. ಅದೇ ಅದ್ವೈತ . ಅದು ಕಳೆಯುವ ಲೆಕ್ಕದ ತುತ್ತ ತುದಿ. ಶ್ರೀರಾಮನಲ್ಲಿ ಇದೇ ಭಾವವನ್ನು ಕಾಣುತ್ತೇವೆ. ಯಾರಿಗಾದರೂ ದುಃಖ ಬಂದರೆ ರಾಮನಿಗೆ ದುಃಖವಾಗುತ್ತಿತ್ತಂತೆ…… ಯಾರಾದರೂ ಸಂತೋಷ ಪಟ್ಟರೆ ರಾಮ ಸಂತೋಷ ಪಡುತ್ತಿದ್ದನಂತೆ. ಅದು ಅದ್ವೈತ. ಕಳೆಯುತ್ತಾ ಬೆಳೆಯಬೇಕು…. ಕಳೆಯುತ್ತಾ ಕಳೆಯುತ್ತಾ ಬೆಳೆಯಬೇಕು… ಬೇಡದ್ದನ್ನು ಕಳೆಯುತ್ತಾ ಬೇಕಾದದ್ದನ್ನು ಕೂಡುತ್ತಾ ಬೆಳೆಯಬೇಕು… ಪೂರ್ಣಾನಂದವನ್ನು ಪೂರ್ಣ ತೃಪ್ತಿಯನ್ನು ಪಡೆಯಬೇಕು.
✍️ ಡಾ.ರವೀಂದ್ರ ಭಟ್ಟ ಸೂರಿ.
9448028443.