:- vinu   ವಿನಾಯಕ ಮಧ್ಯಸ್ಥ ಗೋಳಿಕುಂಬ್ರಿ
ಕನ್ನಡ ನಾಡಿನ ನಾಡಿನಲ್ಲಿ ಮಿಡಿದ ವಿದೇಶದಲ್ಲಿ ತನ್ನ ಹಿರಿಮೆ ಗರಿಮೆ ಗಳನ್ನು ಮೆರೆದು, ಯಕ್ಷ ಗಾನವನ್ನು ಕಾಡತೊರೆಗೆ ಹೋ ಲಿಸಬಹುದು. ಈ ಯಕ್ಷಗಾನ ವೆಂಬ ತೊರೆ, ಹಳ್ಳ ಕೊಳ್ಳ ಕಾರಿಗೆ, ಕೋಡಿಗಳನ್ನು ಕೂಡಿಕೊಂಡು ತುಂಬು ನದಿಯಾಗಿ ಹರಿದು ಯಕ್ಷ ಸಹೃದಯರ ಒಡಲನ್ನು ಸೇರಿ ಭೋರ್ಗರಿಯುತ್ತಿದೆ. ಹಳೆಯ ಹೊಳೆಗೆ ಹೊಸ ನೀರು ಬರುವಂತೆ ಯಕ್ಷಗಾನವೆಂಬ ಜೀವನದಿಗೆ ಹೊಸ ನೀರಾಗಿ ಬಂದ ಯಕ್ಷಗಾನ ಕಲಾವಿದರಲ್ಲಿ ಗಣಪತಿ ಭಟ್ಟ ಕಣ್ಣಿಮನೆ ಅಗ್ರಮಾನ್ಯರು.
ಯಕ್ಷಗಾನ ಎಂದರೆ, ಕಣ್ಣಿಮನೆ ಎಂದರೆ ಯಕ್ಷಗಾನ ಎನ್ನುವ ಮಿಂಚನ್ನು ಸಂಚಾರವಾಗುವಂತೆ ಯಕ್ಷಪ್ರಿಯರಲ್ಲಿ ಮೂಡಿಸಿದ್ದಾರೆ. ದಿ| ಕಣ್ಣಿಮನೆ ಗಣಪತಿ ಭಟ್ಟ ಇವರು ಉತ್ತರ ಕನ್ನಡ ಜಿಲ್ಲೆ, ಹೊನ್ನಾವರ ತಾಲ್ಲೂಕಿನ ಮುಗ್ವಾ, ಕಣ್ಣಿಮನೆ ಎಂಬ ಹಳ್ಳಿಯ ಗುಂಡುಭಟ್ಟರ ಮನೆತನದ ಮಂಜುನಾಥ ಮತ್ತು ಸರಸ್ವತಿ ದಂಪತಿಗಳ ಮಗನಾಗಿ ಯಕ್ಷಕಮಲವಾಗಿ ಬಡಕುಟುಂಬದಲ್ಲಿ ಜನಿಸಿದರು. ಬಡತನನ್ನು ಉಂಡು, ಉಟ್ಟು, ಬೆಳೆದು ಪ್ರೌಢಶಾಲಾ ಶಿಕ್ಷಣ ಪೂರೈಸಿದ ಇವರು ಓದು ಮುಂದುವರಿಸಲಾಗದೆ ಕುಟುಂಬದ ನಿರ್ವಹಣೆಗಾಗಿ ಯಕ್ಷಗಾನದತ್ತ ಮುಖಮಾಡಿ ರಂಗಪ್ರವೇಶ.ಅವರದು ಯಕ್ಷಗಾನದ ಏಕಲವ್ಯ ಪ್ರತಿಭೆ ‘ನೋಡಿ ಕಲಿ ಮಾಡಿ ತಿಳಿ’ ಎಂಬ ಮಾತಿನಂತೆ ತನ್ನದೆ ಆದ ಶೈಲಿಯಲ್ಲಿ ಯಕ್ಷ, ನಾಟ್ಯ, ರೂಪ ಮಾತುಗಾರಿಕೆಯನ್ನು ಕಂಡುಕೊಂಡವರು. ವೃತ್ತಿಯಾಗಿ ಆಯ್ದುಕೊಂಡ ಯಕ್ಷಗಾನ ಕಣ್ಣಿಯವರ ಪ್ರವೃತ್ತಿಯು ಹೌದು.
ಕಣ್ಣಿಮನೆಯವರು ಗುಂಡಬಾಳ ಮೇಳದಲ್ಲಿ ಗೆಜ್ಜೆ ಕಟ್ಟಿ ರಂಗಪ್ರವೇಶ ಮಾಡಿ ಮತ್ತ್ತೆ ತಿರುಗಿ ನೋಡೆ ಇಲ್ಲ. ನಂತರ ಶಿರಸಿ, ಅಮೃತೇಶ್ವರಿ, ಇಡಗುಂಜಿ ಮುಂತಾದ ಮೇಳಗಳಲ್ಲಿ ವ್ಯವಸಾಯ ಮಾಡಿ, ಪೆರ್ಡೂರು, ಸಾಲಿಗ್ರಾಮ ಮೇಳಗಳಲ್ಲೂ ಅಪಾರ ಪ್ರೇಕ್ಷಕರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಕಣ್ಣಿಯವರ ರಂಗ ಪ್ರವೇಶಕ್ಕೆ ಮೊದಲೇ ಸಿಳ್ಳೆಗಳ ಸರಮಾಲೆ ಸೃಷ್ಟಿಯಾಗಿ ಅವರು ರಂಗಕ್ಕೇರಿ ಬಂದಾಗ ಮಿಂಚಿನ ಸಂಚಾರವಾಗುತ್ತಿತ್ತು. ತಾಳಕ್ಕೆ ತಕ್ಕ ಹೆಜ್ಜೆಗಳು, ಹಾಡುಗಾರಿಕೆಗೆ ಸೂಕ್ತ ಹಾವ-ಭಾವ, ನುಡಿದಾಗ, ನಡೆದಾಗ, ಬಾಗುವಾಗ, ಬಳಕುವಾಗ ಪ್ರಕಟಗೊಳ್ಳುವ ಕಣ್ಣಿಯದೆ ಛಾಪು. ಕೃಷ್ಣನ ಪಾತ್ರದಲ್ಲಿ ಅಭಿನಯ ಮತ್ತು ಮಾತಿನಿಂದ ನುಡಿಸುವ ಮೋಹನಮುರಳಿಯಾಗಿ, ವೀರವೇಷದ ಹದಿನೆಂಟರ ಚಕ್ರವ್ಯೂಹದ ಅಭಿಮನ್ಯುವಾಗಿ, ಏಕಾದಶಿ ವ್ರತ ಮಾಡಿ ವೀರ ವೈಷ್ಣವ ಎಂಬ ಭಕ್ತ ಸುಧನ್ವನಾಗಿ, ಮಾತೆಯ ಕಳಂಕವನ್ನು ತೊಳೆಯುವ ಪ್ರೀತಿಯ ಮಗ ವೀರಬಬ್ರುವಾಹನನಾಗಿ, ರಾಮ ನಿಯರ್Áಣದ ಕೃಷ್ಣನಾಗಿ, ದಿಗ್ವಿಜಯದ ಕಂಸನಾಗಿ ಹೀಗೆ ಹಲವಾರು ಪೌರಾಣಿಕ ವೇಷಗಳನ್ನು ಮಾಡಿ ನಂತರ ಪೆರ್ಡೂರು ಮತ್ತು ಸಾಲಿಗ್ರಾಮ ಮೇಳದಲ್ಲಿ ಶಿವರಂಜಿನಿ, ಅಗ್ನಿಸಾಕ್ಷಿ ಗಗನಗಾಮಿನಿ, ಧರ್ಮಸಂಕ್ರಾಂತಿ ಇತ್ಯಾದಿ ಸಾಮಾಜಿಕ ಪ್ರಸಂಗಗಳಲ್ಲಿ ತಮ್ಮದೇ ಆದ ನಾಟ್ಯ ಮಾತಿನ ಮೋಡಿಯನ್ನು ಮಾಡಿ ಪಾತ್ರಗಳಿಗೆ ಜೀವ ತುಂಬಿ ಜನಮನದಲ್ಲಿ ಇಂದು ಜಿರಂಜೀವಿ.
ಸಂಸಾರದ ನಿರ್ವಹಣೆಗಾಗಿ ಯಕ್ಷಗಾನದ ಜೊತೆಗೆ ಮುಗ್ವಾದ ಸುರಕಟ್ಟೆ ಪೋಸ್ಟ್‍ನಲ್ಲಿ, ಪೋಸ್ಟ್‍ಮ್ಯಾನ್ ಮತ್ತು ಪೋಸ್ಟ್ ಮಾಸ್ಟರ್ ಅಗಿ ಕಾರ್ಯನಿರ್ವಹಿಸಿರುತ್ತಾರೆ. ದೂರದ ಊರಿನಲ್ಲಿ ಆಟ ಕುಣಿದು, ಬೆಳಿಗ್ಗೆ ಪೋಸ್ಟ್ ಕೆಲಸಕ್ಕೆ ಹಾಜರಾಗಲೇ ಬೇಕು. ನಿದ್ದೆ ಮಾಡಲು ಸಮಯವಿಲ್ಲ. ಮತ್ತೆ ಸಂಜೆ ಇನ್ನೊಂದು ಊರಿಗೆ ಬಸ್ಸು, ಟ್ರಕ್ಕು ಹಿಡಿದು ಪಯಣಿಸಬೇಕು. ಪಟ್ಟ ಪಾಡನ್ನೆಲ್ಲಾ ಹಾಡಾಗಿಸಿ ಪ್ರೇಕ್ಷಕರನ್ನು ಮುದಗೊಳಿಸಬೇಕು. ಮನೆಯಲ್ಲಿ ಮದುವೆಗೆ ಸಿದ್ದರಾಗಿದ್ದ ನಾಲ್ಕು ಹೆಣ್ಣುಮಕ್ಕಳು. ಮದುವೆ ಮಾಡಿಕೊಡುವುದು ಆ ಕಾಲದಲ್ಲಿ ಬಡವರ ಪಾಲಿಗೆ ಒಂದು ಅಗ್ನಿ ಪರೀಕ್ಷೆ. ಇಂಥ ಪರಿಸ್ಥಿತಿಯಲ್ಲಿ ಹೆದರದೆ, ಬೆದರದೆ ಹೆಣ್ಣುವಕ್ಕಳಿಗೊಂದು ಸಂತೋಷ ಜೀವನ ರೂಪಿಸಿದವರು. ತಂದೆ ತೀರಿದ ಬಳಿಕ ತಾವು ವಿವಾಹವಾದರು. ಒಂದು ಚಿಕ್ಕ ಅಡಿಕೆ ತೋಟ, ಅಲ್ಲೊಂದು ಮನೆ ಮಾಡಿಕೊಂಡು ಸಂಸಾರವನ್ನು ಸುಖವಾಗಿಡಬೇಕೆಂಬ ಹಿರಿದಾದ ಹಂಬಲ ಕೊನೆಗೂ ಕೈಗೂಡಲಿಲ್ಲ. ರಂಗಸ್ಥಳದಲ್ಲಿ ಪುಂಡು ವೇಷದಿಂದ ಮೆರೆದ ಕಣ್ಣಿ ನಿಜ ಬದುಕಿನಲ್ಲಿ ಸೋಲು ಸವಾಲುಗಳನ್ನು ದಿನನಿತ್ಯ ಅನುಭವಿಸಿದರು. ಹೇಳರಾನೆಯ್ಯ ರಂಗ ಹೇಳದುಳಿಯನಾರೆಯ್ಯ ರಂಗ ಹೇಳಬಾರದಂತರಂಗ ಎಂಬ ಪದ್ಯದಂತೆ ಅವರ ಪರಿಸ್ಥಿತಿ ಆಗಿತ್ತು.
ಅವರ ಒಳ್ಳೆಯ ಗುಣ ಎಂದರೆ ಸದಾ ನಗುಮೊಗದಿಂದ ಮಾತನಾಡ ಬಲ್ಲ, ನಾನು ಎಂಬ ಎಳ್ಳಷ್ಟು ಬೇಧ ಮಾಡದ ಸಜ್ಜನ, ನಿಗರ್ವಿ, ಸರಳ ವ್ಯಕ್ತಿತ್ವ. ಬಣ್ಣ ಬರೆಯುವಾಗ ಚೌಕಿಯಲ್ಲಿ ಯಾರೇ ಪರಿಚಯದವರು ಹೋಗಲಿ ತನ್ನ ಕೈ, ಕಣ್ ಸನ್ನೆಯಿಂದಲೇ ನಮಸ್ತೆ ಹೇಳುವ ಗುಣ ಇವರದು. ರಂಗಸ್ಥಳದಲ್ಲಿಯೂ ಸಹಾ ಯಾವ ಕಲಾವಿದರೆ ಆಗಲಿ, ಸಣ್ಣವರಾಗಲಿ, ಚಿಕ್ಕವರಾಗಲಿ ಅವರಿಗೆ ಹೊಂದಿಕೊಂಡು ಮುಂದುವರಿಯುವ ಸಾತ್ವಿಕ ವ್ಯಕ್ತಿ. ಯಾವುದೇ ಪ್ರಶಸ್ತಿ ಪುರಸ್ಕಾರಗಳು ಬರಲಿ ಅದನ್ನು ನಿರಾಕರಿಸಿ ನನಗಿಂಥ ತುಂಬಾ ಬಡ ಕಲಾವಿದರಿದ್ದಾರೆ ಅವರಿಗೆ ನೀಡಿ ಎನ್ನುವ ಸರಳ ಜೀವಿ. ಪ್ರಸ್ತುತ ಮಂದರ್ತಿ ಮೇಳದಲ್ಲಿ ಇರುವಾಗಲೇ ಅವರ ಅರೋಗ್ಯದ ಸ್ಥಿತಿ ಸ್ವಲ್ಪ ಹದಗೆಟ್ಟಿದ್ದರೂ ಲೆಕ್ಕಿಸದೆ ಕಲೆಯಲ್ಲಿ ಶ್ರಮಿಸಿದ ನಮ್ಮ ಕಣ್ಣಿಮನೆಯವರು. ಆರೋಗ್ಯದ ಬಗ್ಗೆ ಎಳ್ಳಷ್ಟು ಕಾಳಜಿ ಕೊಡದೆ, ಸ್ವಲ್ಪ ಚೇತರಿಕೆ ಆದರೂ ಸಾಕು ಮತ್ತೆ ಯಕ್ಷಗಾನ ಎನ್ನುವ ವ್ಯಕ್ತಿ. ವೇಷ ಕಟ್ಟಿದ್ದು ಕೊನೆಯ ಬಾರಿ ಆರೋಗ್ಯ ಸರಿ ಇಲ್ಲದಿದ್ದರೂ ಅತ್ಯದ್ಭುತವಾಗಿ ಬ್ರಹ್ಮ ಕಪಾಲದ ಮನ್ಮಥನಾಗಿ ಮನ ಸೆಳೆದವರು.
ತಾನು ಯಕ್ಷಗಾನವನ್ನು ಮತ್ತು ಪ್ರೇಕ್ಷಕರನ್ನು ಸದಾ ಪ್ರೀತಿಸುತ್ತಿರುವ ಸಣ್ಣ ಕುಟುಂಬ ಇವರದ್ದು. ಲಲಿತಾ ಎಂಬ ಧರ್ಮಪತ್ನಿಯಿಂದ ಆರತಿ ಗೊಬ್ಬ ಮಗ, ಕೀತಿಗೊಬ್ಬಳು ಮಗಳು ಮತ್ತು ಸಾವಿರಾರು ಸಹೃದಯ ಯಕ್ಷಪ್ರಿಯರನ್ನು ಅಗಲಿದ್ದಾರೆ. ಚಕ್ರವ್ಯೂಹದ ಅಭಿಮನ್ಯುವಾಗಿ ಅಮೋಘವಾಗಿ ಅಭಿನಯ ನೀಡಿ ಕಣ್ಣಿಯವರು ಸಂಸಾರವೆಂಬ ಚಕ್ರವ್ಯೂಹದಲ್ಲಿ ರಥವಿಲ್ಲದೆ ರತಿಕನಿಲ್ಲದ ಕೈಗಳನ್ನು ಕಳೆದುಕೊಂಡು ಅಸುನೀಗಿದರು. ಒಂದರ ಹಿಂದೆ ಒಂದರಂತೆ ಬಂದೊದಗುವ ಸಮಸ್ಯೆ ಸವಾಲುಗಳನ್ನು ಮಗು ಮನದ, ಮುಗ್ಧ ಭಾವುಕನಾದ ಕಲಾವಿದ ಕಣ್ಣಿಯವರು ಸಹಿಯಾದರು. ಕಲಾವಿದರಾಗಿ ಗಳಿಸಿದ್ದ ಅಪಾರ ಕಲಾಭಿಮಾನಿಗಳನ್ನು ಕಷ್ಟಕ್ಕೆ ಒದಗಿಬರುವ ಜೀವದ ಗೆಳೆಯರನ್ನು ಉಳಿಸಿದ್ದು, ಓದುಗ ಮಗ, ಮಗಳು ಕೈಹಿಡಿದ ಪತ್ನಿ, ಜನ್ಮಕೊಟ್ಟ ತಾಯಿ ಹಾಗೂ ಬಂಧು-ಬಳಗವನ್ನು ಅವರೆಲ್ಲಾ ಈಗ ಆಕಾಶವನ್ನು ನೋಡುತ್ತಿದ್ದಾರೆ. ಅಲ್ಲಿ ನಿರಾಶೆಯ ಕಾರ್ಮೋಡ. ಮಕ್ಕಳ ಓದು ಪೂರ್ತಿಗೊಳಿಸಬೇಕಾಗಿದೆ. ಪುತ್ರ ಶೋಕದಿಂದ ತಾಯಿ ಕಣ್ಣೀರಿಡುತ್ತಾರೆ. ಪತ್ನಿ ದಿಗ್ಭ್ರಮೆಯಿಂದ ಕಂಗೆಟ್ಟು ಹೋಗಿದ್ದಾರೆ. ಇಂಥ ಸಂದರ್ಭದಲ್ಲಿ ಅಳಿದರೂ ನಮ್ಮ ಚಿತ್ರ ಭಿತ್ತಿಯಲ್ಲಿ ಸದಾ ಹಸಿರಾಗಿ ಅಳಿದರೂ, ಉಳಿದಿರುವ ಯಕ್ಷದೀಪ ದಿ|| ಕಣ್ಣಿಮನೆ ಗಣಪತಿ ಭಟ್.

RELATED ARTICLES  ಅಹಂ ಸ್ಫೂರ್ತಿಯನ್ನು ರೂಪಾಂತರಿಸುವದಕ್ಕೆ ಹೇಳಿದ್ದರು ಶ್ರೀಧರರು.