ರವೀಂದ್ರ ಭಟ್ಟ ಸೂರಿ.
9448028443

13710003 580903392082059 1866322778857504675 n

ಶ್ರೀ ಬಿ.ಪಿ.ಶಿವಾನಂದ ರಾವ್ ರವರು ಬರೆದ “ವಿಚಾರ ವಿಹಾರ” ಕೃತಿ 518ಪುಟಗಳನ್ನು ಒಳಗೊಂಡಿದೆ. ಈ ಪುಸ್ತಕದ ಪುಟಗಳನ್ನು ತೆರೆಯುತ್ತ ಹೋದಂತೆ ಭವ್ಯವಾದ ಅಕ್ಷರಲೋಕ ನಮ್ಮೆದುರು ಅನಾವರಣಗೊಳ್ಳುತ್ತದೆ. ವೈಚಾರಿಕ ದರ್ಶನದ ಹಿತಾನುಭವ ನೀಡುವಂತಹ ಒಂದೊಂದು ಲೇಖನವನ್ನು ಓದಿದಾಗ ಶ್ರೀ ಬಿ.ಪಿ.ಶಿವಾನಂದ ರಾವ್ ರವರ ಅಗಾಧ ಜ್ಞಾನದ ವಿಶ್ವರೂಪ ದರ್ಶನವಾಗುತ್ತದೆ. ವಿದ್ಯಾದಾನದ ಕೈಂಕರ್ಯದಲ್ಲಿ ಸುದೀರ್ಘ ಅವಧಿಯವರೆಗೆ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀ ಬಿ.ಪಿ.ಶಿವಾನಂದ ರಾವ್ ರವರು ತಮ್ಮ ವಿಚಾರ-ವಿಹಾರ ಕೃತಿಯನ್ನು ವಿದ್ಯೆಯ ಕುರಿತಾದ “ವಿದ್ಯೆಯ ವೃಕ್ಷಕ್ಕೆ ಎಷ್ಟೆಲ್ಲ ಹಣ್ಣು ರಾಶಿ” ಎಂಬ ಲೇಖನದಿಂದಲೇ ಪ್ರಾರಂಭಿಸಿದ್ದಾರೆ. ವಿದ್ಯೆ ಕೇವಲ ಶಾಲೆ ಎಂಬ ನಾಲ್ಕು ಗೋಡೆಯ ಕಟ್ಟಡದ ಮಧ್ಯೆ ಲಭಿಸುವುದಷ್ಟೇ ಅಲ್ಲ ಅನುಭವ ಮತ್ತು ಚಿಂತನ ಎಂಬ ಎರಡು ಅದ್ಭುತ ಕ್ರಿಯೆಗಳಿಂದ ಅದು ದೊರಕುತ್ತದೆ ಎಂಬ ಅವರ ಅನುಭವದ ಹಿತನುಡಿ ಓದುಗನ ಮನಸ್ಸಿನಲ್ಲಿ ಸದಾ ನೆಲೆ ನಿಲ್ಲುವಂತದ್ದು. ನಮ್ಮ ಸಂಸ್ಕೃತಿ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದ ಹಿರಿಯರ ಜವಾಬ್ದಾರಿ ಯನ್ನು ನೆನಪಿಸುವ “ಸಾಂಸ್ಕೃತಿಕ ಬದುಕಿನ ಎರಡು ಮಜಲುಗಳು” ಲೇಖನ , ಸೌಂದರ್ಯ ಪ್ರಜ್ಞೆಯ ಜೊತೆಗೆ ಪರಿಸರ ಪ್ರಜ್ಞೆಯೂ ಇರಲಿ ಎಂಬ ಸಂದೇಶ ನೀಡುವ “ಸೌಂದರ್ಯ ಪ್ರಜ್ಞೆ ಯ ಹುಡುಕಾಟದಲ್ಲಿ” ಎಂಬ ಬರಹ ಅವರ ಸಾಮಾಜಿಕ ಕಳಕಳಿಯನ್ನು ಪ್ರತಿಬಿಂಬಿಸುತ್ತದೆ.
ಇಂದಿನ ವಾಸ್ತವವನ್ನು ತೆರೆದಿಡುವ ಸರ್ಕಾರದ ಕೆಲಸ ದೇವರ ಕೆಲಸ ,ಶಿಕ್ಷಕ ಒಂದು ಆತ್ಮಾವಲೋಕನ , ಸುಲಿಗೆ ಮುಗಿದ ಮೇಲೆ, ಕೋಮು ದ್ವೇಷದ ಬೆಂಕಿಯ ಸುತ್ತ, , ನಿರುದ್ಯೋಗ -ಅರ್ಜಿ ಶುಲ್ಕ ಎಷ್ಟು ನ್ಯಾಯೋಚಿತ , ಗ್ರಾಮೀಣ ಜನರ ದುರ್ಬರ ಬದುಕು, ಯುವ ಜನಾಂಗದಲ್ಲಿ ಮನೋ ವಿಕಾರತೆ ಮತ್ತು ಆತ್ಮಹತ್ಯೆ, ವರದಕ್ಷಿಣೆ, ಮತಾಂತರ ಹುಟ್ಟಿಸಿದ ಆವಾಂತರ. ಚುನಾವಣಾ ಪ್ರಹಸನ, ಸಮಾಜ ಮತ್ತು ಮಧ್ಯವರ್ತಿಗಳು , ಮುಂತಾದ ಬರಹಗಳು ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯ,ಅಕ್ರಮ,ಅನಾಚಾರಗಳ ಕುರಿತು ಲೇಖಕರ ಆಕ್ರೋಶವನ್ನು ಜನಸಾಮಾನ್ಯರ ನಿರ್ಲಕ್ಷ್ಯ ವನ್ನು ಪ್ರತಿಬಿಂಬಿಸುತ್ತದೆ. ಜೊತೆಯಲ್ಲಿ ನಮ್ಮಲ್ಲೊಂದು ಜಾಗೃತಿ ಯ ಬೀಜವನ್ನು ಬಿತ್ತುವಲ್ಲಿ ಅದು ಯಶಸ್ವಿಯಾಗುತ್ತದೆ.
ಪುಸ್ತಕ ಕೊಂಡು ಓದುವವರಿಲ್ಲ ಎಂಬ ಕೊರಗಿನ ಕೂಗನ್ನು ಹೊಂದಿರುವ ಕನ್ನಡದ ಮಂದಾರ ಲೇಖನದ ಅಂತ್ಯದಲ್ಲಿ ಲೇಖಕರು “ಕನ್ನಡ ದ ಮಂದಾರ ಒಂದಾರ ಕೊಳ್ಳಿರೋ” ಎಂಬ ಡಾ// ರಂ.ಶ್ರೀ. ಮುಗಳಿಯವರಕವನದ ಸಾಲನ್ನು ಉಲ್ಲೇಖಿಸುವ ಮೂಲಕ  ಕನ್ನಡದ ಪುಸ್ತಕ ವನ್ನು ಕೊಂಡು ಓದಿ ಎಂಬ ಕರೆಯನ್ನು ಅವರು ನೀಡುತ್ತಾರೆ. ಒಬ್ಬ ಪ್ರತಿಭಾವಂತ ಮಾತ್ರ ಇನ್ನೊಬ್ಬ  ಪ್ರತಿಭಾವಂತನನ್ನು ಗುರುತಿಸ ಬಲ್ಲ  ಎಂಬಂತೆ ಒಬ್ಬ ವಿಚಾರವಾದಿಯಾಗಿ ಇವರು ಇನ್ನೊಬ್ಬ ವಿಚಾರವಾದಿ ಡಾ//ಗೌರೀಶ ಕಾಯ್ಕಿಣಿಯವರನ್ನು ಕುರಿತು ಬರೆದ ಶ್ರೇಷ್ಠ ಮಾನವತಾವಾದಿ …ಲೇಖನ ಉತ್ತರ ಕನ್ನಡ ದ ಒಬ್ಬ ಶ್ರೇಷ್ಠ  ಸಾಹಿತಿಯನ್ನು  ಓದುಗನಿಗೆ ಪರಿಚಯಿಸುತ್ತದೆ.
ಕೀರ್ತಿ ಪ್ರಶಸ್ತಿ ಗಳಿಗಾಗಿ  ತನ್ನ ಬರವಣಿಗೆಯಲ್ಲ ಮಾನವೀಯ ಮೌಲ್ಯಗಳ ಪ್ರತಿಪಾದನೆಯ ಬದ್ಧತೆ ತನ್ನ ಬರವಣಿಗೆಯ ಹಿಂದಿದೆ ಎಂದು ಬರೆದಂತೆ ಬದುಕುವ ಬದುಕಿದಂತೆ ಬರೆಯುವ ಹಂಬಲವನ್ನು ವ್ಯಕ್ತಪಡಿಸುವ ಲೇಖನ “ನಾನು ಸಾಹಿತ್ಯ ಮತ್ತು ಆ ಕ್ಷಣಗಳು ” ಓದುಗನ ಹೃದಯಕ್ಕೆ ಹತ್ತಿರವಾಗುತ್ತದೆ. ಸಾಮಾಜಿಕ ನ್ಯಾಯದ ಬಗ್ಗೆ ಇಂದಿನ ಯುವ ಪೀಳಿಗೆಗೆ ಶಿಕ್ಷಣ ನೀಡುವವರಾರು ? ಎಂದು ತಮ್ಮ ಸಾಮಾಜಿಕ ನ್ಯಾಯದ ಹೀನಾಯ ಮುಖಗಳು ಲೇಖನದಲ್ಲಿ ಪ್ರಶ್ನಿಸುವ ಲೇಖಕರು ಸಾಮಾಜಿಕ ಶೋಷಣೆಯ ರೂಪುರೇಷೆಗಳು ಲೇಖನದಲ್ಲಿ ಶೋಷಣೆಯ ಕರಾಳ ಮುಖವನ್ನು ಪರಿಚಯಿಸಿ ಅದಕ್ಕೆ ಸೂಕ್ತ ಪರಿಹಾರವನ್ನೂ ಸೂಚಿಸುವ ಮೂಲಕ ತಮ್ಮ ಪ್ರಬುದ್ಧ ತೆಯನ್ನು  ತೋರಿಸಿದ್ದಾರೆ.
ಧರ್ಮ ಮತ್ತು ಡಾಂಭಿಕತೆ  ಲೇಖನದಲ್ಲಿ ಅವರು “ಯಾವ ಮತ ಧರ್ಮ ವೇ ಆಗಿರಲಿ ಅಲ್ಲಿನ ತತ್ವಾನುಷ್ಠಾನದಲ್ಲಿ ಸರಳತೆ ಮತ್ತು ಗೌರವ ಪ್ರೀತಿಯ ಪ್ರಕಟಣೆ ಇರಬೇಕು ” ಎನ್ನುತ್ತಾ ಧರ್ಮ ದ ಬಗೆಗಿನ ತಮ್ಮ ಸ್ಪಷ್ಟ ನಿಲುವನ್ನು ನಮ್ಮ ಮುಂದಿಡುತ್ತಾರೆ. ದೇವರು ಎಂಬ ಕೌತುಕದ ವಸ್ತು ಲೇಖನದಲ್ಲಿ ದೇವರು ಮತ್ತು ರಾಜಕಾರಣದ ಬಗ್ಗೆ ನಡೆದಷ್ಟು ಚರ್ಚೆ-ತರ್ಕ- ಭಿನ್ನಾಭಿಪ್ರಾಯ ಮತ್ತು ಅಸಂಗತ ಹೇಳಿಕೆಗಳು ಈ ಜಗತ್ತಿನಲ್ಲಿ ಬೇರೆ ಇನ್ನಾವ ವಿಷಯಗಳ ಮೇಲೂ ನಡೆದಿಲ್ಲ ಎಂಬ ವಾಸ್ತವವನ್ನು ತೆರೆದಿಡುತ್ತಾರೆ. ಮಾನವನ ಬಾಳಲ್ಲಿ ಕಷ್ಟ ಕಾರ್ಪಣ್ಯಗಳಿವೆ, ಕರ್ತವ್ಯದ ಭಾರವಿದೆ, ಅಸಹಾಯಕತೆಯ ದೈನ್ಯವಿದೆ, ಇವೆಲ್ಲಕ್ಕೂ ಮನುಷ್ಯನ ಅಹಂಕಾರದ ದೃಷ್ಟಿಯೇ ಕಾರಣವಾಗಿದೆ ಎಂಬ ಅದ್ಭುತ ಚಿಂತನೆ “ಮುಕ್ತಿ ಏಕೆ ಬೇಕು ” ಎಂಬ ಲೇಖನದಲ್ಲಿ ಕಂಡುಬರುತ್ತದೆ. ನಮ್ಮ ಭಾರತೀಯ ಸಂಸ್ಕೃತಿ ಗೆ ವಿಶ್ವ ಮಾನ್ಯತೆ ಇದೆ ಎಂದು ಅಭಿಮಾನದಿಂದ “ನಮ್ಮ ಸಾಂಸ್ಕೃತಿಕ ಪ್ರಜ್ಞೆ” ಎಂಬ ಲೇಖನದಲ್ಲಿ ಬರೆಯುವ ಲೇಖಕರು ಅಂತಹ ಸಂಸ್ಕೃತಿ ರಕ್ಷಣೆಯ ಹೊಣೆ ನಮ್ಮೆಲ್ಲರದ್ದು ಎನ್ನುತ್ತಾರೆ. ನಮ್ಮ ನಿತ್ಯ ಜೀವನದಲ್ಲಿ ಯಾವುದನ್ನು ಸುಲಭವಾಗಿ ಪಾಲಿಸಲಾಗುವುದಿಲ್ಲವೋ ಅದನ್ನು ಇನ್ನೊಬ್ಬರಿಗೆ ನಿರರ್ಗಳವಾಗಿ ಬೋಧಿಸುವಲ್ಲಿ ನಾವು ತುಂಬಾ ನಿಸ್ಸೀಮರು ಎಂಬ ಸತ್ಯದರ್ಶನ ಮಾಡಿಸುವ ಅವರ “ಶಿಸ್ತು ಮತ್ತು ಸಂಯಮಶೀಲತೆ” ಲೇಖನ  ಈ ಪುಸ್ತಕ ಕ್ಕೆ ಮುಕುಟಪ್ರಾಯವಾದದ್ದು.
ಒಟ್ಟಿನಲ್ಲಿ ಓದುಗನನ್ನು ವಿಚಾರಕ್ಕೆ ಹಚ್ಚುವ “ವಿಚಾರ ವಿಹಾರ” ಸಂಗ್ರಹಯೋಗ್ಯ ಪುಸ್ತಕ .

RELATED ARTICLES  ಮಹಾರಾಷ್ಟ್ರ ಶೈಲಿಯ ವೆಜ್ ಕೊಲ್ಲಾಪುರಿ ರೆಸಿಪಿ.

        ನಮ್ಮ ನಡೆಗೆ ಆಚಾರ, ನುಡಿಗೆ ವಿಚಾರ, ಬರಹಕ್ಕೆ ಆಹಾರ, ಮಾತಿಗೆ ಅಲಂಕಾರವನ್ನು ಒದಗಿಸುವ ಅಕ್ಷರ ಖಜಾನೆಯಂತಿರುವ ಈ ಪುಸ್ತಕ ಎಲ್ಲರ ಮಸ್ತಕವನ್ನು ಸೇರಲಿ ಎಂಬುದು “ಸತ್ವಾಧಾರಾ.ನ್ಯೂಸ್” ನ ಹಾರೈಕೆ.

RELATED ARTICLES  ರುಚಿಕರವಾದ ಆಲೂ ಮೆಂತೆ ಸೊಪ್ಪಿನ ಪಲ್ಯ.