Home Article ಮೌನ ಮಾತಾದಾಗ ಭಾವಕ್ಕೆ ಬೆಲೆಯಹುದು..

ಮೌನ ಮಾತಾದಾಗ ಭಾವಕ್ಕೆ ಬೆಲೆಯಹುದು..

 

ನಾನು ಬರೆದಿಹ ಮಾತ ಒಪ್ಪಬೇಕೆಂದಿಲ್ಲ
ಜ್ಞಾನದಾ ಮಾತಲ್ಲವಿದು ಮನದ ಮಾತು
ಬರಿಯ ಬೊಗಳೆ ಎಂದು ಬಿಟ್ಟುಬಿಡಬಹುದು
ಸರಿ ಎನಿಸೆ ಹೊಂದಿಸಿಕೊ – ಅಂತರಾತ್ಮ

ಪ್ರೀತಿ ಹುಟ್ಟಲು ಹುಟ್ಟಲು ಜಗದ ನೀತಿ ಇರಬೇಕು
ನೀತಿ ಇಲ್ಲದೆ ಪ್ರೀತಿ ಅದು ಎಂತೊ ಕಾಣೆ
ಪ್ರೀತಿ ನೀತಿಯು ಎರಡು ಜೀವನದ ದಡವು
ಬೆಳೆಸಿಕೊಂಡರೆ ಅದನು – ಅಂತರಾತ್ಮ

ಜಗಕೆ ಬೆಲೆಯನು ಕೊಡುತ ಜೀವಸವೆಸಿ
ಜನುಮಕಳೆಯುತ ಬದುಕಿ ಪ್ರೀತಿ ಗಳಿಸಿ
ಜಗವು ನಿನ್ನನು ನೆನೆದು ನಿನ್ನ ಸನಿಹಕೆ ಬರಲಿ
ನಿನ್ನತನ ನಿನಗಿರಲಿ – ಅಂತರಾತ್ಮ

ತಿಳಿಯದೇ ಬಂದಿರುವ ಭಾವನೆಯ ಗಾಳಿಯಲಿ
ತೇಲಿ ಹೊರಟಿದೆ ಇಂದು ನನ್ನ ಮನವು
ತೇಲುತೇರುತ ಇಳಿದು ಮತ್ತೆ ಭಾವವ ಭಿತ್ತಿ
ಲೀನವಾಗಿದೆ ಇಂದು – ಅಂತರಾತ್ಮ

ಅವನಿ ಒಲೆಯಲಿ ಜೀವ ಬೇಯಿಸುವ ಇಹನು
ಅರೆಗಳಿಗೆ ಅರಿಗಳನು ಹೆಚ್ಚಿಸುತಲಿಹನು
ಹತ್ತಾರು ಕಷ್ಟಗಳ ಕೊಟ್ಟು ನೋಯಿಸುತ
ಜೀವ ಪಾಕವ ಮಾಡು – ಅಂತರಾತ್ಮ

ನಿನ್ನ ನೋಡುವ ತೆರದಿ ಜನ ಎಲ್ಲರನು ನೋಡುವುದು
ನಿನ್ನ ಮುದ್ದಿಪುವಂತೆ ಎಲ್ಲ ಮುದ್ದಿಪುದು
ನಿನಗೆ ಜಗ ಹೊಸದಂತೆ ಹಾಗಂತೆ ಹೀಗಂತೆ
ಜಗಕೆ ನೀ ಹೊಸಬನೇ – ಅಂತರಾತ್ಮ

ಮೌನ ಮಾತಾದಾಗ ಭಾವಕ್ಕೆ ಬೆಲೆಯಹುದು
ಭಾರವಾಗಿಹ ಮನವ ಬಿಚ್ಚಿ ತೊಳೆಯುವುದು
ಬತ್ತಿರುವ ಆಂತರ್ಯ ಬೆಳೆಯುತ್ತ ನಿಲುವಂತೆ
ಬಿತ್ತರಿಪುದಮ ಭಾವ – ಅಂತರಾತ್ಮ