ಶುಭಾ ಗಿರಣಿಮನೆ
ಇಂಟರ್‍ನೆಟ್ / ಅಂತರ್ಜಾಲ ಯುಗದಲ್ಲಿ ಯಾವುದು ಹೊಸದಲ್ಲ. ಬೇಕು ಬೇಕು ಎಂದಾಗೆಲ್ಲ ಬೇಕಾಗಿದ್ದೆಲ್ಲ ನಮ್ಮ ಕೈಗೆ ಬಹುಬೇಗನೇ ಎಟುಕುತ್ತದೆ. ನಮ್ಮ ಅಗತ್ಯತೆಗೆ ಬೇಕಾಗುವ ಎಲ್ಲ ರೀತಿಯ ವಸ್ತುಗಳನ್ನು ಕುಳಿತಲ್ಲಿಯೇ ಶಾಪಿಂಗ್ ಮಾಡಿ ಮನೆಗೆ ತರಿಸಿಕೊಳ್ಳಬಹುದು. ಅಷ್ಟೆ ಏಕೆ ನಾವು ತಿನ್ನುವ ಆಹಾರ ಕೂಡ ಆನ್‍ಲೈನ್ ಬುಕ್ಕಿಂಗ್ ಮಾಡಿದರೆ ಸಿಗುತ್ತದೆ. ಆಧುನಿಕ ಜಗತ್ತು ಎಂದು ಹೇಳುವಂತಿಲ್ಲ. ಅದಕ್ಕೂ ಮುಂದುವರೆದ ಭಾಗ ಆನ್‍ಲೈನ್ ಯುಗ. ಇಲ್ಲಿ ಹೆತ್ತವರೊಂದು ಸಿಗುವುದಿಲ್ಲ. ಬಾಡಿಗೆಗೆ ಆದರೆ ಆ ಅಪ್ಪ ಅಮ್ಮನೂ ಸಿಗುತ್ತಾರೆ ಎನ್ನುವ ಕಾಲ.
ಪ್ರತೀಯೊಬ್ಬರ ಕೈಯ್ಯಲ್ಲಿ ಎಂಡ್ರಾಯ್ಡ ಮೊಬೈಲ್ ಕಾಣಿಸುತ್ತದೆ. ಬ್ಯಾಂಕ್ ಅಕೋಂಟ್‍ನಲ್ಲಿ ಒಂದಿಷ್ಟು ಹಣವಿದ್ದರೆ ಎಲ್ಲವೂ ಕುಳಿತಲ್ಲೆ ಆಗುತ್ತದೆ. ಅದರಲ್ಲೂ ಪ್ರಸ್ತುತ ಸರಕಾರ ಡಿಜಿಟಲ್ ಯುಗವಾಗಿಸಲು ಹೊರಟಾಗಿನಿಂದ ಎಳೆಯ ಮಕ್ಕಳಿಂದ ಹಲ್ಲು ಬಿದ್ದ ಅಜ್ಜ ಅಜ್ಜಿಯರವರೆಗೂ ಡಿಜಿಟಲ್ ಮಹಿಮೆ ನೋಡಲು ಕಾತುರರಾಗಿ ನಿಂತಿದ್ದಾರೆ. ಹಾಗಿರುವಾಗ ಯುವ ಸಮಾಜ ಒಂದು ಹೆಜ್ಜೆ ಮುಂದಿರಲೇ ಬೇಕು.
ಒಂದು ದಿನ ಹತ್ತು ವರ್ಷದ ಹುಡುಗ ತನ್ನ ಹೊಲಕ್ಕೆ ತಂದೆ ಜೊತೆ ಹೋಗಿ, ಅಲ್ಲಿಯೇ ಮೊಬೈಲ್‍ನಲ್ಲಿ ಆಟವಾಡುತ್ತಾ ಇದ್ದಾನೆ. ಅದು ಮೊಬೈಲ್ ಗೇಮ್. ತಂದೆ ಹೊಲದ ಕೆಲಸ ಮಾಡುತ್ತಿರುವಾಗ, ಮಗ ಹೇಗೂ ಆಡುತ್ತಿದ್ದಾನೆ ಎಂದು ಪಕ್ಕದ ಹೊಲದವನ ಹತ್ತಿರ ಹೋಗಿ ಮಾತನಾಡುತ್ತಿದ್ದಾನೆ. ಆ ಹುಡುಗನ ಎದುರು ದೊಡ್ಡದೊಂದು ಗೂಳಿ ಬಂದು ನಿಂತಿದೆ. ಆಗ ಏನು ಮಾಡಬೇಕು ಎಂದು ತಿಳಿಯದೆ ಕಂಗಾಲಾಗಿದ್ದಾನೆ. ಅಪ್ಪನನ್ನು ಕರೆಯಲು ನೋಡುತ್ತಾನೆ. ಅಪ್ಪ ಸುತ್ತ ಕಾಣಿಸುವುದಿಲ್ಲ. ಹುಡುಗನಿಗೆ ಏನು ಮಾಡಬೇಕು ತಿಳಿಯುವುದಿಲ್ಲ. ಆದರೆ ಗೂಳಿಯನ್ನು ಎದುರಿಸುವ ಶಕ್ತಿ ತನ್ನಲ್ಲಿ ಇಲ್ಲ ಎನ್ನಿಸಿದ್ದು ನಿಜ. ಆಗ ಕಾಲಿಗೆ ಬುದ್ದಿ ಹೇಳುತ್ತಾನೆ. ಅವನನ್ನು ಸ್ವಲ್ಪ ದೂರ ಅಟ್ಟಿಸಿಕೊಂಡು ಬಂದ ಗೂಳಿ ವಾಪಸ್ ತಿರುಗಿ ಹೋಗುತ್ತದೆ. ಹುಡುಗನನ್ನು ತಂದೆ ಹುಡುಕುತ್ತಾನೆ. ಸಂಜೆಯಾದರೂ ಮಗ ವಾಪಸ್ ಬರದಿದ್ದಾಗ ಕಂಗಾಲಾಗುತ್ತಾನೆ. ಮಗನಿಗೆ ಏನಾಗಿರಬಹುದು ಎನ್ನುವ ಗಾಬರಿ. ಆದರೆ ಮಗ ಮುಸ್ಸಂಜೆಯಲ್ಲಿ ಮನೆಯ ಬಾಗಿಲಲ್ಲಿ ನಿಲ್ಲುತ್ತಾನೆ. ಹೇಗೆ ಬಂದ? ಎಲ್ಲಿ ಹೋಗಿದ್ದ? ಎನ್ನುವ ಪ್ರಶ್ನೆ ಹುಟ್ಟುತ್ತದೆ ಅಲ್ಲವೆ. ಹೌದು ಇದು ಎಲ್ಲರಲ್ಲೂ ಕಾಡುತ್ತದೆ. ಹುಡುಗ ಓಡುತ್ತ ಕಾಡನ್ನು ಪ್ರವೇಶಿಸುತ್ತಾನೆ. ಬಂದ ದಾರಿ ತಿಳಿಯದೆ ಒಂದು ದಿಕ್ಕು ಹಿಡಿದು ನಡೆಯುತ್ತಾನೆ. ಭಯವೂ ಇರುತ್ತದೆ. ಹಾಗೆ ಸಂಜೆಯಾಗುತ್ತಿದ್ದಂತೆ ಮನೆಯಕಡೆ ಹೋಗುವ ತವಕವಾಗುತ್ತದೆ. ಆಗ ಸಹಾಯಕ್ಕೆ ಬಂದಿದ್ದು ಈ ಅಂತರ್ಜಾಲ. ಸಿಗ್ನಲ್ ಕಂಡೊಡನೆ ಮೊಬೈಲ್ ಸದ್ದಾಗುತ್ತದೆ. ಬೇಗಬೇಗನೇ ಮ್ಯಾಪ್ ಓಪನ್ ಮಾಡಿ ತನ್ನ ಊರಿನಹೆಸರು ನಮೂದಿಸಿದ್ದೇ ತಡ. ಅವನಿರುವ ಜಾಗದ ಜೊತೆ ತಾನು ಸೇರಬೇಕಾಗಿದ್ದ ಸ್ಥಳವನ್ನು ಅಲ್ಲಿ ತಲುಪಲು ಬೇಕಾದ ದಾರಿಯನ್ನು ನೀಟಾಗಿ ತೋರಿಸಿಬಿಟ್ಟಿತು.
ಓದುಗನಿಗೆ ತಮಾಷೆ ಎನ್ನಿಸಿರಬೇಕು. ಹಳೆಯಕಾಲದ ಅಥೆಗೆ ರಿಮೇಕ್ ಮಾಡಿದಂತೆ ಅನ್ನಿಸಿರಬಹುದು. ಹೀಗೆಲ್ಲ ಆಗಲು ಸಾಧ್ಯವೇ ಎಂದು. ಹೀಗೆಯೇ ಆಗಿರಲಿಕ್ಕಿಲ್ಲ. ಇದು ಕಾಲ್ಪನಿಕ ಕಥೆಯಾದರೂ ವಾಸ್ತವಕ್ಕೆ ದೂರವಾಗಿ ಉಳಿದಿಲ್ಲ. ಹಳ್ಳೀ ದಿಲ್ಲಿಯಲ್ಲಿ ಅಂತರ್ಜಾಲದ ಸುಳಿ ಹರಿದಾಡುತ್ತಿದೆ. ಜಗತ್ತು ಸಣ್ಣದಾಗುತ್ತಿದೆ ಎನ್ನುವುದು ಇದೇ ಕಾರಣಕ್ಕೆ ಮನುಷ್ಯ ಎಲ್ಲ ಸುಖವನ್ನು ತನ್ನಲ್ಲಿ ಇಟ್ಟುಕೊಳ್ಳಲು ಬಳಸುತ್ತಿದ್ದಾನೆ ಹಾಗಿರುವಾಗ ತಂತ್ರಜ್ಞಾನದ ಸಾಲಿನಲ್ಲಿ ಕೇಬಲ್ಗಳ ಜೋಡಣೆ ತುಂಬಾ ಜೋರಾಗಿಯೇ ಸಾಗುತ್ತಿದೆ. ಆವಿಷ್ಕಾರಗಳಲ್ಲಿ ಮನುಷ್ಯ ಹೆಚ್ಚಿನ ಆಸಕ್ತಿ ಹೊಂದಿದ್ದಾನೆ.
ಭಾರತದಂತ ದೇಶದಲ್ಲಿ ಅಂತರ್ಜಾಲದ ಪ್ರಭಾವ ಎಲ್ಲರ ಮೇಲೆ ಆಗಿರಲಿಕ್ಕಿಲ್ಲ. ಕಾರಣ ಗುಡ್ಡಗಾಡುಗಳ ಪ್ರದೇಶ, ಹಳ್ಳಿಗಾಡಿನ ಪ್ರದೇಶ ಭಾರತದಲ್ಲಿ ಹೆಚ್ಚಾಗಿದೆ. ಅಲ್ಲಿ ಅಂತರ್ಜಾಲ ಸಮರ್ಪಕವಾಗಿ ಪೂರೈಸಲು ಸಾಧ್ಯವಾಗದೇ ಇರುವುದು ಒಂದು ಕಾರಣವಾದರೆ, ಮತ್ತೊಂದು ಅನಕ್ಷರತೆಯೂ ಹಳ್ಳಿಯಲ್ಲಿ ಕಾಣುತ್ತೇವೆ. ನಮ್ಮ ಬದುಕು ಕೇವಲ ಕುಲ ಕಸುಬು ಎನ್ನುತ್ತಲೋ ಅಥವಾ ನಮಗೆ ಈ ವ್ಯವಸ್ಥೆಗಳ ಬಳಕೆ ಕಲಿಯಲು ಆಗುವುದಿಲ್ಲ ಅಂತಲೋ, ನಾವು ಇಷ್ಟು ದಿನ ಹೀಗೆ ಬದುಕಿದ್ದೇವೆ ಮುಂದೆಯೂ ಬದುಕುತ್ತೇವೆ ನಮಗೆ ಅಂತರ್ಜಾಲ ವ್ಯವಸ್ಥೆಯ ಅವಶ್ಯಕತೆ ಇಲ್ಲ ಎನ್ನುವ ಅನಾಧಾರ ಕಾಣುತ್ತದೆ.
ಹಳ್ಳಿಯ ಬದುಕು ಒಂದು ಸುಂದರ ಪ್ರಕೃತಿಯಲ್ಲಿ ಸಾಗುತ್ತಿರುತ್ತೆ. ಅಲ್ಲಿ ಬೆಳಗಿನಿಂದ ಸಂಜೆಯವರೆಗೆ ಬೆವರಿನ ಹನಿಯನ್ನು ಬಿಟ್ಟು ಬೇರೆ ಏನನ್ನು ಕಾಣದ ಕಾಲವೊಂದಿತ್ತು. ಅಂತಹ ಪರಿಸ್ಥಿತಿಯಲ್ಲಿರುವ ಜನ ಈ ಅಂತಜಾಲದ ಬಳಕೆಯ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಂಡಿಲ್ಲ. ಆದರೆ ಯುವಸಮಾಜಕ್ಕೆ ಅದರ ಬಳಕೆ ಕುತೂಹಲವಾಗಿದೆ. ಅಂತರ್ಜಾಲದ ಬಳಕೆಯಿಂದ ತವiಗೆ ಉಪಯೋಗವಿದೆ ಎನ್ನುವುದನ್ನು ಕಂಡು ಕೊಂಡಿದ್ದಾರೆ. ಹಾಗಾಗಿ ಯುವ ಸಮಾಜ ಹಳ್ಳಿಯ ಬದುಕಿನಿಂದ ಸಿಟಿಯತ್ತ ಬರುತ್ತಿದ್ದಾರೆ ಎನ್ನುವ ಒಂದು ಆರೋಪವಿದೆ. ಆರೋಪ, ಪ್ರತ್ಯಾರೋಪ, ಒಳಿತು ಕೆಡುಕು ಇತ್ಯಾದಿಗಳ ಬಗ್ಗೆ ಮುಂದಿನ ಕಂತುಗಳಲ್ಲಿ ನೋಡೊಣ. ಆದರೆ ಈ ಯುವಸಮಾಜ ಅಂತರ್ಜಾಲದ ಬಳಕೆಯಿಂದ ತಮಗೆ ಬೇಕಾದ ದಾರಿಯನ್ನು ಸುಲಭವಾಗಿ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ನಿಜ.
ಹಳ್ಳಿ ಪ್ರದೇಶದ ಬಹಳ ಜನರಿಗೆ ಅಂತರ್ಜಾಲದ ಬಳಕೆ ಬಗ್ಗೆ ತಿಳುವಳಿಕೆಯಿಲ್ಲ. ಯಾವ ರೀತಿಯಲ್ಲಿ ಬಳಸಬೇಕು, ಯಾಕಾಗಿ ಬಳಸಬೇಕು, ಅಲ್ಲಿ ಯಾವ ಯಾವ ಸೌಲಭ್ಯಗಳಿವೆ. ಆ ಸೌಲಭ್ಯದಿಂದ ನಾವು ಯಾವ ರೀತಿಯ ಪ್ರಯೋಜನ ಪಡೆಯಬಹುದು ಈ ರೀತಿಯ ಯಾವುದೇ ಕಲ್ಪನೆ ಇಲ್ಲ. ನಾವು ಕಂಪ್ಯೂಟರ್ ಮುಟ್ಟಿದರೆ ಹಾಳಾಗುತ್ತದೆಯೇನೋ, ಮೊಬೈಲ್ ಬಿದ್ದು ಹೋದರೆ ಹಾಳಾಗುತ್ತದೆ. ನಮಗೆ ಅದನ್ನು ಮುಟ್ಟಲೂ ಭಯ ಹಾಗಿರುವಾಗ ಅದನ್ನು ಬಳಸುವುದು ಹೇಗೆ ಎನ್ನುವ ಮಾತು ಕೇಳಿ ಬರುತ್ತದೆ. ಇನ್ನು ಕೆಲವು ಕಡೆಯಂತೂ ಅದರಿಂದ ಕೆಲಸ ಹಾಳಗುತ್ತದೆ. ನಾವು ಬೇಕಾದದ್ದನ್ನು ನಮ್ಮ ಹತ್ತಿರದಲ್ಲಿ ಕೇಳಿ ತಿಳಿದುಕೊಳ್ಳಬಹುದು. ಸುಮ್ಮನೆ ಸಮಯ ಹಾಳು ಎಂದು ಹೇಳುವವರೂ ಇದ್ದಾರೆ. ಅದಕ್ಕೂ ಹೆಚ್ಚಾಗಿ ಕೇಳಿದರೆ ನಾವೆಲ್ಲ ಬದುಕಿಲ್ಲವೆ ಇಷ್ಟು ದಿನ ಏನಾಗಿದೆ ನಮಗೆ ಎಂದು ಗದರುವ ಪರಿಯೂ ಇದೆ. ಆದರೆ ನಿಜವಾಗಿಯೂ ಜಗತ್ತು ಓಡುತ್ತಿದೆ. ತಂತ್ರಜ್ಞಾನ ನಮಗಾಗಿಯೇ ಕಂಡುಹಿಡಿಯಲಾಗಿದೆ. ಸಮಯ ಪೋಲಾಗದಂತೆ ನಮಗೆ ಬೇಕಾದದ್ದನ್ನು ನಾವು ಕುಳಿತಲ್ಲೆ ಸಿಗುತ್ತದೆ ಎಂದಾಗ ಅದರ ಪ್ರಯೋಜನ ಪಡೆಯುವುದರಲ್ಲಿ ತಪ್ಪಿಲ್ಲ ಎನ್ನುವುದು ನನ್ನ ಅನಿಸಿಕೆ.