ಈ ನೆಲ್ಲಿಕಾಯಿ ಬಾಯಿಗೆ ರುಚಿ ಮಾತ್ರವಲ್ಲ, ಆರೋಗ್ಯದ ದೃಷ್ಟಿಯಿಂದಲೂ ಉತ್ತಮ. ನೆಲ್ಲಿಕಾಯಿಯಿಂದ ಬಾಯಿಗೆ ರುಚಿ ಎನ್ನಿಸುವ ಕೆಲವು ಅಡುಗೆಗಳನ್ನು ತಯಾರಿಸುವ ವಿಧಾನವನ್ನು ವಿವರಿಸಿದ್ದಾರೆ….

ತೊಕ್ಕು
ಬೇಕಾಗುವ ಸಾಮಗ್ರಿ: ಕಿರುನೆಲ್ಲಿ – 1 ಕಪ್‌, ಮೆಣಸಿನ ಪುಡಿ – 1 ಚಮಚ, ಬೆಲ್ಲದಪುಡಿ – 2 ಚಮಚ, ಕರಿಬೇವು – 4 ಎಸಳು,b ಸಾಸಿವೆ -1 ಚಮಚ
ಅರಸಿನ – 2 ಚಿಟಕಿ, ಇಂಗು – ಚಿಟಕಿ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ (ಕೊಬ್ಬರಿ/ರಿಪೈಂಡ್/ಒಲಿವ್) – 6 ಚಮಚ

ತಯಾರಿಸುವ ವಿಧಾನ: ನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು, ನೀರು ಆರಲು ಬಿಡಬೇಕು. ಬೀಜ ತೆಗೆದು ಕುಕ್ಕರಿನಲ್ಲಿ ನೀರಿಲ್ಲದೆ ಬೇಯಿಸಿಕೊಳ್ಳಬೇಕು. ಬೆಂದ ನೆಲ್ಲಿಕಾಯಿ ತಣ್ಣಗಾಗುತ್ತಿದ್ದಂತೆ ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು. ಬಾಣಲಿಯಲ್ಲಿ 4 ಚಮಚ ಎಣ್ಣೆ ಹಾಕಿ, ಅದು ಕಾಯುತ್ತಿದ್ದಂತೆ ಸಾಸಿವೆ ಹಾಕಬೇಕು.

ಸಾಸಿವೆ ಚಟಪಟಗುಟ್ಟುತ್ತಿದ್ದಂತೆ, ಕರಿಬೇವಿನ ಸೊಪ್ಪು, ಮೆಣಸಿನ ಪುಡಿ, ಬೆಲ್ಲ, ಇಂಗು ಹಾಕಿ ಕೆದಕಬೇಕು. ನಂತರ ರುಬ್ಬಿದ ನೆಲ್ಲಿಕಾಯಿಯನ್ನು ಹಾಕಿ ಐದು ನಿಮಿಷ ಕೆದಕುತ್ತ ಉಳಿದ ಎಣ್ಣೆಯನ್ನು ಹಾಕಬೇಕು. ತಣ್ಣಗಾಗುತ್ತಿದ್ದಂತೆ ಡಬ್ಬಿಗೆ ಹಾಕಿ ಇಡಿ, ಫ್ರಿಜ್ಜಿನಲ್ಲಿಟ್ಟರೆ ಹಲವು ದಿನಗಳ ಕಾಲ ಇಡಬಹುದು. ಬಾಯಲ್ಲಿ ನೀರೂರಿಸುವ ಈ ತೊಕ್ಕು ಚಪಾತಿ, ದೋಸೆ, ಇಡ್ಲಿಗೆ ಚಟ್ನಿಯಂತೆ ಉಪಯೋಗಿಸಬಹುದು.

ಚಿತ್ರಾನ್ನ
ಬೇಕಾಗುವ ಸಾಮಗ್ರಿ: ಬಾಸುಮತಿ ಅಕ್ಕಿ – 1 ಕಪ್, ಕಿರುನೆಲ್ಲಿ – 10-12 ಕಾಯಿ, ಹಸಿಮೆಣಸು – 4, ಕಡಲೆಬೀಜ – 15-20, ಕರಿಬೇವು – 4 ಎಸಳು, ಸಾಸಿವೆ -1 ಚಮಚ, ಅರಸಿನ – 2 ಚಿಟಕಿ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ (ಕೊಬ್ಬರಿ/ರಿಪೈಂಡ್/ಒಲಿವ್) – 6 ಚಮಚ

ತಯಾರಿಸುವ ವಿಧಾನ: ಅಕ್ಕಿಯನ್ನು ತೊಳೆದು ಉಪ್ಪು, ಅರಸಿನ ಪುಡಿ ಹಾಕಿ ಉದುರಾಗಿ ಅನ್ನ ಮಾಡಿಕೊಳ್ಳಿ. ಕಿರುನೆಲ್ಲಿಯ ಬೀಜ ತೆಗೆದು ಮಿಕ್ಸಿಯಲ್ಲಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಾಣಲಿಯಲ್ಲಿ 3 ಚಮಚ ಎಣ್ಣೆ ಹಾಕಿ. ಅದು ಕಾಯುತ್ತಿದ್ದಂತೆ ಸಾಸಿವೆ ಹಾಕಿ; ಸಾಸಿವೆ ಚಟಪಟಗುಟ್ಟುತ್ತಿದ್ದಂತೆ, ಕಡಲೆಬೀಜ, ಕತ್ತರಿಸಿದ ಹಸಿಮೆಣಸು, ಕರಿಬೇವು ಸೊಪ್ಪು ಹಾಕಿ ಬಾಡಿಸಬೇಕು. ನಂತರ ಅನ್ನ ಹಾಕಿ ಚೆನ್ನಾಗಿ ಕೆದಕುತ್ತ ಉಳಿದ ಎಣ್ಣೆಯನ್ನು ಹಾಕಬೇಕು. ಈಗ ರೆಡಿ ರುಚಿರುಚಿಯಾದ ಕಿರುನೆಲ್ಲಿಯ ಚಿತ್ರಾನ್ನ.

RELATED ARTICLES  ಸ್ವಾದಿಷ್ಟವಾದ, ಆರೋಗ್ಯಯುಕ್ತ ಬೂದುಗುಂಬಳದ ಹಲ್ವ ಮಾಡಿ ಸವಿಯಿರಿ…!!!

ತಂಬುಳಿ
ಬೇಕಾಗುವ ಸಾಮಗ್ರಿಗಳು: ಕಿರುನೆಲ್ಲಿ – 8-10 ಕಾಯಿ, ತೆಂಗಿನತುರಿ – 3 ಚಮಚ, ಜೀರಿಗೆ – 1 ಚಮಚ, ಶುಂಠಿ – 1 ಚೂರು, ಹಸಿಮೆಣಸು – 1
ಮೊಸರು – 6-8 ಚಮಚ, ಕರಿಬೇವು – 6 ಎಸಳು, ಸಾಸಿವೆ -1 ಚಮಚ, ಎಣ್ಣೆ – 2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಕಿರುನೆಲ್ಲಿಕಾಯಿಯನ್ನು ಚೆನ್ನಾಗಿ ತೊಳೆದು ಬೀಜ ತೆಗೆದು ಕತ್ತರಿಸಿಕೊಳ್ಳಿ. ಬಾಣಲಿಗೆ ಕತ್ತರಿಸಿದ ಕಿರುನೆಲ್ಲಿಕಾಯಿ, ತೆಂಗಿನತುರಿ, ಹಸಿಮೆಣಸು, ಶುಂಠಿ, ಉಪ್ಪು, ಜೀರಿಗೆ, ಕರಿಬೇವು – 4 ಎಸಳು, ಸ್ವಲ್ಪ ನೀರನ್ನು ಹಾಕಿ ಬೇಯಿಸಿಕೊಳ್ಳಿ. ಬೆಂದ ವಸ್ತುಗಳು ತಣ್ಣಗಾಗುತ್ತಿದ್ದಂತೆ ಮಿಕ್ಸಿಯಲ್ಲಿ ಸ್ವಲ್ಪ ಮೊಸರು ಸೇರಿಸಿ ತಂಬುಳಿಗೆ ಅರೆಯಬೇಕು. ತಂಬುಳಿಗೆ ನಿಮ್ಮ ಹದಕ್ಕೆ ಸರಿಯಾಗಿ ಮೊಸರು ಸೇರಿಸಿ, ಸಾಸಿವೆ, ಕರಿಬೇವಿನ ಒಗ್ಗರಣೆ ಕೊಡಿ. ರುಚಿಕರ ತಂಬುಳಿ ಸಿದ್ಧ. ಬೇಸಿಗೆ ಕಾಲಕ್ಕೆ ಇದೊಂದು ಅತಿ ಪ್ರಿಯವಾದ ಅಡುಗೆ.

ದೋಸೆ
ಬೇಕಾಗುವ ಸಾಮಗ್ರಿಗಳು: ಅಕ್ಕಿ – 1 ಕಪ್, ಕಿರುನೆಲ್ಲಿ – 10-12 ಕಾಯಿ, ಜೀರಿಗೆ – 2 ಚಮಚ, ಉಪ್ಪು – ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ: ಕಿರು ನೆಲ್ಲಿಕಾಯಿಯನ್ನು ಬೀಜ ತೆಗೆದು ಅಕ್ಕಿಯೊಂದಿಗೆ ನುಣ್ಣಗೆ ರುಬ್ಬಬೇಕು. ಅರೆದ ಹಿಟ್ಟಿಗೆ ಉಪ್ಪು, ಜೀರಿಗೆ ಸೇರಿಸಬೇಕು. ನೀರನ್ನೂ ದಾರಳ ಸೇರಿಸಿ, ದೊಸೆ ತವ ಬಿಸಿಯಾಗುತ್ತಿದ್ದಂತೆ, ಅದಕ್ಕೆ ಎಣ್ಣೆ ಹಚ್ಚಿ (ನಾನ್ ಸ್ಟಿಕ್ ಆದರೆ ಎಣ್ಣೆ ಹಚ್ಚದೆ) ದೋಸೆ ಹಿಟ್ಟನ್ನು ಸೌಟಿನಿಂದ ಚೆಲ್ಲಬೇಕು (ನೀರು ದೋಸೆ ಮಾಡಿದಂತೆ). ದೋಸೆಯನ್ನು ಮುಚ್ಚಿ ಬೇಯಿಸಿ, ಮೊಗಚದೇ ಪ್ಲೇಟಿಗೆ ಹಾಕಿದಾಗ ತಿನ್ನಲು ಸಿದ್ಧವಾದ ಕಿರುನೆಲ್ಲಿಕಾಯಿ ದೋಸೆ ಸಿದ್ಧ. ಮೇಲೆ ತುಪ್ಪ, ಬೆಣ್ಣೆ ಸವರಬಹುದು. ಈ ದೋಸೆಗೆ ಖಾರ ಚಟ್ನಿ ಅಥವಾ ಚಟ್ನಿ ಪುಡಿಯೊಡನೆ ತಿಂದರೆ ರುಚಿಯನ್ನು ಮರೆಯಲಾರಿರಿ.

RELATED ARTICLES  ಮಕ್ಕಳು ಸರಿಯಾಗಿ ತಿನ್ನುತ್ತಿಲ್ಲ ಎಂಬ ಚಿಂತೆ ಬಿಡಿ!

ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ಕಿರುನೆಲ್ಲಿ – 1 ಕಪ್‌, ಶುಂಠಿ – 1 ಚೂರು, ಮೆಣಸಿನಪುಡಿ – 2 ಚಮಚ, ಕರಿಬೇವು – 3 ಎಸಳು, ಸಾಸಿವೆ -1 ಚಮಚ, ಇಂಗು – ಚಿಟಕಿ, ಉಪ್ಪು – ರುಚಿಗೆ ತಕ್ಕಷ್ಟು, ಎಣ್ಣೆ – 4 ಚಮಚ

ತಯಾರಿಸುವ ವಿಧಾನ
ಕಿರುನೆಲ್ಲಿಕಾಯನ್ನು ಚೆನ್ನಾಗಿ ತೊಳೆದು, ನೀರನ್ನು ಆರಲು ಬಿಡಬೇಕು. ಕತ್ತಿ/ಚೂರಿಯಿಂದ ನಾಲ್ಕು ಕಡೆ ಗಾಯ ಮಾಡಿ, ಡಬ್ಬಿಗೆ ನೆಲ್ಲಿಕಾಯಿಯನ್ನು ಸ್ವಲ್ಪ ಸ್ವಲ್ಪವೇ ಹಾಕುತ್ತ ಉಪ್ಪನ್ನು ಹಾಕಬೇಕು, ಹಸಿ ಶುಂಠಿಯನ್ನು ಸಿಪ್ಪೆ ತೆಗೆದು ಚಿಕ್ಕದಾಗಿ ಕತ್ತರಿಸಿ ಇದಕ್ಕೆ ಸೇರಿಸಿ ಮುಚ್ಚಿಡಬೇಕು. ದಿನಕ್ಕೆರಡು ಬಾರಿ ಒಣ ಚಮಚದಿಂದ ಅಡಿಯನ್ನು ಮೇಲು ಮಾಡಬೇಕು. ಎರಡು ದಿನದ ನಂತರ ಮೆಣಸಿನ ಪುಡಿ ಹಾಕಿ ಮೊಗಚಬೇಕು.

ಬಾಣಲಿಯಲ್ಲಿ ಎಣ್ಣೆ ಹಾಕಿ ಕಾಯುತ್ತಿದ್ದಂತೆ ಸಾಸಿವೆ ಹಾಕಬೇಕು. ಸಾಸಿವೆ ಚಟಪಟಗುಟ್ಟುತ್ತಿದ್ದಂತೆ, ಕರಿಬೇವಿನ ಸೊಪ್ಪು, ಇಂಗು ಹಾಕಿ ಕೆದಕಿ ಉಪ್ಪಿನಕಾಯಿಗೆ ಸೇರಿಸಬೇಕು. ಒಂದು ದಿನ ಬಿಡುತ್ತಿದ್ದಂತೆ ಮೆಣಸಿನ ಪುಡಿ ಸೇರಿಕೊಂಡ ಘಮ ಗುಟ್ಟುವ ಕಿರು ನೆಲ್ಲಿಕಾಯಿಯ ಉಪ್ಪಿನಕಾಯಿ ಉಪಯೋಗಿಸಲು ರೆಡಿ. ಬಾಯಲ್ಲಿ ನೀರೂರಿಸುವ ಈ ಉಪ್ಪಿನಕಾಯಿ ಅನ್ನ, ಚಪಾತಿ, ದೋಸೆ, ಇಡ್ಲಿಗೆ ಉಪಯೋಗಿಸಬಹುದು. ಈ ಉಪ್ಪಿನ ಕಾಯಿ ಹೆಚ್ಚು ದಿನ ಇಡಲಾಗುವುದಿಲ್ಲ, ಜಾಸ್ತಿ ದಿನ ಬೇಕಿದ್ದರೆ ಫ್ರಿಜ್ಡ್‌ನಲ್ಲಿಟ್ಟು ಉಪಯೋಗಿಸಬಹುದು.